ಚಿಂತಾಮಣಿ ಕೊಡ್ಲೆಕೆರೆ ಅವರ ‘ಗಿಂಡಿಯಲ್ಲಿ ಗಂಗೆ‘ ಕಥೆಗಳ ಬೆನ್ನುಹತ್ತಿದ ಒಂದು ಅದ್ಭುತ ಪ್ರವಾಸ ಕಥನ
ವಿಂಧ್ಯಾಚಲ ವಾಸಿನಿ ದೇವಿಗೆ ನಮಿಸಿ ಸೀತಾಮಡಿ(ರ್ಹಿ)ಗೆ ಹೊರಟೆವು. ಸೀತಾ ಸಮಾಹಿತ ಸ್ಥಳ ಎಂಬುದು ಸೀತಾಮಡಿಯ ಇನ್ನೊಂದು ಹೆಸರು.
ಅಧ್ಯಾಯ 7
ಸೀತೆಯ ಸನ್ನಿಧಿ
ವಿಂಧ್ಯಾಚಲ ವಾಸಿನಿ ದೇವಿಗೆ ನಮಿಸಿ ಸೀತಾಮಡಿ(ರ್ಹಿ)ಗೆ ಹೊರಟೆವು. ಸೀತಾ ಸಮಾಹಿತ ಸ್ಥಳ ಎಂಬುದು ಸೀತಾಮಡಿಯ ಇನ್ನೊಂದು ಹೆಸರು. ಈ ಸ್ಥಳ ಪ್ರಯಾಗ ರಾಜ್ ಮತ್ತು ವಾರಾಣಸಿಗಳ ನಡುವೆ, ರಾಷ್ಟ್ರೀಯ ಹೆದ್ದಾರಿ ನಂ. 2 ರ ಸಮೀಪದಲ್ಲಿದೆ. ಈ ಎರಡೂ ಕಡೆಗಳಿಂದ ಊರು ರೈಲು ಸಂಪರ್ಕ ಹೊಂದಿದೆ. ಜಂಗಿಗಂಜ್ ಈ ಊರಿಗೆ ಹತ್ತಿರದ ರೈಲು ನಿಲ್ದಾಣ.
ಇದು ಸುಪ್ರಸಿದ್ಧ ಹಿಂದೂ ತೀರ್ಥಯಾತ್ರಾ ಸ್ಥಳ ಮತ್ತು ವರ್ಷವಿಡೀ ಸಾಕಷ್ಟು ಪ್ರವಾಸಿಗರನ್ನು ಹೊಂದಿರುವ ಉತ್ತಮ ಪ್ರವಾಸಿ ತಾಣ ಎಂದು ಈ ಊರಿನ ಕುರಿತು ಲಭ್ಯವಿರುವ ಮಾಹಿತಿ ಹೇಳುತ್ತದೆ. ಆದರೆ ವಾರಾಣಸಿಗೆ ಹೋಗಿ ಬಂದ ಯಾರೂ ಈ ಊರಿನ ಕುರಿತು ಹೇಳಿದ್ದು ನಾನಂತೂ ಕೇಳಿರಲಿಲ್ಲ. ವಾರಾಣಸಿಯಿಂದ ಈ ಊರು ಕೇವಲ ಎಂಬತ್ತು ಕಿ.ಮೀ. ದೂರದಲ್ಲಿದೆ.
ಅಯೋಧ್ಯಾಪತಿಯಾದ ನಂತರ ಲೋಕಾಪವಾದವನ್ನು ತೊಡೆಯಲು ಶ್ರೀರಾಮನು ಗರ್ಭವತಿ ಸೀತೆಯನ್ನು ತ್ಯಜಿಸುವ ಸಂದರ್ಭ ಬಂದುದು ಪ್ರಸಿದ್ಧ ಕಥೆ. ಆಗ ಅವಳಿಗೆ ನೆಲೆಯಿತ್ತ ಪುಣ್ಯಭೂಮಿ ಇದು. ತುಂಬು ಗರ್ಭಿಣಿ ತಾಯಿ ಸೀತೆ ತನ್ನ ಬದುಕಿನ ಅತ್ಯಂತ ದುರ್ಧರ ಕಾಲದಲ್ಲಿ ಈ ಕಾಡಿನಲ್ಲಿ (ಸೀತಾಮರ್ಹಿಯ) ಇಲ್ಲಿದ್ದ ವಾಲ್ಮೀಕಿಋಷಿಗಳ ಆಶ್ರಮದಲ್ಲಿ ಆಶ್ರಯ ಪಡೆದಳು. ಮುಂದೆ ಅವಳು ಭೂಮಿಯಲ್ಲಿ ಸಮಾಹಿತಳಾದ ಸ್ಥಳವೇ ಇಲ್ಲಿಯ ದೇವಾಲಯ ಎಂದು ಹೇಳಲಾಗುತ್ತದೆ.
ವಾಲ್ಮೀಕಿ ರಾಮಾಯಣದಲ್ಲಿ ಲವ ಕುಶರು ರಾಮನೊಡನೆ ಯುದ್ಧ ಮಾಡಿದ ಸನ್ನಿವೇಶ ಇಲ್ಲ. ಅಶ್ವಮೇಧ ಯಾಗದ ಸಂದರ್ಭದಲ್ಲಿ ಲವ ಕುಶರು ರಾಮಾಯಣ ಕಾವ್ಯವನ್ನು ಹಾಡುತ್ತಾರೆ. ಅದು ವಾಲ್ಮೀಕಿ ಮಹರ್ಷಿಗಳ ಯೋಜನೆ. ಯಾಗ ತುಂಬಾ ದಿನಗಳವರೆಗೆ ನಡೆಯಿತು. ಪ್ರತಿ ದಿನವೂ ಈ ಮಕ್ಕಳು ರಾಮಾಯಣ ಮಹಾಕಾವ್ಯವನ್ನು ಹಾಡಿದರು. ಶ್ರೀರಾಮನು ನೀವು ಯಾರೆಂದು ಕೇಳಿದಾಗ ತಾವು ವಾಲ್ಮೀಕಿ ಮಹರ್ಷಿಗಳ ಶಿಷ್ಯರು ಎಂದು ಲವಕುಶರು ಉತ್ತರಿಸಿದರು. ಅದೂ ಸಹ ಮಹರ್ಷಿಗಳ ಸೂಚನೆಯೇ.
