Theatre : ಡೆಸ್ಡೆಮೋನಾಳನ್ನು ಕೊಂದವರು ಯಾರು? ನಾಳೆ ಬೆಂಗಳೂರಿನಲ್ಲಿ ತನಿಖೆ ಶುರುವಾಗಲಿದೆ…

‘ಮಲಗುವ ಕೋಣೆ ಎನ್ನುವುದು ಹೇಗೆ ರಾಜಕೀಯದ ಶಕ್ತಿಕೇಂದ್ರವಾಗಿ ಪರಿಣಮಿಸುತ್ತಾ ಹೋಗುತ್ತದೆ ಎನ್ನುವುದನ್ನು ವಸ್ತುನಿಷ್ಠವಾಗಿ ಪ್ರಶ್ನಿಸುತ್ತಾ ಹೋಗುತ್ತೇವೆ. ಹೀಗೆ ಹೋದಾಗ ಡೆಸ್ಡೆಮೋನಾಳ ಬೇರೆಯದೇ ಮುಖ ಇಲ್ಲಿ ಕಾಣಸಿಗುತ್ತದೆ. ಸಮಾಜ ಹೆಣ್ಣಿನ ಧ್ವನಿಯನ್ನು ಯಾವತ್ತೋ ಸ್ವೀಕರಿಸಿದೆ. ಆದರೆ ನಮ್ಮ ಪುರಾಣಗಳಲ್ಲಿ ಇದು ಯಾಕೆ ಗೌಣವಾಗಿದೆ ಎನ್ನುವುದನ್ನೇ ನಾವಿಲ್ಲಿ ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದೇವೆ.’ ಎಂ. ಡಿ. ಪಲ್ಲವಿ

