Raksha bandhan 2026: ರಕ್ಷಾಬಂಧನದಂದು ಲಡ್ಡು ಗೋಪಾಲನಿಗೆ ರಾಖಿ ಕಟ್ಟಬಹುದೇ? ಇಲ್ಲಿದೆ ಸರಿಯಾದ ವಿಧಾನ ಮತ್ತು ಶುಭ ಮುಹೂರ್ತ
ರಕ್ಷಾಬಂಧನದಂದು ಸಹೋದರರಿಗೆ ರಾಖಿ ಕಟ್ಟುವುದರ ಜೊತೆಗೆ ಲಡ್ಡು ಗೋಪಾಲ ಅಥವಾ ಶ್ರೀಕೃಷ್ಣನ ವಿಗ್ರಹಕ್ಕೂ ರಾಖಿ ಕಟ್ಟುವ ಸಂಪ್ರದಾಯವಿದೆ. ಹಾಗಾದರೆ ಲಡ್ಡು ಗೋಪಾಲನಿಗೆ ರಾಖಿ ಕಟ್ಟುವುದು ಹೇಗೆ? ಯಾವ ಕೈಗೆ ರಾಖಿ ಕಟ್ಟಬೇಕು? ರಾಖಿ ಕಟ್ಟುವ ಶುಭ ಮುಹೂರ್ತ ಯಾವುದು? ಪೂಜೆಯ ವೇಳೆ ಯಾವ ವಿಧಾನ ಅನುಸರಿಸಬೇಕು? 2026ರ ರಕ್ಷಾಬಂಧನದ ಶುಭ ಮುಹೂರ್ತ ಮತ್ತು ರಾಖಿ ಕಟ್ಟುವ ಸರಿಯಾದ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಲಡ್ಡು ಗೋಪಾಲನಿಗೆ ರಾಖಿ ಕಟ್ಟುವುದು ಹೇಗೆ?
- ರಕ್ಷಾಬಂಧನದಂದು ರಾಖಿ ಕಟ್ಟಲು ಶುಭ ಮುಹೂರ್ತ ಯಾವುದು?
- ಶ್ರೀಕೃಷ್ಣನಿಗೆ ರಾಖಿ ಕಟ್ಟುವ ಹಿಂದಿನ ನಂಬಿಕೆ ಏನು?
ರಕ್ಷಾಬಂಧನ (Raksha bandhan) ಹಬ್ಬವನ್ನು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಾಂಧವ್ಯದ ಸಂಕೇತವಾಗಿ ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿ ಕಟ್ಟಿ, ಆತನ ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾರೆ. ಅದೇ ರೀತಿ, ಅನೇಕ ಭಕ್ತರು ರಕ್ಷಾಬಂಧನದಂದು ತಮ್ಮ ಮನೆಯಲ್ಲಿ ಪೂಜಿಸುವ ಲಡ್ಡು ಗೋಪಾಲ ಅಥವಾ ಶ್ರೀಕೃಷ್ಣನ ವಿಗ್ರಹಕ್ಕೂ ರಾಖಿ ಕಟ್ಟುತ್ತಾರೆ. ಭಕ್ತಿಯ ದೃಷ್ಟಿಯಿಂದ ಇದನ್ನು ವಿಶೇಷ ಆಚರಣೆ ಎಂದು ಪರಿಗಣಿಸಲಾಗುತ್ತದೆ.
2026ರ ರಕ್ಷಾಬಂಧನ ಆಗಸ್ಟ್ 28, ಶುಕ್ರವಾರದಂದು ಆಚರಿಸಲಾಗುತ್ತದೆ. ಈ ದಿನ ರಾಖಿ ಕಟ್ಟಲು ಶುಭ ಸಮಯವನ್ನು ಗಮನಿಸುವುದು ಮುಖ್ಯ. ಬೆಳಗ್ಗೆ 5:57ರಿಂದ 9:48ರವರೆಗೆ ರಾಖಿ ಕಟ್ಟಲು ಶುಭ ಮುಹೂರ್ತವಿದೆ. ಸ್ಥಳೀಯ ಪಂಚಾಂಗದ ಪ್ರಕಾರ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು.
ಲಡ್ಡು ಗೋಪಾಲನಿಗೆ ರಾಖಿ ಕಟ್ಟುವುದು ಹೇಗೆ?
ರಕ್ಷಾಬಂಧನದಂದು ಲಡ್ಡು ಗೋಪಾಲನಿಗೆ ರಾಖಿ ಕಟ್ಟಲು ಮೊದಲು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಬಳಿಕ ಲಡ್ಡು ಗೋಪಾಲನಿಗೆ ಸ್ನಾನ ಮಾಡಿಸಿ, ಸ್ವಚ್ಛವಾದ ಬಟ್ಟೆ ಅಥವಾ ಹೊಸ ವಸ್ತ್ರವನ್ನು ತೊಡಿಸಬಹುದು. ನಂತರ ವಿಗ್ರಹವನ್ನು ಅಲಂಕರಿಸಿ ಪೂಜೆ ಮಾಡಬೇಕು.