ಮುಂದೆ ಶ್ರೀರಾಮನಿಗೆ ಇವರು ತನ್ನ ಮಕ್ಕಳು ಎಂಬುದು ತಿಳಿಯುತ್ತದೆ. ಆಗ ಆತ ತನ್ನ ಮಡದಿ, ಮಕ್ಕಳನ್ನು ಸ್ವೀಕರಿಸುವ ಯೋಚನೆ ಮಾಡುವುದಾಗಿ ತಿಳಿಸಿ ಅದಕ್ಕೂ ಮೊದಲು ನೆರೆದ ಜನರೆದುರು ಸೀತೆ ತನ್ನ ಶುದ್ಧತೆಯನ್ನು ಸಿದ್ಧ ಮಾಡಲು ಅವಳಿಗೆ ಆದೇಶ ನೀಡುತ್ತಾನೆ. ಅದರಂತೆ ಸೀತೆ ಶಪಥ ಮಾಡುತ್ತಾಳೆ. ತಾನು ನಿರ್ಮಲಳಾದರೆ ಭೂದೇವಿ ತನಗಾಗಿ ರಂಧ್ರ ತೆರೆಯಲಿ ಎಂಬುದು ಅವಳ ಶಪಥ. ಭೂದೇವಿ ಬಾಯ್ತೆರೆಯುತ್ತಾಳೆ.
ಸಿಂಹಾಸನವೊಂದು ಮುಂದೆ ಬರುತ್ತದೆ. ಸೀತೆ ಅದರಲ್ಲಿ ಕುಳಿತು ಅದೃಶ್ಯಳಾಗುತ್ತಾಳೆ. ಇದೊಂದು ಅಸಾಧಾರಣವಾದ ಘಟನೆ. ಮಹೋನ್ನತ ಕಲ್ಪನೆಗಳನ್ನು ಸೃಜಿಸಬಲ್ಲ ಮಹಾ ಕವಿಯೊಬ್ಬ ಕಲ್ಪಿಸಬಹುದಾದ ದೃಶ್ಯ ಇದು ಎಂದೇ ನನ್ನ ಭಾವನೆ. ಆದರೆ ಈ ಘಟನೆ ‘ಇದೋ ಇಲ್ಲೇ ನಡೆಯಿತು’ ಎಂದು ತೋರಬಹುದಾದ ಒಂದು ಸ್ಥಳವಿದ್ದೀತು ಎಂದು ಅನಿಸಿರಲಿಲ್ಲ. ಸರಿ, ನನ್ನ ಕುತೂಹಲವಂತೂ ಇನ್ನಿಲ್ಲದಷ್ಟು ಹೆಚ್ಚಾಗಿತ್ತು.
ಸೀತೆಯನ್ನು ನೆನೆದಷ್ಟೂ ನನ್ನಲ್ಲಿ ಆದರದ ಮತ್ತು ಸಂತಾಪದ ಭಾವನೆಗಳು ಹೆಚ್ಚುತ್ತಲೇ ಹೋಗುತ್ತವೆ. ಜನಕ ಮಹಾರಾಜನಿಗೆ ಅವಳು ಭೂಮಿಯಲ್ಲಿ ದೊರೆತಳಂತೆ. ರಾಜ ಮತ್ತು ಆತ್ಮಜ್ಞಾನಿಯಾದ ಜನಕನಂಥವನನ್ನು ಲೋಕಮಾತೆ ತಂದೆಯಾಗಿ ಆರಿಸಿಕೊಂಡಳು. ಭೂಮಿಯಲ್ಲಿ ದೈವೀಸಂಕಲ್ಪದಂತೆ ಜರುಗಬೇಕಾಗಿದ್ದ ಘಟನಾವಳಿಗಳಿಗೆ, ಲೋಕಕ್ಕೆ ನೀಡಬೇಕಾಗಿದ್ದ ಸಂದೇಶಗಳನ್ನು ಹೊತ್ತ ಮಹಾಕಾವ್ಯವೊಂದರ ಸೃಷ್ಟಿಗೆ ಸಿದ್ಧತೆಗಳು ನಡೆದಿದ್ದವು. ರಾಜಕುಮಾರಿ ಸೀತೆ ಸ್ವಯಂವರದಲ್ಲಿ ಶ್ರೀರಾಮನನ್ನು ವರಿಸಿದಳು. ಅಯೋಧ್ಯೆಯ ರಾಜಮನೆತನದ ಸೊಸೆಯಾದಳು. ಅವಳು ಸುಖವಾಗಿದ್ದುದು ಕೆಲವು ದಿನಗಳು ಮಾತ್ರ. ದಶರಥನು ಕೈಕೇಯಿಗೆ ಇತ್ತ ವಾಗ್ದಾನವನ್ನು ಪೂರೈಸುವ ಕಾರಣಕ್ಕಾಗಿ ರಾಮ, ಸೀತೆ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗುವ ಸಂದರ್ಭ ಒದಗಿತು. ತನ್ನ ಪತಿಯೊಡನೆ ಇರಬೇಕಾದುದು ಧರ್ಮವೆಂದು ಎಳೆಯ ಹೆಣ್ಣುಮಗಳು ಸಕಲ ರಾಜವೈಭವವನ್ನು ತ್ಯಜಿಸಿ ನಾರುಮಡಿಯುಟ್ಟು ಅವನ ಹಿಂದೆ ಹೊರಟುಬಿಟ್ಟಳು. ಹೀಗೂ ಉಂಟೆ! ಕ್ಷಣಗಳ ಹಿಂದೆ ಅವಳ ಪತಿ ಅಯೋಧ್ಯಾಪತಿಯಾಗುವವನಿದ್ದ, ಈಗ ಅದರ ನೆರಳೂ ಹಾಯದಷ್ಟು ದೂರದಲ್ಲಿ ಅಡವಿಯಲ್ಲಿ ಉಳಿಯಬೇಕು! ಒಪ್ಪಿ ನಡೆದಳಲ್ಲ ಸೀತೆ, ಅಂಥ ಸಮಚಿತ್ತತೆ ಇನ್ನಾರಿಗೆ ಸಾಧ್ಯ!
