ಎನ್‌ಪಿಎಸ್ ವಾತ್ಸಲ್ಯ ಯೋಜನೆಗೆ 2 ವರ್ಷ; 4.9 ಲಕ್ಷ ಅಕೌಂಟ್ ಸ್ಥಾಪನೆ; ಈ ಸ್ಕೀಮ್ ಪಡೆಯುವುದು ಹೇಗೆ, ವಿಶೇಷತೆ ಏನು ಇತ್ಯಾದಿ ವಿವರ
ನ್ಯಾಷನಲ್ ಪೆನ್ಷನ್ ಸಿಸ್ಟಂ ಶೈಲಿಯ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಜನಪ್ರಿಯತೆ ಹೆಚ್ಚುತ್ತಾ ಇದೆ. ಸರ್ಕಾರ ಈ ಸ್ಕೀಮ್ ಆರಂಭಿಸಿ 2 ವರ್ಷ ಆಗಿದೆ. ಈಗಾಗಲೇ ಹತ್ತಿರಹತ್ತಿರ 5 ಲಕ್ಷ ಅಕೌಂಟ್ಗಳನ್ನು ಈ ಸ್ಕೀಮ್ ಅಡಿ ತೆರೆಯಲಾಗಿದೆ. 400 ಕೋಟಿ ರೂಗೂ ಅಧಿಕ ಹೂಡಿಕೆಗಳಾಗಿವೆ. ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಕಡೆ ಈ ಸ್ಕೀಮ್ನಲ್ಲಿ ಅಕೌಂಟ್ ತೆರೆಯುವ ಅವಕಾಶ ಇರುತ್ತದೆ. ಈ ಯೋಜನೆಯ ಇತರ ವಿವರಗಳು ಈ ಲೇಖನದಲ್ಲಿವೆ.

ನವದೆಹಲಿ, ಸೆಪ್ಟೆಂಬರ್ 20: ಅಪ್ರಾಪ್ತ ವಯಸ್ಕರ (ಮಕ್ಕಳ) ಭವಿಷ್ಯದ ಆರ್ಥಿಕ ಭದ್ರತೆಗಾಗಿ ಭಾರತ ಸರ್ಕಾರ ಜಾರಿಗೆ ತಂದಿದ್ದ ‘ಎನ್‌ಪಿಎಸ್ ವಾತ್ಸಲ್ಯ’ (NPS Vatsalya) ಯೋಜನೆಯು ಯಶಸ್ವಿಯಾಗಿ 2 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಯೋಜನೆಯು ದೇಶಾದ್ಯಂತ ವ್ಯಾಪಕ ಜನಪ್ರಿಯತೆ ಗಳಿಸಿದ್ದು, ಒಟ್ಟು ಖಾತೆಗಳ ಸಂಖ್ಯೆ 4.9 ಲಕ್ಷಕ್ಕೇರಿದೆ ಹಾಗೂ ಒಟ್ಟು ನಿರ್ವಹಣಾ ಆಸ್ತಿ ಮೌಲ್ಯ (AUM) ₹403 ಕೋಟಿ ತಲುಪಿದೆ. ಪೆನ್ಶನ್ ಫಂಡ್ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ಈ ಅಂಕಿ-ಅಂಶಗಳು ಬಹಿರಂಗಗೊಂಡಿವೆ.
ಯೋಜನೆ ಪ್ರಾರಂಭವಾದ ಎರಡೇ ವರ್ಷಗಳಲ್ಲಿ 4.9 ಲಕ್ಷಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಈ ಪಿಂಚಣಿ ಖಾತೆಯನ್ನು ತೆರೆದಿದ್ದಾರೆ. ಹೂಡಿಕೆದಾರರ ಒಟ್ಟು ಹಣದ ಮೌಲ್ಯವು ₹403 ಕೋಟಿ ದಾಟಿದ್ದು, ಸಣ್ಣ ವಯಸ್ಸಿನಿಂದಲೇ ಉಳಿತಾಯ ಮಾಡುವ ಅಭ್ಯಾಸಕ್ಕೆ ಧನಾತ್ಮಕ ಸ್ಪಂದನೆ ಸಿಕ್ಕಿದೆ.
ಎನ್‌ಪಿಎಸ್ ವಾತ್ಸಲ್ಯ ಯೋಜನೆಯ ವೈಶಿಷ್ಟ್ಯ: ಪೋಷಕರು ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ವರ್ಷಕ್ಕೆ ಕನಿಷ್ಠ ₹1,000 ಹೂಡಿಕೆ ಮಾಡುವ ಮೂಲಕ ಖಾತೆ ತೆರೆಯಬಹುದು. ಮಗುವಿಗೆ 18 ವರ್ಷ ತುಂಬಿದ ನಂತರ, ಈ ಖಾತೆಯು ಸಾಮಾನ್ಯ ಎನ್‌ಪಿಎಸ್ (NPS Tier-1) ಖಾತೆಯಾಗಿ ಬದಲಾಗುತ್ತದೆ.
