ಯಂಗ್ ಇಂಡಿಯಾದ ವಿಶ್ವ ದಾಖಲೆಯ ವಿಜಯ..!
ಕ್ರಿಕೆಟ್ ಮೈದಾನದಲ್ಲಿ ಭಾರತದ ಯುವ ಪಡೆ ಅಕ್ಷರಶಃ ಅಬ್ಬರಿಸಿದೆ. ಎಸಿಸಿ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ನೇಪಾಳ ತಂಡವನ್ನು ಕೇವಲ 26 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಭಾರತ ಎ ತಂಡ 306 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಅಷ್ಟೇ ಅಲ್ಲ, ಈ ಗೆಲುವಿನೊಂದಿಗೆ 21 ವರ್ಷಗಳ ಹಳೆಯ ವರ್ಲ್ಡ್ ರೆಕಾರ್ಡ್ ಒಂದನ್ನು ಕೂಡ ಯಂಗ್ ಇಂಡಿಯಾ ಪುಡಿಪುಡಿ ಮಾಡಿದ್ದಾರೆ!

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ ಎ ತಂಡವು ಐತಿಹಾಸಿಕ ಸಾಧನೆ ಮಾಡಿದೆ. ನವೆಂಬರ್ 20ರಂದು ದೋಹಾದಲ್ಲಿ ನಡೆದ ಪಂದ್ಯದಲ್ಲಿ ನೇಪಾಳ ತಂಡವನ್ನು ಕೇವಲ 26 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ಎ ತಂಡವು 306 ರನ್‌ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಯಾವುದೇ ದೇಶದ ‘ಎ’ (A) ಅಥವಾ ಡೆವಲಪ್‌ಮೆಂಟ್ ತಂಡವೊಂದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಎದುರಾಳಿಯನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿ, ಪ್ರಚಂಡ ಗೆಲುವು ದಾಖಲಿಸಿದ ವಿಶ್ವ ದಾಖಲೆಯನ್ನು ಭಾರತ ಎ ತನ್ನ ಹೆಸರಿಗೆ ಬರೆದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡವು ಕೇವಲ 42 ರನ್‌ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರಾ ಮತ್ತು ನಾಯಕ ತಿಲಕ್ ವರ್ಮಾ ತಂಡಕ್ಕೆ ಆಸರೆಯಾದರು.
ನಾಲ್ಕನೇ ವಿಕೆಟ್‌ಗೆ ಈ ಜೋಡಿ ಬರೋಬ್ಬರಿ 206 ರನ್‌ಗಳ ಬೃಹತ್ ಜೊತೆಯಾಟವಾಡಿತು. ಕುಮಾರ್ ಕುಶಾಗ್ರಾ 117 ರನ್ ಸಿಡಿಸಿದರೆ, ನಾಯಕ ತಿಲಕ್ ವರ್ಮಾ 107 ರನ್ ಬಾರಿಸಿ ಮಿಂಚಿದರು. ಕೊನೆಯ ಓವರ್‌ಗಳಲ್ಲಿ ಸೂರ್ಯಾಂಶ್ ಶೆಡ್ಗೆ ಕೇವಲ 14 ಎಸೆತಗಳಲ್ಲಿ ಅಜೇಯ 36 ರನ್ ಚಚ್ಚಿದ್ದರಿಂದ ಭಾರತ ಎ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 332 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
333 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ನೇಪಾಳ ತಂಡಕ್ಕೆ ಭಾರತದ ವೇಗಿಗಳು ಸಿಂಹಸ್ವಪ್ನರಾದರು. ಪ್ರಿನ್ಸ್ ಯಾದವ್ (5/6) ಮತ್ತು ಹರ್ಷಿತ್ ರಾಣಾ (4/16) ಅವರ ನಿಖರ ಸ್ವಿಂಗ್ ಬೌಲಿಂಗ್ ಎದುರು ನೇಪಾಳ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಕೇವಲ 11.3 ಓವರ್‌ಗಳಲ್ಲಿ ನೇಪಾಳ 26 ರನ್‌ಗಳಿಗೆ ಸರ್ವಪತನ ಕಂಡಿತು. ನೇಪಾಳ ಪರ ಒಬ್ಬನೇ ಒಬ್ಬ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ ಹಾಗೂ ಐವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟಾದರು.
ಭಾರತ ಎ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ , ವೈಭವ್ ಸೂರ್ಯವಂಶಿ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ರಿಂಕು ಸಿಂಗ್ , ಕುಮಾರ್ ಕುಶಾಗ್ರ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ ,ಸೂರ್ಯಾಂಶ್ ಶೆಡ್ಗೆ , ವಿಪ್ರಜ್ ನಿಗಮ್ , ಹರ್ಷಿತ್ ರಾಣಾ , ಪ್ರಿನ್ಸ್ ಯಾದವ್.
