International Youth Day 2024 : ಯುವಕರಿಗೆ ಸ್ಫೂರ್ತಿ ನೀಡುವ ಮಹಾನ್ ವ್ಯಕ್ತಿಗಳ ನುಡಿ ಮುತ್ತುಗಳಿವು
ಒಂದು ದೇಶವು ಪ್ರಗತಿ ಹೊಂದಬೇಕಾದರೆ, ಯುವಕರ ಕೊಡುಗೆ ಬಹಳ ಮುಖ್ಯವಾಗಿದೆ. ಹೀಗಾಗಿ ರಾಷ್ಟ್ರದ ಅಭಿವೃದ್ಧಿಗೆ ಯುವ ಸಮುದಾಯದ ಕೊಡುಗೆಯ ಮಹತ್ವವನ್ನು ಸಾರಲು ಪ್ರತಿವರ್ಷ ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಇಂದಿನ ಯುವಕರೇ ನಮ್ಮ ದೇಶದ ಮುಂದಿನ ನಾಯಕರು. ಯುವಕರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜ್ಞಾನವನ್ನು ಹೊಂದಿದ್ದು, ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಯುವಕರ ಕೆಲಸಗಳಿಗೆ ಬೆಂಬಲ ವನ್ನು ನೀಡಿದರೆ ದೇಶವು ಪ್ರಗತಿಯತ್ತ ಸಾಗಲು ಸಾಧ್ಯ. ಹೀಗಾಗಿ ಯುವಸಮುದಾಯವನ್ನು ಪ್ರೋತ್ಸಾಹಿಸಲು ಹಾಗೂ ದೇಶವು ಸುಸ್ಥಿರ ಅಭಿವೃದ್ಧಿಯತ್ತ ಸಾಗಲು ಯುವಕರ ಪಾತ್ರ ಎಷ್ಟು ಮುಖ್ಯ ಎಂದು ತಿಳಿಸಲು ಪ್ರತಿ ವರ್ಷ ಆಗಸ್ಟ್ 12 ರಂದು ಅಂತಾರಾಷ್ಟ್ರೀಯ ಯುವದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಯುವ ದಿನದ ಇತಿಹಾಸ:
1999, ಡಿಸೆಂಬರ್ 17 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಯುವದಿನವನ್ನು ಆಚರಿಸಲು ನಿರ್ಧಾರವನ್ನು ತೆಗೆದುಕೊಂಡಿತು. 1998ರಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ನೀಡಿದ ಸಲಹೆಗಳನ್ನು ಅನುಸರಿಸಿ ಈ ದಿನವನ್ನು ಆಚರಿಸಲು ಮುಂದಾಯಿತು. ಆ ಬಳಿಕ 2000 ರಿಂದ ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಯುವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಯುವಸಮುದಾಯಕ್ಕೆ ಸ್ಫೂರ್ತಿದಾಯಕ ನುಡಿಮುತ್ತುಗಳು
- ನೀವು ಎಷ್ಟು ಬುದ್ಧಿವಂತರಿದ್ದೀರಿ, ಎಷ್ಟು ಚೆನ್ನಾಗಿದ್ದೀರಿ ಅಥವಾ ಎಷ್ಟು ಚೆನ್ನಾಗಿ ಸಂಪರ್ಕಗಳನ್ನು ಹೊಂದಿದ್ದೀರಿ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಪರಿಶ್ರಮ ಹಾಗೂ ಧೈರ್ಯವಿದ್ದರು ಮಾತ್ರ ಯಶಸ್ವಿ ವ್ಯಕ್ತಿಗಳಾಗಬಹುದು – ಸುಧಾ ಮೂರ್ತಿ.
- ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ – ಸ್ವಾಮಿ ವಿವೇಕಾನಂದ.
- ಉದ್ಯೋಗ ಅರಸುವವರಾಗುವುದು ಬಿಟ್ಟು ಉದ್ಯೋಗ ಸೃಷ್ಟಿಕರ್ತರಾಗುವಂತೆ ಯುವಜನರನ್ನು ಅಣಿಗೊಳಿಸಬೇಕು- ಎಪಿಜೆ ಅಬ್ದುಲ್ ಕಲಾಂ.
- ಯುವಕನಾಗಿದ್ದಾಗ ನೋವು ತರುವ ಮತ್ತು ವರ್ಷಗಳ ಬಳಿಕ ಮಾಗಿದಾಗ ರುಚಿ ಕೊಡುವ ಏಕಾಂತದಲ್ಲಿ ನಾನು ಬದುಕುತ್ತೇನೆ – ಆಲ್ಬರ್ಟ್ ಐನ್‌ಸ್ಟೀನ್.
- ಯೌವನದ ಅವಧಿ ಚಿಕ್ಕದು. ಅದು ದೀರ್ಘಾಯುವಲ್ಲ.ಯುವಜನರು ಸಾಟಿಯಿಲ್ಲದ ಶಕ್ತಿ ಮತ್ತು ಉತ್ಸಾಹವನ್ನು ಹೊಂದಿದ್ದಾರೆ. ಬದಲಾವಣೆ ತರುವ ಶಕ್ತಿ ಅವರಿಗಿದೆ – ಸ್ವಾಮಿ ವಿವೇಕಾನಂದ.
- ಯುವ ಶಕ್ತಿಯು ಇಡೀ ವಿಶ್ವಕ್ಕೆ ಸಾಮಾನ್ಯ ಸಂಪತ್ತು. ಯುವ ಜನರು ನಮ್ಮ ಇತಿಹಾಸ, ನಮ್ಮ ವಾಸ್ತವ ಮತ್ತು ನಮ್ಮ ಭವಿಷ್ಯದ ಕನ್ನಡಿ, ಯುವ ಜನರ ಶಕ್ತಿ, ವಿಚಾರ, ಉತ್ಸಾಹ ಮತ್ತು ಧೈರ್ಯಕ್ಕೆ ನಮ್ಮ ಸಮಾಜದ ಬೇರೆ ಯಾವ ವರ್ಗವೂ ಸಾಟಿ ಅಲ್ಲ- ಕೈಲಾಶ್ ಸತ್ಯಾರ್ಥಿ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