ಮೈಗ್ರೇನ್ ಸಮಸ್ಯೆ ತಡೆಯಲು ಡಾ. ಮುರಳೀಧರ ಬಲ್ಲಾಳ್ ನೀಡಿದ ಸರಳ ಸಲಹೆಗಳು
ಮೈಗ್ರೇನ್ ಕೇವಲ ಸಾಮಾನ್ಯ ತಲೆನೋವಲ್ಲ. ಒತ್ತಡ, ನಿದ್ರೆಯ ಕೊರತೆ, ಊಟ ತಪ್ಪಿಸುವುದು ಮತ್ತು ನೀರಿನ ಕೊರತೆ ಕೆಲವರಲ್ಲಿ ಮೈಗ್ರೇನ್‌ನ್ನು ಪ್ರಚೋದಿಸಬಹುದು. ನಿಯಮಿತ ನಿದ್ರೆ, ಸಮಯಕ್ಕೆ ಸರಿಯಾದ ಆಹಾರ, ಸಾಕಷ್ಟು ನೀರು ಮತ್ತು ಕಂಪ್ರೆಸ್‌ನಂತಹ ಸರಳ ಕ್ರಮಗಳು ಆರಾಮ ನೀಡಬಹುದು. ಅದರ ಜೊತೆಗೆ ಡಾ. ಮುರಳೀಧರ ಬಲ್ಲಾಳ್ ಅವರು ಕೆಲವು ಸರಳ ಸಲಹೆಗಳನ್ನು ನೀಡಿದ್ದು ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಮೈಗ್ರೇನ್ ಬಗ್ಗೆ ಕಳೆದವರೇ ಇಲ್ಲ. ಜಗತ್ತಿನಲ್ಲಿ ಪ್ರತಿ 7 ಜನರಲ್ಲಿ ಒಬ್ಬರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಸಣ್ಣ ವಯಸ್ಸಿನಲ್ಲಿಯೇ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಕುಗ್ಗಿಸುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ ಈ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಲು ಉಡುಪಿಯ ಎಸ್ ಡಿ ಎಮ್ ಆಯುರ್ವೇದ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಬಲ್ಲಾಳ್ ಅವರು ಕೆಲವು ಸರಳ ಸಲಹೆಗಳನ್ನು ನೀಡಿದ್ದು ಮೈಗ್ರೇನ್ ಎಂದರೇನು, ಮೈಗ್ರೇನ್ ಸಮಸ್ಯೆಗೆ ಮನೆಯಲ್ಲಿಯೇ ಯಾವ ರೀತಿಯ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೈಗ್ರೇನ್ ಎಂದರೇನು?
ಸಾಮನ್ಯವಾಗಿ ಮೈಗ್ರೇನ್ ಕೇವಲ ತಲೆನೋವಲ್ಲ. ಇದು ಮೆದುಳಿನ ರಕ್ತನಾಳಗಳು, ನರಗಳು ಮತ್ತು ರಾಸಾಯನಿಕ ಸಂವೇದಕಗಳ (ಟ್ರೈಜೆಮಿನೋವಾಸ್ಕ್ಯುಲರ್ ವ್ಯವಸ್ಥೆ) ಸಂಕೀರ್ಣ ಸಂವಹನದಿಂದ ಉಂಟಾಗುವ ಸಮಸ್ಯೆ. ಒತ್ತಡ, ನಿದ್ರೆ ಸಮಸ್ಯೆ, ಹಾರ್ಮೋನ್ ಬದಲಾವಣೆ, ಕೆಲವು ಆಹಾರಗಳು ಮತ್ತು ತೀವ್ರ ಬೆಳಕು ಅಥವಾ ಶಬ್ದಗಳು ಟ್ರಿಗರ್ ಆಗುವ ಕಾರಣ ಮೈಗ್ರೇನ್ ಸಮಸ್ಯೆ ಉಂಟಾಗುತ್ತದೆ.