ಮಗುವಿನ ಶಿಕ್ಷಣ, ಉನ್ನತ ವ್ಯಾಸಂಗ ಮತ್ತು ಭವಿಷ್ಯದ ನಿವೃತ್ತಿ ನಿಧಿಯನ್ನು ನಿರ್ಮಿಸಲು ಇದು ಅತ್ಯಂತ ಸುರಕ್ಷಿತ ಹಾಗೂ ದೀರ್ಘಾವಧಿಯ ಹೂಡಿಕೆ ಮಾರ್ಗವಾಗಿದೆ.
ಈ ಯೋಜನೆಯು ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಉತ್ತಮ ಬೆಂಬಲ ಪಡೆಯುತ್ತಿದ್ದು, ಯುವ ಪೀಳಿಗೆಯಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಿಸಲು ನೆರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್‌ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮಾಡುವ ವಿಧಾನ
ಎನ್‌ಪಿಎಸ್ ವಾತ್ಸಲ್ಯ (NPS Vatsalya) ಯೋಜನೆಯಲ್ಲಿ ನಿಮ್ಮ ಮಕ್ಕಳ ಹೆಸರಿನಲ್ಲಿ ಖಾತೆ ತೆರೆದು ಹೂಡಿಕೆ ಮಾಡಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಮಾರ್ಗಗಳು ಲಭ್ಯವಿವೆ.
ಆನ್‌ಲೈನ್‌ನಲ್ಲಿ ಖಾತೆ ತೆರೆಯುವ ವಿಧಾನ
ನೀವು ಸಾಫ್ಟ್‌ಟೆಕ್/ಸಿಆರ್‌ಎ (CRA) ವೆಬ್‌ಸೈಟ್‌ಗಳ ಮೂಲಕ (Protean CRA, KFintech, ಅಥವಾ CAMS CRA) ಸರಳವಾಗಿ ಖಾತೆ ತೆರೆಯಬಹುದು:
- ಸಿಆರ್‌ಎ (CRA) ಪೋರ್ಟಲ್: Protean, KFintech ಅಥವಾ CAMS ನ ಅಧಿಕೃತ NPS ವೆಬ್‌ಸೈಟ್‌ಗೆ ಲಾಗಿನ್ ಆಗಿ.
- ಮುಖಪುಟದಲ್ಲಿ `Open NPS Vatsalya Account` ಅಥವಾ ‘New Registration’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ವಿವರಗಳನ್ನು ಭರ್ತಿ ಮಾಡಿ: ಪೋಷಕರು/ಪಾಲಕರ (Guardian) ಹೆಸರು, ಆಧಾರ್ ಸಂಖ್ಯೆ, ಪಾನ್ ಕಾರ್ಡ್ (PAN), ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ.
- ಮಗುವಿನ ವಿವರಗಳು: ಅಪ್ರಾಪ್ತ ಮಗುವಿನ ಹೆಸರು ಮತ್ತು ಜನ್ಮ ದಿನಾಂಕವನ್ನು ಭರ್ತಿ ಮಾಡಿ.
- ದಾಖಲೆಗಳನ್ನು ಅಪ್‌ಲೋಡ್ ಮಾಡಿ (e-KYC): ಪೋಷಕರ ಆಧಾರ್ e-KYC (OTP ಮೂಲಕ) ಪೂರ್ಣಗೊಳಿಸಿ. ಮಗುವಿನ ಜನ್ಮ ದಿನಾಂಕದ ಪ್ರಮಾಣಪತ್ರ (Birth Certificate) ಅಪ್‌ಲೋಡ್ ಮಾಡಿ.
- ಯೋಜನೆಗೆ ಕನಿಷ್ಠ ₹1,000 ಆರಂಭಿಕ ಚಂದಾದಾರಿಕೆ ಹಣವನ್ನು ಯುಪಿಐ (UPI), ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿ.
- ಪಾವತಿ ಪೂರ್ಣಗೊಂಡ ತಕ್ಷಣ ಮಗುವಿನ ಹೆಸರಿನಲ್ಲಿ PRAN (Permanent Retirement Account Number) ಸಂಖ್ಯೆ ಜನರೆಟ್ ಆಗುತ್ತದೆ.
