Rakhi Purnima 2026: ರಕ್ಷಾಬಂಧನ ದಿನಾಂಕ, ಸಮಯ ಮತ್ತು ಈ ಹುಣ್ಣಿಮೆಯ ಆಧ್ಯಾತ್ಮಿಕ ಮಹತ್ವವೇನು?

2026ರ ರಾಖಿ ಪೂರ್ಣಿಮೆಯನ್ನು ಆಗಸ್ಟ್ 28ರಂದು ಆಚರಿಸಲಾಗುತ್ತದೆ. ಶ್ರಾವಣ ಪೂರ್ಣಿಮೆ ಕೇವಲ ರಕ್ಷಾಬಂಧನಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಈ ದಿನವನ್ನು ವಿಭಿನ್ನ ಹೆಸರು ಮತ್ತು ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ. ರಾಖಿ ಪೂರ್ಣಿಮೆಯ ದಿನಾಂಕ, ಸಮಯ, ವಿವಿಧ ಆಚರಣೆಗಳು ಮತ್ತು ಅದರ ಆಧ್ಯಾತ್ಮಿಕ ಮಹತ್ವದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Rakhi Purnima 2026: ರಕ್ಷಾಬಂಧನ ದಿನಾಂಕ, ಸಮಯ ಮತ್ತು ಈ ಹುಣ್ಣಿಮೆಯ ಆಧ್ಯಾತ್ಮಿಕ ಮಹತ್ವವೇನು?
Rakhi Purnima 2026
Edited By:

Updated on: Aug 27, 2026 | 2:01 PM

ಮುಖ್ಯಾಂಶಗಳು

  • ರಾಖಿ ಪೂರ್ಣಿಮೆ 2026 ಯಾವಾಗ?
  • ಶ್ರಾವಣ ಪೂರ್ಣಿಮೆಯ ಆಧ್ಯಾತ್ಮಿಕ ಮಹತ್ವವೇನು?
  • ದೇಶದ ವಿವಿಧ ಭಾಗಗಳಲ್ಲಿ ರಾಖಿ ಪೂರ್ಣಿಮೆ ಹೇಗೆ ಆಚರಣೆ?

ಶ್ರಾವಣ ಮಾಸದ ಹುಣ್ಣಿಮೆಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕವಾಗಿ ವಿಶೇಷ ಮಹತ್ವವಿದೆ. ದೇಶದ ಬಹುತೇಕ ಭಾಗಗಳಲ್ಲಿ ಈ ದಿನವನ್ನು ರಕ್ಷಾಬಂಧನ (Raksha bandhan) ಅಥವಾ ರಾಖಿ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಆದರೆ ಶ್ರಾವಣ ಹುಣ್ಣಿಮೆ ಕೇವಲ ಸಹೋದರ-ಸಹೋದರಿಯರ ಹಬ್ಬಕ್ಕೆ ಮಾತ್ರ ಸೀಮಿತವಾಗಿಲ್ಲ. ರಕ್ಷಣೆ, ಜ್ಞಾನ, ಪ್ರಕೃತಿ, ಕೃಷಿ ಮತ್ತು ಆಧ್ಯಾತ್ಮಿಕ ನವೀಕರಣಕ್ಕೆ ಸಂಬಂಧಿಸಿದ ಹಲವು ಆಚರಣೆಗಳು ಈ ದಿನದೊಂದಿಗೆ ಬೆಸೆದುಕೊಂಡಿವೆ.

2026ರಲ್ಲಿ ಶ್ರಾವಣ ಹುಣ್ಣಿಮೆ ತಿಥಿಯು ಆಗಸ್ಟ್ 27ರಂದು ಬೆಳಗ್ಗೆ 9:08ಕ್ಕೆ ಆರಂಭವಾಗಿ, ಆಗಸ್ಟ್ 28ರಂದು ಬೆಳಗ್ಗೆ 9:48ಕ್ಕೆ ಮುಕ್ತಾಯವಾಗಲಿದೆ. ರಕ್ಷಾಬಂಧನವನ್ನು ಆಗಸ್ಟ್ 28ರಂದು ಆಚರಿಸಲಾಗುತ್ತದೆ. ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವುದಾದರೆ, ರಾಖಿ ಪೂರ್ಣಿಮೆ ನಮ್ಮ ಜೀವನದಲ್ಲಿ ಸ್ವಲ್ಪ ಸಮಯ ನಿಂತು ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಮುಂದಿನ ದಿನಗಳಲ್ಲಿ ಯಾವುದನ್ನು ಮುಂದುವರಿಸಬೇಕು ಎಂಬುದನ್ನು ಯೋಚಿಸಲು ಅವಕಾಶ ನೀಡುತ್ತದೆ.