ಆಧುನಿಕ ನರವಿಜ್ಞಾನದ ಪ್ರಕಾರ, ಅತಿಯಾಗಿ ಉತ್ತೇಜನಗೊಳ್ಳುವ ನರಕೋಶಗಳು ಮುಖ ಮತ್ತು ತಲೆಯ ಪ್ರಮುಖ ನರವಾದ ‘ಟ್ರೈಜಿಮಿನಲ್ ನರ’ವನ್ನು ಪ್ರಚೋದಿಸಿದಾಗ ಮೈಗ್ರೇನ್ ಸಂಭವಿಸುತ್ತದೆ. ಈ ಪ್ರಚೋದನೆಯು ರಕ್ತನಾಳಗಳನ್ನು ಹಿಗ್ಗಿಸಿ, ಉರಿಯೂತವನ್ನು ಉಂಟುಮಾಡುವ ಪ್ರೋಟೀನ್‌ಗಳನ್ನು ಬಿಡುಗಡೆ ಮಾಡುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದವು ಇದನ್ನು ಸೂರ್ಯಾವರ್ತ ಅಥವಾ ಅರ್ಧಾವಭೇದಕ ಎಂದು ಕರೆದಿದೆ. ದೇಹದ ಶಕ್ತಿಯನ್ನು ಆಯುರ್ವೇದವು ದೋಷಗಳ ಮೂಲಕ ವಿವರಿಸುತ್ತದೆ. ಮೈಗ್ರೇನ್ ಮುಖ್ಯವಾಗಿ ಪಿತ್ತ ಮತ್ತು ವಾತ ದೋಷಗಳ ಏರುಪೇರಿನಿಂದ ಆಗುತ್ತದೆ.
ವಾತ (ಗಾಳಿ/ಆಕಾಶ): ವಾತ ನರಮಂಡಲವನ್ನು ನಿಯಂತ್ರಿಸುತ್ತದೆ. ಒತ್ತಡ ಅಥವಾ ನಿದ್ದೆಯ ಕೊರತೆಯಿಂದ ಇದು ಹದಗೆಟ್ಟಾಗ, ನರಗಳನ್ನು ಒಣಗಿಸುತ್ತದೆ.
ಪಿತ್ತ (ಅಗ್ನಿ/ಜಲ): ಇದು ದೇಹದ ಉಷ್ಣತೆ ಮತ್ತು ರಕ್ತಪರಿಚಲನೆಯನ್ನು ನಿಯಂತ್ರಿಸುತ್ತದೆ. ಸಿಟ್ಟು, ಅತಿಯಾದ ಬಿಸಿಲು ಅಥವಾ ಉಪವಾಸದಿಂದ ಪಿತ್ತ ಹೆಚ್ಚಾದಾಗ, ಆ ಉರಿಯೂತದ ಉಷ್ಣತೆಯು ನೇರವಾಗಿ ತಲೆಗೆ ಏರುತ್ತದೆ.
ಇದನ್ನೂ ಓದಿ: ಮೈಗ್ರೇನ್ ಇದ್ಯಾ? ಹಾಗಿದ್ರೆ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ
ಮೈಗ್ರೇನ್ ಸಮಸ್ಯೆಗೆ ಮನೆಯಲ್ಲಿದೆ ಪರಿಹಾರ
ನಿದ್ರೆ ಮತ್ತು ಬೆಳಕು: ಪ್ರತಿದಿನ ಒಂದೇ ಸಮಯಕ್ಕೆ ನಿದ್ರೆ ಮಾಡಿ; ರಾತ್ರಿ ಮೊಬೈಲ್, ಸ್ಕ್ರೀನ್ ಬಳಕೆ ಕಡಿಮೆ ಮಾಡಿ. ಸ್ಥಿರ ನಿದ್ರೆ ಮೈಗ್ರೇನ್ ನಿಯಂತ್ರಣಕ್ಕೆ ಉತ್ತಮ.
ತಣ್ಣನೆಯ ಅಥವಾ ಬಿಸಿ ಕಂಪ್ರೆಸ್ ಬಳಕೆ: ತಲೆಯ ಮೇಲೆ ತಣ್ಣನೆಯ ಪ್ಯಾಕ್ ಅಥವಾ ಕುತ್ತಿಗೆಗೆ ಹಾಟ್ ಬ್ಯಾಗ್ ಬಳಕೆ ಮಾಡುವುದರಿಂದ ನೋವನ್ನು ತಕ್ಷಣ ತಡೆಯಬಹುದು.
ನೀರು ಮತ್ತು ಆಹಾರ: ನೀರು ಕುಡಿಯುವುದು ಮತ್ತು ತಪ್ಪದೇ ಊಟ ಮಾಡುವುದು ಅತ್ಯಾವಶ್ಯಕ; ದೇಹದ ನೀರಿನ ಕೊರತೆ ಮತ್ತು ಉಪವಾಸವು ಮೈಗ್ರೇನ್‌ನ ಸಾಮಾನ್ಯ ಟ್ರಿಗರ್‌ಗಳು.
ಪಿತ್ತ ಶಾಮಕ ದ್ರವ (ಕೊತ್ತಂಬರಿ ಬೀಜದ ಕಷಾಯ): ಒಂದು ಚಮಚ ಕೊತ್ತಂಬರಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅದನ್ನು ಶೋಧಿಸಿ ಕುಡಿಯಿರಿ. ಕೊತ್ತಂಬರಿ ದೇಹದ ಅತಿಯಾದ ಪಿತ್ತ ಮತ್ತು ಉಷ್ಣತೆಯನ್ನು ಶಾಂತಗೊಳಿಸುವ ಅದ್ಭುತ ಔಷಧವಾಗಿದೆ.
