Mangaluru Dasara 2024: ಮಂಗಳೂರು ದಸರಾ ವೈಭವದ ವಿಶೇಷ ಆಕರ್ಷಣೆ ಹುಲಿ ವೇಷ, ಯಾಕೆ ಗೊತ್ತಾ?
ʼಮಾರ್ನೆಮಿʼ ಅಂದರೆ ನವರಾತ್ರಿ ಬಂತೆಂದರೆ ಸಾಕು ಮಂಗಳೂರು ಕಡೆ ಹುಲಿ ವೇಷಗಳದ್ದೇ ಗದ್ದಲ. ವಿಶೇಷವಾಗಿ ಈ ಹಬ್ಬದ ಸಂದರ್ಭದಲ್ಲಿ ಇಲ್ಲಿ ಮನೆ-ಮನೆ, ಬೀದಿ-ಬೀದಿ, ದೇವಾಲಯಗಳಲ್ಲಿ ಹುಲಿ ವೇಷ ಕುಣಿತದ ದೃಶ್ಯವನ್ನು ಕಾಣಬಹುದು. ತುಳುನಾಡಿನ ಸಂಪ್ರದಾಯಗಳಲ್ಲಿ ಒಂದಾದ ಪಿಲಿ ವೇಷ (ಹುಲಿ ವೇಷ) ಮಂಗಳೂರು ದಸರಾದ ಪ್ರಮುಖ ಆಕರ್ಷಣೆ ಅಂತಾನೇ ಹೇಳಬಹುದು. ಪಿಲಿ ನಲಿಕೆ ಆಚರಣೆ ಹುಟ್ಟಿಕೊಂಡಿದ್ದು ಹೇಗೆ, ಹುಲಿ ವೇಷದ ವಿಶೇಷತೆಗಳೇನು ಈ ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.
ಇನ್ನೇನೂ ನವರಾತ್ರಿ, ದಸರಾ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ನಾಡ ಹಬ್ಬ ಎಂದು ಕರೆಯಲಾಗುವ ಮೈಸೂರು ದಸರಾವನ್ನು ಬಹಳ ಅದ್ಧೂರಿಯಾಗಿ ಆಚರಿಸುವಂತೆ ಮಂಗಳೂರಿನಲ್ಲಿಯೂ ಕೂಡಾ ನವರಾತ್ರಿ ಹಬ್ಬವನ್ನು ವಿಶೇಷವಾಗಿ, ವಿಭಿನ್ನವಾಗಿ ಆಚರಿಸಲಾಗುತ್ತದೆ. ಹೌದು ನಾಡಿನಾದ್ಯಂತ ಮೈಸೂರು ದಸರಾ ಪ್ರಸಿದ್ಧವಾದರೆ, ದಕ್ಷಿಣ ಕನ್ನಡ, ಉಡುಪಿ ಕಡೆ ಮಂಗಳೂರು ದಸರಾ ಪ್ರಸಿದ್ಧ. ಈ ಮಂಗಳೂರು ದಸರಾದ ಪ್ರಮುಖ ಆಕರ್ಷಣೆಯೇ ಹುಲಿ ವೇಷ. ತುಳುನಾಡಿನ ಜನರಿಗೆ ಯಕ್ಷಗಾನ, ಭೂತಾರಾಧನೆ, ಕಂಬಳಗಳಿಗಿರುವಷ್ಟೇ ಒಲವು ಹುಲಿ ವೇಷದ ಬಗೆಗೂ ಇದೆ. ಹಾಗದರೇ ಈ ಪಿಲಿ ನಲಿಕೆ ಆಚರಣೆ ಹುಟ್ಟಿಕೊಂಡಿದ್ದು ಹೇಗೆ, ಹುಲಿ ವೇಷದ ವಿಶೇಷತೆಗಳೇನು ಈ ಎಲ್ಲದರ ಬಗ್ಗೆ ತಿಳಿಯೋಣ.