ಇಡಿಯ ರಾಮಾಯಣದ ಕಥೆಯನ್ನು ಇಲ್ಲಿ ಬರೆಯುವ ಕಾರಣವಿಲ್ಲ. ವನವಾಸದ ಸಮಯದಲ್ಲಿ ರಾವಣ ಬಂದು ಸೀತೆಯನ್ನು ಕದ್ದೊಯ್ದ, ಅವಳನ್ನು ಮರಳಿ ಪಡೆಯುವುದು ಎಷ್ಟು ದೊಡ್ಡ ಹೋರಾಟವಾಯಿತು, ರಾವಣನಂಥವನ ರಾಜ್ಯದಲ್ಲಿದ್ದೂ ಸೀತೆ ಹೇಗೆ ತನ್ನನ್ನು ತಾನು ಕಾಯ್ದುಕೊಂಡಳು ಇವೆಲ್ಲ ಎಲ್ಲರಿಗೂ ತಿಳಿದಿವೆ. ಅಗ್ನಿದೇವ ಇವಳು ಪವಿತ್ರಳು ಅಂದಮೇಲೆ ಇನ್ನಾರೂ ಸಂಶಯ ಪಡುವ ಅಥವಾ ಅಂಥ ಹುಚ್ಚುಸಂಶಯಗಳಿಗೆ ಯಾರಾದರೂ ಬೆಲೆ ಕೊಡುವ ಕಾರಣವಿರಲಿಲ್ಲ. ಹಾಗಿದ್ದೂ ಬಸುರಿ ಸೀತೆ ಲೋಕದ ನಿಂದೆಯ ಮಾತು ಕೇಳಬೇಕಾಯಿತು ಮತ್ತು ಶ್ರೀರಾಮ ಆ ಕಾರಣಕ್ಕಾಗಿ ಅವಳನ್ನು ಪುನಃ ಅರಣ್ಯವಾಸಕ್ಕೆ ಕಳುಹಿದ. ಇಂಥ ಸಂದರ್ಭವನ್ನು ದೇವಿ ಎದುರಿಸಿದ ರೀತಿ ಅತ್ಯುದಾತ್ತವಾದುದು. ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ ಸೀತೆ ನೆಲೆ ಪಡೆದಳು, ಅವಳಿ ಮಕ್ಕಳನ್ನು ಹಡೆದಳು. ಕುಶಲವರು ಅತ್ಯಂತ ಆದರ್ಶ ಪರಿಸರದಲ್ಲಿ ಬೆಳೆದರು. ಒಬ್ಬ ಮಡದಿಯಾಗಿ, ತಾಯಿಯಾಗಿ ಅವಳಿಗಿಂತ ಚೆನ್ನಾಗಿ ಇನ್ನಾರು, ಇನ್ನು ಹೇಗೆ ನಡೆದುಕೊಂಡಾರು! ಅಂಥ ಧೀರ ಮಕ್ಕಳನ್ನು ಅವರ ತಂದೆಗೆ ಒಪ್ಪಿಸಿದಳು. ಆದರೆ ಪರಿಶುದ್ಧತೆಯ ಕುರಿತು ಮತ್ತೆ ತನ್ನಿಂದ ಪ್ರತಿಜ್ಞೆಯನ್ನು ನಿರೀಕ್ಷಿಸಿದ ಪತಿಯನ್ನು ಕಂಡು ಧರೆಗಿಳಿದುಹೋದಳು. ಅದೆಂಥ ಪ್ರತಿಜ್ಞೆ!
ದೇವಾದಿಗಳೆಲ್ಲರೂ ಆಗಮಿಸಿದ್ದನ್ನು ವೀಕ್ಷಿಸಿ, ತಪಸ್ವಿನಿಗೆ ಉಚಿತವಾದ ಕಾಷಾಯ ವಸ್ತ್ರವನ್ನುಟ್ಟಿದ್ದ ಜಾನಕಿಯು ಕೈ ಮುಗಿದುಕೊಂಡು,ತಲೆ ತಗ್ಗಿಸಿ ಹೀಗೆ ಹೇಳಿದಳು: “ಶ್ರೀರಾಮನನ್ನು ಹೊರತಾಗಿ ಬೇರೆ ಇನ್ನಾರನ್ನೂ ನಾನು ಮನಸ್ಸಿನಲ್ಲಿಯೂ ಚಿಂತಿಸುವುದಿಲ್ಲವೆಂಬುದು ಸತ್ಯ. ಈ ಸತ್ಯಬಲದಿಂದ ಮಾಧವನ ಪತ್ನಿಯಾದ ಭೂದೇವಿಯು ತನ್ನ ಗರ್ಭದಲ್ಲಿ ಸೇರಿಸಿಕೊಳ್ಳುವುದಕ್ಕಾಗಿ ನನಗೆ ರಂಧ್ರವನ್ನೀಯಲಿ! ಮನಸಿನಿಂದ, ಕ್ರಿಯೆಯಿಂದ, ನಾನು ಶ್ರೀರಾಮನನ್ನೇ ಅರ್ಚಿಸುತ್ತಿರುವುದು ಸತ್ಯವಾದರೆ ಭೂದೇವಿಯು ನನಗೆ ರಂಧ್ರವನ್ನೀಯಲಿ! ಶ್ರೀರಾಮನನ್ನು ಹೊರತಾಗಿ ಇನ್ನೊಬ್ಬ ಪುರುಷನನ್ನು ನಾನರಿಯೆನು ಎಂಬ ನನ್ನ ನುಡಿ ಸತ್ಯವಾದರೆ ಭೂದೇವಿಯು ನನಗೆ ರಂಧ್ರವನ್ನೀಯಲಿ!” ಎಂದು ಶಪಥವನ್ನು ಮಾಡಿದಳು. (ಪುಟ ೬೧೭, ರಾಮಾಯಣ, ಎನ್.ರಂಗನಾಥಶರ್ಮಾ )
ಎಲ್ಲರಿಗೂ ತಿಳಿದಿರುವಂತೆ ರಾಮಾಯಣದ ಬೇರೆ ಕೆಲವು ಆವೃತ್ತಿಗಳಲ್ಲಿ ಅಶ್ವಮೇಧದ ಕುದುರೆಯನ್ನು ಲವ ಕುಶರು ಕಟ್ಟಿ ಹಾಕಿ ಯುದ್ಧ ಮಾಡಿದ , ಶ್ರೀರಾಮನ ಸೈನ್ಯವನ್ನು ಸೋಲಿಸಿದ ಕಥೆ ಇದೆ. ಅಯೋಧ್ಯೆಯ ಅಶ್ವಮೇಧದ ಕುದುರೆಯು ಈಗ ಭದೋಹಿಯ ಬರಿಪುರ ಎಂದು ಕರೆಯಲಾಗುವ ಗ್ರಾಮದ ಕಾಡಿನಲ್ಲಿ ಅಲೆದಾಡುತ್ತಿದ್ದಾಗ, ಸೀತೆಯ ಇಬ್ಬರು ಪುತ್ರರು ಕುದುರೆಯ ಹಣೆಯ ಮೇಲೆ ಬರೆದ ಘೋಷಣೆಯನ್ನು ಓದಿ ಕುದುರೆಯನ್ನು ಸೆರೆಹಿಡಿದರಂತೆ. ಲವ ಮತ್ತು ಕುಶರಿಬ್ಬರೇ ಸೇರಿ ಲಕ್ಷ್ಮಣ, ಭರತ, ಶತ್ರುಘ್ನ, ಸುಗ್ರೀವ, ನಲ,ನೀಲ ಸೇರಿದಂತೆ ರಾಮನ ಎಲ್ಲಾ ಮಹಾನ್ ಯೋಧರ ಜೊತೆ ಘೋರ ಯುದ್ಧ ಮಾಡಿ ಅವರನ್ನು ಸೋಲಿಸಿದರು. ಅವರು ಅತ್ಯಂತ ಶಕ್ತಿಶಾಲಿ ಹನುಮಂತನನ್ನೂ ಕಟ್ಟಿಹಾಕಿದರು.
