International Literacy Day 2024 : ವಿಶ್ವದಲ್ಲೇ ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ದೇಶಗಳಿವು

ಪ್ರತಿ ವರ್ಷ ಸೆಪ್ಟೆಂಬರ್ 08 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.1966ರಲ್ಲಿ ಯುನೆಸ್ಕೋ ಜನರಲ್ ಕಾನ್ಫರೆನ್ಸ್‌ನಲ್ಲಿ ಸೆಪ್ಟೆಂಬರ್ 8 ನ್ನು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಘೋಷಣೆ ಮಾಡಿತು, ಅಂದಿನಿಂದ ಈ ಆಚರಣೆಯೂ ಜಾರಿಯಲ್ಲಿದೆ. ಹಾಗಾದ್ರೆ ಈ ದಿನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

International  Literacy Day 2024 : ವಿಶ್ವದಲ್ಲೇ ಅತೀ ಕಡಿಮೆ ಸಾಕ್ಷರತೆಯನ್ನು ಹೊಂದಿರುವ ದೇಶಗಳಿವು
International Literacy Day 2024
Follow us
| Updated By: ಅಕ್ಷತಾ ವರ್ಕಾಡಿ

Updated on: Sep 08, 2024 | 10:39 AM

ಪ್ರತಿಯೊಬ್ಬ ವ್ಯಕ್ತಿಯ ಘನತೆ ಹಾಗೂ ವೈಯುಕ್ತಿಕ ಹಕ್ಕಾಗಿರುವ ಶಿಕ್ಷಣವು ವೈಯಕ್ತಿಕ ಬೆಳವಣಿಗೆಗೆ ಬಹಳ ಅಗತ್ಯವಾಗಿದೆ. ಅದಲ್ಲದೇ, ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆಯ ಪಾತ್ರ ಅಗಾಧವಾದದ್ದು. ದೇಶದ ನಾಗರಿಕರು ಹೆಚ್ಚು ಸಾಕ್ಷರತಾರಾಗಿದ್ದರೆ, ದೇಶವು ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ. ಹೀಗಾಗಿ ಈ ಶಿಕ್ಷಣದ ಈ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸಾಕ್ಷರತೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಇತಿಹಾಸ ಹಾಗೂ ಮಹತ್ವ:

ಯುನೆಸ್ಕೋ ಮೊದಲ ಬಾರಿಗೆ ನವೆಂಬರ್ 7, 1965 ರಲ್ಲಿ ವಿಶ್ವ ಸಾಕ್ಷರತಾ ದಿನವನ್ನು ಆಚರಿಸಬೇಕೆಂದು ನಿರ್ಧರಿಸಿತು. ಪ್ರಪಂಚದಿಂದ ಅನಕ್ಷರತೆಯ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಹಾಗೂ ಪ್ರತಿಯೊಂದು ದೇಶದ ಅಭಿವೃದ್ಧಿಗೆ ಶಿಕ್ಷಣದ ಮಹತ್ವ ಎಷ್ಟು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 26, 1966 ರಂದು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ತನ್ನ 14 ನೇ ಸಾಮಾನ್ಯ ಸಮ್ಮೇಳನದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 8 ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿತು. ತದನಂತರದಲ್ಲಿ ಸೆಪ್ಟೆಂಬರ್ 8, 1966 ರಂದು ವಿಶ್ವವು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಯಿತು. ಜಗತ್ತಿನ ಹಲವು ದೇಶಗಳು ಇದರಲ್ಲಿ ಪಾಲ್ಗೊಂಡು ಜನಸಾಮಾನ್ಯರಿಗೆ ಶಿಕ್ಷಣ ನೀಡುವ ಪ್ರತಿಜ್ಞೆ ಸ್ವೀಕರಿಸಿದರು. ಜನರನ್ನು ಸಾಕ್ಷರರನ್ನಾಗಿಸಲು, ಸಾಮಾಜಿಕ ಹಾಗೂ ಮಾನವ ಅಭಿವೃದ್ಧಿಗಾಗಿ ಅವರ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಯುನೆಸ್ಕೋ ಹಾಗೂ ಅನೇಕ ದೇಶಗಳ ಸರ್ಕಾರಿ ಮತ್ತು ಸರ್ಕಾರೇತ್ತರ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು ಹಾಗೂ ಸಮುದಾಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಸಾಕ್ಷರತೆಯಲ್ಲಿ ಹಿಂದುಳಿದಿರುವ ವಿಶ್ವದ ದೇಶಗಳ ಬಗೆಗಿನ ಮಾಹಿತಿ:

