Sleeping While Travelling: ಪ್ರಯಾಣ ಮಾಡುವಾಗ ಸಿಕ್ಕಾಪಟ್ಟೆ ನಿದ್ರೆ ಬರಲು ಕಾರಣವೇನು ಗೊತ್ತೇ?
ಕಾರು, ಬಸ್ಸು, ರೈಲು ಯಾವುದರಲ್ಲಿ ಪ್ರಯಾಣ ಮಾಡಿದರೂ ಸಹ ಕೆಲವೊಬ್ಬರೂ ಪ್ರಯಾಣಿಸುವಾಗ ಬೇಗನೆ ನಿದ್ರೆಗೆ ಜಾರಿ ಬಿಡುತ್ತಾರೆ. ನಿಮಗೂ ಕೂಡ ಪ್ರಯಾಣ ಮಾಡುವಾಗ ನಿದ್ದೆ ಬರುತ್ತಾ? ಟ್ರಾವೆಲ್ ಮಾಡುವಾಗ ಹೀಗೆ ಏಕೆ ನಿದ್ರೆ ಬರುತ್ತೆ, ಇದರ ಹಿಂದಿನ ನಿಜವಾದ ಕಾರಣವೇನು ಎಂಬುದನ್ನು ತಿಳಿಯಿರಿ.

ಮಧ್ಯಾಹ್ನ ಊಟ ಮಾಡಿದ ನಂತರ ಕಣ್ಣು ತೂಕಡಿಸುವಂತೆ, ಬಸ್ಸು, ಕಾರ್, ರೈಲಿನಲ್ಲಿ ಎಲ್ಲಿಗಾದರೂ ಪ್ರಯಾಣಿಸುವಾಗ (traveling) ಹೆಚ್ಚಿನವರಿಗೆ ನಿದ್ರೆ ಬಂದಂತಾಗುತ್ತದೆ. ಕೆಲವರಂತೂ ವಾಹನ ಹೊರಟ 10-15 ನಿಮಿಷದೊಳಗೆ ನಿದ್ರೆಗೆ ಜಾರಿ ಬಿಡುತ್ತಾರೆ. ನಿಮಗೂ ಕೂಡ ಇದೇ ರೀತಿ ಪ್ರಯಾಣಿಸುವಾಗ ನಿದ್ರೆ ಬರುತ್ತಾ? ಇದಕ್ಕೆ ಮುಖ್ಯ ಕಾರಣ ವಾಹನದ ಸೌಮ್ಯ ಕಂಪನ, ಎಂಜಿನ್‌ನ ನಿರಂತರ ಶಬ್ದ, ಆರಾಮದಾಯಕ ಆಸನ ಮತ್ತು ಮೆದುಳಿನ ಮೇಲೆ ಒತ್ತಡ ಬೀರದಿರುವುದು. ಈ ಎಲ್ಲಾ ಅಂಶಗಳು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತವೆ, ಇದರಿಂದಾಗಿ ಹೆಚ್ಚಿನವರು ಪ್ರಯಾಣಿಸುವಾಗ ಬಹು ಬೇಗನೆ ನಿದ್ರೆಗೆ ಜಾರುತ್ತಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
ಪ್ರಯಾಣ ಮಾಡುವಾಗ ನಿದ್ದೆ ಬರೋದೇಕೆ?
ವಾಹನ ಅಲುಗಾಟ: ಪ್ರಯಾಣಿಸು ಸಂದರ್ಭದಲ್ಲಿ ವಾಹನ ಸಣ್ಣದಾಗಿ ಅಲುಗಾಡುತ್ತಿರುತ್ತದೆ. ಈ ನಿರಂತರ ಅಲುಗಾಟ ಮಗುವನ್ನು ತೊಟ್ಟಿಲಿನಲ್ಲಿ ತೂಗಿದಂತಾಗುತ್ತದೆ, ಮಗುವನ್ನು ಕಾಲಿನಲ್ಲಿ ಕೂರಿಸಿ ಅಲುಗಾಡಿಸುತ್ತಾ ನಿದ್ದೆ ಮಾಡಿಸಿದಂತಾಗುತ್ತದೆ. ಪ್ರಯಾಣಿಸುವಾಗ ಆಗುವ ಈ ಅಲುಗಾಟದ ಸಂವೇದನೆಯಿಂದಾಗಿ ಹೆಚ್ಚಿನವರಿಗೆ ಪ್ರಯಾಣಿಸುವಾಗ ನಿದ್ರೆ ಬರೋದು.
ನೈಸರ್ಗಿಕ ಬೆಳಕಿನ ಕೊರತೆ: ಕಾರು ಅಥವಾ ರೈಲಿನ ಸುತ್ತುವರಿದ ಪರಿಸರದಲ್ಲಿ, ನೈಸರ್ಗಿಕ ಬೆಳಕು ಸೀಮಿತವಾಗಿರುತ್ತದೆ ಮತ್ತು ನಾವು ವಾಹನದ ಆಂತರಿಕ ಬೆಳಕಿನ ಮೇಲೆ ಮಾತ್ರ ಅವಲಂಬಿತರಾಗುತ್ತೇವೆ. ಇದು ಆಗಾಗ್ಗೆ ನಮ್ಮ ಸಿರ್ಕಾಡಿಯನ್ ಲಯವನ್ನು ಅಡ್ಡಿಪಡಿಸುತ್ತದೆ ಮತ್ತು ನಮ್ಮ ಮೆದುಳು ಮಲಗುವ ಸಮಯ ಎಂದು ಭಾವಿಸುತ್ತದೆ, ಇದು ನಮಗೆ ನಿದ್ರೆಯ ಅನುಭವವನ್ನು ನೀಡುತ್ತದೆ.
