ದಿನನಿತ್ಯದ ಆಹಾರಗಳಲ್ಲಿ ಬಳಸಲಾಗುವ ಈ ಬೇಳೆ ಕಾಳುಗಳ ಪ್ರಯೋಜನವು ಅಷ್ಟಿಷ್ಟಲ್ಲ. ಹಿಂದಿನಿಂದಲೂ ದ್ವಿದಳ ಧಾನ್ಯಗಳನ್ನು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತ ಬರಲಾಗುತ್ತಿದೆ. ಆರೋಗ್ಯ ವೃದ್ಧಿಯಲ್ಲಿ ಈ ಬೇಳೆಕಾಳುಗಳನ್ನು ಮೀರಿಸುವ ಮತ್ತೊಂದು ಆಹಾರವಿಲ್ಲ. ಈ ದ್ವಿದಳ ಧಾನ್ಯಗಳಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿದ್ದು, ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಸೂಪರ್ ಫುಡ್ ಎಂದೆನಿಸಿಕೊಂಡಿರುವ ಈ ಬೇಳೆಕಾಳುಗಳಲ್ಲಿ ವಿಶಿಷ್ಟ ಆರೋಗ್ಯ ಪ್ರಯೋಜನಗಳು ಅಡಗಿದೆ. ಬೇಳೆಕಾಳುಗಳನ್ನುಹೆಚ್ಚಾಗಿ ಬಳಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ.
ಪ್ರತಿಯೊಬ್ಬ ನಾಗರೀಕರಿಗೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಈ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದಾಗಿ 68ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ 2016 ರಲ್ಲಿ “ಅಂತರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷ”ವನ್ನಾಗಿ ಆಚರಿಸಲಾಯಿತು. ವಿಶ್ವಸಂಸ್ಥೆಯ ಸಹ ಸಂಸ್ಥೆಯಾದ ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆ ಈ ವರ್ಷಾಚರಣೆಯ ಮುಂದಾಳತ್ವ ವಹಿಸಿತು. ಹೀಗಾಗಿ ಪ್ರತಿ ವರ್ಷ ಫೆಬ್ರವರಿ 10ನ್ನು ಅಂತರಾಷ್ಟ್ರೀಯ ದ್ವಿದಳ ಧಾನ್ಯಗಳ ದಿನವಾಗಿ ಆಚರಿಸಲಾಗುತ್ತಿದೆ. ಕಳೆದ 2019ರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ.
ಆರೋಗ್ಯಕ್ಕೆ ಪೌಷ್ಟಿಕಾಂಶಗಳನ್ನು ನೀಡುವ ಈ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿಸುವುದು, ದ್ವಿದಳ ಧಾನ್ಯಗಳಲ್ಲಿನ ಪೌಷ್ಠಿಕಾಂಶಗಳ ಉಪಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನವನ್ನು ಆಚರಿಸುವ ಮುಖೇನವಾಗಿ ಜನರು ದಿನನಿತ್ಯ ಬಳಸುವ ಆಹಾರದಲ್ಲಿ ದ್ವಿದಳ ಧಾನ್ಯಗಳ ಬಳಕೆ ಹೆಚ್ಚಿಸುವುದಾಗಿದೆ. ಅದಲ್ಲದೇ ಕೃಷಿಯಲ್ಲಿ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿ ಹೇಳುವ ಮೂಲಕ ದ್ವಿಧಾನ್ಯಗಳನ್ನು ಬೆಳೆಯುವ ಕೃಷಿಕರಿಗೆ ಇನ್ನಷ್ಟು ಬೆಂಬಲವನ್ನು ನೀಡುವುದಾಗಿದೆ.
ಇದನ್ನೂ ಓದಿ: ಆರೋಗ್ಯದ ಹಿತಕ್ಕಾಗಿ ಜಂತಹುಳು ನಿವಾರಣೆಯ ಕುರಿತು ಅರಿವು ಮೂಡಿಸುವುದು ಅಗತ್ಯ
ದಿನನಿತ್ಯ ಆಹಾರಗಳಲ್ಲಿ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ದ್ವಿದಳ ಧಾನ್ಯಗಳು ಎಚ್‌ಬಿ ಅಥವಾ ಹಿಮೋಗ್ಲೋಬಿನ್ ಅನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ ಮಧುಮೇಹಿಗಳು ಈ ದ್ವಿದಳ ಧಾನ್ಯಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುವುದಲ್ಲದೇ ತೂಕನಷ್ಟಕ್ಕೆ ಸಹಕಾರಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