Hug Day 2022 : ಭಿಡೆಯಿಲ್ಲದೆ ಪ್ರೀತಿಯ ಅಪ್ಪುಗೆ ನೀಡಿ; ಪ್ರೇಮದ ರಾಗಕ್ಕೆ ನಾಂದಿ ಹಾಡಿ
Valentine’s Week 2022:ಇಂದು ಫೆ.12 ವ್ಯಾಲೆಂಟೈನ್ಸ್ ವೀಕ್ನ 5 ನೇ ದಿನ. ಅದುವೇ ಹಗ್ ಡೇ. ರೋಸ್ ಡೇ, ಚಾಕೋಲೇಟ್ ಡೇ, ಟೆಡ್ಡಿ ಡೆ, ಪ್ರಾಮಿಸ್ ಡೇ ನಂತರ ಬರುವುದು ಹಗ್ ಡೇ. ಪ್ರೀತಿಯ ಅಪ್ಪುಗೆಯೊಂದಿಗೆ ಭಾವನೆ ಹಂಚಿಕೊಳ್ಳುವ ದಿನ.
ಒಂದು ಪ್ರೀತಿಯ ಅಪ್ಪುಗೆ ಸಾವಿರ ನೋವುಗಳಿಗೆ ಮದ್ದು. ಹೌದು ಪ್ರೀತಿಸಿದ ಜೀವದ ಒಂದು ಅಪ್ಪುಗೆ ಬದುಕಿನೆಡೆಗೆ ಹೊಸ ಭರವಸೆ, ಮನ ಪುಟಿದೇಳುವಷ್ಟು ಸಂತಸ ಮೂಡುತ್ತದೆ. ಇಂದು ಫೆ.12 ವ್ಯಾಲೆಂಟೈನ್ಸ್ ವೀಕ್ನ (Valentine’s Week) 5 ನೇ ದಿನ. ಅದುವೇ ಹಗ್ ಡೇ (Hug Day). ರೋಸ್ ಡೇ, ಚಾಕೋಲೇಟ್ ಡೇ, ಟೆಡ್ಡಿ ಡೆ, ಪ್ರಾಮಿಸ್ ಡೇ ನಂತರ ಬರುವುದು ಹಗ್ ಡೇ. ಪ್ರೀತಿಯ ಅಪ್ಪುಗೆಯೊಂದಿಗೆ ಭಾವನೆ ಹಂಚಿಕೊಳ್ಳುವ ದಿನ. ಕೆಲವೊಮ್ಮೆ ಅತೀವ ಸಂತಸವಾದಾಗ ಅಥವಾ ಅತೀವ ದುಃಖವಾದಾಗ ಪ್ರೀತಿ (Love) ಪಾತ್ರರನ್ನು ಅಪ್ಪಿಕೊಂಡಾಗ ಸಿಗುವ ಸಂತಸ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತಿರುತ್ತದೆ. ಒಂದು ಬಿಗಿ ಅಪ್ಪುಗೆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಭಾವನೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗ ಅಪ್ಪುಗೆ ಎಂತಲೂ ಹೇಳಬಹದು.
ಪ್ರೀತಿಯೇ ಹಾಗೆ ಹೊಸ ಅನುಭವಗಳನ್ನು ನೀಡಿ, ಬದುಕಿನ ಇನ್ನೊಂದು ಮಹತ್ತರ ಘಟ್ಟಕ್ಕೆ ಹೊಸ್ತಿಲಾಗಿರುತ್ತದೆ. ವ್ಯಾಲೆಂಟೈನ್ಸ್ ಡೇ ಗಿಂತ 2 ದಿನ ಮುಂಚೆ ಆಚರಿಸುವ ಈ ಹಗ್ ಡೇ ಪ್ರತೀ ಪ್ರೇಮಿಯ ಪಾಲಿನ ವಿಶೇಷ ದಿನ, ಒಂದು ಅಪ್ಪುಗೆ ನೀಡಿ ನಾನಿರುವೆ ನಿನ್ನೊಂದಿಗೆ ಎಂದು ಸಂತೈಸುವ ಭಾವ ಅನನ್ಯ.
ಹಗ್ ಡೇ ಮಹತ್ವ: ಪ್ರೀತಿಯ ಸ್ಪರ್ಶ ಪ್ರತೀ ವ್ಯಕ್ತಿಯಲ್ಲಿ ಸಂತಸದ ಭಾವನೆಯನ್ನು ಮೂಡಿಸುತ್ತದೆ. ಮೆದುಳು, ನರಗಳಲ್ಲಿ ಖುಷಿಯ ಹಾರ್ಮೋನುಗಳು ಸಂಚರಿಸುತ್ತವೆ. ಹೀಗಾಗಿಯೇ ಹಗ್ ಡೇ ಪ್ರತೀ ಪ್ರೇಮಿಗಳ ಪಾಲಿಗೆ ಮಹತ್ವದ ದಿನ. ತನ್ನನ್ನು ಪ್ರೀತಿಸುವ ಜೀವ ಪ್ರೀತಿ ನೀಡಿದಷ್ಟೂ ಸಾಲದು. ಹೀಗಾಗಿ ಹಗ್ ಡೇ ಕೂಡ ಅದರ ಪಟ್ಟಿಗೆ ಸಲ್ಲುತ್ತದೆ. ಸಂಬಂಧಗಳನ್ನು ಗಟ್ಟಿಯಾಗಿಸಲು, ಭಾವನೆಗಳನ್ನು ಬೆಸೆಯಲು ಅಪ್ಪುಗೆ ಸಹಕಾರಿ. ಪ್ರೀತಿಯ ಪಯಣವನ್ನು ಇನ್ನಷ್ಟು ಬಲವಾಗಿಸಲು, ಜೀವನದ ದೋಣಿಯಲ್ಲಿ ಸವಿನೆನಪುಗಳ ಬುತ್ತಿಗೆ ಮತ್ತೊಂದಿಷ್ಟು ಸಿಹಿ ಕ್ಷಣಗಳನ್ನು ಸೇರಿಸಿಕೊಳ್ಳಲು ಹಗ್ ಡೇ ಪ್ರೇಮಿಗಳ ಪಾಲಿಗೆ ಒಂದು ಅಮೂಲ್ಯ ದಿನ.
ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವಕ್ಕೆ ಒಂದು ಪ್ರೀತಿಯ ಅಪ್ಪುಗೆ ನೀಡಬಿಡಿ. ಪ್ರೀತಿ ಇನ್ನಷ್ಡು ಗಟ್ಟಿಯಾಗಿ ಖುಷಿಯು ಹೆಚ್ಚುತ್ತದೆ. ಒಂದು ಪ್ರೀತಿಯ ಹಗ್ನೊಂದಿಗೆ ಹಗ್ ಡೇ ಆರಂಭಿಸಿ. ಪ್ರೀತಿಯ ಜೀವವನ್ನು ಸಂತಸದಿಂದಿಡಿ. ನೀವು ನಿಜವಾಗಿಯೂ ಒಬ್ಬರನ್ನು ಪ್ರೀತಿಸುತ್ತಿದ್ದರೆ ಮನಃಪೂರ್ವಕವಾಗಿ ಆಚರಿಸಿ. ಹಗ್ ಡೇ ಆಚರಣೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ ಬೇಡ.
ಇದನ್ನೂ ಓದಿ: Promise Day 2022: ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್ಗಳನ್ನು ಮಾಡಿ: ಬಂಧ ಗಟ್ಟಿಯಾಗಿಸಿಕೊಳ್ಳಿ