ಜಗಳವಿಲ್ಲ, ಮಾತುಕತೆಯೂ ಇಲ್ಲ! ಹಾಗಿದ್ರೆ ಈ ಸೈಲೆಂಟ್ ಡಿವೋರ್ಸ್ ಬಗ್ಗೆ ತಿಳಿದುಕೊಳ್ಳಲೇಬೇಕು
ಸೈಲೆಂಟ್ ಡಿವೋರ್ಸ್ ಎಂದರೆ ಕಾನೂನುಬದ್ಧ ವಿಚ್ಛೇದನವಲ್ಲ. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ದಂಪತಿ ನಡುವೆ ಮಾತುಕತೆ, ಆತ್ಮೀಯತೆ ಮತ್ತು ಭಾವನಾತ್ಮಕ ಸಂಪರ್ಕ ಕಡಿಮೆಯಾಗುವ ಸ್ಥಿತಿಯನ್ನು ಸಾಮಾನ್ಯವಾಗಿ ಹೀಗೆ ಕರೆಯಲಾಗುತ್ತದೆ. ವೈಯಕ್ತಿಕ ಮಾತು ಕಡಿಮೆಯಾಗುವುದು, ಒಂಟಿತನ, ಒಟ್ಟಿಗೆ ಸಮಯ ಕಳೆಯದಿರುವುದು ಮತ್ತು ಸಮಸ್ಯೆಗಳನ್ನು ಚರ್ಚಿಸದಿರುವುದು ಗಮನಿಸಬೇಕಾದ ಸೂಚನೆಗಳಾಗಿವೆ.

ಮದುವೆಯಾದ ದಂಪತಿ ನಡುವೆ ಜಗಳವಿಲ್ಲ ಎಂದರೆ ಸಂಬಂಧ ತುಂಬಾ ಚೆನ್ನಾಗಿದೆ ಎಂದು ಅರ್ಥವಲ್ಲ. ಕೆಲವೊಮ್ಮೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಭಾವನಾತ್ಮಕವಾಗಿ ದೂರ ದೂರ ಇರುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನು ಸಾಮಾನ್ಯವಾಗಿ ಸೈಲೆಂಟ್ ಡಿವೋರ್ಸ್ ಎಂದು ಕರೆಯಲಾಗುತ್ತದೆ. ಇದು ಕಾನೂನುಬದ್ಧ ವಿಚ್ಛೇದನವಲ್ಲ; ಬದಲಾಗಿ ದಂಪತಿಗಳ ನಡುವೆ ಮಾತುಕತೆ, ಆತ್ಮೀಯತೆ ಮತ್ತು ಭಾವನಾತ್ಮಕ ಸಂಪರ್ಕ ಕಡಿಮೆಯಾಗುತ್ತಿರುವ ಸ್ಥಿತಿಯಾಗಿದೆ. ಸಮಯಕ್ಕೆ ಸರಿಯಾಗಿ ಗಮನಿಸಿದರೆ ಸಂಬಂಧದಲ್ಲಿ ಬದಲಾವಣೆ ತರಲು ಪ್ರಯತ್ನಿಸಬಹುದು. ಹಾಗಾದರೆ ಇಂತಹ ಸಮಯದಲ್ಲಿ ಯಾವ ರೀತಿಯ ಸೂಚನೆಗಳು ಕಂಡುಬರುತ್ತವೆ ಮತ್ತು ದಂಪತಿ ಯಾವುದನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ
ಮಾತುಕತೆ ಕಡಿಮೆಯಾಗುವುದು
ಸಾಮಾನ್ಯವಾಗಿ ಮಾತುಕತೆ ಕೇವಲ ಮನೆ ಖರ್ಚು, ಮಕ್ಕಳ ಶಾಲೆ, ಬಿಲ್‌ಗಳು ಅಥವಾ ಇತರ ಜವಾಬ್ದಾರಿಗಳಿಗೆ ಸೀಮಿತವಾಗುತ್ತಿದೆಯೇ? ದಿನ ಹೇಗಿತ್ತು, ಏನು ಸಂತೋಷ ಕೊಟ್ಟಿತು ಎಂಬ ವೈಯಕ್ತಿಕ ಮಾತುಗಳು ಸಂಪೂರ್ಣವಾಗಿ ಕಡಿಮೆಯಾದರೆ ಭಾವನಾತ್ಮಕ ಅಂತರ ಏರ್ಪಡುತ್ತಿರುವ ಸೂಚನೆಯಾಗಿರಬಹುದು.
ಆತ್ಮೀಯತೆ ಕಡಿಮೆಯಾಗುವುದು
ಆತ್ಮೀಯತೆ ಎಂದರೆ ಕೇವಲ ಲೈಂಗಿಕ ಸಂಬಂಧವಲ್ಲ. ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು, ಮೆಚ್ಚುಗೆ ವ್ಯಕ್ತಪಡಿಸುವುದು, ಒಟ್ಟಿಗೆ ಸಮಯ ಕಳೆಯುವುದು, ಹೊರಗೆ ಹೋಗುವುದು ಮತ್ತು ಪರಸ್ಪರ ಕಾಳಜಿ ತೋರಿಸುವುದೂ ಇದರ ಭಾಗವಾಗಿರುತ್ತದೆ. ಇವೆಲ್ಲವೂ ಕ್ರಮೇಣ ಕಡಿಮೆಯಾದರೆ, ದಂಪತಿ ಕೇವಲ ರೂಮ್‌ಮೇಟ್‌ಗಳಂತೆ ಬದುಕುತ್ತಿರುವ ಅನುಭವವಾಗಬಹುದು.