ಈ ಮಕ್ಕಳೊಡನೆ ಹೋರಾಡಲು ರಾಮನೇ ಈ ಸ್ಥಳಕ್ಕೆ ಬರಬೇಕಾಯಿತು. ತಂದೆಗೂ , ಮಕ್ಕಳಿಗೂ ತಮ್ಮ ಸಂಬಂಧ ತಿಳಿಯದು! ರಾಮನು ಯುದ್ಧಭೂಮಿಗೆ ಬಂದಾಗ, ಮೂರು ಪ್ರಪಂಚದ ಎಲ್ಲಾ ಪವಿತ್ರ ಆತ್ಮಗಳು ಈ ಅಪರೂಪದ ದೃಶ್ಯವನ್ನು ನೋಡಲು ಬರುತ್ತವೆ ಮತ್ತು ಸೀತೆ ಕೂಡ ಶ್ರೀರಾಮನ ಬಳಿಗೆ ಬಂದು ನಮಿಸಿದಳು.
ಸ್ವತಃ ವಾಲ್ಮೀಕಿ ಋಷಿಗಳು ಅವಳು ಪವಿತ್ರಳೆಂದು ಸಾರುತ್ತಾರೆ. ಇಷ್ಟಾಗಿಯೂ ಸೀತೆ ಶಪಥ ಮಾಡಬೇಕೆಂದು ರಾಮ ಆದೇಶ ನೀಡುತ್ತಾನೆ. ಮುಂದಿನ ಕಥಾಭಾಗದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಸೀತೆ ರಾಮನ ಸೂಚನೆಯನ್ನು ಒಪ್ಪುತ್ತಾಳೆ. ಆ ಶಪಥದಲ್ಲಿ ಅವಳು ತನ್ನ ತಾಯಿಯನ್ನು (ಭೂಮಿಯನ್ನು) ಅವಳ ಮಡಿಲೊಳಗೆ ಸೇರಿಸಿಕೊಳ್ಳಲು ಕೇಳಿಕೊಂಡಳು. ತಾಯಿ ಆ ಮಾತನ್ನು ಮನ್ನಿಸಿ ಮಗಳನ್ನು ಒಳಗೆ ಕರೆದುಕೊಂಡಳು.
ಪರಮ ಭಾಗವತರು ಇಡೀ ರಾಮಾಯಣ ಮಹಾಕಾವ್ಯವು ಲೋಕಕ್ಕೆ ಪರಮಾರ್ಥವನ್ನು ಬೋಧಿಸುವ ಉದ್ದೇಶದಿಂದ ಬರೆದುದು, ಅದರಲ್ಲಿ ಪಾಲುಗೊಂಡ ಎಲ್ಲರೂ ತಮ್ಮ ಮೂಲ ಸ್ವರೂಪವನ್ನು ಬಲ್ಲವರು, ಭೂಮಿಯ ಮೇಲೆ ಒಂದು ನಾಟಕವನ್ನು ಪ್ರದರ್ಶಿಸಿ ಹೋದರು ಎಂದು ಹೇಳುತ್ತಾರೆ. ಹಾಗೆಯೇ ಇರಬಹುದು. ಅವರ ಕ್ಷಮೆ ಕೋರಿ ಮುಂದಿನ ಕೆಲವು ಮಾತುಗಳು. ತೀರಾ ಲೌಕಿಕರಾದ ನಮ್ಮಂಥವರಿಗೆ ಹುಟ್ಟುವ ಪ್ರಶ್ನೆಗಳು ಕೆಲವಿವೆ.
ಅಗ್ನಿಯೇ ಸೀತೆಯ ಪಾವಿತ್ರ್ಯ ಸಾರಿದ ಮೇಲೂ ಯಾವನೋ ಒಬ್ಬ ಬೀದಿ ಜಗಳದಲ್ಲೋ ಅಥವಾ ಮನೆಯೊಳಗೆ ಗಂಡ ಹೆಂಡತಿ ಆಡಿಕೊಂಡ ಜಗಳದಲ್ಲೋ ಏನೋ ಅಸಭ್ಯವಾಗಿ ಮಾತಾಡಿದರೆಂದು ಬಸುರಿ ಹೆಂಗಸನ್ನು ಕಾಡಿಗೆ ಕಳಿಸುವುದೇ! ಆಯಿತು, ಕಾಡಿಗೆ ಕಳಿಸಿದಿರಿ, ಅವಳ ಅದೃಷ್ಟ ಚೆನ್ನಾಗಿತ್ತು, ಋಷಿಗಳ ಆಸರೆ ಸಿಕ್ಕಿತು. ಮುಂದೊಮ್ಮೆ ಅವಳು ಮತ್ತೆ ಸಿಕ್ಕಾಗ ರಾಜನೆದುರು ಮತ್ತೆ ತನ್ನ ಪಾವಿತ್ರ್ಯ ಸಿದ್ಧ ಮಾಡಬೇಕಂತೆ! ಇದಾವ ನ್ಯಾಯ! ನಾಳೆಯಿಂದ ನಿತ್ಯ ಬೆಳಿಗ್ಗೆ ಎದ್ದು ಪ್ರಮಾಣ ಮಾಡು ಎನ್ನಲೂಬಹುದು! ಮತ್ತೆ ಯಾರಾದರೂ ಅಡ್ಡ ಮಾತಾಡಿದರೆ ಸೀತೆ ಕಾಡುಪಾಲೇ!