  • ದಕ್ಷಿಣ ಸುಡಾನ್ :ಆಫ್ರಿಕಾದಲ್ಲಿರುವ ಈ ದಕ್ಷಿಣ ಸುಡಾನ್ ಸಾಕ್ಷರತೆ ಪ್ರಮಾಣವು ಶೇಕಡಾ 27 ರಷ್ಟಿದ್ದು, ಜುಲೈ 9, 2011 ರಂದು ಸುಡಾನ್‌ನಿಂದ ಬೇರ್ಪಟ್ಟಿದೆ. ಬಡದೇಶಗಳಲ್ಲಿ ಒಂದಾಗಿರುವ ಇಲ್ಲಿ ಸುಮಾರು ಮೂರನೇ ಎರಡರಷ್ಟು ಜನರು ಮಾನವೀಯ ನೆರವಿನ ಮೇಲೆ ಅವಲಂಬಿತರಾಗಿದ್ದು, ಇಲ್ಲಿ ಕಡಿಮೆ ಸಾಕ್ಷರತೆಯ ಜೊತೆಗೆ ಆಹಾರದ ಕೊರತೆಯನ್ನು ಕಾಣಬಹುದು.
  • ಅಫ್ಘಾನಿಸ್ತಾನ : 2021 ರ ಆಗಸ್ಟ್ ನಲ್ಲಿ ತಾಲಿಬಾನ್ ಎಂಬ ಭಯೋತ್ಪಾದಕ ಸಂಘಟನೆಯು ಇಡೀ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಇದರೊಂದಿಗೆ ಅಲ್ಲಿ ಶರಿಯಾ ಕಾನೂನನ್ನು ಜಾರಿಗೆ ತರಲಾಗಿದೆ. ಇಲ್ಲಿನ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಕಾರಣ ಮಹಿಳೆಯರು ಹಾಗೂ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ.
  • ನೈಜರ್ : ಪಶ್ಚಿಮ ಆಫ್ರಿಕಾದಲ್ಲಿರುವ ಈ ನೈಜರ್ ಮಹಿಳೆಯರು ವಿಶ್ವದಲ್ಲೇ ಅತಿ ಹೆಚ್ಚು ಮಗುವನ್ನು ಹೇರುವವರಲ್ಲಿ ಮೊದಲಿಗರಿದ್ದಾರೆ. ನೈಜರ್ ಅತ್ಯಂತ ಬಡ ದೇಶವಾಗಿದ್ದು, ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತದೆ. ಅದಲ್ಲದೇ, ಇಲ್ಲಿನ ಮಹಿಳೆಯರು ಮಕ್ಕಳನ್ನು ಹೇರುವ ಕಾರಣ ಆ ಮಕ್ಕಳಿಗೆ ಉತ್ತಮ ಶಿಕ್ಷಣವಾಗಲೀ, ಇತರೆ ಮೂಲ ಸೌಕರ್ಯವಾಗಲಿ ಸಿಗುತ್ತಿಲ್ಲ.
  • ಮಾಲಿ : ಪಶ್ಚಿಮ ಆಫ್ರಿಕಾದಲ್ಲಿರುವ ಈ ಮಾಲಿ ಪ್ರದೇಶದ ಶಿಕ್ಷಣದ ಮಟ್ಟವು ತುಂಬಾನೇ ಕಳಪೆಯಾಗಿದೆ. ಇಲ್ಲಿನ ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುವ ಒತ್ತಡದಲ್ಲಿ ಇರುವುದರಿಂದ ಶಾಲೆ ಬಿಡುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಇಲ್ಲಿನ ಸಾಕ್ಷರತಾ ಪ್ರಮಾಣವು ಶೇಕಡಾ 35 ಕ್ಕಿಂತ ಕಡಿಮೆಯೇ ಇದೆ.
  • ಸೊಮಾಲಿಯಾ : ವಿಶ್ವದ 60 ಬಡ ದೇಶಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸೊಮಾಲಿಯಾ ಪೂರ್ವ ಆಫ್ರಿಕಾದಲ್ಲಿರುವ ಈ ಪ್ರದೇಶವು ಸಾಕ್ಷರತಾ ಪ್ರಮಾಣದಲ್ಲಿ ಕುಸಿದಿದೆ. ಎರಡು ದಶಕಗಳಿಂದ ಅಂತರ್ಯುದ್ಧದ ಭೀಕರ ಪರಿಣಾಮಗಳನ್ನು ಅನುಭವಿಸಿದ ಸೊಮಾಲಿಯಾದಲ್ಲಿ ಶಿಕ್ಷಣ ಮೂಲಸೌಕರ್ಯವೇ ಇಲ್ಲದಂತಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