ಇದನ್ನೂ ಓದಿ: ಎಐನಿಂದ ವಿಶ್ವವಿನಾಶವಾಗುತ್ತಾ? ಚಾನ್ಸೇ ಇಲ್ಲ ಎನ್ನುತ್ತಾರೆ ಎನ್ವಿಡಿಯಾ ಮುಖ್ಯಸ್ಥ ಜೆನ್ಸೆನ್ ಹುವಾಂಗ್
ಆಫ್‌ಲೈನ್‌ನಲ್ಲಿ ಖಾತೆ ತೆರೆಯುವ ವಿಧಾನ
- ನಿಮ್ಮ ಹತ್ತಿರದ ಎನ್‌ಪಿಎಸ್ ನೋಂದಾಯಿತ ಬ್ಯಾಂಕ್ ಶಾಖೆಗಳಿಗೆ (SBI, HDFC, ICICI, Canara Bank ಇತ್ಯಾದಿ) ಅಥವಾ ಅಂಚೆ ಕಚೇರಿಗೆ (Post Office) ಭೇಟಿ ನೀಡಿ.
- ‘NPS Vatsalya Application Form’ ಪಡೆದುಕೊಂಡು, ಮಗುವಿನ ಹಾಗೂ ಪೋಷಕರ ವಿವರಗಳನ್ನು ಭರ್ತಿ ಮಾಡಿ.
- ಪೋಷಕರ ಪಾನ್ (PAN) ಕಾರ್ಡ್ ಮತ್ತು ಆಧಾರ್ ಕಾರ್ಡ್, ಮಗುವಿನ ಜನ್ಮ ಪ್ರಮಾಣಪತ್ರ, ಪೋಷಕರ ಬ್ಯಾಂಕ್ ಪಾಸ್‌ಬುಕ್ / ರದ್ದಾದ ಚೆಕ್ (Cancelled Cheque) ಈ ದಾಖಲೆಗಳನ್ನು ನೀಡಬೇಕು. ಜೊತೆಗೆ ಮಗುವಿನ ಹಾಗೂ ಪೋಷಕರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಕೊಡಬೇಕು.
- ಚಲನ್ ಜೊತೆಗೆ ಕನಿಷ್ಠ ₹1,000 ಹಣವನ್ನು ನಗದು/ಚೆಕ್/ಡಿಡಿ ಮೂಲಕ ಬ್ಯಾಂಕ್‌ಗೆ ಪಾವತಿಸಿ.
ಎನ್‌ಪಿಎಸ್ ವಾತ್ಸಲ್ಯ ಯೋಜನೆ ಪ್ರಮುಖ ನಿಯಮಗಳು ಹಾಗೂ ಷರತ್ತುಗಳು
- ಕನಿಷ್ಠ ಹೂಡಿಕೆ: ಪ್ರತಿ ವರ್ಷ ಕನಿಷ್ಠ ₹1,000 ಹೂಡಿಕೆ ಮಾಡುವುದು ಕಡ್ಡಾಯ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ.
- ಮಗುವಿಗೆ 18 ವರ್ಷ ತುಂಬಿದ ನಂತರ: ಮಗುವಿಗೆ 18 ವರ್ಷ ವಯಸ್ಸಾದ ತಕ್ಷಣ, ಈ ಖಾತೆಯು ಆಟೋಮ್ಯಾಟಿಕ್ ಆಗಿ ಸಾಮಾನ್ಯ NPS Tier-1 ಖಾತೆಯಾಗಿ ಪರಿವರ್ತನೆಯಾಗುತ್ತದೆ. ನಂತರ ಮಗುವೇ ತನ್ನ KYC ವಿವರಗಳನ್ನು ನವೀಕರಿಸಿ ಖಾತೆಯನ್ನು ನಿರ್ವಹಿಸಬಹುದು.
- 60 ವರ್ಷ ವಯಸ್ಸು: ಈ ಸ್ಕೀಮ್ ನಿಮ್ಮ ಮಗ ಅಥವಾ ಮಗಳ ಭವಿಷ್ಯಕ್ಕೆ ಆಧಾರವಾಗಲೆಂದು ರೂಪಿಸಲಾಗಿರುತ್ತದೆ. ಮಗು ದೊಡ್ಡನವಾಗಿ ನಿವೃತ್ತಿಯ ವಯಸ್ಸು ಬರುವವರೆಗೂ ಚಾಲನೆಯಲ್ಲಿರುತ್ತದೆ. ಬಹಳ ಸುದೀರ್ಘ ಅವಧಿ ಹೂಡಿಕೆ ಇರುವುದರಿಂದ ನಿವೃತ್ತಿಗೆ ಸಖತ್ ಹಣ ಕ್ರೋಢೀಕರಣ ಆಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




