World Family Day 2025: ಕುಟುಂಬದೊಂದಿಗೆ ಕೂಡಿ ಬಾಳಿದರೆ ಸ್ವರ್ಗ ಸುಖ; ವಿಶ್ವ ಕುಟುಂಬ ದಿನದ ಪ್ರಾಮುಖ್ಯತೆ ತಿಳಿಯಿರಿ
ಕುಟುಂಬ ಎನ್ನುವುದು ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ. ಕುಟುಂಬ ಸದಸ್ಯರು ತೋರಿಸುವ ಪ್ರೀತಿ, ಕಾಳಜಿ, ಕುಟುಂಬ ಸದಸ್ಯರು ಕಲಿಸಿಕೊಡುವ ಜೀವನ ಪಾಠ ಇವೆಲ್ಲವೂ ವ್ಯಕ್ತಿಯನ್ನು ಪರಿಪೂರ್ಣವಾಗಿಸುತ್ತದೆ. ಒಟ್ಟಾರೆಯಾಗಿ ಕುಟುಂಬದೊಂದಿಗೆ ಬಾಳುವುದು ಸ್ವರ್ಗ ಸುಖ ಅಂತಾನೇ ಹೇಳಬಹುದು. ಆದರೆ ಇಂದು ಅವಿಭಕ್ತ ಕುಟುಂಬಗಳು ಕಾಣಿಸಿಗುವುದೇ ಅಪರೂಪವಾಗಿದೆ. ಹಾಗಾಗಿ ಜನರಿಗೆ ಕುಟುಂಬದ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಮೇ 15 ರಂದು ವಿಶ್ವ ಕುಟುಂಬ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಕುಟುಂಬ (Family) ಸಮಾಜ ವ್ಯವಸ್ಥೆಯ ಬಹುಮುಖ್ಯ ಅಂಗ ಅಂತಾನೇ ಹೇಳಬಹುದು. ಕುಟುಂಬವಿಲ್ಲದೆ ಮನುಷ್ಯನ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ (Indian culture) ಕುಟುಂಬಕ್ಕೆ ಅದರದ್ದೇ ಆದ ಪ್ರಾಮುಖ್ಯತೆಯಿದೆ. ಹಿಂದೆಲ್ಲಾ ಎಲ್ಲಿ ನೋಡಿದ್ರೂ ತುಂಬು ಕುಟುಂಬಗಳು ಕಾಣಿಸುತ್ತಿದ್ದವು. ಆದರೆ ಇಂದು ಆಧುನಿಕ ಜೀವನಕ್ಕೆ ಹೊಂದಿಕೊಂಡಂತೆ ಕುಟುಂಬಗಳು ಸಣ್ಣದಾಗುತ್ತಾ ಹೋಗುತ್ತಿದ್ದು, ಜನ ವಿಭಕ್ತ ಕುಟುಂಬಗಳಲ್ಲಿಯೇ ವಾವಸಿಸಲು ಇಷ್ಟಪಡುತ್ತಿದ್ದಾರೆ. ಇಂದಿನ ಪೀಳಿಗೆಗೆ ತುಂಬು ಕುಟುಂಬದಲ್ಲಿ ಕೂಡಿ ಬಾಳುವ ಸ್ವರ್ಗ ಸುಖದ ಅನುಭವವೇ ಇಲ್ಲ, ಕೆಲವರಂತೂ ಕುಟುಂಬಕ್ಕೆ ಪ್ರಾಮುಖ್ಯತೆಯನ್ನೇ ಕೊಡುವುದಿಲ್ಲ. ಹೀಗಾಗಿ ಜನರಿಗೆ ಕುಟುಂಬದ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ತಿಳಿಸಲೆಂದು ಪ್ರತಿವರ್ಷ ಮೇ 15 ರಂದು ವಿಶ್ವ ಕುಟುಂಬ (World Family Day) ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಕುಟುಂಬ ದಿನದ ಇತಿಹಾಸ:
ವಿಶ್ವ ಕುಟುಂಬ ದಿನವನ್ನು ಮೊದಲ ಬಾರಿಗೆ 1994 ರಲ್ಲಿ ಆಚರಿಸಲಾಯಿತು, ಆದರೆ ಅದಕ್ಕೆ ಅಡಿಪಾಯವನ್ನು 1989 ರಲ್ಲಿ ಹಾಕಲಾಗಿತ್ತು. 1989 ರಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಭೆಯಲ್ಲಿ ಕುಟುಂಬದ ಮಹತ್ವದ ಬಗ್ಗೆ ಚರ್ಚಿಸಲಾಯಿತು ಮತ್ತು ಅದಕ್ಕಾಗಿ ಒಂದು ದಿನವನ್ನು ಮೀಸಲಿಡಲು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಹೌದು ಕುಟುಂಬಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು, ಕುಟುಂಬ ಒಗ್ಗಟ್ಟಿನ ಆದರ್ಶಗಳ ಬಗ್ಗೆ ಜನರಿಗೆ ತಿಳಿಸಲು, ಕುಟುಂಬಗಳನ್ನು ಬಲಪಡಿಸಲು ಈ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ನಂತರ 1993 ರಲ್ಲಿ, ಯುಎನ್‌ಜಿಎ ಈ ನಿರ್ಣಯವನ್ನು ಅಂಗೀಕರಿಸಿ ಮೇ 15 ರಂದು ಕುಟುಂಬ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ಮೇ 15 ರಂದು ವಿಶ್ವ ಕುಟುಂಬ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಒಂದೊಂಡೆ 2 ವರ್ಷದ ಮಗು, ಇನ್ನೊಂದೆಡೆ ಗರ್ಭಿಣಿ, ಮತ್ತೊಂದೆಡೆ ಕಾರ್ಗಿಲ್ ಯುದ್ಧ; ಇದು ಮಹಿಳಾ ಸೇನಾಧಿಕಾರಿಯ ಕಥೆ
ವಿಶ್ವ ಕುಟುಂಬ ದಿನದ ಉದ್ದೇಶ ಮತ್ತು ಮಹತ್ವ:
ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಕುಟುಂಬಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ, ಆರ್ಥಿಕ ಅಂಶಗಳ ಬಗ್ಗೆ ತಿಳಿಸುವುದು, ಸಂಬಂಧವನ್ನು ಬಲಪಡಿಸುವಲ್ಲಿ ಕುಟುಂಬದ ಪಾತ್ರದ ಬಗ್ಗೆ ತಿಳಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.
ಮುಖ್ಯವಾಗಿ ಈ ದಿನ ಜನರಿಗೆ ಕುಟುಂಬದ ಮಹತ್ವವನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ. ಸಂತೋಷದಾಯಕ ಮತ್ತು ಆರೋಗ್ಯಕರ ಕುಟುಂಬವು ಒಬ್ಬ ವ್ಯಕ್ತಿಯ ಏಳಿಗೆಯಲ್ಲಿ ವಹಿಸುವ ಪಾತ್ರ ಮತ್ತು ಉತ್ತಮ ಸಮಾಜವನ್ನು ನಿರ್ಮಿಸುವಲ್ಲಿ ಕುಟುಂಬ ವಹಿಸುವ ಪಾತ್ರವನ್ನು ಈ ದಿನ ತಿಳಿಸಲಾಗುತ್ತದೆ. ಈ ವಿಶೇಷ ದಿನ ಒಂದು ಕುಟುಂಬವು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರೀತಿಯಿಂದ ಒಟ್ಟಿಗೆ ಬದುಕಲು ಪ್ರೇರೇಪಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