ರಾಖಿ ಪೂರ್ಣಿಮೆ 2026ರ ದಿನಾಂಕ ಮತ್ತು ಸಮಯ

ಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಹುಣ್ಣಿಮೆಯನ್ನೇ ರಾಖಿ ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಈ ವರ್ಷ ಹುಣ್ಣಿಮೆ ತಿಥಿ ಆಗಸ್ಟ್ 27ರಂದು ಆರಂಭವಾಗಿ, ಆಗಸ್ಟ್ 28ರ ಬೆಳಗ್ಗೆಯವರೆಗೆ ಇರಲಿದೆ.

ಶ್ರಾವಣ ಪೂರ್ಣಿಮೆ ತಿಥಿ ಆರಂಭ: ಆಗಸ್ಟ್ 27, 2026, ಬೆಳಗ್ಗೆ 9:08

ಶ್ರಾವಣ ಪೂರ್ಣಿಮೆ ತಿಥಿ ಮುಕ್ತಾಯ: ಆಗಸ್ಟ್ 28, 2026, ಬೆಳಗ್ಗೆ 9:48

ರಾಖಿ ಪೂರ್ಣಿಮೆ / ರಕ್ಷಾಬಂಧನ: ಆಗಸ್ಟ್ 28, 2026

ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಣೆ

ಶ್ರಾವಣ ಹುಣ್ಣಿಮೆಯನ್ನು ದೇಶದ ಎಲ್ಲೆಡೆ ಒಂದೇ ರೀತಿಯಲ್ಲಿ ಆಚರಿಸುವುದಿಲ್ಲ. ಪ್ರದೇಶಕ್ಕೆ ಅನುಗುಣವಾಗಿ ಈ ದಿನಕ್ಕೆ ಬೇರೆ ಬೇರೆ ಹೆಸರುಗಳು ಮತ್ತು ಆಚರಣೆಗಳಿವೆ.

ಕೆಲವು ಪ್ರದೇಶಗಳಲ್ಲಿ ಈ ದಿನವನ್ನು ನಾರಳಿ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಮೀನುಗಾರಿಕೆ ಸಮುದಾಯದವರು ಸಮುದ್ರಕ್ಕೆ ಸಂಬಂಧಿಸಿದ ದೇವರಾದ ವರುಣನಿಗೆ ತೆಂಗಿನಕಾಯಿ ಅರ್ಪಿಸುವ ಸಂಪ್ರದಾಯವಿದೆ. ಮಳೆಗಾಲ ನಿಧಾನವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಸಮುದ್ರಕ್ಕೆ ಕೃತಜ್ಞತೆ ಸಲ್ಲಿಸುವ ಆಚರಣೆಯಾಗಿ ಇದನ್ನು ಕಾಣಲಾಗುತ್ತದೆ.

Raksha bandhan 2026: ರಕ್ಷಾಬಂಧನದಂದು ಲಡ್ಡು ಗೋಪಾಲನಿಗೆ ರಾಖಿ ಕಟ್ಟಬಹುದೇ? ಇಲ್ಲಿದೆ ಸರಿಯಾದ ವಿಧಾನ ಮತ್ತು ಶುಭ ಮುಹೂರ್ತ

ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಶ್ರಾವಣ ಹುಣ್ಣಿಮೆಯನ್ನು ಅವಣಿ ಅವಿಟ್ಟಂ ಅಥವಾ ಉಪಾಕರ್ಮ ಎಂದು ಆಚರಿಸಲಾಗುತ್ತದೆ. ಈ ಆಚರಣೆಯು ಪವಿತ್ರ ಯಜ್ಞೋಪವೀತವನ್ನು ಬದಲಿಸುವುದು ಹಾಗೂ ವೇದಾಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡುವುದಕ್ಕೆ ಸಂಬಂಧಿಸಿದೆ.

ಇನ್ನು ಮಧ್ಯ ಭಾರತದ ಕೆಲವು ಕೃಷಿ ಸಮುದಾಯಗಳಲ್ಲಿ ಇದೇ ದಿನವನ್ನು ಕಜರಿ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಕೃಷಿ ಋತು ಮತ್ತು ಉತ್ತಮ ಫಸಲು ಸಿಗಲಿ ಎಂಬ ಆಶಯಕ್ಕೆ ಸಂಬಂಧಿಸಿದ ಆಚರಣೆಗಳು ಈ ದಿನ ನಡೆಯುತ್ತವೆ. ಆಚರಣೆಗಳು ಬೇರೆ ಬೇರೆಯಾಗಿದ್ದರೂ, ಅವುಗಳ ಹಿಂದೆ ಬದಲಾವಣೆ ಮತ್ತು ಹೊಸ ಆರಂಭದ ಸಾಮಾನ್ಯ ಆಶಯವಿದೆ.

ರಾಖಿ ಪೂರ್ಣಿಮೆಯ ಆಧ್ಯಾತ್ಮಿಕ ಮಹತ್ವವೇನು?

