Confession : ಅಭಿಜ್ಞಾನ ; ಪ್ರಗತಿ ಮತ್ತು ಪರಿಪೂರ್ಣತೆಗಳಿಗೆ ಅನಂತತೆಯಲ್ಲಿ ಯಾವ ಅರ್ಥವೂ ಇಲ್ಲ ದಿಕ್ಕೂ ಇಲ್ಲ

|

Updated on: Dec 26, 2021 | 8:15 AM

Count Leo Tolstoy : ‘ನೀನು ಯಾವುದನ್ನು ಬದುಕು ಎಂದು ಕರೆಯುತ್ತೀಯೋ ಅದು ಈ ಅಸಂಖ್ಯ ಸೂಕ್ಷ್ಮ ಕಣಗಳ ನಡುವೆ ನಡೆಯುವ ಪರಸ್ಪರ ಕ್ರಿಯೆ-ಪ್ರತಿಕ್ರಿಯೆಗಳಷ್ಟೇ. 'ನೀನು' ಎಂದು ಕರೆದುಕೊಳ್ಳುವ ಕಣಗಳ ಸಂಯೋಜನೆ ಒಂದಷ್ಟು ಕಾಲ ಮುಂದುವರೆಯುತ್ತದೆ, ಆಮೇಲೆ ಕಣಗಳ ಕ್ರಿಯೆ-ಪ್ರತಿಕ್ರಿಯೆ ನಿಲ್ಲುತ್ತದೆ, ಆಮೇಲೆ ಯಾವುದನ್ನು 'ನಿನ್ನ ಬದುಕು' ಅನ್ನುತ್ತೀಯೋ ಅದು ಮುಗಿಯುತ್ತದೆ, ಅದರೊಡನೆ ನಿನ್ನ ಪ್ರಶ್ನೆಗಳೂ ಇಲ್ಲವಾಗುತ್ತವೆ.’ ಕೌಂಟ್ ಲಿಯೊ ಟಾಲ್​ಸ್ಟಾಯ್

Confession : ಅಭಿಜ್ಞಾನ ; ಪ್ರಗತಿ ಮತ್ತು ಪರಿಪೂರ್ಣತೆಗಳಿಗೆ ಅನಂತತೆಯಲ್ಲಿ ಯಾವ ಅರ್ಥವೂ ಇಲ್ಲ ದಿಕ್ಕೂ ಇಲ್ಲ
ಕೌಂಟ್ ಲಿಯೋ ಟಾಲ್​ಸ್ಟಾಯ್
Follow us on
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com
*
ಲೇಖಕ ಓ.ಎಲ್. ನಾಗಭೂಷಣಸ್ವಾಮಿ ಅನುವಾದಿಸಿದ ಕೌಂಟ್ ಲಿಯೊ ಟಾಲ್​ಸ್ಟಾಯ್ ರಚಿತ
ಬಿನ್ನಪ – ಕನ್​ಫೆಷನ್’ ಕೃತಿಯಿಂದ.
*

ಬದುಕಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ನಾನು ಕಾಡಿನಲ್ಲಿ ಕಳೆದುಹೋದವನ ಹಾಗಿದ್ದೆ. ದಟ್ಟ ಕಾಡಿನಲ್ಲಿ ತೆರವಾಗಿರುವ ಜಾಗ ಕಂಡಿತು. ಮರ ಹತ್ತಿದೆ. ಸುತ್ತಲೂ ಕಣ್ಣಾಡಿಸಿದೆ. ಅಪರಿಮಿತವಾದ ದೂರವನ್ನು ಕಂಡೆ. ಅಲ್ಲಿಲ್ಲ ನನ್ನ ಮನೆ, ಅಲ್ಲಿರಲಾರದು ನನ್ನ ಮನೆ ಅನ್ನಿಸಿತು. ಮತ್ತೆ ಕಾಡನ್ನು ಹೊಕ್ಕೆ. ಕತ್ತಲು ಕಂಡಿತು, ಮನೆ ಕಾಣಲಿಲ್ಲ.

