World Res Cross Day 2025: ಸೇವೆ, ಮಾನವೀಯತೆಯ ಸಂಕೇತ ರೆಡ್ ಕ್ರಾಸ್ ಸೊಸೈಟಿ; ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ, ಮಹತ್ವ ತಿಳಿಯಿರಿ.
ಪ್ರಪಂಚದಾದ್ಯಂತ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಯುದ್ಧ, ನೆರೆ ಸೇರಿದಂತೆ ಪ್ರಾಕೃತಿಕ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಮಾನವೀಯ ನೆಲೆಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸ್ವಯಂ ಸೇವಕರ ಈ ಮಾನವೀಯ ಕಾರ್ಯ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ತತ್ವಗಳನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಮೇ 08 ಎಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಪ್ರಪಂಚದ ಯಾವುದೇ ಭಾಗದಲ್ಲಿ ಭೂಕಂಪ, ಪ್ರವಾಹ, ಭೂಕುಸಿತ ಅಥವಾ ಯಾವುದೇ ಇತರ ನೈಸರ್ಗಿಕ ಅಥವಾ ಇನ್ಯಾವುದೇ ವಿಕೋಪಗಳು ಸಂಭವಿಸಿದಾಗ, ರೆಡ್ ಕ್ರಾಸ್ (Red Cross) ಸಂಸ್ಥೆಯ ಸ್ವಯಂ ಸೇವಕರು (Volunteers) , ತಂಡಗಳು ಮೊದಲು ಅಲ್ಲಿಗೆ ತಲುಪಿ ಪರಿಹಾರ, ರಕ್ಷಣಾ ಕಾರ್ಯವನ್ನು ಪ್ರಾರಂಭಿಸುತ್ತವೆ. ಶಾಂತಿ ಮತ್ತು ಸೌಹಾರ್ದತೆಯ ಸಂಕೇತವೆಂದು ಕರೆಯಲ್ಪಡುವ ಈ ಸಂಸ್ಥೆಯು ತನ್ನ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಮತ್ತು ಕರ್ತವ್ಯನಿಷ್ಠ ಸ್ವಯಂಸೇವಕರ ಮೂಲಕ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತನ್ನದೇ ಆದ ಹೆಗ್ಗುರುತನ್ನು ರೂಪಿಸಿಕೊಂಡಿದೆ. ಪ್ರಸ್ತುತ, ‘ರೆಡ್ ಕ್ರಾಸ್’ ಸಂಸ್ಥೆ 190 ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದ್ದು, ಈ ಸಂಸ್ಥೆಯ ಮಾನವೀಯ ಕಾರ್ಯಗಳು, ತತ್ವಗಳನ್ನು ಗೌರವಿಸಲು ಪ್ರತಿವರ್ಷ ಮೇ 8 ರಂದು ವಿಶ್ವ ರೆಡ್ ಕ್ರಾಸ್ (World Res Cross Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ರೆಡ್ ಕ್ರಾಸ್ ದಿನದ ಇತಿಹಾಸ:
ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿ ವರ್ಷ ಮೇ 08 ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ರೆಡ್ ಕ್ರಾಸ್ ಪರಿಕಲ್ಪನೆಯನ್ನು ಮೊದಲು 1933 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸಮ್ಮೇಳನವು ಪ್ರಸ್ತಾಪಿಸಿತು. ಮೊದಲ ಮಹಾಯುದ್ಧದ ನಂತರ ಜಗತ್ತಿಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿತ್ತು. ರೆಡ್ ಕ್ರಾಸ್ ಸಂಸ್ಥೆ ಹುಟ್ಟಿದ್ದು ಇಂತಹ ಪ್ರಯತ್ನಗಳಿಂದಲೇ. 1934 ರಲ್ಲಿ, ಟೋಕಿಯೊದಲ್ಲಿ ನಡೆದ 15 ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ರೆಡ್ ಕ್ರಾಸ್ ಒಪ್ಪಂದ ವರದಿಯನ್ನು ಮಂಡಿಸಲಾಯಿತು, ಯುದ್ಧದ ಸಮಯದಲ್ಲಿ ಗಾಯಗೊಂಡ ಹೋರಾಟಗಾರರ ರಕ್ಷಣೆಗಾಗಿ ತತ್ವಗಳನ್ನು ರೂಪಿಸಲಾಯಿತು. ಇದರಲ್ಲಿ ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರ ರಕ್ಷಣೆಯ ತತ್ವಗಳನ್ನು ವಿವರಿಸಲಾಗಿದೆ.
