
ಈಗಾಗ್ಲೇ ಆಷಾಢ ಮಾಸ (Ashada) ಆರಂಭವಾಗಿದೆ. ಇದು ಶೂನ್ಯ ಮಾಸ, ಅಮಂಗಳಕರ ಮಾಸವೆಂದು ಆಷಾಢದಲ್ಲಿ ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥ ಸೇರಿದಂತೆ ಯಾವುದೇ ರೀತಿಯ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಆದರೆ ಈ ಮಾಸದಲ್ಲಿ ಹೆಣ್ಣು ಮಕ್ಕಳನ್ನು ಅತ್ತೆ ಮನೆಯಿಂದ ತವರು ಮನೆಗೆ ಕಳುಹಿಸಲಾಗುವ ವಿಶೇಷ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಹೊಸದಾದ ಮದುವೆಯಾದ ಜೋಡಿ ಈ ಮಾಸದಲ್ಲಿ ಜೊತೆಯಾಗಿರುವುದು ಅಮಂಗಳಕರವೆಂದು ನವ ವಧುವನ್ನು ತವರು ಮನೆಗೆ ಕಳುಹಿಸಲಾಗುತ್ತದೆ. ನಾವೆಲ್ಲರೂ ಇದು ಕೇವಲ ಸಂಪ್ರದಾಯ ಎಂದು ಭಾವಿಸುತ್ತೇವೆ. ಆದರೆ ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ನಿರ್ಧಿಷ್ಟ ವೈಜ್ಞಾನಿಕ ಕಾರಣವೂ ಇದೆಯಂತೆ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹೆಚ್ಚಿನ ಕಡೆಗಳಲ್ಲಿ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಜೋಡಿಯನ್ನು ದೂರವಿರಿಸುತ್ತಾರೆ. ನವವಧುವನ್ನು ತವರುಮನೆಗೆ ಕಳುಹಿಸುತ್ತಾರೆ. ಪ್ರತೀ ಆಷಾಢದಲ್ಲೂ ಈ ಸಂಪ್ರದಾಯ ನಡೆಯುತ್ತದೆ. ಈ ಸಂಪ್ರದಾಯದ ಹಿಂದೆ ಹಲವು ಕಾರಣಗಳಿವೆ, ಅವುಗಳೆಂದರೆ;
ವೈದ್ಯಕೀಯ ಕಾರಣ: ಆಷಾಢ ಮಾಸವು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಬರುತ್ತದೆ. ಇದು ಮಳೆಗಾಲದ ಸಮಯವಾದ್ದರಿಂದ ಆಷಾಢ ಮಾಸದಲ್ಲಿ ಹವಾಮಾನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ವಾತಾವರಣ ತಣ್ಣಗಾಗುತ್ತಿದ್ದಂತೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬೆಳೆದು ಸೋಂಕುಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಗರ್ಭ ಧರಿಸಿದರೆ, ಹುಟ್ಟಲಿರುವ ಮಗುವಿನ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಹೌದು, ಮೊದಲ ಮೂರು ತಿಂಗಳು ಭ್ರೂಣಕ್ಕೆ ಬಹಳ ನಿರ್ಣಾಯಕ ಸಮಯ. ಈ ಸಮಯದಲ್ಲಿ ಅಂಗಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ತಾಯಿ ಸೋಂಕಿಗೆ ತುತ್ತಾದರೆ, ಗರ್ಭದಲ್ಲಿರುವ ಮಗುವೂ ಸಹ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ಒಂದು ಕಾರಣಕ್ಕೆ ಆಷಾಢದಲ್ಲಿ ಗಂಡ ಹೆಂಡತಿಯನ್ನು ದೂರವಿಡಲಾಗುತ್ತಿತ್ತು. ಈ ಸಂಪ್ರಾಯದ ಇಂದಿಗೂ ಚಾಲ್ತಿಯಲ್ಲಿದೆ.
ಇದಲ್ಲದೆ, ಆಷಾಢ ಸಮಯದಲ್ಲಿ ಗರ್ಭ ಧರಿಸಿದರೆ, ಸುಮಾರು ಒಂಭತ್ತು ತಿಂಗಳ ನಂತರ ಮಾರ್ಚ್ ಕೊನೆ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹೆರಿಗೆಯಾಗುವ ಸಾಧ್ಯತೆ ಇರುತ್ತದೆ. ಆ ತಿಂಗಳುಗಳು ಬೇಸಿಗೆಯ ಸಮಯವಾದ್ದರಿಂದ ತೀವ್ರ ಶಾಖವವು ತಾಯಿ ಮತ್ತು ಮಗುವಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈಗ ಸೂಕ್ತ ವೈದ್ಯಕೀಯ ಸೌಲಭ್ಯಗಳಿದ್ದರೂ ಹಿಂದೆಲ್ಲಾ ಇಂತಹ ಯಾವುದೇ ಸೌಲಭ್ಯಗಳಿರಲಿಲ್ಲ. ಹಾಗಾಗಿ ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಆಷಾಢದಲ್ಲಿ ಗಂಡ ಹೆಂಡತಿ ಜೊತೆ ಸೇರಬಾರದು ಎಂಬ ನಿಯಮವನ್ನು ಹಾಕಲಾಗುತ್ತಿತ್ತು ಮತ್ತು ವಿವಾಹಿತ ಹೆಣ್ಣು ಮಕ್ಕಳನ್ನು ತವರು ಮನೆಗೆ ಕಳುಹಿಸಲಾಗುತ್ತಿತ್ತು.