ನವರಾತ್ರಿ (ಮಾರ್ನೆಮಿ) ಹಬ್ಬದ ಪ್ರಮುಖ ಆಕರ್ಷಣೆಯೇ ಹುಲಿ ವೇಷ:
ಪ್ರತಿವರ್ಷ ನಡೆಯುವ ನವರಾತ್ರಿ ಹಬ್ಬದ ಅಷ್ಟೂ ದಿನ ಮಾರ್ನೆಮಿ ವೇಷಗಳದ್ದೇ ಸಂಭ್ರಮ. ಅದರಲ್ಲಿ ಹುಲಿ ವೇಷ ಪ್ರಮುಖ ಆಕರ್ಷಣೆ. ಹುಲಿ ದೇವಿಯ ಒಲವಿನ ಪ್ರಾಣಿಯಾದ್ದರಿಂದ, ದೇವಿಯನ್ನು ಮೆಚ್ಚಿಸಲು ಮತ್ತು ಗೌರವ ಸಲ್ಲಿಸಲು ನವರಾತ್ರಿಯಲ್ಲಿ ಹುಲಿ ವೇಷವನ್ನು ಹಾಕಲಾಗುತ್ತದೆ. ಅಷ್ಟೇ ಅಲ್ಲದೆ ನವರಾತ್ರಿಯ ಸಂದರ್ಭದಲ್ಲಿ ಹಿಂದಿನಿಂದಲೂ ಹುಲಿ ವೇಷ ಸೇರಿದಂತೆ ವಿವಿಧ ವೇಷಧಾರಿಗಳು ಊರೂರು ಸುತ್ತಿಕೊಂಡು, ಮನೆ ಮನೆಗಳಿಗೆ ಹೋಗುವ ಪದ್ಧತಿ ಕೂಡಾ ಇದೆ. ಇದೊಂದು ಸೇವಾರೂಪದಲ್ಲಿ ನಡೆಯುತ್ತಿರುವ ಕಾರ್ಯವಾದ ಕಾರಣ ಮನೆಯವರು ತಮ್ಮ ಕೈಲಾದಷ್ಟು ಹಣವನ್ನು ವೇಷಧಾರಿಗಳಿಗೆ ಕೊಡುತ್ತಾರೆ. ಆಧುನಿಕತೆ ಭರಾಟೆಯಿಂದ ಮಾರ್ನೆಮಿ ವೇಷಗಳು ಊರೂರು ಸುತ್ತುವ, ಮನೆಮನೆಗಳಿಗೆ ಹೋಗುವ ಪರಿಪಾಠ ಕಡಿಮೆಯಾಗಿದೆಯಾದರೂ ಆಹ್ವಾನಿತರ ಮನೆಗಳಿಗೆ ತೆರಳಿ ನರ್ತಿಸುವ ದೊಡ್ಡ ದೊಡ್ಡ ಹುಲಿ ವೇಷ ತಂಡಗಳಿವೆ. ಇನ್ನೂ ಮಂಗಳೂರು, ಉಡುಪಿ ನಗರಗಳಲ್ಲಿ ಪಿಲಿ ವೇಷದ ಅನೇಕ ತಂಡಗಳಿದ್ದು, ಇವುಗಳು ನವರಾತ್ರಿ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಈಗಂತೂ ಹುಲಿ ವೇಷದ ತಂಡವನ್ನು ಕಟ್ಟುವುದು ದೊಡ್ಡ ಪ್ರತಿಷ್ಠೆಯಾಗಿದೆ.
