Viral: ʼವರ್ಲ್ಡ್‌ ಆಫ್‌ ಮೈಸೂರು ಪಾಕ್‌ʼ ವಿಶ್ವದ ಅತಿ ದೊಡ್ಡ ಮೈಸೂರ್‌ ಪಾಕ್‌ ಮಳಿಗೆಯಿದು

| Updated By: ಅಕ್ಷತಾ ವರ್ಕಾಡಿ

Updated on: Jan 21, 2025 | 12:49 PM

ಮೈಸೂರು ಪಾಕ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ನಮ್ಮ ಕನ್ನಡಿಗರಿಗೆ ಮೈಸೂರು ಪಾಕ್‌ ಅಂದ್ರೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಎಲ್ಲಾ ಸ್ವೀಟ್‌ ಅಂಗಡಿಗಳಲ್ಲೂ ಮೈಸೂರು ಪಾಕ್‌ ಲಭ್ಯವಿರುತ್ತದೆ. ಆದ್ರೆ ಇಲ್ಲೊಂದು ವಿಶಿಷ್ಟ ಮಳಿಗೆಯಿದ್ದು, ಇಲ್ಲಿ ಬರೋಬ್ಬರಿ 11 ಬಗೆಯ ಮೈಸೂರು ಪಾಕ್‌ ಲಭ್ಯವಿದೆ. ಮೂವರು ಸ್ನೇಹಿತೆಯರು ಸೇರಿ ಆರಂಭಿಸಿರುವ ವಿಶ್ವದ ಅತಿ ದೊಡ್ಡ ಮೈಸೂರ್‌ ಪಾಕ್‌ ಮಳಿಗೆಯಾದ ʼ ವರ್ಲ್ಡ್‌ ಆಫ್‌ ಮೈಸೂರು ಪಾಕ್‌ʼ ಬಗ್ಗೆ ತಿಳಿಯೋಣ ಬನ್ನಿ.

Viral: ʼವರ್ಲ್ಡ್‌ ಆಫ್‌ ಮೈಸೂರು ಪಾಕ್‌ʼ ವಿಶ್ವದ ಅತಿ ದೊಡ್ಡ ಮೈಸೂರ್‌ ಪಾಕ್‌  ಮಳಿಗೆಯಿದು
World's Largest Mysore Pak Centre
Follow us on

ದೇಶ ವಿದೇಶದಲ್ಲಿ ಫೇಮಸ್‌ ಆಗಿರುವ ಮೈಸೂರು ಪಾಕ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ಅದ್ಭುತ ರುಚಿಯಿರುವ ಸಿಹಿಯನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಮೈಸೂರು ಒಡೆಯರ ಆಳ್ವಿಕೆಯಿದ್ದ ಆ ಕಾಲದಲ್ಲಿ ಅರಮನೆಯ ಪಾಕಶಾಲೆಯಲ್ಲಿ ಪಾಕತಜ್ಞ ಕಾಕಾಸುರ ಮಾದಪ್ಪ ಈ ಮೈಸೂರು ಪಾಕ್‌ ಅನ್ನು ತಯಾರಿಸಿದರೆಂಬ ಇತಿಹಾಸವಿದೆ. ಅಂದಿನಿಂದ ಇಂದಿನವರೆಗೂ ಈ ಮೈಸೂರ್‌ ಪಾಕ್‌ ಜನಪ್ರಿಯತೆ ಹಾಗೆಯೇ ಇದೆ. ಈಗಂತೂ ಎಲ್ಲಾ ಸ್ವೀಟ್‌ ಅಂಗಡಿಗಳಲ್ಲೂ ಈ ಸಿಹಿ ಖಾದ್ಯ ಲಭ್ಯವಿದೆ. ಆದ್ರೆ ಇಲ್ಲೊಂದು ಮೈಸೂರು ಪಾಕ್‌ನದ್ದೇ ವಿಶಿಷ್ಟ ಮಳಿಗೆಯಿದ್ದು, ಇಲ್ಲಿ ಬರೋಬ್ಬರಿ 11 ಬಗೆಯ ಮೈಸೂರು ಪಾಕ್‌ ಲಭ್ಯವಿದೆಯಂತೆ. ಮೂವರು ಸ್ನೇಹಿತೆಯರು ಸೇರಿ ಆರಂಭಿಸಿರುವ ವಿಶ್ವದ ಅತಿ ದೊಡ್ಡ ಮೈಸೂರ್‌ ಪಾಕ್‌ ಮಳಿಗೆಯಾದ ʼ ವರ್ಲ್ಡ್‌ ಆಫ್‌ ಮೈಸೂರು ಪಾಕ್‌ʼ ಬಗ್ಗೆ ತಿಳಿಯೋಣ ಬನ್ನಿ.