ದಾಂಪತ್ಯವನ್ನು ಗಟ್ಟಿಗೊಳಿಸುವುದು: ಮದುವೆಯಾದ ಹೊಸದರಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಅಪಾರ ಪ್ರೀತಿ, ಆಕರ್ಷಣೆ ಎಲ್ಲವೂ ಇರುತ್ತದೆ. ಇಂತಹ ಅವಧಿಯಲ್ಲಿ ಗಂಡ ಹೆಂಡತಿಯನ್ನು ದೂರ ಇಟ್ಟಾಗ ಅವರು ಸಂಗಾತಿ ದೂರವಾಗಿರುವುದರಿಂದ ಉಂಟಾಗುವ ನೋವು ಏನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ, ಇದು ಅವರ ಪ್ರೀತಿಯನ್ನು ಹೆಚ್ಚಿಸುತ್ತದೆ, ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ. ಈ ಕಾರಣಕ್ಕಾಗಿಯೂ ನವ ವಧುವನ್ನು ಆಷಾಢ ಮಾಸದಲ್ಲಿ ತಾಯಿ ಮನೆಗೆ ಕಳುಹಿಸಲಾಗುತ್ತದೆ.
ಆರೋಗ್ಯ ಕಾಳಜಿ: ಆಷಾಢ ತಿಂಗಳಲ್ಲಿ ಹೆಚ್ಚಿನ ಮಳೆ ಇರುತ್ತದೆ. ಈ ಸಮಯದಲ್ಲಿ ಜೀರ್ಣಕಾರಿ ಶಕ್ತಿ ದುರ್ಬಲಗೊಳ್ಳುತ್ತದೆ. ವೈರಲ್ ಮತ್ತು ಬ್ಯಾಕ್ಟೀರಿಯಾ ಕಾಯಿಲೆಗಳು ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಹಾಗಾಗಿ ದೇಹಕ್ಕೆ ವಿಶ್ರಾಂತಿ ನೀಡುವುದು ಮತ್ತು ಆರೋಗ್ಯ ಕಾಳಜಿಯ ದೃಷ್ಟಿಯಿಂದ ಪೂರ್ವಜರು ನವ ವಧುವನ್ನು ಆಷಾಢ ಮಾಸದಲ್ಲಿ ತವರು ಮನೆಗೆ ಕಳುಹಿಸುವ ಸಂಪ್ರಾದಾಯವನ್ನು ಜಾರಿಗೆ ತಂದರು.
ಇದನ್ನೂ ಓದಿ: ಟಿಶ್ಯೂ ಪೇಪರ್‌ಗಳು ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿರಲು ಇದುವೇ ಕಾರಣವಂತೆ
ಒತ್ತಡ ನಿವಾರಣೆ: ನವ ವಧು ಹೊಸ ಮನೆಗೆ ಬಂದ ತಕ್ಷಣ ಆಕೆಯ ಜೀವನಶೈಲಿ ಬದಲಾಗುತ್ತದೆ, ಜವಾಬ್ದಾರಿ ಹೆಚ್ಚಾಗುತ್ತದೆ. ಇದು ನವ ವಧುವಿಗೆ ಒತ್ತಡವನ್ನು ಉಂಟು ಮಾಡುತ್ತದೆ ಮತ್ತು ಆಕೆ ಭಾವನಾತ್ಮಕ ಬೆಂಬಲಕ್ಕಾಗಿ ಹಂಬಲಿಸುತ್ತಾಳೆ. ಈ ಒತ್ತಡದಿಂದ ಮುಕ್ತ ಪಡೆದು ಹೆತ್ತವರೊಂದಿಗೆ ಖುಷಿ ಖುಷಿಯಾಗಿ ಸಮಯ ಕಳೆಯಲು ನವ ವಧುವನ್ನು ಆಷಾಢ ಮಾಸದಲ್ಲಿ ತವರು ಮನೆಗೆ ಕಳುಹಿಸಲಾಗುತ್ತದೆ.
ಕೃಷಿ ಕಾರ್ಯದ ಕಾರಣ: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಹಿಂದೆಲ್ಲಾ ಪ್ರತಿಯೊಬ್ಬರೂ ಕೃಷಿಯನ್ನೇ ಅವಲಂಬಿಸಿದ್ದರು. ಮಳೆಗಾಲದ ಆರಂಭವಾದ ಆಷಾಢದಲ್ಲಿ ಬೀಜಗಳನ್ನು ಬಿತ್ತಲಾಗುತ್ತಿತ್ತು. ಈ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು. ಹೀಗಿರುವಾಗ ಪ್ರೀತಿಯಲ್ಲಿ ಮುಳುಗಿ ಕೃಷಿ ಕೆಲಸವನ್ನು ನಿರ್ಲಕ್ಷಿಸಬಾರದು ಎಂಬ ಕಾರಣಕ್ಕೆ ಹಿರಿಯರು ಹೊಸದಾಗಿ ಮದುವೆಯಾದ ಜೋಡಿಯನ್ನು ಸ್ವಲ್ಪ ದಿನಗಳ ಕಾಲ ಅಂದರೆ ಆಷಾಢದಲ್ಲಿ ದೂರವಿಡುವ ಸಂಪ್ರದಾಯನ್ನು ಮಾಡಿದರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