ಈ ಮಾತುಗಳಿಗೆ ತಡೆಯೇ ಇಲ್ಲ, ಕಡೆಯೂ ಇಲ್ಲ ಎಂದು ಕಾಣುತ್ತದೆ. ಅನುಮಾನಿಸುವ ಲೋಕದ ಎದುರು ಸೀತೆಯಂಥ ಪವಿತ್ರಾತ್ಮಳೂ ಮತ್ತೆ ಮತ್ತೆ ತನ್ನ ಪರಿಶುದ್ಧಿಯನ್ನು ಸಿದ್ಧ ಮಾಡಬೇಕಾಗುತ್ತದೆ ಎಂಬುದೇ ಘೋರ ವಿಡಂಬನೆ. ಸೀತಾಮಡಿಗೆ ಹೋಗುವುದೆಂದರೆ ಮತ್ತೆ ಆ ಕಾವ್ಯದ ಆ ವಿಹ್ವಲ ಕ್ಷಣಗಳಿಗೆ ಹೋಗಿ ಮುಟ್ಟಿದಂತೆ. ವಾಲ್ಮೀಕಿ ಮಹರ್ಷಿಗಳ ಆಶ್ರಮವೂ ಇಲ್ಲೇ ಹತ್ತಿರದಲ್ಲಿದೆ.
ಚಿಕ್ಕ ಊರು. ಸೀತೆ ಸಮಾಹಿತಳಾದ ಸ್ಥಳ ಇದು ಎಂಬ ನಂಬಿಕೆ ಶತಮಾನಗಳದು. ಹಳ್ಳಿಗರ ನೆನಹುಗಳಲ್ಲಿದ್ದ ಆ ಸ್ಥಳಗಳನ್ನು ಗುರುತಿಸುವ ಪ್ರಯತ್ನ ಇತ್ತೀಚಿನ ದಶಕಗಳಲ್ಲಿ ನಡೆಯಿತು. ಸ್ವಾಮಿ ಜಿತೇಂದ್ರನಾಥ ತೀರ್ಥರು ಈ ಊರಿನ ನವೀನ ಸ್ವರೂಪಕ್ಕೆ ಕಾರಣರಂತೆ. ಸೀತಾದೇವಿಯ ನೆನಪಲ್ಲಿ ಅಲ್ಲಿ ಒಂದು ಸುಂದರ ಹೊಸ ಮಂದಿರ ನಿರ್ಮಿಸಿದ್ದಾರೆ. ಸೀತೆ ಸಕಲ ಸಿರಿವೈಭವದೊಂದಿಗೆ ಒಂದು ಅಂತಸ್ತಿನಲ್ಲಿ ಕಂಗೊಳಿಸುತ್ತಾಳೆ.
ಅದಕ್ಕಿಂತ ಕೆಳ ಅಂತಸ್ತಿನಲ್ಲಿ ಅವಳು ಭೂಪ್ರವೇಶಕ್ಕೆ ಸಿದ್ಧಳಾಗಿ ನಿಂತಿರುವ ಪ್ರತಿಮೆ. ಮೊದಲೇ ಭಾವಾವಿಷ್ಟನಾಗಿದ್ದ ನಾನು ಆ ಪ್ರತಿಮೆಯನ್ನು ಕಂಡು ನಲುಗಿಹೋದೆ. ಇಂಥ ಪವಿತ್ರಾತ್ಮರು ಭುವಿಗೆ ಬಂದಿಳಿದಾಗ ಅವರ ಪಾದಧೂಳಿಯ ಯೋಗ್ಯತೆ ಇಲ್ಲದವರೂ ಸಂಶಯ ವ್ಯಕ್ತಪಡಿಸುವುದು ನಮ್ಮ ಹೀನ ಬುದ್ಧಿಯದೇ ಪ್ರದರ್ಶನವಲ್ಲವೆ! ಇವೆಲ್ಲ ಕಾವ್ಯಭಾಗಗಳೆಂದು ಗೆಳೆಯರು ಹೇಳಬಹುದು. ಹಾಗಿದ್ದರೂ ನನಗನಿಸುವುದಿಷ್ಟೆ:
ಇಂಥ ಕಾವ್ಯ ನಮ್ಮ ನಿತ್ಯ ಜೀವನದಲ್ಲಿ ಅಂತಸ್ಥವಾಗಿರದೆ ಅಲ್ಲಿಯ ಒಂದು ದೃಶ್ಯವನ್ನು ಕಣ್ಣ ಮುಂದೆ ತರುವಂಥ ಆಲಯವನ್ನು ಕಟ್ಟುವುದಿಲ್ಲ. ರಾಮಾಯಣದ ಈ ಕಥೆ ಇಲ್ಲಿ ನಡೆಯಿತು, ಇಲ್ಲಿ ಅವಳು ಭೂಮಿಗೆ ಸೇರಿದಳು ಎಂದು ಪೂಜ್ಯ ಭಾವದಿಂದ ಸಹಸ್ರಾರು ವರ್ಷಗಳಿಂದ ಅಸಂಖ್ಯಾತ ಭಾವುಕ ಜನ ನಂಬಿಕೊಂಡು ಬಂದಿದ್ದಾರೆ. ಆ ಭಾವಸತ್ಯವಂತೂ ಇಲ್ಲಿಯೇ ಆಶ್ರಯ ಪಡೆದಿದೆ. ನನ್ನ ನಿಗ್ರಹ ಮೀರಿ ಜಿನುಗುತ್ತಿದ್ದ ಕಣ್ಣೀರು ಆ ತಾಯಿಯ ಪಾದಗಳಿಗೂ ಕೆಳಗೆ ಸಮರ್ಪಿತವೆನ್ನುತ್ತ ನಮಸ್ಕರಿಸಿದೆ. ಅನ್ನಿಸಿತು : ಸೀತೆ ಇಲ್ಲಿ ಸಮಾಹಿತಳಾದಳು ಎಂದರೆ ಅರ್ಥವಿಷ್ಟೆ: ಅವಳು ಇಲ್ಲೇ ಇದ್ದಾಳೆ, ಹರಸುತ್ತಿದ್ದಾಳೆ.
