ಹಸಿರು ಏಲಕ್ಕಿ ಮೌತ್ ಫ್ರೆಶ್ನರ್ ಆಗಿ ಮಾತ್ರವಲ್ಲ, ಊಹಿಸಲೂ ಸಾಧ್ಯವಾಗದ ಪ್ರಯೋಜನ ನೀಡುತ್ತೆ!
ಹಸಿರು ಏಲಕ್ಕಿ ಕೇವಲ ಬಾಯಿಯ ದುರ್ವಾಸನೆ ಕಡಿಮೆ ಮಾಡುವ ಮೌತ್ ಫ್ರೆಶ್ನರ್ ಮಾತ್ರವಲ್ಲ. ಇದರಲ್ಲಿರುವ ಸಸ್ಯ ಸಂಯುಕ್ತಗಳು ಜೀರ್ಣಕ್ರಿಯೆ, ಬಾಯಿಯ ಆರೋಗ್ಯ ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಕಾರಿ. ಕೆಲವು ಅಧ್ಯಯನಗಳು ಏಲಕ್ಕಿ ರಕ್ತದೊತ್ತಡ ನಿರ್ವಹಣೆಗೆ ಸಹಾಯ ಮಾಡಬಹುದು ಎಂದು ಹೇಳುತ್ತವೆ. ಆದರೆ ಇದು ನಿಜವಾಗಿಯೂ ಸತ್ಯವೇ? ಈ ಬಗ್ಗೆ ಡಾ. ಶುಭಂ ವಾತ್ಸ್ಯ ಅವರು ಹೇಳುವುದೇನು? ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಡುಗೆಮನೆಯಲ್ಲಿರುವ ಸಣ್ಣ ಏಲಕ್ಕಿ ಕೇವಲ ಸಿಹಿ ತಿಂಡಿಗಳು ಮತ್ತು ಮಸಾಲೆಯುಕ್ತ ಖಾದ್ಯಗಳ ರುಚಿ, ಪರಿಮಳ ಹೆಚ್ಚಿಸಲು ಮಾತ್ರ ಬಳಕೆಯಾಗುವುದಿಲ್ಲ. ಹಸಿರು ಏಲಕ್ಕಿ (Green Cardamom) ಅನ್ನು ಊಟದ ನಂತರ ಬಾಯಿಯ ದುರ್ವಾಸನೆ ಕಡಿಮೆ ಮಾಡಲು ಹಲವರು ಜಗಿಯುತ್ತಾರೆ. ಆದರೆ ಇದರ ಬಳಕೆ ಇಲ್ಲಿಗೇ ಸೀಮಿತವಾಗಿಲ್ಲ. ಈ ಏಲಕ್ಕಿಯಲ್ಲಿ ವಿವಿಧ ಸಸ್ಯ ಸಂಯುಕ್ತಗಳು ಮತ್ತು ಕೆಲವು ಪೋಷಕಾಂಶಗಳಿದ್ದು, ಜೀರ್ಣಕ್ರಿಯೆ, ಬಾಯಿಯ ಆರೋಗ್ಯ ಹಾಗೂ ಹೃದಯದ ಆರೋಗ್ಯ ಪ್ರಯೋಜನಗಳಿದ್ದು ಸಂಶೋಧನೆ ಮೂಲಕ ಬಹಿರಂಗಗೊಂಡಿದೆ. ಹೌದು, ಈ ಬಗ್ಗೆ ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಅಂಡ್ ಹೆಪಟೋಬಿಲಿಯರಿ ಸೈನ್ಸಸ್ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಶುಭಂ ವಾತ್ಸ್ಯ ಅವರು ಮತ್ತಷ್ಟು ಮಾಹಿತಿ ನೀಡಿದ್ದು ಇದರಿಂದ ಸಿಗುವ ಸಾಕಷ್ಟು ಪ್ರಯೋಜನಗಳನ್ನು ವಿವರಿಸಿದ್ದಾರೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಏಲಕ್ಕಿಯಲ್ಲಿರುವ ಕೆಲವು ಸಸ್ಯ ಸಂಯುಕ್ತಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಬೆಂಬಲ ನೀಡಬಹುದು. ಇದರಲ್ಲಿರುವ ಎಸೆನ್ಷಿಯಲ್ ಆಯಿಲ್‌ಗಳ ಬಗ್ಗೆ ನಡೆದ ಸಂಶೋಧನೆಗಳು ಜೀರ್ಣಕಾರಿ ರಸಗಳ ಚಟುವಟಿಕೆ ಮತ್ತು ಗಟ್ ಮೊಟಿಲಿಟಿಗೆ ಸಂಬಂಧಿಸಿದ ಪರಿಣಾಮಗಳನ್ನು ಸೂಚಿಸಿವೆ. ಇದರಿಂದ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳಲ್ಲಿ ಆರಾಮ ಸಿಗಬಹುದು. ಆದರೆ ನಿರಂತರ ಅಸಿಡಿಟಿ ಅಥವಾ ಹೊಟ್ಟೆನೋವಿದ್ದರೆ ಏಲಕ್ಕಿಯನ್ನು ಚಿಕಿತ್ಸೆಯಾಗಿ ಅವಲಂಬಿಸಬಾರದು.
