Lifestyle: ಈ ಲಕ್ಷಣಗಳು ಜೀವನಶೈಲಿಯಲ್ಲಿ ಬದಲಾವಣೆ ಬೇಕಿದೆ ಎನ್ನುವುದನ್ನು ಸೂಚಿಸುತ್ತದೆ
ಕೆಲವೊಮ್ಮೆ ಬದುಕಿನಲ್ಲಿ ಜಿಗುಪ್ಸೆಯ ಅನುಭವವಾಗುತ್ತದೆ. ಎಲ್ಲದರಲ್ಲೂ ಆಸಕ್ತಿಯನ್ನು ಕಳೆದುಕೊಂಡು ಎಲ್ಲವನ್ನೂ ತೊರೆಯುವ ಮನಸ್ಥಿತಿ ಮೂಡುತ್ತದೆ. ಆಗ ನಿಮ್ಮ ಜೀವನೋತ್ಸಾಹ ತುಂಬುವ ಕೆಲಸವಾಗಬೇಕು.
ಪ್ರತಿದಿನವೂ ಒಂದೇ ರೀತಿ ಇರುವುದಿಲ್ಲ. ಒಂದಷ್ಟು ಸಮಸ್ಯೆಗಳು, ಒತ್ತಡ, ಉತ್ತರಿಸಲಾಗದ ಸಂದರ್ಭಗಳು ಎದುರಾಗುತ್ತವೆ. ಅವೆಲ್ಲವನ್ನೂ ನಿಭಾಯಿಸುವ ಗುಣವನ್ನು ನೀವು ಹೊಂದಿರಬೇಕು. ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಅದನ್ನು ತಾಳ್ಮೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳುವ ಮನಸ್ಥಿತಿ ಇರಬೇಕು. ದೈಹಿಕ ಅನಾರೋಗ್ಯಕ್ಕಿಂತ ಮಾನಸಿಕ ಸ್ಥಿತಿ ಸರಿಯಾಗಿರುವುದು ಮುಖ್ಯ. ಮನಸ್ಸು ಸರಿಯಾಗಿ ಇದ್ದರೆ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಮನಸ್ಥಿತಿ ಅಥವಾ ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ತಂದುಕೊಂಡರೆ ಸಮಸ್ಯೆಗಳನ್ನು ಬಗೆಹರಿಸುವುದು ಸರಳವಾಗುತ್ತದೆ. ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ನಿಮಗೆ ತಿಳಿಯುವುದಾದರೂ ಹೇಗೇ? ಇಲ್ಲಿದೆ ನೋಡಿ ಮಾಹಿತಿ. ಈ ಲಕ್ಷಣಗಳು, ಈ ರೀತಿಯ ಅನುಭವಗಳು ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಅವಶ್ಯವಾಗಿ ನಿಮ್ಮ ನೆಮ್ಮದಿಯ ಬದುಕಿಗಾಗಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಿದೆ.
ನಿರಂತರ ಒತ್ತಡ ನೀವು ನಿರಂತರವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಿರಿ ಎಂದರೆ ನಿಮ್ಮ ಮನಸ್ಥಿತಿ ಮತ್ತು ದೈಹಿಕ ಆರೋಗ್ಯವೂ ಹದಗೆಡುತ್ತದೆ. ಆದ್ದರಿಂದ ನೀವು ಒತ್ತಡಕ್ಕೆ ಒಳಗಾಗುತ್ತಿದ್ದೀರಿ ಅಥವಾ ದೈನಂದಿನ ಬದುಕು ಒತ್ತಡದಿಂದ ಕೂಡಿದೆ ಎಂದರೆ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದರ್ಥ.
ಬೆಳವಣಿಗೆ ಕುಂಠಿತವಾಗುವುದು ದೈಹಿಕವಾಗಲೀ, ಮಾನಸಿಕವಾಗಲಿ ಬೆಳವಣಿಗೆ ಇರಲೇಬೇಕು. ಪ್ರತಿದಿನ ಅಪ್ಡೇಟ್ ಅಗುತ್ತ ಇರಲೇಬೇಕು. ಕೆಲಸದ ಸ್ಥಳದಲ್ಲಿ ನಿಮಗೆ ಬೇರೆಯಾರೋ ಮುಂದಿನ 5 ವರ್ಷಗಳಲ್ಲಿ ಯಾವ ಸ್ಥಾನದಲ್ಲಿ ಇರಲು ಬಯಸುತ್ತೀರಿ ಎಂದು ಕೇಳುವ ಬದಲು ನೀವೇ ನಿರ್ಧರಿಸಿ. ನಿಮ್ಮ ಯಶಸ್ಸಿಗೇ ನೀವೇ ಕಾರಣರು. ಹೀಗಾಗಿ ಎಲ್ಲಿ ನಿಮ್ಮ ಬೆಳವಣಿಗೆ ಕುಂಠಿತವಾಗುತ್ತದೆಯೋ ಅಂತಹ ಸಂದರ್ಭಗಳಲ್ಲಿ ನಿಮ್ಮ ಬದುಕಿನ ಶೈಲಿ ಬದಲಾಗಬೇಕಿದೆ ಎಂದರ್ಥ.