ಸೀತೆಗೆ ಸಂಬಂಧಿಸಿ ಇನ್ನೂ ಕೆಲವು ದೇವಾಲಯ, ಆಶ್ರಮ ಇಲ್ಲಿ ಇವೆ. ರಸ್ತೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳಿವೆ. ಹನುಮನ ಒಂದು ಭವ್ಯ ಗುಹಾ ದೇವಾಲಯವಿದೆ. ಮೇಲುಗಡೆ ನೂರಾಎಂಟು ಅಡಿ ಎತ್ತರದ ಮಹಾಪ್ರತಿಮೆ, ಆಂಜನೇಯನದು. ಭಾರತದಲ್ಲೇ ಅತಿ ಎತ್ತರದ ಐದು ಮಾರುತಿ ಪ್ರತಿಮೆಗಳಲ್ಲಿ ಇದು ಒಂದು ಎಂದು ತಿಳಿಯಿತು. ಇಲ್ಲಿಂದ ಸ್ವಲ್ಪ ದೂರದಲ್ಲೇ ವಾಲ್ಮೀಕಿ ಆಶ್ರಮ. ಪತಿ ಶ್ರೀರಾಮನೇ ಸೀತೆಯನ್ನು ತೊರೆದಾಗ ನಮ್ಮ ಕವಿಗಳು ತಮ್ಮ ಆಶ್ರಮಕ್ಕೆ ಆ ತುಂಬುಗರ್ಭಿಣಿ ತಾಯಿಯನ್ನು ಕರೆದುಕೊಂಡು ಬಂದು ಆಶ್ರಯವಿತ್ತರು.
ಸೀತಾಮಾತೆ ಲವ ಕುಶರಿಗೆ ಜನ್ಮ ನೀಡಿದುದು ಇಲ್ಲಿಯೇ. ಆ ಮಕ್ಕಳು ಇಲ್ಲಿಯೇ ರಾಮಾಯಣ ಮಹಾಕಾವ್ಯವನ್ನು ಕಂಠಸ್ಥ ಮಾಡಿಕೊಂಡರು. ಆಶ್ರಮದಲ್ಲಿ ಭಜನೆ, ಕೀರ್ತನೆಗಳು ಈಗಲೂ ನಡೆಯುತ್ತಿರುತ್ತವೆ. ಆ ದಿನಗಳನ್ನು ನೆನಪಿಸುವ ಮಂದಿರಗಳಿವೆ. ಇವೆಲ್ಲವೂ ನನ್ನನ್ನು ಅರೆಕ್ಷಣದಲ್ಲಿ ರಾಮಾಯಣದ ಕಾಲಕ್ಕೆ ಕರೆದೊಯ್ದು ಮಧುರ ಭಾವಾನುಭೂತಿ ಹುಟ್ಟಿಸಿದವು.
ಸೀತೆ ತಾಯಿ ಮಡಿಲು ಸೇರಿದ ಹಾಗೆ ನಮ್ಮ ಮನಸುಗಳಿಗೆ ರಾಮಾಯಣ ಮಹಾಕಾವ್ಯವೇ ಅಂಥದೊಂದು ತಾಯಿಮಡಿಲು. ಮನಸು ನೊಂದಾಗ ಆ ಕಾವ್ಯದ ಯಾವಾವುದೋ ಮಾತುಗಳು ನಮ್ಮನ್ನು ಪೊರೆಯುತ್ತವೆ. ವಾಲ್ಮೀಕಿಯಂಥ ಮಹರ್ಷಿ ಕವಿ ಅಲ್ಲಿ ನಿಂತು ಬಾಳಿಗೆ ಬೆಳಕು ತುಂಬುತ್ತಿರುವ ಅನುಭವವಾಗುತ್ತದೆ. ಎಂಥ ಕವಿ! ಸೀತಾಮಾತೆಗೇ ಆಸರೆ ಇತ್ತವನು! ಲೋಕ ಮಾತೆಯನ್ನೇ ತನ್ನ ಮಡಿಲಲ್ಲಿಟ್ಟು ಪೊರೆದವನು! ಅದಕ್ಕೇ ಅವನು ನಮ್ಮ ಆದಿಕವಿ.
ತಾಯಿಮಮತೆಯ ಕವಿಯ ಆಶ್ರಮ ಇಲ್ಲಿದೆ ಎನ್ನುವುದು ಒಂದು ಮಾತು, ತನ್ನ ಜೀವಿತ ಕಾರ್ಯ ಪೂರೈಸಿ ಲೋಕಮಾತೆ ಇಲ್ಲಿಯೇ ಭೂಸಮಾಹಿತಳಾದಳು ಎನ್ನುವುದು ಇನ್ನೊಂದು ಮಾತು – ಇಡಿಯ ರಾಮಾಯಣದ ಹೃದಯವನ್ನೇ ಸೀತಾಮಡಿ ಹಿಡಿದು ನಿಂತಿದೆ. ಕಿವಿಗೊಟ್ಟು ಕೇಳಿದರೆ ಎದೆಮಿಡಿತ ಕೇಳಬಹುದು.