ಪೂಜೆಯ ಸಂದರ್ಭದಲ್ಲಿ ಲಡ್ಡು ಗೋಪಾಲನಿಗೆ ಕುಂಕುಮ ಅಥವಾ ರೋಲಿ ಮತ್ತು ಅಕ್ಷತೆಯಿಂದ ತಿಲಕ ಹಾಕಿ, ದೀಪ ಬೆಳಗಿಸಿ ಆರತಿ ಮಾಡಬಹುದು. ನಂತರ ಭಕ್ತಿಯಿಂದ ರಾಖಿಯನ್ನು ಕಟ್ಟಬೇಕು. ಸಂಪ್ರದಾಯದ ಪ್ರಕಾರ ಲಡ್ಡು ಗೋಪಾಲನ ಬಲಗೈಗೆ ರಾಖಿ ಕಟ್ಟುವುದು ಶುಭವೆಂದು ಪರಿಗಣಿಸಲಾಗುತ್ತದೆ.
ರಾಖಿ ಕಟ್ಟಿದ ಬಳಿಕ ಲಡ್ಡು ಗೋಪಾಲನಿಗೆ ಸಿಹಿ ಅಥವಾ ಇಷ್ಟವಾದ ನೈವೇದ್ಯವನ್ನು ಅರ್ಪಿಸಬಹುದು. ವಿಶೇಷವಾಗಿ ಹಳದಿ ಬಣ್ಣದ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವೂ ಕೆಲವು ಕಡೆಗಳಲ್ಲಿದೆ.
ಶ್ರೀಕೃಷ್ಣನಿಗೆ ರಾಖಿ ಕಟ್ಟುವ ಹಿಂದಿನ ನಂಬಿಕೆ
ರಕ್ಷಾಬಂಧನದ ಸಂದರ್ಭದಲ್ಲಿ ಶ್ರೀಕೃಷ್ಣ ಮತ್ತು ದ್ರೌಪದಿಯ ಕಥೆಯನ್ನು ಕೂಡ ನೆನಪಿಸಿಕೊಳ್ಳಲಾಗುತ್ತದೆ. ಒಂದು ಸಂದರ್ಭದಲ್ಲಿ ಶ್ರೀಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಬರುತ್ತಿದ್ದಾಗ, ದ್ರೌಪದಿ ತಕ್ಷಣ ತನ್ನ ಸೀರೆಯ ತುಂಡನ್ನು ಹರಿದು ಅವರ ಬೆರಳಿಗೆ ಕಟ್ಟಿದರು ಎಂಬ ಪೌರಾಣಿಕ ಕಥೆಯಿದೆ. ಇದರಿಂದ ಸಂತುಷ್ಟರಾದ ಶ್ರೀಕೃಷ್ಣ, ದ್ರೌಪದಿಯನ್ನು ರಕ್ಷಿಸುವುದಾಗಿ ಭರವಸೆ ನೀಡಿದರು ಎಂಬ ನಂಬಿಕೆಯಿದೆ.
Raksha Bandhan 2026: ರಾಖಿ ಕಟ್ಟುವಾಗ 3 ಗಂಟು ಹಾಕುವುದು ಕಡ್ಡಾಯವೇ? ಸಂಪ್ರದಾಯದ ಹಿಂದಿರುವ ಅಸಲಿ ಅರ್ಥ ಇಲ್ಲಿದೆ
ಈ ಕಾರಣದಿಂದಲೇ ರಕ್ಷಾಬಂಧನದಂದು ಶ್ರೀಕೃಷ್ಣನಿಗೆ ರಾಖಿ ಕಟ್ಟುವುದನ್ನು ಭಕ್ತರು ವಿಶೇಷವಾಗಿ ಪರಿಗಣಿಸುತ್ತಾರೆ. ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮೊದಲು ಲಡ್ಡು ಗೋಪಾಲನಿಗೆ ಅಥವಾ ಶ್ರೀಕಷ್ಟನಿಗೆ ರಾಖಿ ಕಟ್ಟುವ ಸಂಪ್ರದಾಯವನ್ನು ಕೆಲವು ಕುಟುಂಬಗಳು ಪಾಲಿಸುತ್ತವೆ.
ರಾಖಿ ಕಟ್ಟುವಾಗ ಏನು ಇರಬೇಕು?
ರಾಖಿ ಕಟ್ಟುವ ತಟ್ಟೆಯಲ್ಲಿ ರಾಖಿ, ಕುಂಕುಮ ಅಥವಾ ರೋಲಿ, ಅಕ್ಷತೆ, ದೀಪ ಮತ್ತು ಸಿಹಿ ಇಟ್ಟುಕೊಳ್ಳಬಹುದು. ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಇತರ ಪೂಜಾ ಸಾಮಗ್ರಿಗಳನ್ನೂ ಸೇರಿಸಬಹುದು. ಮುಖ್ಯವಾಗಿ, ರಾಖಿ ಕಟ್ಟುವ ಸಂದರ್ಭದಲ್ಲಿ ಭಕ್ತಿ ಮತ್ತು ಶುಭ ಮನಸ್ಸು ಇರಬೇಕು ಎಂಬುದು ಧಾರ್ಮಿಕ ನಂಬಿಕೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