ಜಗಳವೇ ಇಲ್ಲದಿರುವುದು ಕೂಡ ಒಂದು ಸೂಚನೆಯಾಗಬಹುದು
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಪ್ರತಿಯೊಂದು ಸಂಬಂಧದಲ್ಲೂ ಸಹಜ. ಆದರೆ ಯಾವುದೇ ವಿಷಯದ ಬಗ್ಗೆ ಮಾತನಾಡಬೇಕು ಎಂಬ ಆಸಕ್ತಿಯೇ ಇಲ್ಲದೆ, ಹೇಳಿದರೂ ಪ್ರಯೋಜನವಿಲ್ಲ ಎಂಬ ಭಾವನೆ ಮೂಡಿದರೆ ಅದು ಗಮನಿಸಬೇಕಾದ ಸಂಗತಿ. ಸಮಸ್ಯೆಗಳನ್ನು ಚರ್ಚಿಸದೆ ನಿರಂತರವಾಗಿ ತಪ್ಪಿಸಿಕೊಳ್ಳುವುದರಿಂದ ಬಗೆಹರಿಯದ ವಿಚಾರಗಳು ಉಳಿದು ಹೋಗಬಹುದು. ಮೊಂದೊಂದು ದಿನ ಇದೇ ಬೇರೆಯಾಗುವುದಕ್ಕೆ ದಾರಿ ಮಾಡಿಕೊಡಬಹುದು.
ಇದನ್ನೂ ಓದಿ: ಜಪಾನ್‌ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ಒಂಟಿತನ ಹೆಚ್ಚಾಗುವುದು
ಪಕ್ಕದಲ್ಲೇ ಸಂಗಾತಿ ಇದ್ದರೂ ಒಂಟಿತನ ಅನುಭವವಾಗುವುದು ಪ್ರಮುಖ ಸೂಚನೆ. ತಮ್ಮ ಸಂತೋಷ, ದುಃಖ ಅಥವಾ ಸಮಸ್ಯೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವ ಬದಲು ಸ್ನೇಹಿತರು, ಸಾಮಾಜಿಕ ಜಾಲತಾಣ ಅಥವಾ ಇತರರ ಬಳಿ ಹೆಚ್ಚು ಭಾವನಾತ್ಮಕ ಬೆಂಬಲ ಹುಡುಕುವ ಪರಿಸ್ಥಿತಿ ಎದುರಾಗಬಹುದು.
ಒಟ್ಟಿಗೆ ಸಮಯ ಕಳೆಯುವ ಆಸಕ್ತಿ ಕಡಿಮೆಯಾಗುವುದು
ಮೊದಲು ಒಟ್ಟಿಗೆ ಊಟ ಮಾಡುವುದು, ಸಿನಿಮಾ ನೋಡುವುದು, ಪ್ರವಾಸ ಹೋಗುವುದು ಅಥವಾ ಮಾತನಾಡುವುದು ಇಷ್ಟವಾಗುತ್ತಿತ್ತು. ಈಗ ಪ್ರತಿಯೊಬ್ಬರೂ ತಮ್ಮದೇ ಮೊಬೈಲ್, ಸ್ನೇಹಿತರು ಅಥವಾ ಚಟುವಟಿಕೆಗಳಲ್ಲಿ ಮುಳುಗಿದ್ದರೆ ಸಂಬಂಧದಲ್ಲಿ ಸಂಪರ್ಕ ಕಡಿಮೆಯಾಗಿರುವ ಸೂಚನೆಯಾಗಬಹುದು.
ಸಂಬಂಧ ಉಳಿಸಿಕೊಳ್ಳಲು ಏನು ಮಾಡಬಹುದು?
ಈ ಸೂಚನೆಗಳು ಕಂಡುಬಂದರೆ ತಕ್ಷಣ ವಿಚ್ಛೇದನ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಬೇಕಿಲ್ಲ. ಆರೋಪ ಮಾಡುವ ಬದಲು ನಮ್ಮ ನಡುವೆ ಅಂತರ ಹೆಚ್ಚಾಗಿದೆ ಎಂದು ನನಗೆ ಅನಿಸುತ್ತಿದೆ ಎಂದು ಶಾಂತವಾಗಿ ಮಾತನಾಡುವುದು, ನಿಯಮಿತವಾಗಿ ಒಟ್ಟಿಗೆ ಸಮಯ ಕಳೆಯುವುದು, ಪರಸ್ಪರ ಮಾತು ಕೇಳುವುದು ಮತ್ತು ಸಮಸ್ಯೆಗಳನ್ನು ತೆರೆದ ಮನಸ್ಸಿನಿಂದ ಚರ್ಚಿಸುವುದು ಸಂಬಂಧ ಗಟ್ಟಿ ಮಾಡಿಕೊಳ್ಳಲು ಸಹಾಯ ಮಾಡಬಹುದು.
ಸಮಸ್ಯೆಗಳು ದೀರ್ಘಕಾಲ ಮುಂದುವರಿದರೆ ದಂಪತಿ ಕೌನ್ಸೆಲರ್ ಅಥವಾ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಬಹುದು. ಯಾವುದೇ ಸಂಬಂಧದಲ್ಲಿ ಇಬ್ಬರ ಸುರಕ್ಷತೆ, ಗೌರವ ಮತ್ತು ವೈಯಕ್ತಿಕ ಅಭಿಪ್ರಾಯಗಳು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Sun, 20 September 26