ವರ್ಲ್ಡ್‌ ಆಫ್‌ ಮೈಸೂರು ಪಾಕ್‌:

ಮೈಸೂರಿನ ಚಾಮುಂಡಿ ಬೆಟ್ಟ ರಸ್ತೆಯಲ್ಲಿರುವ ವರ್ಲ್ಡ್‌ ಆಫ್‌ ಮೈಸೂರು ಪಾಕ್‌ ವಿಧ ವಿಧದ ಸಾಂಪ್ರದಾಯಿಕ ಮೈಸೂರು ಪಾಕ್‌ ದೊರೆಯುವ ಸ್ಥಳವಾಗಿದೆ. ಹುರಿದ ಬಾದಾಮಿ, ಕ್ಯಾರೆಟ್‌, ಗೋಡಂಬಿ, ಮಾವು, ಅಂಜೂರ, ಬೆಲ್ಲ ಹೀಗೆ 11 ಬಗೆಯ ವಿಶಿಷ್ಟ ಮೈಸೂರು ಪಾಕ್‌ಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಮಹಿಳಾ ಉದ್ಯಮಿಗಳೇ ಸೇರಿ ಸ್ಥಾಪಿಸಿರುವ ಈ ವಿಶ್ವದ ಅತಿ ದೊಡ್ಡ ಮೈಸೂರು ಪಾಕ್‌ ಮಳಿಗೆಯಲ್ಲಿ ನೀವು ವಿವಿಧ ಬಗೆಯ ಮೈಸೂರು ಪಾಕ್‌ಗಳನ್ನು ಸವಿಯುವುದರ ಜೊತೆಗೆ ಮೈಸೂರು ಪಾಕ್‌ ತಯಾರಿಕೆಯನ್ನು ನೇರವಾಗಿ ವೀಕ್ಷಿಸುವ ಅವಕಾಶವು ಇದೆ.

ಇದು ಸಂಪೂರ್ಣ ಮಹಿಳಾ ಸ್ವಾಮ್ಯದ ಉದ್ಯಮವಾಗಿದ್ದು, ಸಹ ಸಂಸ್ಥಾಕರಾದ ಸೌಮ್ಯ ಹೆಚ್.‌ ಎಸ್‌, ಸುಷ್ಮಾ ವಿ. ಪ್ರಸಾದ್‌ ಮತ್ತು ಶ್ರುತಿ ಪವನ್‌ ಶ್ರಾಫ್‌ ನಡೆಸುತ್ತಿದ್ದಾರೆ. 8,000 ಚದರ ಅಡಿ ಜಾಗದಲ್ಲಿ ವರ್ಲ್ಡ್‌ ಆಫ್‌ ಮೈಸೂರು ಪಾಕ್‌ ಸುಸಜ್ಜಿತವಾದ ಮಳಿಗೆಯನ್ನು ನಿರ್ಮಾಣ ಮಾಡಲಾಗಿದ್ದು, ಇಲ್ಲಿ ನೀವು ಮೈಸೂರು ಪಾಕ್‌ ಹೇಗೆ ತಯಾರಾಗುತ್ತೆ ಎಂಬುದನ್ನು ಕೂಡಾ ನೋಡುವ ಅವಕಾಶವಿದೆ. ಸಕ್ಕರೆ ಪಾಕವನ್ನು ತಯಾರಿಸುವುದರಿಂದ ಹಿಡಿದು ಪ್ಯಾಕೆಜಿಂಗ್‌ ವರೆಗೆ ಮೈಸೂರು ಪಾಕ್‌ ಹೇಗೆ ತಯಾರಾಗುತ್ತದೆ ಎಂಬ ಸಂಪೂರ್ಣ ಪ್ರಕ್ರಿಯೆಯನ್ನು ನೀವು ನೋಡಬಹುದು. ಮುಂದಿನ ಬಾರಿ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಶಿಷ್ಟ ಸ್ಥಳಕ್ಕೆ ತಪ್ಪದೆ ಭೇಟಿ ನೀಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