ನಿರುತ್ಸಾಹ ಎಲ್ಲಾ ದಿನವೂ ಒಂದೇ ರೀತಿ ಇರುವುದಿಲ್ಲ. ಒಂದು ದಿನ ಕೆಟ್ಟದಾಗಿದ್ದರೆ, ಮತ್ತೊಂದು ದಿನ ಸಂತಸದಿಂದ ಕೂಡಿರುತ್ತದೆ. ಮುಳುಗಿದ ಸೂರ್ಯ ಹುಟ್ಟಲೇಬೇಕು ಎನ್ನುವಂತೆ ಯಾವುದೂ ಶಾಶ್ವತವಲ್ಲ, ಎಲ್ಲವೂ,ಎಲ್ಲರೂ ಕಾಲಕ್ಕೆ ತಕ್ಕಹಾಗೆ ಬದಲಾವಣೆಗೊಳ್ಳುತ್ತದೆ. ಹೀಗಾಗಿ ಯಾವುದೋ ಒಂದು ಕೆಟ್ಟ ಅಥವಾ ನೆಗೆಟಿವ್ ಸಂದರ್ಭ ಎದುರಾಯಿತೆಂದು ನಿರುತ್ಸಾಹಗೊಳ್ಳಬೇಡಿ. ಯಾವಾಗ ನಿಮ್ಮ ದಿನನಿತ್ಯದ ಕೆಲಸದಲ್ಲಿ ಅಥವಾ ನೆಚ್ಚಿನ ಕೆಲಸಗಳನ್ನು ಮಾಡಲೂ ನಿರುತ್ಸಾಹ ಉಂಟಾಗುತ್ತದೆಯೋ ಆಗ ಜೀವನಶೈಲಿ ಬದಲಾಗಬೇಕು ಎನ್ನುವುದನ್ನು ಸೂಚಿಸುತ್ತದೆ.
ದಣಿವಾದ ಅನುಭವ ದಣಿವು ಕೇವಲ ದೈಹಿಕ ಮಾತ್ರವಲ್ಲ. ಮಾನಸಿಕ ದಣಿವು ಕೂಡ ಬದುಕಿಗೆ ಅಪಾಯಕಾರಿಯಾಗಿದೆ. ಅಸ್ವಸ್ಥತೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಯಾವುದರಲ್ಲೂ ಅಸಕ್ತಿ ಇರುವುದಿಲ್ಲ ಅಂತಹ ಸನ್ನಿವೇಶಗಳಲ್ಲಿ ನೀವು ಮಾಡುವ ಕೆಲಸದಲ್ಲಿ ಅಥವಾ ಬದುಕಿನಲ್ಲಿ ಬದಲಾವಣೆಯನ್ನು ತಂದುಕೊಳ್ಳಬೇಕಾಗುತ್ತದೆ.
ಆಸಕ್ತಿ ಕಳೆದುಕೊಂಡ ಭಾವ ಕೆಲವೊಮ್ಮೆ ಬದುಕಿನಲ್ಲಿ ಜಿಗುಪ್ಸೆಯ ಅನುಭವವಾಗುತ್ತದೆ. ಎಲ್ಲದರಲ್ಲೂ ಆಸಕ್ತಿಯನ್ನು ಕಳೆದುಕೊಂಡು ಎಲ್ಲವನ್ನೂ ತೊರೆಯುವ ಮನಸ್ಥಿತಿ ಮೂಡುತ್ತದೆ. ಆಗ ನಿಮ್ಮ ಜೀವನೋತ್ಸಾಹ ತುಂಬುವ ಕೆಲಸವಾಗಬೇಕು. ಆಸಕ್ತಿ ಕಳೆದುಕೊಂಡ ಅನುಭವ ನಿಮಗೆ ಆಗುತ್ತಿದ್ದರೆ ಜೀವನಶೈಲಿಯಲ್ಲಿ ಹೊಸದಾದ ಅಭ್ಯಾಸವನ್ನು ಅಳವಡಿಸಿಕೊಳ್ಳಿ. ಬದಲಾವಣೆಯಾದರೆ ಜೀವನದಲ್ಲಿಯೂ ಆಸಕ್ತಿ ಮೂಡುತ್ತದೆ.
ಇದನ್ನೂ ಓದಿ:
ಹೊಸದಾಗಿ ಕಿವಿಗೆ ಆಭರಣ ಚುಚ್ಚಿಸಿಕೊಂಡಾಗ ಆಗುವ ನೋವು ನಿವಾರಿಸಲು ಹೀಗೆ ಮಾಡಿ
Published On - 11:38 am, Fri, 21 January 22