ಇನ್ನೂ ನವರಾತ್ರಿಯ ಸಂದರ್ಭದಲ್ಲಿ ವಿಶೇಷವಾಗಿ ವಿವಿಧ ಸಂಘಟನೆಗಳು ಪಿಲಿ ನಲಿಕೆ ಕಾರ್ಯಕ್ರಮಗಳನ್ನು, ಸ್ಪರ್ಧೆಗಳನ್ನು ಏರ್ಪಡಿಸುತ್ತವೆ. ಇದರಲ್ಲಿ ಒಂದೊಂದು ಹುಲಿ ವೇಷ ತಂಡದಲ್ಲಿರುವ ಯುವಕರು ಮತ್ತು ಸಣ್ಣ ಮಕ್ಕಳು ಹುಲಿಯ ಬಣ್ಣ ಹಚ್ಚಿ ಚೆಂಡೆ ಮತ್ತು ಡೋಲಿನ ತಾಳಕ್ಕೆ ಲಯಕ್ಕೆ ತಕ್ಕಂತೆ ಗಾಂಭೀರ್ಯದಿಂದ ಕುಣಿಯುತ್ತಾರೆ. ಒಂದೊಂದು ತಂಡದಲ್ಲಿ ಸುಮಾರು 25 ಕ್ಕೂ ಹೆಚ್ಚು ವೇಷಧಾರಿಗಳಿದ್ದು, ತಾಯಿ ಹುಲಿ ತನ್ನ ಮಗುವಿಗೆ ಹಾಲುಣಿಸುವ, ಅದರೊಂದಿಗೆ ಆಟವಾಡುವ, ಬೇಟೆ ಕಲಿಸುವ, ಇತರೆ ಹುಲಿಗಳೊಂದಿಗೆ ಕಾದಾಡುವಂತಹ ಸುಂದರ ದೃಶ್ಯಗಳನ್ನು ಕುಣಿತ ರೂಪದಲ್ಲಿ ಪ್ರದರ್ಶಿಸುತ್ತಾರೆ. ಜೊತೆ ಜೊತೆಗೆ ನಾನಾ ರೀತಿಯಲ್ಲಿ ಪಲ್ಟಿಗಳನ್ನು ಹೊಡೆಯುವುದು, ನೆಲದಲ್ಲಿ ಬಿದ್ದ ನಾಣ್ಯ ಅಥವಾ ನೋಟುಗಳನ್ನು ಹಿಮ್ಮುಖವಾಗಿ ತೆಗೆಯುವುದು, ಅಕ್ಕಿ ಮೂಟೆಗಳನ್ನು ಬಾಯಲ್ಲಿ ಕಚ್ಚಿ ಎತ್ತಿ ಬಿಸಾಡುವಂತಹ ವಿವಿಧ ರೀತಿಯ ಕಸರತ್ತುಗಳನ್ನು ಸಹ ಪ್ರದರ್ಶಿಸುತ್ತಾರೆ.
ಪಿಲಿ ನಲಿಕೆ ಆಚರಣೆ ಹುಟ್ಟಿಕೊಂಡಿದ್ದು ಹೇಗೆ?
ಇಷ್ಟಾರ್ಥ ಸಿದ್ಧಿಗಾಗಿ, ಹರಕೆಯ ರೂಪವಾಗಿ, ಎಂದೋ ತೊಟ್ಟ ಸಂಕಲ್ಪಕ್ಕಾಗಿ, ಸೇವಾರ್ಥವಾಗಿ ಹೀಗೆ ನಾನಾ ಭಕ್ತಿ ಭಾವದ ಕಾರಣದಿಂದ ಪಿಲಿ ವೇಷ ಧರಿಸುವ ಸಂಪ್ರದಾಯದ ಹಿಂದೆಯೂ ಐಹಿತ್ಯಗಳಿವೆ. ಇಲ್ಲಿನ ಜನರ ಒಂದು ನಂಬಿಕೆಯ ಪ್ರಕಾರ, ತಾಯಿಯೊಬ್ಬರು ತನ್ನ ಮಗು ಹುಷಾರಾಗಿ ನಡೆಯಲು ಆರಂಭಿಸಿದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುವುದಾಗಿ ಹರಕೆ ಹೊತ್ತಿದ್ದರಂತೆ. ಹೌದು ಹಲವು ವರ್ಷಗಳ ಹಿಂದೆ ದೈಹಿಕ ಸಮಸ್ಯೆಯ ಕಾರಣ ಬಾಲಕನೊಬ್ಬನಿಗೆ ಕಾಲುಗಳಿದ್ದರೂ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಚಿಂತೆಗೀಡಾದ ಆತನ ತಾಯಿ ಮಂಗಳಾದೇವಿ ದೇವಾಲಯಕ್ಕೆ ಬಂದು ಕೈ ಮುಗಿದು, ನನ್ನ ಮಗು ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದರೆ ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಮಗುವಿಗೆ ಹುಲಿ ವೇಷ ಹಾಕಿಸಿ ಇದೇ ದೇವಸ್ಥಾನದ ಅಂಗಳದಲ್ಲಿ ಮಗುವಿನಿಂದ ಪಿಲಿ ನಲಿಕೆಯನ್ನು ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥಿಸುತ್ತಾರಂತೆ. ಇದಾದ ಕೆಲ ದಿನಗಳ ಬಳಿಕ ಆ ಬಾಲಕ ಸಂಪೂರ್ಣವಾಗಿ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದನಂತೆ. ತಾಯಿ ತಾನು ಕೊಟ್ಟ ಮಾತಿನಂತೆ ಮರು ವರ್ಷವೇ ನವರಾತ್ರಿ ಹಬ್ಬದ ಸಮಯದಲ್ಲಿ ತಮ್ಮ ಮಗನಿಗೆ ಹುಲಿ ವೇಷವನ್ನು ಹಾಕಿಸಿ ಮಂಗಳಾದೇವಿ ದೇವಾಲಯದಲ್ಲಿ ಪಿಲಿನಲಿಕೆಯ ಹರಕೆಯನ್ನು ಸಲ್ಲಿಸಿದರಂತೆ. ಅಂದಿನಿಂದ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಗೆ ಗೌರವ ಸಲ್ಲಿಸಲು ಸ್ಥಳೀಯ ಯುವಕರಿದಂದ ಹಿಡಿದು ಪುಟ್ಟ ಮಕ್ಕಳವರೆಗೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಹುಲಿವೇಷವನ್ನು ಧರಿಸುವ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.