ಮನುಷ್ಯ ಕಟ್ಟಿಕೊಂಡಿರುವ ಜ್ಞಾನದ ಅಡವಿಯಲ್ಲಿ ಹೀಗೆ ಅಂಡಲೆದೆ. ಗಣಿತ ಮತ್ತು ಪ್ರಯೋಗನಿಷ್ಠ ವಿಜ್ಞಾನಗಳು ದಿಗಂತವನ್ನು ನಿಚ್ಚಳವಾಗಿ ತೋರಿದವು. ಆದರೆ ಆ ದಿಕ್ಕಿನಲ್ಲಿ ಮನೆ ಇರಲು ಸಾಧ್ಯವಿರಲಿಲ್ಲ. ಅಮೂರ್ತ ವಿಜ್ಞಾನಗಳ ಕಾಡಿನ ಕತ್ತಲಲ್ಲಿ ಮುಳುಗಿಹೋದೆ. ಅದರೊಳಗೇ ಮುಂದೆ ಮುಂದೆ ಸಾಗಿದಷ್ಟೂ ಹೊರಬರುವ ದಾರಿ ಇಲ್ಲವೇ ಇಲ್ಲ ಅನ್ನುವುದು ಸ್ಪಷ್ಟವಾಯಿತು.

ಜ್ಞಾನದ ಪ್ರಭೆಗೆ ನನ್ನನ್ನು ತೆತ್ತುಕೊಂಡಾಗ ಜ್ಞಾನದ ಬೆಳಕು ಪ್ರಶ್ನೆಯನ್ನು ಕಾಣದಂತೆ ನನ್ನ ಮನಸ್ಸನ್ನು ವಿಚಲಿತಗೊಳಿಸುತ್ತಿದೆ ಅನ್ನುವುದು ಗೊತ್ತಾಯಿತು. ಜ್ಞಾನದ ದಿಗಂತಗಳು ಎಷ್ಟೇ ಮನಸೆಳೆಯುವಂತಿದ್ದರೂ, ಆ ವಿಜ್ಞಾನಗಳ ಅಪರಿಮಿತ ವಿಸ್ತಾರದಲ್ಲಿ ಕರಗಿಹೋದರೂ ನನ್ನ ಅಗತ್ಯವನ್ನು ಪೂರೈಸುವಂಥ, ನನ್ನ ಪ್ರಶ್ನೆಗೆ ಅನ್ವಯವಾಗುವಂಥ ಏನೂ ಅಲ್ಲಿ ಇಲ್ಲ ಅನ್ನುವುದು ಸ್ಪಷ್ಟವಾಯಿತು.

ವಿಜ್ಞಾನವು ಏನನ್ನು ಅನ್ವೇಷಿಸಲು ಬಯಸುತ್ತದೆ ಅನ್ನುವುದು ನನಗೆ ಗೊತ್ತು, ಆ ದಾರಿಯಲ್ಲಿ ನನ್ನ ಬದುಕಿನ ಅರ್ಥವೇನು ಅನ್ನುವ ಪ್ರಶ್ನೆಗೆ ಉತ್ತರವಿಲ್ಲ. ಅಂದುಕೊಂಡೆ. ಅಮೂರ್ತ ವಿಜ್ಞಾನಗಳು ನಾನು ಆಗಲೇ ಕೊಟ್ಟುಕೊಂಡಿದ್ದ ಉತ್ತರಗಳನ್ನೇ ನೀಡುತ್ತಿದ್ದವು. ‘ಬದುಕಿನ ಅರ್ಥವೇನು?’ ’ಏನೂ ಇಲ್ಲ’ ಅಥವಾ ‘ನನ್ನ ಬದುಕು ಏನಾಗುತ್ತದೆ?’ ‘ಏನೂ ಆಗದು’ ಅಥವಾ ‘ಈ ಜಗತ್ತು ಯಾಕಿದೆ? ನಾನು ಯಾಕೆ ಇದ್ದೇನೆ?’ ‘ಇದೆ, ಆದ್ದರಿಂದ ಇದೆ ಅಷ್ಟೇ’

