World Art Day 2024: ವಿಶ್ವ ಕಲಾ ದಿನ; ಸ್ಥಳೀಯ ಕಲಾವಿದರಿಗೆ ಸಿಗಲಿ ಎಲ್ಲರ ಬೆಂಬಲ

| Updated By: ಅಕ್ಷತಾ ವರ್ಕಾಡಿ

Updated on: Apr 14, 2024 | 8:30 PM

ಕಲೆಯ ಇತಿಹಾಸವನ್ನು ತಿಳಿಯುವುದರ ಜೊತೆಗೆ ಸ್ಮರಿಸಲು ಮತ್ತು ಕಲಾವಿದರು ನೀಡಿದಂತಹ ಕೊಡುಗೆಗಳನ್ನು ಗೌರವಿಸಲು ಪ್ರತೀ ವರ್ಷ ಎ. 15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸಾರ್ವಕಾಲಿಕ ಶ್ರೇಷ್ಠ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಪ್ರಸಿದ್ಧ ಕಲಾವಿದ ಲಿಯೊನಾರ್ಡೊ ಡಾ ವಿಂಚಿ ಅವರ ಜನ್ಮದಿನವಾಗಿದೆ.

World Art Day 2024: ವಿಶ್ವ ಕಲಾ ದಿನ; ಸ್ಥಳೀಯ ಕಲಾವಿದರಿಗೆ ಸಿಗಲಿ ಎಲ್ಲರ ಬೆಂಬಲ
World Art Day 2024
Follow us on

ಚಿತ್ರಕಲೆ ಮಾನವನ ಉಗಮದೊಂದಿಗೆ ಬೆಳೆದು ಬಂದಿದೆ. ಇಂದಿಗೂ ಅಕ್ಷರಗಳ ಮೂಲಕ ಹೇಳಲಾಗದ್ದನ್ನು ಚಿತ್ರಗಳಲ್ಲಿ ಹೇಳಲಾಗುತ್ತದೆ. ಹಾಗಾಗಿಯೇ ಇಂತಹ ಕಲೆಯ ಇತಿಹಾಸವನ್ನು ತಿಳಿಯುವುದರ ಜೊತೆಗೆ ಸ್ಮರಿಸಲು ಮತ್ತು ಕಲಾವಿದರು ನೀಡಿದಂತಹ ಕೊಡುಗೆಗಳನ್ನು ಗೌರವಿಸಲು ಪ್ರತೀ ವರ್ಷ ಎ. 15ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸಾರ್ವಕಾಲಿಕ ಶ್ರೇಷ್ಠ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಪ್ರಸಿದ್ಧ ಕಲಾವಿದ ಲಿಯೊನಾರ್ಡೊ ಡಾ ವಿಂಚಿ ಅವರ ಜನ್ಮದಿನವಾಗಿದೆ.

ಯಾಕಾಗಿ ವಿಶ್ವ ಕಲಾ ದಿನವನ್ನು ಆಚರಣೆ ಮಾಡಬೇಕು?

ವಿಶ್ವ ಕಲಾ ದಿನವು ಕಲಾತ್ಮಕ ಸೃಷ್ಟಿ ಮತ್ತು ಸಮಾಜದ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ, ವಿಶ್ವಾದ್ಯಂತ ಕಲೆಯ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುತ್ತದೆ. ಯುನೆಸ್ಕೋ ಕೂಡ 2019 ರಲ್ಲಿ ತನ್ನ ಸಾಮಾನ್ಯ ಸಮ್ಮೇಳನದ 40 ನೇ ಅಧಿವೇಶನದಲ್ಲಿ ಈ ದಿನವನ್ನು ಘೋಷಿಸಿತು. ಕಲಾವಿದರು ಕಲೆಗೆ ನೀಡಿದಂತಹ ಕೊಡುಗೆಗಳನ್ನು ಗೌರವಿಸಲು ಮತ್ತು ನಮ್ಮ ಜೀವನದಲ್ಲಿ ಕಲೆಯ ಮಹತ್ವವನ್ನು ಅರಿತುಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಕಲಾ ದಿನದ ಇತಿಹಾಸ:

2012 ರಲ್ಲಿ ಮೊದಲ ಬಾರಿಗೆ ವಿಶ್ವ ಕಲಾ ದಿನವನ್ನು ಆಚರಿಸಲಾಯಿತು, ಪ್ರಸಿದ್ಧ ಕಲಾವಿದ ಲಿಯನಾರ್ಡೊ ಡ ವಿಂಚಿ ಅವರ ಸ್ಮರಣಾರ್ಥ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಅವರ ‘ಮೊನಾಲಿಸಾ’ ಕಲಾಕೃತಿ ಬಹಳ ಹೆಸರುವಾಸಿಯಾಗಿದೆ. ಈ ವರ್ಣಚಿತ್ರವನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ಚಿತ್ರಕಲೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಇಲ್ಲಿ ಇನ್ನು ಮುಂದೆ ಪಾಪ್, ಡಿಸ್ಕೋ, ರಾಕ್ ಮ್ಯೂಸಿಕ್​​ಗಳಿಗೆ ಅವಕಾಶವಿಲ್ಲ; ಸರ್ಕಾರ ಘೋಷಣೆ

ವಿಶ್ವ ಕಲಾ ದಿನದ ಮಹತ್ವ:

ವಿಶ್ವ ಕಲಾ ದಿನವನ್ನು ಆಚರಿಸುತ್ತಿರುವುದರಿಂದ, ಜನರು ಈ ಬಗ್ಗೆ ಪರಸ್ಪರ ಚರ್ಚಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಒಂದು ಅವಕಾಶ ದೊರೆಯುತ್ತದೆ. ಅಲ್ಲದೆ, ಈ ದಿನವು ಕಲಾವಿದರಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ಮತ್ತು ಅವರ ಕಲೆಗೆ ಸ್ಪೂರ್ತಿ ನೀಡಿದಂತಾಗುತ್ತದೆ. ಇದೆಲ್ಲದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ವಿಶ್ವ ಕಲಾ ದಿನದ ಆಚರಣೆ ಹೇಗೆ?

ಈ ದಿನವನ್ನು ಸ್ಮರಿಸಲು ಮತ್ತು ಅವರು ಮಾಡಿದಂತಹ ಕೆಲಸವನ್ನು ಗೌರವಿಸಲು ವಿಶ್ವದಾದ್ಯಂತ ಚರ್ಚೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಂತಹ ಹಲವಾರು ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಭಾರತೀಯ ಕಲೆಯ ಸೂಕ್ಷ್ಮ ಕಲಾ ಶೈಲಿಗಳಾದ ಕಾಂಗ್ರಾ ಶೈಲಿ, ಮೈಸೂರು ಶೈಲಿಯ ಉತ್ಕೃಷ್ಠ ಚಿತ್ರಗಳು, ತಂಜಾವೂರು ಶೈಲಿ, ಗ್ರಾಮೀಣ ಜನಪದರ ಶೈಲಿಗಳಾದ ಮಧುಬನಿ, ವಾರ್ಲಿ, ಪಟ್ಟಾ, ಕಾವಿ ಕಲೆ ಮುಂತಾದ ಚಿತ್ರಗಳ ಸೊಗಸನ್ನು ಕಾಣುವ ಮೂಲಕ ನಾವು ವಿಶ್ವ ಕಲಾ ದಿನವನ್ನು ಸಂಭ್ರಮಿಸಬಹುದಾಗಿದೆ.

ಕಲಾಕೃತಿಗಳನ್ನು ಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದಾಗ ಮಾತ್ರ ಕಲೆ ಬೆಳೆಯುತ್ತದೆ. ಜೊತೆಗೆ ಎಲೆ ಮರೆಯ ಕಾಯಿಯಂತೆ ಪ್ರಚಾರ ಬಯಸದೆ ತೆರೆಮರೆಯಲ್ಲಿ ದುಡಿಯುತ್ತಿರುವ ಅನೇಕ ಸ್ಥಳೀಯ, ಸೃಜನಶೀಲ ಕಲಾವಿದರನ್ನು ನಾವು ಗುರುತಿಸಿ ಅವರ ಕಲಾಕೃತಿಗಳ ಪ್ರದರ್ಶನ ನಡೆಸಿದಾಗ ಅವರ ಪ್ರತಿಭೆ ಸಮಾಜಕ್ಕೆ ತಿಳಿಯುತ್ತದೆ ಅಲ್ಲದೆ ಅವರನ್ನು ನಾವು ಗೌರವಿಸಿದಂತಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