ಬಾಯಿಯ ಆರೋಗ್ಯಕ್ಕೂ ಪ್ರಯೋಜನಕಾರಿ
ಏಲಕ್ಕಿಯನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಬಳಸುವ ಪದ್ಧತಿ ಬಹಳ ಹಿಂದಿನಿಂದಲೂ ಇದೆ. ಏಲಕ್ಕಿಯಲ್ಲಿರುವ ಕೆಲವು ಸಸ್ಯ ಸಂಯುಕ್ತಗಳಿಗೆ ಆ್ಯಂಟಿಮೈಕ್ರೋಬಿಯಲ್ ಗುಣಗಳು ಇರಬಹುದು ಎಂದು ಪ್ರಯೋಗಾಲಯ ಅಧ್ಯಯನಗಳು ಸೂಚಿಸಿವೆ. ಊಟದ ನಂತರ ಏಲಕ್ಕಿ ಜಗಿಯುವುದರಿಂದ ಬಾಯಿಯ ದುರ್ವಾಸನೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ಸಹಾಯವಾಗಬಹುದು. ಆದರೆ ಇದು ಹಲ್ಲುಜ್ಜುವುದು, ಫ್ಲಾಸಿಂಗ್ ಅಥವಾ ದಂತವೈದ್ಯರ ಚಿಕಿತ್ಸೆಗೆ ಪರ್ಯಾಯವಲ್ಲ.
ಇದನ್ನೂ ಓದಿ: ಬಿಲ್ವಪತ್ರೆ ಶಿವನ ಪೂಜೆಗೆ ಮಾತ್ರವಲ್ಲ! ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ
ಹೃದಯದ ಆರೋಗ್ಯ ಕಾಪಾಡಲು ಒಳ್ಳೆಯದು
ಏಲಕ್ಕಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಸಸ್ಯ ಸಂಯುಕ್ತಗಳಿವೆ. ಕೆಲವು ಅಧ್ಯಯನಗಳಲ್ಲಿ ಏಲಕ್ಕಿ ಸೇವನೆ ರಕ್ತದೊತ್ತಡ ಮತ್ತು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಅಂಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಸೂಚನೆಗಳು ಕಂಡುಬಂದಿವೆ.
ಬಿಪಿ ನಿಯಂತ್ರಣಕ್ಕೆ ಸಹಾಯವಾಗುತ್ತದೆಯೇ?
ಕೆಲವು ಕ್ಲಿನಿಕಲ್ ಅಧ್ಯಯನಗಳಲ್ಲಿ ಏಲಕ್ಕಿ ಸೇವನೆಯು ರಕ್ತದೊತ್ತಡದಲ್ಲಿ ಸಣ್ಣ ಪ್ರಮಾಣದ ಇಳಿಕೆಗೆ ಕಂಡುಬಂದಿದೆ. ಏಲಕ್ಕಿಯಲ್ಲಿರುವ ಸಸ್ಯ ಸಂಯುಕ್ತಗಳು ಇದಕ್ಕೆ ಕಾರಣವಾಗಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಹೈ ಬಿಪಿ ಇರುವವರು ವೈದ್ಯರು ನೀಡಿರುವ ಔಷಧಿಯನ್ನು ನಿಲ್ಲಿಸಿ ಏಲಕ್ಕಿ ಸೇವಿಸುವುದು ಸರಿಯಲ್ಲ.
ಏಲಕ್ಕಿಯನ್ನು ಹೇಗೆ ಸೇವಿಸಬೇಕು?
ಸಾಮಾನ್ಯವಾಗಿ ಏಲಕ್ಕಿಯನ್ನು ಆಹಾರದಲ್ಲಿ ಮಿತವಾಗಿ ಬಳಸಬಹುದು. ಊಟದ ನಂತರ ಒಂದು ಏಲಕ್ಕಿ ಜಗಿಯುವುದು ಸಾಮಾನ್ಯ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೆಚ್ಚುವರಿ ಆರೋಗ್ಯ ಪ್ರಯೋಜನ ಸಿಗುತ್ತದೆ ಎಂಬುದು ಸುಳ್ಳು. ಒಟ್ಟಿನಲ್ಲಿ, ಹಸಿರು ಏಲಕ್ಕಿ ರುಚಿ ಮತ್ತು ಪರಿಮಳ ಹೆಚ್ಚಿಸುವ ಮಸಾಲೆಯಷ್ಟೇ ಅಲ್ಲ; ಇದರಲ್ಲಿರುವ ಸಸ್ಯ ಸಂಯುಕ್ತಗಳು ಆರೋಗ್ಯಕ್ಕೆ ಕೆಲವು ರೀತಿಯಲ್ಲಿ ಬೆಂಬಲ ನೀಡಬಹುದು. ಆದರೆ ಏಲಕ್ಕಿಯನ್ನು ಯಾವುದೇ ಕಾಯಿಲೆಗೆ ಔಷಧಿ ಅಥವಾ ಖಚಿತ ಚಿಕಿತ್ಸೆಯಾಗಿ ಬಳಸಬಾರದು. ಸಮತೋಲಿತ ಆಹಾರ ಮತ್ತು ವೈದ್ಯರ ಸಲಹೆಯೇ ಮುಖ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




