Ugadi 2025:ಯುಗಾದಿ ಹಬ್ಬಕ್ಕೆ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸಲು ಇಲ್ಲಿದೆ ಟಿಪ್ಸ್
ಹಬ್ಬಗಳು ಎಂದರೆ ಎಲ್ಲರ ಮನೆಯಲ್ಲಿ ಸಂಭ್ರಮ ಸಡಗರವು ಮನೆ ಮಾಡುತ್ತದೆ. ಅದರಲ್ಲಿಯೂ ಈ ಯುಗಾದಿ ಹಬ್ಬವು ಹಿಂದೂಗಳ ಪಾಲಿಗೆ ಹೊಸ ವರ್ಷದ ಆರಂಭ. ಯುಗಾದಿ ಬಂತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ ಮನೆ ಮಾಡುತ್ತದೆ. ಈ ಬಾರಿ ಯುಗಾದಿ ಹಬ್ಬವನ್ನು ಮಾರ್ಚ್ 30 ರಂದು ಆಚರಿಸಲಾಗುತ್ತಿದ್ದು, ಈ ದಿನದಿಂದ ಭಾರತೀಯರಿಗೆ ಹಬ್ಬಗಳ ಸುಗ್ಗಿಯೇ ಶುರುವಾಗುತ್ತದೆ. ಹಬ್ಬದ ರಂಗು ಹೆಚ್ಚಾಗಲು ಅಲಂಕಾರವಿಲ್ಲದಿದ್ದರೆ ಹೇಗೆ ಅಲ್ಲವೇ. ಮನೆಯ ಹೆಂಗಳೆಯರು ಹಬ್ಬಕ್ಕೆ ತಯಾರಿ ನಡೆಸುತ್ತಿದ್ದು, ಮನೆಯ ಅಲಂಕಾರ ಹೇಗೆ ಮಾಡುವುದೆಂದು ಯೋಚಿಸುತ್ತಿದ್ದರೆ ಇಲ್ಲಿದೆ ಕೆಲವು ಟಿಪ್ಸ್.

ಸಾಂದರ್ಭಿಕ ಚಿತ್ರ
ಯುಗ ಯುಗಾದಿ ಕಳೆದರೂ ಯುಗಾದಿ (Ugadi) ಮರಳಿ ಬರುತ್ತಿದೆ ಈ ಹಾಡು ಕಿವಿಗೆ ಎಷ್ಟು ಇಂಪು, ಯುಗಾದಿ ಹಬ್ಬವು ಭಾರತೀಯರಿಗೆ ಅಷ್ಟೇ ವಿಶೇಷವಾದದ್ದು. ಭಾರತೀಯ ಪಂಚಾಗದ ಪ್ರಕಾರ ಹೊಸ ವರುಷ ಆರಂಭವಾಗುವುದೇ ಯುಗಾದಿಯ ದಿನದಂದು ಎನ್ನಬಹುದು. ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಹಬ್ಬಗಳಲ್ಲಿ ಯುಗಾದಿ ಕೂಡ ಒಂದು. ಹಬ್ಬದ ಕಳೆ ಬರಬೇಕಾದರೆ ಅಲಂಕಾರ (Decoration) ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಮಾರ್ಚ್ 30 ರಂದು ಆಚರಿಸಲಾಗುವ ಯುಗಾದಿ ಸಂಭ್ರಮಕ್ಕಾಗಿ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸಲು ಪ್ಲ್ಯಾನ್ ಮಾಡಿಕೊಂಡಿದ್ದರೆ ಈ ಕೆಲವು ಅಲಂಕಾರಿಕ ಐಡಿಯಾ (Decoration Ideas) ಗಳು ಖಂಡಿತ ಉಪಯೋಗವಾಗುತ್ತದೆ.
ಹಬ್ಬದ ದಿನ ಮನೆಯ ಅಲಂಕಾರಕ್ಕೆ ಇಲ್ಲಿದೆ ಟಿಪ್ಸ್
- ಮನೆಯ ಮುಂಭಾಗದಲ್ಲಿ ರಂಗೋಲಿ ಡಿಸೈನ್ ಇರಲಿ : ಹಬ್ಬದ ರಂಗು ಹೆಚ್ಚಿಸುವುದೇ ಬಣ್ಣ ಬಣ್ಣದ ಸಾಂಪ್ರದಾಯಿಕ ರಂಗೋಲಿ ವಿನ್ಯಾಸಗಳು. ರಂಗೋಲಿ ಬಿಡಿಸುವುದು ಕಷ್ಟ ಎನ್ನುವವರು ಫ್ಲೋರ್ ಆರ್ಟ್ ಸ್ಟೆನ್ಸಿಲ್ ಗಳನ್ನು ಖರೀದಿಸಬಹುದು. ಮಾರುಕಟ್ಟೆಯಲ್ಲಿ ಹಲವು ರೀತಿಯ ಫ್ಲೋರ್ ಆರ್ಟ್ ಸ್ಟೆನ್ಸಿಲ್ ಗಳು ಲಭ್ಯವಿದೆ. ಬೇರೆಬೇರೆ ಬಣ್ಣಗಳಿಂದ ಈ ಸ್ಟೆನ್ಸಿಲ್ ಅಥವಾ ರಂಗೋಲಿ ಆಕೃತಿಯನ್ನು ತುಂಬಿಸಿದರೆ ಅತ್ಯುತ್ತಮವಾದ ರಂಗೋಲಿ ವಿನ್ಯಾಸ ಸಿದ್ಧವಾಗುತ್ತದೆ. ಇದಕ್ಕೆ ಹೂವಿನ ದಳಗಳಿಂದ ಸಿಂಗರಿಸಬಹುದು.