ಇದನ್ನೂ ಓದಿ: 500 ವರ್ಷಗಳ ಇತಿಹಾಸವಿರುವ ಹೊಸಪೇಟೆ ದಸರಾ ಹೇಗಿರುತ್ತೆ ಗೊತ್ತಾ?
ವೇಷದ ಸಿದ್ಧತೆ ಹೇಗಿರುತ್ತದೆ?
ಹಿಂದೆಲ್ಲಾ ಹಬ್ಬಕ್ಕೆ ಇನ್ನೇನೂ ಒಂದು ತಿಂಗಳು ಅಥವಾ ಒಂದು ವಾರ ಇರುವಾಗ ಬಣ್ಣ ತಯಾರಿಸುವ ಕೆಲಸ ಶುರು ಮಾಡುತ್ತಿದ್ದರು. ಅರಶಿನ, ಇದ್ದಿಲು ಎಲ್ಲವನ್ನು ಒಟ್ಟಿಗೆ ಸೇರಿಸಿ ಅರೆದು ಆ ಬಣ್ಣಕ್ಕೆ ಹೊಳಪು ಬರಲು ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ಹಾಕಿ, ಚೆನ್ನಾಗಿ ಕುದಿಸಿ ಬಣ್ಣಗಳನ್ನು ತಯಾರಿಸುತ್ತಿದ್ದರು. ಹಿಂದೆಲ್ಲಾ ಹಚ್ಚುತ್ತಿದ್ದ ಈ ಬಣ್ಣ ವಿಪರೀತ ಉರಿಯಿಂದ ಕೂಡಿತ್ತು ಮಾತ್ರವಲ್ಲದೆ ಮೈಗೆ ಹಚ್ಚಿದ ಈ ಬಣ್ಣ ಅಷ್ಟು ಸುಲಭವಾಗಿ ಮಾಸುತ್ತಿರಲಿಲ್ಲ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಸ್ಪ್ರೇ ಇತ್ಯಾದಿ ಸುಲಭ ವಿಧಾನದ ಮೂಲಕ ಬಣ್ಣ ಹಚ್ಚಲಾಗುತ್ತದೆ.