ಶುಂಠಿ-ಅರಿಶಿನದ ರಸ: ಹಸಿ ಶುಂಠಿ ರಸಕ್ಕೆ ಸ್ವಲ್ಪ ಅರಿಶಿನ ಮತ್ತು ಉಗುರು ಬೆಚ್ಚಗಿನ ನೀರು ಸೇರಿಸಿ ಸೇವಿಸಿ. ಕ್ಲಿನಿಕಲ್ ಸಂಶೋಧನೆಗಳ ಪ್ರಕಾರ, ಮೈಗ್ರೇನ್ ತಡೆಗಟ್ಟುವಲ್ಲಿ ಶುಂಠಿಯು ಅಲೋಪತಿಯ ‘ಸುಮಾಟ್ರಿಪ್ಟನ್’ ಮಾತ್ರೆಗೆ ಸಮನಾಗಿ ಕೆಲಸ ಮಾಡುತ್ತದೆ, ಅದೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ!
ಲ್ಯಾವೆಂಡರ್ (Lavender) ಬಳಕೆ : ತಕ್ಷಣದ ಮೈಗ್ರೇನ್ ನೋವನ್ನು ತಗ್ಗಿಸುವಲ್ಲಿ ಲ್ಯಾವೆಂಡರ್ ಇನ್ಹೇಲೇಶನ್ ಉತ್ತಮ ಆಯ್ಕೆ.
ನಸ್ಯ ಕರ್ಮ: ಖಾಲಿ ಹೊಟ್ಟೆಯಲ್ಲಿ ಎರಡು ಹನಿ ಉಗುರುಬೆಚ್ಚಗಿನ ಶುದ್ಧ ಹಸುವಿನ ತುಪ್ಪವನ್ನು ಎರಡೂ ಮೂಗಿನ ಹೊಳ್ಳೆಗಳಿಗೆ ಹಾಕಿ. ಆಯುರ್ವೇದದಲ್ಲಿ ‘ನಾಸಾ ಹಿ ಶಿರಸೋ ದ್ವಾರಂ’ ಎನ್ನಲಾಗಿದೆ. ಅಂದರೆ ಮೂಗು ಮೆದುಳಿನ ಹೆಬ್ಬಾಗಿಲು. ತುಪ್ಪವು ವಾತದಿಂದ ಒಣಗಿದ ನರಗಳಿಗೆ ಪೋಷಣೆ ನೀಡಿ, ಇಡೀ ನರಮಂಡಲವನ್ನು ತಂಪುಗೊಳಿಸುತ್ತದೆ.
ನಿಮ್ಮ ಮನಸ್ಸನ್ನು ಸದೃಢಗೊಳಿಸಿ
ಸಾಮಾನ್ಯವಾಗಿ ಮೆದುಳಿನ ಪವರ್ ಗ್ರಿಡ್ ಅನ್ನು ಶಾಂತಗೊಳಿಸುವುದೇ ಮೈಗ್ರೇನ್‌ಗೆ ಶಾಶ್ವತ ಪರಿಹಾರ. ಪ್ರತಿದಿನ ಕೇವಲ 10 ನಿಮಿಷಗಳ ಕಾಲ ಪ್ರಾಣಾಯಾಮ (ಅನುಲೋಮ-ವಿಲೋಮ) ಮಾಡುವುದರಿಂದ ದೇಹದಲ್ಲಿ ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ರಾತ್ರಿ 10 ಗಂಟೆಯ ನಂತರ ಎಚ್ಚರವಿರಬೇಡಿ, ಏಕೆಂದರೆ ತಡರಾತ್ರಿ ಜಾಗರಣೆಯು ವಾತವನ್ನು ತೀವ್ರವಾಗಿ ಹೆಚ್ಚಿಸುತ್ತದೆ. ಸರಿಯಾದ ವಿಶ್ರಾಂತಿ, ಸಮಯಕ್ಕೆ ಸರಿಯಾದ ಊಟ ಮತ್ತು ಸಾತ್ವಿಕ ಆಹಾರಗಳೇ ನಿಮ್ಮ ದೇಹಕ್ಕೆ ಅದ್ಭುತ ಔಷಧ. ಒತ್ತಡವನ್ನು ಕಡಿಮೆ ಮಾಡಿ, ಸರಳ ದೈನಂದಿನ ಕ್ರಮಗಳನ್ನು ಅನುಸರಿಸಿದರೆ ಮೈಗ್ರೆನ್ ಸಮಸ್ಯೆಯಿಂದ ಪಾರಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