ಮನುಷ್ಯ ಜ್ಞಾನದ ಒಂದು ಶಾಖೆಯಿಂದ ನಾನು ಕೇಳದಿರುವ ಪ್ರಶ್ನೆಗಳಿಗೆ ಅಸಂಖ್ಯಾತವಾದ ಖಚಿತ ಉತ್ತರಗಳು ದೊರೆತವು: ನಕ್ಷತ್ರಗಳ ರಾಸಾಯನಿಕ ಸಂಯೋಜನೆ ಏನು? ಹರ್ಕ್ಯುಲಿಸ್ ನಕ್ಷತ್ರ ಪುಂಜದತ್ತ ಸೂರ್ಯನ ಚಲನೆಯ ಪಥ ಯಾವುದು? ಮನುಷ್ಯ ಕುಲದ ಉಗಮ ಹೇಗಾಯಿತು? ಅತಿ ಸಣ್ಣ ಕಣಗಳ ವಿವಿಧ ರೂಪಗಳು ಯಾವುವು? ಕಲ್ಪಿಸಿಕೊಳ್ಳಲೂ ಆಗದಷ್ಟು ಸೂಕ್ಷ್ಮವಾದ ಕಣಗಳ ಕಂಪನವನ್ನು ಹೇಗೆ ವಿವರಿಸುವುದು? ಇಂಥ ಪ್ರಶ್ನೆಗಳಿಗೆ ಉತ್ತರಗಳಿದ್ದವು. ನನ್ನ ಬದುಕಿನ ಅರ್ಥವೇನು ಎಂಬ ನನ್ನ ಪ್ರಶ್ನೆಗೆ ಜ್ಞಾನದ ಈ ಶಾಖೆ ಕೊಟ್ಟ ಉತ್ತರ ಇದು-ನೀನು ಯಾವುದನ್ನು ನಿನ್ನ ಬದುಕು ಎಂದು ಕರೆಯುತ್ತೀಯೋ ಅದೇ ನೀನು; ನೀನು ಎಂಬುದು ಸೂಕ್ಷ್ಮವಾದ ಕಣಗಳ ಯಾದೃಚ್ಛಿಕ ಸಂಯೋಜನೆ. ನೀನು ಯಾವುದನ್ನು ಬದುಕು ಎಂದು ಕರೆಯುತ್ತೀಯೋ ಅದು ಈ ಅಸಂಖ್ಯ ಸೂಕ್ಷ್ಮ ಕಣಗಳ ನಡುವೆ ನಡೆಯುವ ಪರಸ್ಪರ ಕ್ರಿಯೆ-ಪ್ರತಿಕ್ರಿಯೆಗಳಷ್ಟೇ. ‘ನೀನು’ ಎಂದು ಕರೆದುಕೊಳ್ಳುವ ಕಣಗಳ ಸಂಯೋಜನೆ ಒಂದಷ್ಟು ಕಾಲ ಮುಂದುವರೆಯುತ್ತದೆ, ಆಮೇಲೆ ಕಣಗಳ ಕ್ರಿಯೆ-ಪ್ರತಿಕ್ರಿಯೆ ನಿಲ್ಲುತ್ತದೆ, ಆಮೇಲೆ ಯಾವುದನ್ನು ‘ನಿನ್ನ ಬದುಕು’ ಅನ್ನುತ್ತೀಯೋ ಅದು ಮುಗಿಯುತ್ತದೆ, ಅದರೊಡನೆ ನಿನ್ನ ಪ್ರಶ್ನೆಗಳೂ ಇಲ್ಲವಾಗುತ್ತವೆ. ನೀನೆಂಬುದು ಹೇಗೆ ಹೇಗೋ ಒಗ್ಗೂಡಿರುವ ಕಣಗಳ ರಾಶಿ; ಆ ರಾಶಿಯೂ ನಿಧಾನವಾಗಿ ವಿಘಟನೆಗೊಳ್ಳುತ್ತ ಕೊಳೆಯುತ್ತದೆ; ಈ ವಿಘಟನೆಯೇ ನಿನ್ನ ಬದುಕು; ಕಣಗಳ ರಾಶಿ ಪೂರಾ ಚದುರಿ ಹೋದಾಗ ವಿಘಟನೆ ಕೊನೆಗೊಳ್ಳುತ್ತದೆ, ನಿನ್ನ ಪ್ರಶ್ನೆಗಳೂ ಇಲ್ಲವಾಗುತ್ತವೆ. ಇದು ಜ್ಞಾನದ ತಿಳಿಯಾದ ಭಾಗ ತನ್ನದೇ ತತ್ವಗಳನ್ನು ಅನುಸರಿಸಿ ಹೇಳುವ ಉತ್ತರ, ‘ಹೇಳುವುದಕ್ಕೆ ಇನ್ನೇನೂ ಇಲ್ಲ’ ಅನ್ನುತ್ತದೆ.

