Relationship: ಸಂಬಂಧದಲ್ಲಿ ಪರಸ್ಪರ ಗೌರವವನ್ನು ಹೇಗೆ ವ್ಯಕ್ತಪಡಿಸುವುದು? ಇಲ್ಲಿದೆ ತಜ್ಞರ ಸಲಹೆ
ದಾಂಪತ್ಯ ಆಗಿರಲಿ ಅಥವಾ ಪ್ರೇಮ ಸಂಬಂಧ ಆಗಿರಲಿ ಅಲ್ಲಿ ಪರಸ್ಪರ ಗೌರವವನ್ನು ತೋರುವುದರಿಂದ ಪ್ರೀತಿಯು ಆಳವಾಗಿ ಬೇರೂರುತ್ತದೆ.
ಪರಸ್ಪರ ಗೌರವವನ್ನು ತೋರುವುದು ಆರೋಗ್ಯಕರ ಸಂಬಂಧದ ಅಡಿಪಾಯವಾಗಿದೆ. ಯಾವುದೇ ಸಂಬಂಧವು ಸಾಕಷ್ಟು ಏರಿಳಿತಗಳ ಮೂಲಕ ಸಾಗುತ್ತದೆ. ಆದರೆ ಗೌರವವನ್ನು ನೀಡುವ ಮೂಲಕ ಹಾಗೂ ಪರಸ್ಪರ ಅರ್ಥ ಮಾಡಿಕೊಳ್ಳುವ ಮೂಲಕ ಸಂಬಂಧವನ್ನು ಉಳಿಸಿಕೊಳ್ಳಬಹುದು. ಗೌವರವವು ಆರೋಗ್ಯಕರ ಸಂಬಂಧದ ಪ್ರಮುಖ ಭಾಗವಾಗಿದೆ. ಸಂಬಂಧಗಳು ಒಂದಿಷ್ಟು ಸವಾಲುಗಳನ್ನು ಹೊಂದಿದ್ದರೂ, ಆ ಸಮಯದಲ್ಲಿ ಗೌರವವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ನಿಮ್ಮ ಸಂಗಾತಿಯ ಹಿತಾಸಕ್ತಿಗಳನ್ನು ಕಡೆಗಣಿಸುವುದು, ಅವರನ್ನು ಕೀಳಾಗಿ ಕಾಣುವುದು, ಅವರ ಮಾತುಗಳನ್ನು ಕಡೆಗಣಿಸುವುದು ಅಥವಾ ಅವರ ಭಾವನೆಗಳ ಕುರಿತು ಅಸಡ್ಡೆ ತೋರಿಸುವುದು ಇವೆಲ್ಲವೂ ಸಂಬಂಧವನ್ನು ಕ್ಷೀಣಿಸುತ್ತದೆ ಎಂದು ಸೈಕೋಥೆರಪಿಸ್ಟ್ ಹೆಚ್ ಸ್ಯಾಂಡರ್ಸ್ ಅವರು ಹೇಳುತ್ತಾರೆ.
ಸಂಬಂಧದಲ್ಲಿ ಗೌರವವನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ:
ಸಂಗಾತಿಯ ಬಗ್ಗೆ ಚೆನ್ನಾಗಿ ಮಾತನಾಡಿ: ಇತರರ ಮುಂದೆ ನಿಮ್ಮ ಸಂಗಾತಿಯ ಬಗ್ಗೆ ಧನಾತ್ಮಕವಾಗಿ ಮಾತನಾಡಿ. ಇದು ನಿಮ್ಮ ಸಂಗಾತಿಯ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹಾಗೂ ಸಂಬಂಧದಲ್ಲಿ ಅವರಿಗೆ ವಿಶ್ವಾಸ ಮೂಡುತ್ತದೆ.