ಈ ಪ್ರಸ್ತಾಪವನ್ನು ನಂತರ 1946 ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಜಾರಿಗೆ ತರಲಾಯಿತು. ಮತ್ತು ಮತ್ತು ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ಸ್ಥಾಪಕರಾದ ಹೆನ್ರಿ ಡ್ಯೂನಾಂಟ್ ಆ ಸಮಯದಲ್ಲಿ ಯುದ್ಧದಲ್ಲಿ ಗಾಯಗೊಂಡವರಿಗೆ ಆರೈಕೆ ಮಾಡುತ್ತಾ ನಿಸ್ವಾರ್ಥ ಸೇವೆಗಳನ್ನು ಮಾಡಿದರು. ಈ ಮಹಾನ್ ವ್ಯಕ್ತಿಯ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿ ವರ್ಷ ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ದಿನವನ್ನು ಆಚರಿಸುವ ಉದ್ದೇಶವೇನು? ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ವಿಶ್ವ ರೆಡ್ ಕ್ರಾಸ್ ದಿನದ ಮಹತ್ವ:
ಈ ದಿನವು ಜನರಿಗೆ ಕರುಣೆ, ಪ್ರೀತಿ, ವಾತ್ಸಲ್ಯ, ಬೆಂಬಲದ ಮಹತ್ವವನ್ನು ನೆನಪಿಸುತ್ತದೆ. ಅಲ್ಲದೆ ಈ ದಿನ ರೆಡ್ ಕ್ರಾಸ್ ಸಂಸ್ಥೆಯ ತತ್ವಗಳು, ಧ್ಯೇಯಗಳು, ಮೌಲ್ಯಗಳು ಮತ್ತು ಚಟುವಟಿಕೆಗಳನ್ನು ಸಹ ಎತ್ತಿಹಿಡಿಯುತ್ತದೆ. ಈ ದಿನ ಜನರಿಗೆ ಮಾನವೀಯತೆಯ ಮೌಲ್ಯವನ್ನು ಕಲಿಸುತ್ತದೆ.
ವಿಶ್ವ ರೆಡ್ ಕ್ರಾಸ್ ದಿನದಂದು ಮಾನವೀಯತೆಯನ್ನು ಉತ್ತೇಜಿಸಲು ಮತ್ತು ರೆಡ್ ಕ್ರಾಸ್‌ಗಾಗಿ ನಿಧಿ ಸಂಗ್ರಹಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಈ ಚಟುವಟಿಕೆಗಳಲ್ಲಿ ರಕ್ತದಾನ ಶಿಬಿರಗಳು, ಪ್ರಥಮ ಚಿಕಿತ್ಸಾ ತರಬೇತಿ ಅವಧಿಗಳು, ನಿಧಿಸಂಗ್ರಹ ಅಭಿಯಾನಗಳು, ಸಾರ್ವಜನಿಕ ಜಾಗೃತಿ ಅಭಿಯಾನಗಳು ಸೇರಿವೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ, ಅಗತ್ಯವಿರುವವರಿಗೆ ನೆರವು ನೀಡುವ ರೆಡ್‌ಕ್ರಾಸ್‌ನ ಧ್ಯೇಯಕ್ಕೆ ತಮ್ಮ ಕೈಲಾದ ಸಹಾಯ ನೀಡಬಹುದು.
ರೆಡ್ ಕ್ರಾಸ್ ಸಂಸ್ಥೆಯ ತತ್ವಗಳು:
ಮಾನವೀಯತೆ, ನಿಸ್ಪಕ್ಷಪಾತತೆ, ತಟಸ್ಥತೆ, ಸ್ವಾತಂತ್ರ್ಯ, ನಾಯ್ಯಸಮ್ಮತತೆ, ಸ್ವಯಂ ಸೇವೆ, ಏಕತೆ ಇವೆಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಮೂಲ ತತ್ವಗಳಾಗಿವೆ. ಈ ತತ್ವಗಳನ್ನು ಪಾಲಿಸುತ್ತಾ ಭಾರತ ಸೇರಿದಂತೆ ವಿಶ್ವದಾದ್ಯಂತ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಅಗತ್ಯವಿರುವವರಿಗೆ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