ಅನುವಾದಕ ಓ. ಎಲ್. ನಾಗಭೂಷಣಸ್ವಾಮಿ

ಇಂಥ ಉತ್ತರ ಪ್ರಶ್ನೆಗೆ ತಕ್ಕದ್ದು ಅಲ್ಲವೇ ಅಲ್ಲ. ನನ್ನ ಬದುಕಿನ ಅರ್ಥವೇನು ಅನ್ನುವುದು ನನ್ನ ಪ್ರಶ್ನೆ. ನನ್ನ ಬದುಕು ಅನ್ನುವುದು ಅನಂತದಲ್ಲಿರುವ ಒಂದು ಕಣ, ಅಂದರೆ ‘ಅರ್ಥವೇನು?’ ಎಂಬ ಪ್ರಶ್ನೆಗೆ ಉತ್ತರವಾಗಲಿಲ್ಲ ಮಾತ್ರವಲ್ಲ, ಅರ್ಥದ ಸಾಧ್ಯತೆಯನ್ನೇ ನಿರಾಕರಿಸಿದಂತಾಗುತ್ತದೆ. ಪ್ರಯೋಗನಿಷ್ಠ ವಿಜ್ಞಾನದ ಶಾಖೆಗಳು ಅಮೂರ್ತ ವಿಜ್ಞಾನಗಳ ಜೊತೆ ಅಸ್ಪಷ್ಟವಾಗಿ ರಾಜಿಮಾಡಿಕೊಂಡು ಬದುಕಿನ ಅರ್ಥವು ಪ್ರಗತಿಯಲ್ಲಿದೆ, ಪ್ರಗತಿಗೆ ನೆರವಾಗುವುದೇ ಬದುಕಿನ ಅರ್ಥ, ಎಂದು ಹೇಳಿದರೆ ಅಂಥ ಮಾತಿನಲ್ಲಿ ಖಚಿತತೆಯೂ ಇರುವುದಿಲ್ಲ, ಸ್ಪಷ್ಟತೆಯೂ ಇರುವುದಿಲ್ಲ.

ಅಮೂರ್ತ ಜ್ಞಾನದ ಶಾಖೆಗಳು ತಮ್ಮ ತತ್ವಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿದ್ದಾಗ ಕಳೆದ ಹಲವು ಶತಮಾನಗಳ ಉದ್ದಕ್ಕೂ ಈ ಪ್ರಶ್ನೆಗೆ ಒಂದೇ ಉತ್ತರವನ್ನು ನೀಡಿವೆ: ವಿಶ್ವವು ಅನಂತವಾದದ್ದು, ಗ್ರಹಿಕೆಗೆ ಮೀರಿದ್ದು, ಮನುಷ್ಯ ಬದುಕು ಅನ್ನುವುದು ಈ ಅರಿಯಲಾಗದ ಪೂರ್ಣತೆಯ ಅರಿಯಲಾಗದ ಒಂದು ಕಿರು ಭಾಗ ಅನ್ನುತ್ತವೆ. ನ್ಯಾಯ, ರಾಜ್ಯಶಾಸ್ತ್ರ, ಚರಿತ್ರೆಯಂಥ ಅರೆ ವಿಜ್ಞಾನಗಳು ಪ್ರಗತಿ ಮತ್ತು ಪೂರ್ಣತೆಯ ಸಾಧನೆ ಎಂಬಂಥ ಸುಳ್ಳು ಕಲ್ಪನೆಗಳನ್ನು ಆಧರಿಸಿಕೊಂಡಿವೆ. ಪ್ರಯೋಗನಿಷ್ಠ ವಿಜ್ಞಾನಗಳು ನಿರ್ದಿಷ್ಟ ಜ್ಞಾನ ವಲಯದ ಬೆಳವಣಿಗೆಯನ್ನು ಕುರಿತು ಹೇಳಿದರೆ ಅರೆ ವಿಜ್ಞಾನಗಳು ಜನರ ಪ್ರಗತಿಯನ್ನು ಕುರಿತು ಹೇಳುತ್ತವೆ ಅನ್ನುವುದಷ್ಟೇ ವ್ಯತ್ಯಾಸ. ಎರಡೂ ಉತ್ತರಗಳಲ್ಲಿನ ಸುಳ್ಳು ಒಂದೇ ಥರದ್ದು – ‘ಪ್ರಗತಿ ಮತ್ತು ಪರಿಪೂರ್ಣತೆಗಳಿಗೆ ಅನಂತತೆಯಲ್ಲಿ ಯಾವ ಅರ್ಥವೂ ಇಲ್ಲ ದಿಕ್ಕೂ ಇಲ್ಲ.’

ಸೌಜನ್ಯ : ಅಭಿನವ, ಬೆಂಗಳೂರು. 9448676770

ಇದನ್ನೂ ಓದಿ : Rajeev Taranath : ಅಭಿಜ್ಞಾನ ‘ಇಪ್ಪತ್ತೆರಡರ ವಯಸ್ಸಿನಲ್ಲಿ ಸಂಗೀತ? ನೀ ಅಧಿಕಾರಿಯೋ, ಪ್ರೊಫೆಸರೋ ಆಗಬಹುದು

Published On - 8:03 am, Sun, 26 December 21