ತಮಾಷೆ ಅಥವಾ ಕೀಟಲೆ: ಪ್ರತಿಯೊಬ್ಬರು ತಮ್ಮ ಸಂಬಂಧದಲ್ಲಿ ತಮಾಷೆಯನ್ನು ಹೊಂದಿರುತ್ತಾರೆ. ಆದರೆ ತಮಾಷೆಯ ಮಿತಿಗಳ ಬಗ್ಗೆ ತಿಳಿದಿರಬೇಕು ಹಾಗೂ ಯಾವ ಸಮಯದಲ್ಲಿ ತಮಾಷೆ ಮಾಡಬೇಕು ಎಂಬುವುದರ ಬಗ್ಗೆ ತಿಳಿದಿರಬೇಕು. ಎಲ್ಲಾ ಸಮಯದಲ್ಲೂ ಕೀಟಲೆ ಮಾಡುವುದು ಸಂಗಾತಿಗೆ ನೋವುಂಟು ಮಾಡಬಹುದು ಆದ್ದರಿಂದ ಸಂಗಾತಿಯ ಮನಸ್ಥಿಗೆ ಅನುಗುಣವಾಗಿ ತಮಾಷೆ ಮಾಡಿ.
ಇದನ್ನೂ ಓದಿ;Relationship: ದೂರವಾದ ಸಂಬಂಧವನ್ನು ಸುಧಾರಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ
ತಪ್ಪುಗಳು: ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡಿಯೇ ಮಾಡುತ್ತಾರೆ. ನಾವು ಅದಕ್ಕೆ ಕೋಪ ಮಾಡದೆ ಅದನ್ನು ಮೃದುವಾಗಿ ಸ್ವೀಕರಿಸಲು ಕಲಿಯಬೇಕು. ಹಾಗೂ ಸಂಗಾತಿಯ ತಪ್ಪುಗಳನ್ನು ಕ್ಷಮಿಸಬೇಕು. ನಿಮ್ಮ ಕ್ಷಮೆಯು ನಿಮ್ಮ ಸಂಗಾತಿಯನ್ನು ಇನ್ನೂ ಉತ್ತಮವಾಗಿ ರೂಪಿಸುತ್ತದೆ.
ಅಭಿಪ್ರಾಯಗಳನ್ನು ವ್ಯಕ್ತಪಡಿಸಿ: ನಿಮ್ಮ ಸಂಗಾತಿಯ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಿ. ಹಾಗೂ ಏನೇ ಅಭಿಪ್ರಾಯಗಳಿದ್ದರೂ ಅದನ್ನು ಮುಕ್ತವಾಗಿ ವ್ಯಕ್ತಪಡಿಸಿ. ಇದರಿಂದ ಸಂಬಮಧದಲ್ಲಿ ಯಾವುದೇ ಮುಚ್ಚುಮರೆಗಳು ಇರುವುದಿಲ್ಲ.
ಆಲಿಸಿ: ನಿಮ್ಮ ಸಂಗಾತಿಯು ಯಾವುದೇ ವಿಷಯಗಳನ್ನು ಹೇಳಲು ಪ್ರಯತ್ನಿಸಿದಾಗ ಅವರ ಮಾತುಗಳನ್ನು ಕೇಳಿ. ಜೊತೆಗೆ ಅವರಿಗೆ ಆ ವಿಷಯದಲ್ಲಿ ಬೆಂಬಲವನ್ನು ನೀಡಿ.
ಸಹಾನುಭೂತಿ: ನೀವು ನಿಮ್ಮ ಸಂಗಾತಿಯ ಸೂಕ್ಷ್ಮ ಮನಸ್ಥಿತಿಯ ಬಗ್ಗೆ ತಿಳಿದಿರಬೇಕು. ಹಾಗೂ ಅವರಿಗೆ ನೋವಾಗದಂತೆ ಸಹಾನುಭೂತಿಯಿಂದ ವರ್ತಿಸಬೇಕು.
ಕ್ಷಮೆಯಾಚಿಸಿ: ನೀವು ಏನೇ ತಪ್ಪುಗಳನ್ನು ಮಾಡಿದರೂ, ಅಹಂ ಭಾವನೆಯನ್ನು ಪಕ್ಕಕ್ಕಿಟ್ಟು ಮನಸಾರೆ ಕ್ಷಮೆಯಾಚಿಸಿ. ಇದು ನಿಮ್ಮ ಸಂಬಮಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಮೆಚ್ಚುಗೆ: ಸಂಗಾತಿಯ ಪ್ರತಿಯೊಂದು ಕಾರ್ಯದಲ್ಲೂ ಬೆಂಬಲವಾಗಿ ನಿಂತು ಅವರಿಗೆ ಮೆಚ್ಚುಗೆ ಸೂಚಿಸುವ ಮೂಲಕ ಗೌರವ ನೀಡುವುದು ಮುಖ್ಯವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Thu, 30 March 23