ಹುಲಿ ವೇಷಧಾರಿಗಳಿಗೆ ಬಣ್ಣ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ:
ಹುಲಿವೇಷದಲ್ಲಿ ಚಿಟ್ಟೆ ಹುಲಿ ಮತ್ತು ಪಟ್ಟೆ ಹುಲಿ ಎಂಬ ಎರಡು ಪ್ರಕಾರದ ವೇಷಗಳಿದ್ದು, ಚಿಟ್ಟೆ ಹುಲಿಯ ದೇಹದ ಮೇಲೆ ಚಿರತೆಯ ಮೈ ಮೇಲೆ ಕಂಡುಬರುವ ಚುಕ್ಕಿಯಾಕಾರವನ್ನು ಬಿಡಿಸಲಾಗುತ್ತದೆ. ಪಟ್ಟೆ ಹುಲಿಗೆ ಹುಲಿಯ ಮೇಲಿರುವ ಪಟ್ಟೆ ಅಥವಾ ಗೆರೆಗಳ ಆಕಾರವನ್ನು ಬಿಡಿಸಲಾಗುತ್ತದೆ. ತೀರಾ ಇತ್ತೀಚಿಗೆ ಕರಿ ಪಿಲಿ ಕೂಡಾ ಬಾರಿ ಹೆಸರುವಾಸಿಯಗಿದೆ. ಈ ಕಪ್ಪು ಹುಲಿ ವೇಷಧಾರಿಗೆ ಕಪ್ಪುಬಣ್ಣವನ್ನು ಹಾಕಿ ಅದರ ಮೇಲೆ ಬಿಳಿ ಬಣ್ಣದ ಚುಕ್ಕೆಗಳನ್ನು ಬಿಡಿಸಲಾಗುತ್ತದೆ. ಮೊದಲು ಕೈಕಾಲು ದೇಹಕ್ಕೆ ಬಣ್ಣವನ್ನು ಹಚ್ಚಲಾಗುತ್ತದೆ. ಬಣ್ಣ ಹಚ್ಚಿದ ತಕ್ಷಣ ವೇಷಧಾರಿಯ ಮೈಮೇಲೆ ಬಿಳಿ ಬಣ್ಣದ ರೋಮಗಳನ್ನು ಹಾಕಲಾಗುತ್ತದೆ. ಸಾಮಾನ್ಯವಾಗಿ ಕುರಿಯ ರೋಮಗಳನ್ನು ತಂದು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಬಳಿಕ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಈ ರೋಮಕ್ಕೆ ಬಣ್ಣ ಹಾಕಿ ತಕ್ಷಣವೇ ಹುಲಿವೇಷಧಾರಿಯ ಮೈಮೇಲೆ ಅಂಟಿಸಲಾಗುತ್ತದೆ. ಹಿಂದೆಲ್ಲಾ ರಾತ್ರಿಯಿಂದ ಬೆಳಗ್ಗಿನವರೆಗೆ ವೇಷಧಾರಿಗಳಿಗೆ ಬಣ್ಣ ಹಚ್ಚಲಾಗುತ್ತಿತ್ತು. ಆದರೆ ಈಗ ಸ್ಪ್ರೇ ಇತ್ಯಾದಿ ಆಧುನಿಕ ಸೌಲಭ್ಯಗಳಿರುವ ಕಾರಣ 2 ರಿಂದ 3 ಗಂಟೆಯ ಒಳಗೆ ಬಣ್ಣ ಹಚ್ಚಲಾಗುತ್ತದೆ. ಮೈ ಮೇಲೆ ಬಣ್ಣ ಹಚ್ಚಿದ ನಂತರ ಕೊನೆಯಲ್ಲಿ ಮುಖವರ್ಣಿಕೆಯನ್ನು ಬಿಡಿಸಲಾಗುತ್ತದೆ.
ಕೊನೆಯಲ್ಲಿ ಹುಲಿವೇಷಧಾರಿಗಳಿಗೆ ಬಿಳಿ ಬಣ್ಣದ ಜೆಟ್ಟಿ ಉಡುಪನ್ನು ಸೊಂಟಕ್ಕೆ ಕಟ್ಟಲಾಗುತ್ತದೆ. ಇದು ಸುಮಾರು ಆರು ಇಂಚು ಅಗಲ ಮತು 12 ರಿಂದ 14 ಅಡಿ ಉದ್ದವನ್ನು ಹೊಂದಿರುತ್ತದೆ. ಅದನ್ನು ಹುಲಿಯ ಬಾಲದ ರೀತಿಯಲ್ಲಿ ಕಟ್ಟಲಾಗುತ್ತದೆ. ಹೀಗೆ ಹುಲಿವೇಷಧಾರಿಗಳು ಸಂಪೂರ್ಣವಾಗಿ ತಯಾರಾಗಿ ಹುಲಿ ಕುಣಿತಕ್ಕೆ ಅಣಿಯಾಗುವ ಮೊದಲು “ಲೋಬನ ಸೇವೆ”ಯನ್ನು ಮಾಡಲಾಗುತ್ತದೆ. ಹಾಗೂ ಹುಲಿವೇಷಧಾರಿಗೆ ದೃಷ್ಟಿ ತಾಕಬಾರದೆಂದು ಗುರುಗಳು ತಮ್ಮ ತಂಡದ ಪ್ರತಿಯೊಬ್ಬರ ಕೈಗೂ ಕಪ್ಪುದಾರವನ್ನು ಕಟ್ಟುತ್ತಾರೆ. ಹೀಗೆ ಲೋಬನ ಸೇವೆಯ ಬಳಿಕ ಮನೆಮನೆಗಳಿಗೆ ಹೋಗಿ, ನಗರದ ಬೀದಿಗಳಲ್ಲಿ ಹುಲಿವೇಷಧಾರಿಗಳು ತಾಸೆ (ಡೊಳ್ಳು) ಯ ಸದ್ದಿಗೆ ನೃತ್ಯ ಮಾಡುತ್ತಾರೆ.
