International Mother Language Day 2025 : ತಾಯ್ನುಡಿಯೇ ನಮ್ಮ ಮೊದಲ ಆದ್ಯತೆ ಆಗಿರಲಿ
ಎಲ್ಲರಿಗೂ ಕೂಡ ತಮ್ಮ ತಾಯಿ ಭಾಷೆಯ ಮೇಲೆ ಅಪಾರ ಪ್ರೀತಿ ಅಭಿಮಾನವಿರುತ್ತದೆ. ಈ ಮಾತೃಭಾಷೆಗಳ ಸಂರಕ್ಷಣೆ ಮತ್ತು ಪ್ರಚಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನು ನಾವೆಲ್ಲರೂ ಆಚರಿಸುವುದು ಅಗತ್ಯ. ಹುಟ್ಟಿನಿಂದಲೇ ಕಲಿಯುವ ಭಾಷೆಯಿಂದಲೇ ಪಾಠವನ್ನು ಮಾಡುವುದರಿಂದ ಮಕ್ಕಳು ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಮಾತೃ ಭಾಷೆಯ ಶಿಕ್ಷಣ ನೀಡುವ ಅತ್ಯಗತ್ಯ. ಈ ತಾಯಿ ಭಾಷೆಯನ್ನು ಉಳಿಸುವ ಉದ್ದೇಶದಿಂದ ಯುನೆಸ್ಕೋ ವಿಶ್ವ ಮಾತೃ ಭಾಷಾ ದಿನವನ್ನು ಪ್ರತಿ ವರ್ಷ ಫೆಬ್ರವರಿ 21 ರಂದು ಆಚರಿಸುತ್ತ ಬರಲಾಗುತ್ತಿದೆ. ಹಾಗಾದ್ರೆ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನದ ಇತಿಹಾಸವೇನು? ಈ ದಿನದ ಮಹತ್ವ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಸಂವಹನ ನಡೆಸಲು ಬೇಕಾಗುವುದೇ ಈ ಭಾಷೆ. ಹೌದು, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಪರಸ್ಪರ ಮಾತನಾಡಲು ಸಹಕಾರಿಯಾಗಿದೆ. ಪ್ರತಿಯೊಂದು ದೇಶದ ಜನರು ತಮ್ಮದೇ ಆದ ಭಾಷೆಯಲ್ಲಿ ಮಾತನಾಡುತ್ತಾರೆ. ಸಾಮಾನ್ಯವಾಗಿ ಉದ್ಯೋಗ ಸ್ಥಳಗಳಲ್ಲಿ, ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಬಳಸಿದರೂ ಕೂಡ, ಮಾತೃಭಾಷೆಯ ಮೇಲಿನ ವ್ಯಾಮೋಹ ಮಾತ್ರ ಮುಗಿಯದು. ಒಬ್ಬ ವ್ಯಕ್ತಿಯು ಹುಟ್ಟಿದ ನಂತರ ಮೊದಲು ಕಲಿಯುವ ಭಾಷೆಯೇ ಈ ಮಾತೃಭಾಷೆ. ಈ ಮಾತೃ ಭಾಷೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದ್ದು, ಅದುವೇ ಫೆಬ್ರವರಿ 21 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ಆಯಾಯ ದೇಶದ ಜನರು ತಮ್ಮ ತಮ್ಮ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನು ಆಚರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಮಾತೃ ಭಾಷಾ ದಿನದ ಇತಿಹಾಸ
ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಸಂಘಟನೆಯಾದ ಯುನೆಸ್ಕೊ ನವೆಂಬರ್ 1999ರಲ್ಲಿ ಘೋಷಿಸಿತು. ಬಾಂಗ್ಲಾದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ವಿದ್ಯಾರ್ಥಿಗಳ ನೆನಪಿಗಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನಾಗಿ ಆಚರಿಸಲಾಯಿತು. ವಿಶ್ವಸಂಸ್ಥೆಯು 2008 ರಲ್ಲಿ ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು. ಹೀಗಾಗಿ ಕಳೆದ 2000 ರಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ನಿಮ್ಮ ಕೈ ಬೆರಳಲ್ಲಿರುವ ಶಂಖಗಳ ಸಂಖ್ಯೆಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಅಂತಾರಾಷ್ಟ್ರೀಯ ಮಾತೃ ಭಾಷಾ ದಿನದ ಮಹತ್ವ
ಕೆಲ ಭಾಷೆಗಳು ಅವನತಿಯನ್ನು ಹೊಂದುತ್ತಿದ್ದು, ಜನರ ಆಡುಭಾಷೆಯಾದ ಮಾತೃ ಭಾಷೆಯನ್ನು ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನದ ಆಚರಣೆಯೂ ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ಮಾತೃ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವುದು ಅತ್ಯಗತ್ಯ. ಈ ದಿನದಂದು ಆಯಾಯ ಪ್ರದೇಶದ ಜನರ ಮಾತೃಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