- ಮಾವಿನ ಎಲೆ ಮತ್ತು ಬೇವಿನ ಎಲೆಗಳಿಂದ ಅಲಂಕರಿಸಿ : ಹೊಸ ವರ್ಷದ ಮೊದಲ ಹಬ್ಬ ಯುಗಾದಿಗೆ ಪ್ರಕೃತಿಯು ಸಜ್ಜಾಗಿರುತ್ತದೆ. ಅದರಲ್ಲಿ ಹಬ್ಬಕ್ಕೆ ಮಾವಿನ ಎಲೆಯ ತೋರಣವಿಲ್ಲದೇ ಹೋದರೆ ಹೇಗೆ ಹೇಳಿ. ಹೀಗಾಗಿ ಮನೆಯ ಮುಂಭಾಗದ ಅಲಂಕಾರಕ್ಕಾಗಿ ಮಾವಿನ ಎಲೆ ಹಾಗೂ ಬೇವಿನ ಎಲೆ ಯನ್ನು ಬಳಸಿ, ಇದು ಧನಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ.
- ಹೂವುಗಳು ಹಾಗೂ ಲೈಟಿಂಗ್ ನಿಂದ ಮನೆ ಅಲಂಕರಿಸಿ : ಹಬ್ಬದ ದಿನ ಮನೆಯನ್ನು ಹೂವುಗಳಿಂದ ಅಲಂಕರಿಸದೆ ಇದ್ದರೆ ಹಬ್ಬವೇ ಅಪೂರ್ಣ ಎನಿಸುತ್ತದೆ. ಮನೆಯ ಪ್ರವೇಶದ್ವಾರ ಪೂಜಾ ಕೋಣೆಯನ್ನು ಅಲಂಕರಿಸಲು ಮಾರಿಗೋಲ್ಡ್ ಹಾಗೂ ಇನ್ನಿತರ ಪ್ಲಾಸ್ಟಿಕ್ ಹೂವುಗಳನ್ನು ಬಳಸಬಹುದು. ಅದಲ್ಲದೇ, ದೇವರ ಮೂರ್ತಿಗೆ ಹೂವಿನ ಮಾಲೆ, ಬಿಡಿ ಹೂಗಳಿಂದ ಅಲಂಕರಿಸಿ. ಪ್ರವೇಶದ್ವಾರ ಹಾಗೂ ದೇವರಕೋಣೆಯ ಬಾಗಿಲನ್ನು ಜಗಮಗಿಸುವ ಲೈಟಿಂಗ್ ನಿಂದ ಅಲಂಕರಿಸಿದರೆ ಮನೆಯಲ್ಲಿ ಹಬ್ಬ ವಾತಾವರಣವು ಸೃಷ್ಟಿಯಾಗುತ್ತದೆ.
- ಆಕರ್ಷಕ ಬಾಗಿಲಿನ ಹ್ಯಾಂಗಿಂಗ್ ಇರಲಿ : ಹಬ್ಬದ ದಿನ ಮನೆಯ ಬಾಗಿಲನ್ನು ಅಲಂಕರಿಸುವುದು ಬಹಳ ಮುಖ್ಯ. ಹೀಗಾಗಿ ಡೋರ್ ಹ್ಯಾಂಗಿಂಗ್ ಗಳನ್ನು ಬಳಸುವುದರಿಂದ ಮನೆಯ ಅಂದವು ಇನ್ನಷ್ಟು ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ಲೋಹ, ಬಟ್ಟೆ, ಮರದ ವಿಶೇಷ ರೀತಿಯ ಸಾಂಪ್ರದಾಯಿಕ ಹ್ಯಾಂಗಿಂಗ್ ಗಳು ಸಿಗುತ್ತದೆ. ಇದನ್ನು ಮನೆಯ ಮುಂಭಾಗದಲ್ಲಿ ಅಥವಾ ಬಾಗಿಲಿಗೆ ನೇತು ಹಾಕಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