ಕಲಾಸೇವೆಯ ಜೊತೆಗೆ ಸಮಾಜ ಸೇವೆ:
ಹಿಂದೆಲ್ಲಾ ಹುಲಿ ವೇಶ ಹಾಕಿ ಮನೆ ಮನೆ ಊರೂರು ಸುತ್ತಿಕೊಂಡು ನವರಾತ್ರಿಯ ಕೊನೆಯ ದಿನ ತಮ್ಮಿಷ್ಟದ ದೇವಿ ದೇವಸ್ಥಾನದಲ್ಲಿ ಪಿಲಿ ನಲಿಕೆ ಸೇವೆಗೈದು ಕಾಣಿಕೆ ಹಾಕಿ ವೇಷವನ್ನು ಬಿಚ್ಚಿಡುವ ವಾಡಿಕೆಯಿತ್ತು. ಅಂದಿನ ಕಷ್ಟದ ದಿನಗಳಲ್ಲಿ ಕೆಲವರಿಗೆ ಮಾರ್ನೆಮಿ (ನವರಾತ್ರಿ) ವೇಷವೆಂದರೆ 9 ದಿನಗಳ ಕಾಲ ಹೊಟ್ಟೆ ಪಾಡಿನ ಕಸುಬೂ ಆಗಿತ್ತು. ಆದರೆ ಇಂದು ಹುಲಿ ವೇಷ ಕಲಾಸೇವೆಯ ಜೊತೆ ಜೊತೆಗೆ ಸಮಾಜಸೇವೆಯ ಗುರಿಯನ್ನು ಹೊಂದಿದ್ದು, ಹುಲಿವೇಷ ತಂಡಗಳು ತಮಗೆ ಕಾಣಿಕೆಯಾಗಿ ಬಂದಂತಹ ಹಣವನ್ನು ಅಗತ್ಯವಿರುವ ಜನರಿಗೆ ಸಹಾಯಧನದ ರೂಪದಲ್ಲಿ ನೀಡುತ್ತಾರೆ. ಅಲ್ಲದೆ ಈಗೀಗ ಮಾರ್ನೆಮಿ ಹಬ್ಬದ ಸಮಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಪಿಲಿನಲಿಕೆ ಸ್ಪರ್ಧೆಗಳನ್ನು ಕೂಡಾ ಏರ್ಪಡಿಸಲಾಗುತ್ತಿದ್ದು, ಘಟಾನುಘಟಿ ಹುಲಿವೇಷ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಈ ಪಿಲಿ ನಲಿಕೆ ಸ್ಪರ್ಧೆಯನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಪಿಲಿ ನಲಿಕೆಗೆ ಅದರದ್ದೇ ಆದ ನೃತ್ಯ ಪ್ರಕಾರವಿದ್ದು, ಆದರೆ ತೀರಾ ಇತ್ತೀಚಿಗೆ ಹುಲಿ ಕುಣಿತ ಬೇರೆ ಬೇರೆ ಡಾನ್ಸ್ ಫಾರ್ಮ್‌ಗಳನ್ನು ಪಡೆದುಕೊಳ್ಳುತ್ತಿದ್ದು, ದಯವಿಟ್ಟು ಪಿಲಿ ನಲಿಕೆಯ ಸಂಪ್ರದಾಯ ಅದರ ಗತ್ತು ಗಾಂಭೀರ್ಯವನ್ನು ಹಾಳು ಮಾಡಬೇಡಿ ಎಂಬ ಕೂಗೂ ಕೂಡಾ ಕೇಳಿ ಬರುತ್ತಿದೆ.
ದಸರಾ ಹಬ್ಬದ ಸ್ಟೋರಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