ಆಧ್ಯಾತ್ಮಿಕ ತಜ್ಞೆ ಯುವಿಕಾ ಧರ್ ಅವರ ಪ್ರಕಾರ, ರಾಖಿ ಪೂರ್ಣಿಮೆಗೆ ಮಳೆಗಾಲದ ಅಂತ್ಯದ ವೇಳೆಯಲ್ಲಿ ನಡೆಯುವ ಋತು ಮತ್ತು ಆಧ್ಯಾತ್ಮಿಕ ಬದಲಾವಣೆಯೊಂದಿಗೆ ಆಳವಾದ ಸಂಬಂಧವಿದೆ. ಮಳೆಗಾಲವನ್ನು ಸಾಮಾನ್ಯವಾಗಿ ನಿಧಾನಗತಿಯ ಜೀವನ, ಆತ್ಮಾವಲೋಕನ ಮತ್ತು ಒಳಮುಖ ಚಿಂತನೆಗೆ ಸಂಬಂಧಿಸಿದ ಅವಧಿಯಾಗಿ ಪರಿಗಣಿಸಬಹುದು.

ರಾಖಿಯ ದಾರಕ್ಕೂ ವಿಶೇಷ ಅರ್ಥವಿದೆ

ರಕ್ಷಾಬಂಧನದಂದು ಕೈಗೆ ಕಟ್ಟುವ ರಾಖಿಯ ದಾರಕ್ಕೂ ಕೇವಲ ಸಹೋದರ-ಸಹೋದರಿಯರ ಬಾಂಧವ್ಯವನ್ನು ಮೀರಿದ ಆಧ್ಯಾತ್ಮಿಕ ಸಂಕೇತವಿದೆ ಎಂದು ತಜ್ಞರು ಹೇಳುತ್ತಾರೆ. ಕರ್ತವ್ಯ, ನೈತಿಕ ನಡೆ ಮತ್ತು ಕುಟುಂಬದ ಜವಾಬ್ದಾರಿಗಳನ್ನು ನೆನಪಿಸುವ ಸಂಕೇತವಾಗಿ ರಾಖಿಯನ್ನು ನೋಡಬಹುದು.

ಆಧ್ಯಾತ್ಮಿಕ ದೃಷ್ಟಿಯಲ್ಲಿ ಇದನ್ನು ‘ರಕ್ಷಾ ಕವಚ’ದ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಆದರೆ ಈ ದಾರಿಯೇ ಅಕ್ಷರಶಃ ನಮ್ಮನ್ನು ರಕ್ಷಿಸುತ್ತದೆ ಎಂದು ನೋಡುವ ಬದಲು, ನಾವು ಪ್ರೀತಿಸುವ ಜನರ ಬಗ್ಗೆ ಹೊಂದಿರುವ ಕಾಳಜಿ ಮತ್ತು ಅವರ ಬಗ್ಗೆ ನಮ್ಮ ಜವಾಬ್ದಾರಿಯನ್ನು ನೆನಪಿಸುವ ಸಂಕೇತವಾಗಿ ನೋಡಬಹುದು.

ಹೊಸ ಆರಂಭಕ್ಕೆ ಅವಕಾಶ

ಈ ವರ್ಷದ ರಾಖಿ ಪೂರ್ಣಿಮೆಯನ್ನು ಕೇವಲ ಕ್ಯಾಲೆಂಡರ್‌ನಲ್ಲಿರುವ ಒಂದು ಹಬ್ಬದ ದಿನವಾಗಿ ನೋಡದೆ, ಆತ್ಮಾವಲೋಕನಕ್ಕೆ ಒಂದು ಅವಕಾಶವಾಗಿ ಬಳಸಿಕೊಳ್ಳಬಹುದು. ಜೀವನದಲ್ಲಿ ಯಾವುದನ್ನು ರಕ್ಷಿಸಬೇಕು, ಯಾವುದನ್ನು ಬಿಟ್ಟುಬಿಡಬೇಕು ಮತ್ತು ಯಾವುದನ್ನು ಹೊಸದಾಗಿ ಆರಂಭಿಸಬೇಕು ಎಂಬುದರ ಬಗ್ಗೆ ಯೋಚಿಸಬಹುದು.

ಮಳೆಗಾಲ ಮುಗಿದು ಪ್ರಕೃತಿ ಹೊಸ ರೂಪ ಪಡೆಯುವಂತೆ, ನಮ್ಮ ಜೀವನದಲ್ಲೂ ಕೆಲವು ಹೊಸ ಬದಲಾವಣೆಗಳಿಗೆ ಅವಕಾಶ ಮಾಡಿಕೊಡಬಹುದು. ಹೀಗಾಗಿ ಶ್ರಾವಣ ಹುಣ್ಣಿಮೆ ಕೇವಲ ರಕ್ಷಾಬಂಧನದ ಆಚರಣೆಯ ದಿನವಾಗಿರದೆ, ಆತ್ಮಾವಲೋಕನ, ಜವಾಬ್ದಾರಿ ಮತ್ತು ಹೊಸ ಆರಂಭವನ್ನು ನೆನಪಿಸುವ ದಿನವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Thu, 27 August 26

Loading...
Unable to load recommendations.
Follow Us