ಪುಸ್ತಕದ ಬಗ್ಗೆ ಮಾತು
ಗಿಂಡಿ ನೀರು ತಂದ ಕಥೆ
ಈ ಪ್ರವಾಸ ಕಥನಕ್ಕೆ ಕಾರಣರಾದವರು ಇಬ್ಬರು : ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಮತ್ತು ಸ್ವಾಮಿ ಶಿವಾತ್ಮಾನಂದ ಪುರಿಯವರು. ‘ಕಾಶಿಯಾತ್ರೆ’ ಯಲ್ಲಿದ್ದಾಗ ನಾವು ನೋಡಿಬಂದ ಸ್ಥಳಗಳ ವಿವರಗಳನ್ನು ಈ ಇಬ್ಬರಿಗೂ ಹೆಚ್ಚು ಕಡಿಮೆ ದಿನಾಲೂ ನೀಡುತ್ತಿದ್ದೆ. ಈ ಪ್ರವಾಸದ ಅನುಭವಗಳನ್ನು ನಾನು ತಕ್ಷಣ ಬರೆಯತೊಡಗಬೇಕೆಂದು ಅದೊಂದು ದಿನ ಎಚ್ಚೆಸ್ವಿ ಯವರು ಹೇಳಿದಾಗ ಗಾಬರಿಗೊಂಡೆ. ಏಕೆಂದರೆ ಅಂಥ ಯಾವ ಸಿದ್ಧತೆಯೂ ಇಲ್ಲದೆ ಪ್ರವಾಸ ಮಾಡಿಬಂದವನು ನಾನು. ಪ್ರತಿ ದಿನ ಎಂಬಂತೆ ಎಚ್ಚೆಸ್ವಿಯವರೂ, ಸ್ವಾಮಿ ಶಿವಾತ್ಮಾನಂದರೂ ನನ್ನ ಬರವಣಿಗೆಯ ಪ್ರಗತಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಇಲ್ಲಿಯ ಬರಹ ಇವರಿಬ್ಬರ ಕಣ್ಣ ಕಾವಲಿನಲ್ಲಿ ನಡೆದಿದೆ
ನಮ್ಮ ಮಹಾಕಾವ್ಯಗಳು, ಪುರಾಣಕಥೆಗಳು ಈ ನಾಡಿನ ಒಡಲಲ್ಲಿ ಇವತ್ತಿಗೂ ಉಸಿರಾಡುತ್ತಿವೆ. ಅಥವಾ ಹೀಗೆ ಹೇಳಬಹುದು: ಅವೆಲ್ಲವೂ ಸೇರಿ ನಿರ್ಮಿಸಿದ ಜಗತ್ತಿನಲ್ಲೇ ನಾವಿವತ್ತು ನಡೆಯುತ್ತಿದ್ದೇವೆ, ನುಡಿಯುತ್ತಿದ್ದೇವೆ. ಎಲ್ಲ ಬದಲಾವಣೆಗಳನ್ನೂ ಧರಿಸುತ್ತಿರುವ, ಭರಿಸುತ್ತಿರುವ ಶಾಶ್ವತವಾದೊಂದು ಸತ್ತೆ ಇದೆ. ನಾವು ಚರಿಸುತ್ತಿರುವುದು ಅಲ್ಲಿ. ರಾಮ, ಸೀತೆಯರೂ, ವಾಲ್ಮೀಕಿ, ತುಲಸೀದಾಸರೂ ಇದೇ ಹಾದಿಯಲ್ಲೇ ನಡೆದುಹೋದರು..
ಚಿಂತಾಮಣಿ ಕೊಡ್ಲೆಕೆರೆ
ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ಪ್ರವಾಸ ಕಥನವು ಹೊರಗನ್ನೂ, ಒಳಗನ್ನೂ ಒಮ್ಮೆಗೇ ನೋಡುತ್ತಾ ಸಾಗುವ ಆಪ್ತ ಬರವಣಿಗೆಯ ಫಲ. ಪರಂಪರೆಯಲ್ಲಿ ದೃಢವಾಗಿ ಕಾಲೂರಿರುವ ಸಮರ್ಥ ಲೇಖಕನೊಬ್ಬನ ಕಾವ್ಯಸಂವೇದಿಯಾದ ಸೂಕ್ಷ್ಮ ಮನಸ್ಸಿನ ಅಭಿವ್ಯಕ್ತಿಯು ಈ ಪ್ರವಾಸಕಥನದ ಆತ್ಮಸತ್ವವನ್ನು ಹೆಚ್ಚಿಸಿದೆ. ನಂಬುಗೆಯ ಜಗತ್ತಿನ ಶ್ರದ್ಧಾಶೀಲ ವ್ಯಕ್ತಿತ್ವವು ಧಾರ್ಮಿಕ ನೆಲೆಗಳನ್ನು ಹೃದಯದ ಕಣ್ಣಿಂದ ನೋಡಿದ ಫಲವೆನ್ನಬಹುದಾದ ಆಪ್ತಕಥಾನಕವಿದು. ನಾನಂತೂ ಅಹಂಕೃತಿಯಿಲ್ಲದೆ ಈ ಹೊಸ ಬಗೆಯ ತೀರ್ಥಯಾನದಲ್ಲಿ ತನ್ಮಯಗೊಂಡೆ. ಈ ಬರವಣಿಗೆಯು ಚಿಂತಾಮಣಿ ಅವರು ಆರ್ಷಪ್ರಜ್ಞೆಯ ಹೊಸಕಾಲದ ಅಪರೂಪದ ಲೇಖಕ ಎಂಬುದನ್ನು ನಿಸ್ಸಂದಿಗ್ಧವಾಗಿ ಸಾಬೀತುಪಡಿಸಿದೆ.
ಡಾ. ಎಚ್. ಎಸ್. ವೆಂಕಟೇಶಮೂರ್ತಿ
ರಕ್ಷಾಪುಟದ ನುಡಿಗಳು:
ಭಗವಂತ ಈಗ ತಾನೇ ಬಂದು ಹೋದ ಸ್ಥಳಗಳಲ್ಲಿ ಅವನ ಹೆಜ್ಜೆ ಗುರುತುಗಳನ್ನು ಅರಸುತ್ತ ಪ್ರವಾಸ ಮಾಡಿಬಂದವನ ಅನುಭವಗಳ ಕಥನ ” ಗಿಂಡಿಯಲ್ಲಿ ಗಂಗೆ”. ಅಲ್ಲಿ ಗಲ್ಲಿಗೊಂದು ಕಥೆ. ಸ್ವತಃ ತಾನೂ ಒಂದಷ್ಟು ಕಥೆಗಳನ್ನು ಹೊತ್ತು ಅಲೆಯುವ ಇಲ್ಲಿಯ ಪ್ರವಾಸಿ ತನ್ನ ಕೊಪ್ಪರಿಗೆಗೆ ಅಲ್ಲಿಂದ ಇನ್ನೊಂದಷ್ಟು ಕಥೆಗಳನ್ನು ಸೇರಿಸಿಕೊಂಡು ಬಂದಿದ್ದಾರೆ, ಸೀತಮ್ಮ ಭೂಮಿ ಸೇರಿದ ಸ್ಥಳವಿದು ಎಂದು ಒಂದು ಎಡೆ ತೋರಿದಾಗ ಥಕ್ಕಾಗಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ನಿಂತುಬಿಟ್ಟಿದ್ದಾರೆ. ಕತೆಯಂತೆಯೂ, ಕವಿತೆಯಂತೆಯೂ, ಲಲಿತ ಪ್ರಬಂಧದಂತೆಯೂ, ಬೀದಿಮಾತುಗಳು ಸುರಿಯತ್ತಿರುವ ರಸ್ತೆಯ ಪಕ್ಕದಲ್ಲೇ ನಿಂತೂ ಒಳಧ್ವನಿಯನ್ನೂ ಆಲಿಸುತ್ತಿರುವ ಹೃದಯಸಂವಾದಿಯ ಆಪ್ತಮಾತುಕತೆಯಂತೆಯೂ ಓದಿಸಿಕೊಳ್ಳುವ ಅನುಭವ ನಿವೇದನೆ ಈ ಕೃತಿಯದು.