ಏಕತಾನತೆ: ಬಸ್, ಕಾರಿನಲ್ಲಿ ಪ್ರಯಾಣಿಸುವಾಗ ಒಂದೇ ಕಡೆ ಹೆಚ್ಚು ಹೊತ್ತು ಕುಳಿತಿರುತ್ತೇವೆ ಮತ್ತು ಯಾವುದೇ ರೀತಿಯ ದೈಹಿಕ ಚಟುವಟಿಕೆ ಇರೋದಿಲ್ಲ, ಈ ಚಟುವಟಿಕೆಗಳ ಕೊರತೆ, ಏಕತಾನತೆ ಮೆದುಳನ್ನು ನಿದ್ರೆಯ ಸ್ಥಿತಿಗೆ ತಳ್ಳುತ್ತದೆ. ಯಾವುದೇ ನಿರ್ದಿಷ್ಟ ಕೆಲಸದ ಮೇಲೆ ಗಮನಹರಿಸಬೇಕಾಗಿಲ್ಲದಿದ್ದರೆ, ದೇಹ ಮತ್ತು ಮನಸ್ಸು ಶಾಂತವಾಗುತ್ತದೆ. ಪರಿಣಾಮವಾಗಿ, ಪ್ರಯಾಣ ಮಾಡುವಾಗ ನಿದ್ರೆ ಬರುವುದು ಸಹಜ.
ಸೌಮ್ಯ ಶಬ್ಧ: ಪ್ರಯಾಣಿಸುವಾಗ ಕಾರು, ಬಸ್ ಅಥವಾ ರೈಲಿನ ಎಂಜಿನ್ ಮತ್ತು ಟೈರ್‌ಗಳ ನಿರಂತರ ಮೃದುವಾದ ಶಬ್ದವು ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ವಿಶ್ರಾಂತಿಯ ಭಾವನೆ ಹೆಚ್ಚಾಗುತ್ತದೆ ಮತ್ತು ನಾವು ಸೀದಾ ನಿದ್ರೆಗೆ ಜಾರುತ್ತೇವೆ.
ಆಯಾಸ ಮತ್ತು ನಿದ್ರೆಯ ಕೊರತೆ: ಮನುಷ್ಯನಿಗೆ 7 ರಿಂದ 8 ಗಂಟೆಯ ನಿದ್ರೆ ಅವಶ್ಯಕ. ಆದರೆ ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಅಥವಾ ನೀವು ಕೆಲಸ ಮಾಡಿ ದಣಿಸಿದ್ದರೆ, ಪ್ರಯಾಣಿಸುವ ಸಂದರ್ಭದಲ್ಲಿನ ಸುತ್ತಮುತ್ತಲಿನ ಶಾಂತ ನೋಟ, ಸೌಮ್ಯವಾದ ಕಂಪನಗಳು ನಿಮ್ಮನ್ನು ನಿದ್ರೆಗೆ ಜಾರುವಂತೆ ಮಾಡುತ್ತದೆ.
ಇದನ್ನೂ ಓದಿ: ಬಹುತೇಕ ವಸ್ತುಗಳ ಬೆಲೆ 499, 999 ರೂ. ಏಕಿರುತ್ತವೆ, ಏನಿದು ಮಾರ್ಕೆಟಿಂಗ್ ಗಿಮಿಕ್?
ವಿಶ್ರಾಂತಿ ಭಾವನೆ: ಕಾರು, ಬಸ್ ಅಥವಾ ರೈಲು ಸ್ಥಿರವಾದ ವೇಗದಲ್ಲಿ ಚಲಿಸಿದಾಗ, ದೇಹವು ಕ್ರಮೇಣ ಶಾಂತ ಮತ್ತು ವಿಶ್ರಾಂತಿಯನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹದ ಪ್ರಕ್ರಿಯೆಗಳು ಸಕ್ರಿಯಗೊಳ್ಳುತ್ತವೆ, ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಮನಸ್ಸು ಶಾಂತವಾಗುತ್ತದೆ ಮತ್ತು ಪ್ರಯಾಣದ ಸಮಯದಲ್ಲಿ ಸುಲಭವಾಗಿ ನಿದ್ರಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಮನಸ್ಥಿತಿಯ ಸುಧಾರಣೆ: ಪ್ರಯಾಣದ ಸಮಯದಲ್ಲಿ, ನೀವು ಕಿಟಕಿಯ ಹೊರಗೆ ವೇಗವಾಗಿ ಹಾದುಹೋಗುವ ರಸ್ತೆಗಳು, ಮರಗಳು, ಹೊಲಗಳು ಅಥವಾ ಕಟ್ಟಡಗಳನ್ನು ನೋಡಿರುತ್ತೇವೆ. ಹೀಗೆ ಪ್ರಕೃತಿಯನ್ನು ನೋಡುತ್ತಾ ಕುಳಿತಾಗ ಒತ್ತಡ ಕಡಿಮೆಯಾಗಿ ಮನಸ್ಸಿನ ಮೇಲಿನ ಹೊರೆ ಕಡಿಮೆಯಾಗಿ, ಮನಸ್ಥಿತಿ ಸುಧಾರಿಸುತ್ತದೆ. ಜೊತೆಗೆ ದೇಹವು ವಿಶ್ರಾಂತಿ ಪಡೆಯುತ್ತದೆ. ಇದು ವೇಗವಾಗಿ ನಿದ್ರೆ ಬರುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




