Kitchen Hacks : ಅಡುಗೆಗೆ ಬಳಸುವ ತೊಗರಿ ಬೇಳೆ ಅಸಲಿಯೇ ನಕಲಿಯೇ? ಪತ್ತೆ ಹಚ್ಚಲು ಇಲ್ಲಿದೆ ಟಿಪ್ಸ್
ಇತ್ತೀಚೆಗಿನ ದಿನಗಳಲ್ಲಿ ಆಹಾರ ಕಲಬೆರಕೆಗಳು ಹೆಚ್ಚಾಗುತ್ತಿದೆ. ಹೌದು, ತೊಗರಿ ಬೇಳೆಯಲ್ಲಿ ರಾಸಾಯನಿಕ ಬಣ್ಣಮಿಶ್ರಿತ ಕೇಸರಿ ಬೇಳೆ ಮಿಶ್ರಣ ಆಗುತ್ತಿರುವುದು ಪತ್ತೆಯಾಗಿದೆ. ಈ ಕೇಸರಿ ಬೇಳೆ ವಿಷಕಾರಿಯಾಗಿದ್ದು, ಇದನ್ನು ಸೇವಿಸುವುದರಿಂದ ಪಾರ್ಶ್ವವಾಯು, ಅಂಗವೈಕಲ್ಯ, ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾದ್ರೆ ನೀವು ಮಾರುಕಟ್ಟೆಯಲ್ಲಿ ಖರೀದಿಸಿ ತಂದಿರುವ ತೊಗರಿ ಬೇಳೆ ಅಸಲಿಯೇ ನಕಲಿಯೇ ಪತ್ತೆ ಹಚ್ಚುವುದು ಹೇಗೆ? ಎನ್ನುವ ಇಲ್ಲಿದೆ ಮಾಹಿತಿ.

ಸಾಂದರ್ಭಿಕ ಚಿತ್ರ
ದಕ್ಷಿಣ ಭಾರತದಲ್ಲಿ ರಸಂ ಮತ್ತು ಸಾಂಬಾರ್ ಇಲ್ಲದೇ ಊಟ ಪೂರ್ಣವಾಗುವುದೇ ಇಲ್ಲ. ಹೀಗಾಗಿ ಹೆಚ್ಚಿನವರು ಪದಾರ್ಥಗಳ ತಯಾರಿಕೆಗೆ ತೊಗರಿ ಬೇಳೆ (Toor Dal) ಯನ್ನು ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್ (Protein), ಫೈಬರ್ (Fiber) ಅಂಶಗಳು ಸಮೃದ್ಧವಾಗಿದ್ದು ಹಲವಾರು ಆರೋಗ್ಯ ಪ್ರಯೋಜನಗಳಿವೆ. ಇತ್ತೀಚೆಗಿನ ದಿನಗಳಲ್ಲಿ ತೊಗರಿ ಬೇಳೆಯಲ್ಲಿ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆಯನ್ನು ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಈ ಬಣ್ಣ ಮಿಶ್ರಿತ ಬೇಳೆಯ ಸೇವನೆಯಿಂದ ಆರೋಗ್ಯ (Health) ಕ್ಕೆ ಅಡ್ಡ ಪರಿಣಾಮಗಳೇ ಹೆಚ್ಚು. ಹೀಗಾಗಿ ತೊಗರಿ ಬೇಳೆಯನ್ನು ಖರೀದಿ ಮಾಡುವ ಮುನ್ನ ಇದರ ಶುದ್ಧತೆಯನ್ನು ಹಚ್ಚುವುದು ಬಹಳ ಮುಖ್ಯ.
ನಕಲಿ ತೊಗರಿ ಬೇಳೆ ಗುರುತಿಸಲು ಇಲ್ಲಿದೆ ಟಿಪ್ಸ್
- ದೇಸಿ ತೊಗರಿ ಬೇಳೆಗಾತ್ರದಲ್ಲಿ ಚಿಕ್ಕದಾಗಿದ್ದು ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತದೆ. ಹೈಬ್ರಿಡ್ ತೊಗರಿ ಬೇಳೆ ಕಡಿಮೆ ಪೌಷ್ಟಿಕಾಂಶವನ್ನು ಹೊಂದಿದ್ದು ಗಾತ್ರದಲ್ಲಿ ದೊಡ್ಡದಾಗಿರುತ್ತದೆ.
- ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಖರೀದಿಸುವಾಗ ಮೊದಲು ಮಾಡಬೇಕಾದದ್ದು ಕೈಯಲ್ಲಿ ಉಜ್ಜಿ ನೋಡುವುದು. ಈ ವೇಳೆ ಬೇಳೆಯೂ ಹುಡಿಯಾದರೆ ಅದು ಹಳೆಯ ಬೇಳೆ ಫ್ರೆಶ್ ಆಗಿಲ್ಲ ಎನ್ನುವುದು ಖಚಿತವಾಗುತ್ತದೆ.
- ತೊಗರಿ ಬೇಳೆ ಅಸಲಿಯೇ ಎಂದು ಪತ್ತೆ ಹಚ್ಚಲು ಸ್ವಲ್ಪ ಬೇಳೆಯನ್ನು ಪುಡಿ ಮಾಡಿಕೊಳ್ಳಿ. ಐದು ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿಕೊಳ್ಳಿ. ನೀರು ಹಳದಿ ಬಣ್ಣ ಬಿಟ್ಟರೆ ಈ ಬೇಳೆ ಕಲಬೆರಕೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ.
- ತೊಗರಿ ಬೇಳೆಯ ಶುದ್ಧತೆಯನ್ನು ಪರೀಕ್ಷಿಸಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸಬಹುದು. ಒಂದು ಚಮಚ ತೊಗರಿ ಬೇಳೆಯನ್ನು ನೀರಿನಲ್ಲಿ ಬೆರೆಸಿಕೊಳ್ಳಿ. ಅದಕ್ಕೆ ಒಂದೆರಡು ಹನಿ ಹೈಡ್ರೋಕ್ಲೋರಿಕ್ ಆಮ್ಲ ಹಾಕಿ, ಈ ವೇಳೆಯಲ್ಲಿ ಬೇಳೆ ಬೇರೆ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.
- ನಕಲಿ ತೊಗರಿ ಬೇಳೆಯೂ ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಹೀಗಾಗಿ ಶುದ್ಧ ಹಾಗೂ ಮಧ್ಯಮ ಗಾತ್ರದ ಬೇಳೆಯನ್ನೇ ಆಯ್ಕೆ ಮಾಡಿಕೊಳ್ಳಿ. ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದರೆ ಅದರ ಕ್ವಾಲಿಟಿ ಚೆನ್ನಾಗಿಲ್ಲ ಎಂದು ಅರ್ಥ ಮಾಡಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