ಚಿಂತಾಮಣಿಯವರು ಮಡದಿ ಸುಮನಾ, ಸಹೋದರಿ ಸುಬ್ಬಲಕ್ಷ್ಮೀ ಮತ್ತು ತಮ್ಮ ಊರಿನವರೇ ಆದ ರಮಕ್ಕ ಇವರೊಡನೆ ವಾರಾಣಸಿ, ಅಯೋಧ್ಯೆ, ಪ್ರಯಾಗ, ಚಿತ್ರಕೂಟ, ಗಯಾ, ವಿಂಧ್ಯಾಚಲಧಾಮ, ಸೀತಾಮಡಿ.. ಮುಂತಾದ ಊರುಗಳಲ್ಲಿ ಹತ್ತು ದಿನಗಳ ಕಾಲ ತಿರುಗಾಡಿ ಬಂದುದರ ಫಲ ಈ ಹೊಸ ಜಾಡಿನ ಪ್ರವಾಸಕಥನ.
ಗೆಳೆಯ ಚಿಂತಾಮಣಿಯವರ ‘ಗಿಂಡಿಯಲ್ಲಿ ಗಂಗೆ’ ತೀರ್ಥಯಾತ್ರೆಯ ಸ್ವಾರಸ್ಯಕರ ಅನುಭವವನ್ನು ನಿರೂಪಿಸುವ ಪ್ರವಾಸಕಥನವಾಗಿದೆ. ಮುಖ್ಯವಾಗಿ ಕಾಶಿ ಮತ್ತು ಅದರ ಸುತ್ತಲಿನ ಪುಣ್ಯಕ್ಷೇತ್ರಗಳ ಸಂದರ್ಶನದ ಚಿತ್ರವಿವರಗಳೊಂದಿಗೆ ಅಪೂರ್ವ ಒಳನೋಟಗಳೂ ಹಾಸುಹೊಕ್ಕಾಗಿವೆ.
ಭಾರತೀಯರಿಗೆ ಕಾಶಿ ಸಾಂಸ್ಕೃತಿಕ ರೂಪಕವಾಗಿದೆ. ಅವರವರ ‘ಭಾವಕ್ಕೆ, ಭಕುತಿಗೆ’ ತಕ್ಕಂತೆ ಅದು ಗೋಚರಿಸುತ್ತದೆ. ಪುರಾಣ ಪ್ರಭೆಯ ರಾಮಾಯಣದ ಪಾತ್ರಗಳು ಕವಿ ಮನಸಿನ ಚಿಂತಾಮಣಿಯವರಿಗೆ ಭೌತ ವಾಸ್ತವದಲ್ಲಿ ಪ್ರತ್ಯಕ್ಷವಾಗಿದೆ. ಕಥೆಗಳಲ್ಲಿ ಕುಳಿತ ಸೇವತೆಗಳು ಬಿಡುಗಡೆಯ ದಾರಿಯನ್ನು ತೋರಿಸಿವೆ.
ಭಾರತದ ಭವ ಹಾಗೂ ಭಾವದಲ್ಲಿ ಬೇರೂರಿದ ರಾಮಾಯಣ ಇಲ್ಲಿ ನಿತ್ಯ ಸತ್ಯವಾಗಿದೆ. ಪ್ರಾಚೀನ ಗಂಗೆ ಜೀವಂತ ಶ್ರದ್ಧಾಪರಂಪರೆಯ ವರ್ತಮಾನವಾಗಿದೆ. ಶ್ರದ್ಧಾವಂತರಿಗೆ ಪುರಾಣ ಪುರುಷರ ಪಾದ ಸ್ಪರ್ಶವಾದ ಪ್ರದೇಶದಲ್ಲಿ ನಡೆದಾಡುವುದೇ ಪವಿತ್ರ ಅನುಭೂತಿ. ನಂಬಿ, ನೆನೆದು ಸೀತೆಯ ಅಡುಗೆಮನೆಯಲ್ಲಿ ಚಹಾ ಕುಡಿಯುವುದೇ ಕಾಲಾತೀತ ಬೆರಗಲ್ಲವೇ?
ಸಂವೇದನಾಶೀಲ ಶಿಷ್ಟ ಮನಸ್ಸಿನಲ್ಲಿ ಕಾಶಿ ಎಂಬ ಚಲಿಸುತ್ತಿರುವ ರೂಪಕ ಉದ್ದೀಪಿಸಿದ ವಂಶಸ್ಥರ ಸ್ಮೃತಿ. ದೈವಿಕ ನಂಬಿಕೆ. ಕಾವ್ಯದ ಚೆಲುವು, ಹುಟ್ಟಿದೂರಿನ ನಂಟು, ಋಣ ಮುಕ್ತ ಆಚರಣೆಗಳು ಸತ್ಯವನ್ನು ಮರೆಮಾಚದ ಸುಂದರ ದರ್ಶನಗಳಾಗಿ ಆಪ್ತವೆನಿಸುತ್ತವೆ. ಲೇಖಕರ ತುಂಟ ವಿನೋದಶೀಲತೆಯ ಪ್ರವಾಸ ದಣಿವಾಗದಂತೆ ಕಾಪಾಡಿದೆ. ಕಾಶಿ ಬೀದಿಯ ಬನಾರಸಿ ಪಾನವಾಲಾನ ಕವಳದಂತೆ ಚಿಂತಾಮಣಿಯವರ ಗದ್ಯದ ರುಚಿಯನ್ನು ಸವಿಯಬಹುದು. ಶ್ರೀಧರ ಬಳಗಾರ