Hair Wash During Periods: ಪಿರಿಯಡ್ಸ್ ಸಮಯದಲ್ಲಿ ತಲೆಸ್ನಾನ ಮಾಡಿದರೆ ರಕ್ತಸ್ರಾವ ಹೆಚ್ಚಾಗುತ್ತದೆಯೇ?
ಪಿರಿಯಡ್ಸ್ ಸಮಯದಲ್ಲಿ ತಲೆಸ್ನಾನ ಮಾಡಿದರೆ ಮುಟ್ಟಿನ ರಕ್ತಸ್ರಾವ ಹೆಚ್ಚಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ವೈದ್ಯರ ಪ್ರಕಾರ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ತಲೆಸ್ನಾನ ಮಾಡುವುದರಿಂದ ಮುಟ್ಟಿನ ಚಕ್ರ ಅಥವಾ ರಕ್ತಸ್ರಾವದ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಿಗೆ ಈ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ.

ಮುಖ್ಯಾಂಶಗಳು
- ಪಿರಿಯಡ್ಸ್ ವೇಳೆ ತಲೆಸ್ನಾನ ಸುರಕ್ಷಿತ; ರಕ್ತಸ್ರಾವ ಹೆಚ್ಚುವುದಿಲ್ಲ.
- ಇದು ಮೂಢನಂಬಿಕೆ, ವೈಜ್ಞಾನಿಕ ಆಧಾರ ಇಲ್ಲ ಎಂದು ವೈದ್ಯರ ಸ್ಪಷ್ಟನೆ.
- ಮುಟ್ಟಿನ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ.
ಪಿರಿಯಡ್ಸ್ (ಮುಟ್ಟಿನ ದಿನಗಳು) ಸಮಯದಲ್ಲಿ ತಲೆಸ್ನಾನ ಮಾಡಬಾರದು, ಮಾಡಿದರೆ ರಕ್ತಸ್ರಾವ ಹೆಚ್ಚಾಗುತ್ತದೆ ಅಥವಾ ಹೊಟ್ಟೆನೋವು ಜಾಸ್ತಿಯಾಗುತ್ತದೆ ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಬಹಳ ವರ್ಷಗಳಿಂದ ಇದೆ. ಆದರೆ ವೈದ್ಯರ ಪ್ರಕಾರ ಇದು ವೈಜ್ಞಾನಿಕ ಆಧಾರವಿಲ್ಲದ ಒಂದು ತಪ್ಪು ಕಲ್ಪನೆ. ಪಿರಿಯಡ್ಸ್ (Periods) ಸಮಯದಲ್ಲಿ ತಲೆಸ್ನಾನ ಮಾಡುವುದರಿಂದ ರಕ್ತಸ್ರಾವ ಹೆಚ್ಚಾಗುವುದಿಲ್ಲ ಮತ್ತು ಮುಟ್ಟಿನ ಚಕ್ರದ ಮೇಲೂ ಯಾವುದೇ ನೇರ ಪರಿಣಾಮ ಬೀರುವುದಿಲ್ಲ.
ವೈದ್ಯರು ಹೇಳುವಂತೆ, ಪಿರಿಯಡ್ಸ್ ಸಮಯದಲ್ಲಿ ದೇಹದಲ್ಲಿನ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳ ಮಟ್ಟದಲ್ಲಿ ಬದಲಾವಣೆ ಆಗುತ್ತದೆ. ಈ ಹಾರ್ಮೋನ್ ಬದಲಾವಣೆಯಿಂದ ಗರ್ಭಾಶಯದ ಒಳಪದರ ಹೊರಬರುವುದೇ ಮುಟ್ಟಿನ ರಕ್ತಸ್ರಾವಕ್ಕೆ ಕಾರಣ. ತಲೆಸ್ನಾನ ಮಾಡುವುದು ಅಥವಾ ನೀರು ತಲೆಯ ಮೇಲೆ ಸುರಿಯುವುದು ಈ ಪ್ರಕ್ರಿಯೆಯನ್ನು ಬದಲಾಯಿಸುವುದಿಲ್ಲ. ಆದ್ದರಿಂದ ತಲೆಸ್ನಾನ ಮಾಡಿದರೆ ರಕ್ತಸ್ರಾವ ಹೆಚ್ಚಾಗುತ್ತದೆ ಎಂಬುದು ಕೇವಲ ಮೂಢನಂಬಿಕೆ.