ನೇಪಾಳ ಪ್ಲೇಯಿಂಗ್ 11: ಅರ್ಜುನ್ ಕುಮಾಲ್ , ಕುಶಾಲ್ ಭುರ್ತೆಲ್ , ಬಸೀರ್ ಅಹಮದ್ , ಲೋಕೇಶ್ ಬಾಮ್ , ದೀಪಕ್ ಡುಮ್ರೆ (ವಿಕೆಟ್ ಕೀಪರ್) , ಲಲಿತ್ ರಾಜ್ಬನ್ಶಿ , ನಂದನ್ ಯಾದವ್ , ಪವನ್ ಸರಾಫ್ , ರಶೀದ್ ಖಾನ್ , ಸಂದೀಪ್ ಲಾಮಿಚಾನೆ (ನಾಯಕ) , ಪ್ರಾತಿಸ್ ಜಿಸಿ.
ದಾಖಲೆಗಳ ಮೇಲೆ ದಾಖಲೆ:
ಭಾರತ ಎ ತಂಡವು ನೇಪಾಳ ತಂಡವನ್ನು ಕೇವಲ 26 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ‘ಎ’ ತಂಡವೊಂದು ಎದುರಾಳಿಯನ್ನು ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ ವಿಶ್ವ ದಾಖಲೆ ಬರೆದಿದೆ. ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾ ‘ಎ’ ತಂಡದ ಹೆಸರಿನಲ್ಲಿತ್ತು.
2005ರಲ್ಲಿ ಶ್ರೀಲಂಕಾ ‘ಎ’ ತಂಡವನ್ನು 45 ರನ್‌ಗಳಿಗೆ ಆಲೌಟ್ ಮಾಡಿ ಸೌತ್ ಆಫ್ರಿಕಾ ‘ಎ’ ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿತ್ತು. ಇದೀಗ ಆ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಭಾರತ ಎ ತಂಡ ಯಶಸ್ವಿಯಾಗಿದೆ.
- ಪ್ರಚಂಡ ಗೆಲುವು: 306 ರನ್‌ಗಳ ಅಂತರದ ಗೆಲುವು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತ ಎ ತಂಡದ ಸಾರ್ವಕಾಲಿಕ ಅತಿ ದೊಡ್ಡ ಗೆಲುವಾಗಿದೆ.
- 5ನೇ ಕನಿಷ್ಠ ಮೊತ್ತ: 50 ವರ್ಷಗಳಿಗೂ ಅಧಿಕ ಇತಿಹಾಸವಿರುವ ಪುರುಷರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನೇಪಾಳದ 26 ರನ್ 5ನೇ ಅತ್ಯಂತ ಕಡಿಮೆ ಮೊತ್ತವಾಗಿದೆ.
- ಅಮೋಘ ಜಯ: ಭಾರತ ಎ ತಂಡವು ಇದೇ ಮೊದಲ ಬಾರಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 300 ಕ್ಕೂ ಅಧಿಕ ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.
- ವಿಶ್ವ ದಾಖಲೆ: ಯಾವುದೇ ದೇಶದ ‘ಎ’ ತಂಡದ ವಿರುದ್ಧ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದಾಖಲಾದ ಕನಿಷ್ಠ ಮೊತ್ತ (26 ರನ್) ಇದಾಗಿದೆ. 2005ರಲ್ಲಿ ಸೌತ್ ಆಫ್ರಿಕಾ ‘ಎ’ ವಿರುದ್ಧ ಶ್ರೀಲಂಕಾ ‘ಎ’ 45 ರನ್‌ಗಳಿಗೆ ಆಲೌಟ್ ಆಗಿದ್ದ ಹಳೆಯ ದಾಖಲೆಯನ್ನು ಭಾರತ ಎ ಮುರಿದಿದೆ.
ಇದನ್ನೂ ಓದಿ: ಕಮಿನ್ಸ್ ಕ್ಯಾಪ್ಟನ್ಸಿ ಕಿತ್ತರೆ, ನಾನು ನಿವೃತ್ತಿ ನೀಡ್ತೇನೆ: ಹೇಝಲ್ವುಡ್ ಎಚ್ಚರಿಕೆ!
ಒಟ್ಟಾರೆಯಾಗಿ, 21 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಭಾರತ ಎ ತಂಡವು ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಇದೇ ಗೆಲುವಿನ ಲಯದೊಂದಿಗೆ ಕಣಕ್ಕಿಳಿಯಲಿರುವ ತಿಲಕ್ ವರ್ಮಾ ಪಡೆ, ನಾಳೆ (ನವೆಂಬರ್ 22) ನಡೆಯಲಿರುವ ಹೈ-ವೋಲ್ಟೇಜ್ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡವನ್ನು ಎದುರಿಸಲಿದೆ.
Published On - 9:08 am, Sat, 21 November 26