ಆದರೆ ಪಿರಿಯಡ್ಸ್ ಸಮಯದಲ್ಲಿ ಕೆಲ ಮಹಿಳೆಯರಿಗೆ ದಣಿವು, ಹೊಟ್ಟೆನೋವು, ಬೆನ್ನುನೋವು, ತಲೆನೋವು ಅಥವಾ ದೇಹದಲ್ಲಿ ಸ್ವಲ್ಪ ಅಸ್ವಸ್ಥತೆ ಕಾಣಿಸಬಹುದು. ಈ ಸಮಯದಲ್ಲಿ ತುಂಬಾ ತಣ್ಣನೆಯ ನೀರಿನಿಂದ ತಲೆಸ್ನಾನ ಮಾಡಿದರೆ ಕೆಲವರಿಗೆ ಕ್ಷಣಿಕವಾಗಿ ಚಳಿ, ತಲೆನೋವು ಅಥವಾ ಅಸ್ವಸ್ಥತೆ ಹೆಚ್ಚಾದಂತೆ ಅನಿಸಬಹುದು. ಆದರೆ ಇದರಿಂದ ಮುಟ್ಟಿನ ರಕ್ತಸ್ರಾವ ಅಥವಾ ಹಾರ್ಮೋನ್‌ಗಳಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಹೆಚ್ಚು ಆರಾಮ ನೀಡಬಹುದು.
ವಾಟರ್ ಪಾರ್ಕ್ನಲ್ಲಿ ಎಂಜಾಯ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ; ಚರ್ಮ ಮತ್ತು ಕೂದಲಿಗೆ ಹಾನಿ ಆಗಬಹುದು
ಪಿರಿಯಡ್ಸ್ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತಲೆಸ್ನಾನ ಮಾಡುವುದರಿಂದ ತಲೆಯ ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆ ಮತ್ತು ಕೊಳೆ ದೂರವಾಗಿ ತಾಜಾತನದ ಅನುಭವ ಸಿಗುತ್ತದೆ. ಹಾರ್ಮೋನ್ ಬದಲಾವಣೆಯಿಂದ ಈ ದಿನಗಳಲ್ಲಿ ತಲೆಚರ್ಮ ಹೆಚ್ಚು ಎಣ್ಣೆಯುಕ್ತವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಅಗತ್ಯವಿದ್ದರೆ ಸಾಮಾನ್ಯ ರೀತಿಯಲ್ಲೇ ತಲೆಸ್ನಾನ ಮಾಡಬಹುದು. ಮೃದುವಾದ ಶ್ಯಾಂಪೂ ಬಳಸುವುದು ಮತ್ತು ಸ್ನಾನದ ನಂತರ ಕೂದಲನ್ನು ಚೆನ್ನಾಗಿ ಒರೆಸಿಕೊಳ್ಳುವುದು ಉತ್ತಮ.
ಆದರೆ ಪಿರಿಯಡ್ಸ್ ವೇಳೆ ಅತಿಯಾದ ರಕ್ತಸ್ರಾವ, ತೀವ್ರ ಹೊಟ್ಟೆನೋವು, ತಲೆಸುತ್ತು, ಅತಿಯಾದ ದೌರ್ಬಲ್ಯ ಅಥವಾ ಪ್ರತೀ ತಿಂಗಳು ಅಸಹಜ ಲಕ್ಷಣಗಳು ಕಂಡುಬಂದರೆ ಅದನ್ನು ತಲೆಸ್ನಾನಕ್ಕೆ ಸಂಬಂಧಿಸಿ ನೋಡುವ ಬದಲು ತಕ್ಷಣ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