  • ಶ್ರೀದೇವಿ ಕಳಸದ
  • Published On - 17:57 PM, 9 Apr 2021
Theatre : ಡೆಸ್ಡೆಮೋನಾಳನ್ನು ಕೊಂದವರು ಯಾರು? ನಾಳೆ ಬೆಂಗಳೂರಿನಲ್ಲಿ ತನಿಖೆ ಶುರುವಾಗಲಿದೆ...
‘ಡೆಸ್ಡೆಮೋನಾ ರೂಪಕಮ್’ ನಲ್ಲಿ ಕಲಾವಿದೆಯರಾದ ಎಂ ಡಿ. ಪಲ್ಲವಿ ಮತ್ತು ಬಿಂದುಮಾಲಿನಿ ನಾರಾಯಣಸ್ವಾಮಿ
ರಂಗಶಂಕರದಲ್ಲಿ ನಾಳೆ ಮತ್ತು ನಾಡಿದ್ದು ‘ಡೆಸ್ಡೆಮೋನಾ ರೂಪಕಮ್​’ ಪ್ರದರ್ಶನಗೊಳ್ಳಲಿದೆ. ಖ್ಯಾತ ರಂಗನಿರ್ದೇಶಕ ಅಭಿಷೇಕ್​ ಮಜುಂದಾರ್ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಪ್ರಯೋಗಾತ್ಮಕ ಕಲಾಪ್ರಸ್ತುತಿಗೆ ಹೆಸರುವಾಸಿಯಾಗಿರುವ ಸಂಗೀತಕಲಾವಿದರಾದ ಎಂ. ಡಿ. ಪಲ್ಲವಿ ಮತ್ತು ಬಿಂದುಮಾಲಿನಿ ನಾರಾಯಣಸ್ವಾಮಿ ಈ ಒಪೆರಾದ ಇಡೀ ಸೂತ್ರವನ್ನು ಹಿಡಿದಿದ್ದಾರೆ. ನಾಟಕದುದ್ದಕ್ಕೂ ಈ ಇಬ್ಬರು ಕಲಾವಿದರೇ ಕೇಂದ್ರಬಿಂದು.  ಇಂಗ್ಲಿಷ್, ಕನ್ನಡ ಮತ್ತು ತಮಿಳಿನಲ್ಲಿ ಈ ನಾಟಕದ ಧ್ವನಿ ಸಮಾಗಮಿಸಿ ಪ್ರಸ್ತುಗೊಳ್ಳುತ್ತಿರುವುದು ವಿಶೇಷ. ನಳಂದಾ ಆರ್ಟ್​ ಸ್ಟುಡಿಯೋ ಇದನ್ನು ನಿರ್ಮಿಸಿದೆ. 
ಶೇಕ್ಸ್​ಪಿಯರ್​ನ ಒಥೆಲ್ಲೋ  ನಾಟಕವನ್ನು ನೂರಾರು ವರ್ಷಗಳಿಂದಲೂ ನೋಡುತ್ತ ಓದುತ್ತ ಬಂದಿದ್ದೇವೆ. ಆದರೆ ಇದರಲ್ಲಿಯ ಹೆಣ್ಣುಧ್ವನಿಯನ್ನು ಎಷ್ಟರಮಟ್ಟಿಗೆ ಕೇಳಿಸಿಕೊಂಡಿದ್ದೇವೆ? ಇದನ್ನೇ ಈ ಒಪೆರಾದಲ್ಲಿ ವಿಧವಿಧದಲ್ಲಿ ಪ್ರಶ್ನಿಸಲಾಗುತ್ತಿದೆ. ಇಲ್ಲಿ ಸಂಗೀತವಿದೆ, ಗದ್ಯವಿದೆ, ಪದ್ಯವೂ ಇದೆ ಹಾಗಾಗಿ ಇದು ಕೇವಲ ಸಂಗೀತ ನಾಟಕವಷ್ಟೇ ಅಲ್ಲ. ಒಂದು ವಿಧದಲ್ಲಿ ಒಪೆರಾ ಶೈಲಿಯ ಪ್ರದರ್ಶನ. ನಮ್ಮ ಭಾರತೀಯ ಪೌರಾಣಿಕ ಮಹಿಳಾ ಧ್ವನಿಗಳನ್ನು ನಾಟಕದ ಆಶಯವನ್ನು ಗಟ್ಟಿಗೊಳಿಸಲು ಪೂರಕವಾಗಿ ಅಳವಡಿಸಿಕೊಳ್ಳಲಾಗಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತದೊಂದಿಗೆ ಹರಿಕಥೆ, ಯಕ್ಷಗಾನ ಮತ್ತು ಎಲ್ಲಮ್ಮನಾಟದಂಥ ಜಾನಪದ ಸಂಗೀತ ಪ್ರಕಾರಗಳ ಪ್ರಯೋಗ ಇದರಲ್ಲಿದೆ. ಹೀಗಾಗಿ ಇದು ನೆಲದ ಧ್ವನಿಯನ್ನೂ ಪ್ರತಿಧ್ವನಿಸುವಂತಿದೆ.
ಕಲಾವಿದೆ ಎಂ. ಡಿ. ಪಲ್ಲವಿ, ‘ಒಥೆಲ್ಲೋ ನಾಟಕದ ಮಲಗುವ ಕೋಣೆಯ ದೃಶ್ಯ​ ಒಂದನ್ನಿಟ್ಟುಕೊಂಡು ಕಥಾಹಂದರವನ್ನು ಕಟ್ಟಿದ್ದೇವೆ. ಡೆಸ್ಡೆಮೋನಾಳನ್ನು ಕೊಂದವರು ಯಾರು, ಆ ಸಾವು ಯಾಕೆ ಸಂಭವಿಸಿತು, ಅಲ್ಲಿ ಸಿಕ್ಕ ಸಾಕ್ಷಿ ಏನು. ಆಕೆ ಸಾಯುವಾಗ ಯಾಕೆ ಆ ಧ್ವನಿ ಕೇಳಿಸಲಿಲ್ಲ? ಮಲಗುವ ಕೋಣೆ ಎನ್ನುವುದು ಹೇಗೆ ರಾಜಕೀಯದ ಶಕ್ತಿಕೇಂದ್ರವಾಗಿ ಪರಿಣಮಿಸುತ್ತಾ ಹೋಗುತ್ತದೆ ಎನ್ನುವುದನ್ನು ವಿಧವಿಧವಾಗಿ ಪ್ರಶ್ನಿಸುತ್ತಾ ಹೋಗುತ್ತೇವೆ. ಹೀಗೆ ಹೋದಾಗ ಡೆಸ್ಡಿಮೋನಾಳ ಬೇರೆಯದೇ ಮುಖ ಇಲ್ಲಿ ಕಾಣಸಿಗುತ್ತೆ. ಸಮಾಜ ಹೆಣ್ಣಿನ ಧ್ವನಿಯನ್ನು ಯಾವತ್ತೋ ಸ್ವೀಕರಿಸಿದೆ. ಆದರೆ ನಮ್ಮ ಪುರಾಣಗಳಲ್ಲಿ ಇದು ಯಾಕೆ ಗೌಣವಾಗಿದೆ? ಎನ್ನುವುದನ್ನು ನಾವಿಲ್ಲಿ ಪ್ರಶ್ನಿಸುತ್ತಿದ್ದೇವೆ’ ಎನ್ನುತ್ತಾರೆ.
desdemona

ನನ್ನ ಧ್ವನಿ ನಿನಗೆ ನಿನ್ನ ಧ್ವನಿ ನನಗೆ… ಎಂ. ಡಿ. ಪಲ್ಲವಿ ಮತ್ತು ಬಿಂದುಮಾಲಿನಿ ಒಪೆರಾದ ತಯಾರಿಯಲ್ಲಿ.

ಕಲಾವಿದೆ ಬಿಂದುಮಾಲಿನಿ ನಾರಾಯಣಸ್ವಾಮಿ, ‘ಕಥಾವಸ್ತುವಿಗೆ ಪೂರಕವಾಗಿ ಅಭಿನಯ, ಸಂಗೀತ, ಬರೆವಣಿಗೆ ಹೀಗೆ ವಿವಿಧ ಪದರಗಳನ್ನು ಹದವಾಗಿ ಜೋಡಿಸಿ ಅವುಗಳನ್ನು ಒಂದು ಕೇಂದ್ರಸ್ಥಾನಕ್ಕೆ ತಂದು ನಿಲ್ಲಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಸಂಗತಿಗಳು ನಮ್ಮೊಳಗೆ ಜರುಗಿರುತ್ತವೆ. ಆದರೆ ಈ ಎಲ್ಲ ಪದರಗಳು ಒಂದರೊಳಗೊಂದು ಬೆಸೆದು ಪ್ರೇಕ್ಷಕನಿಗೆ ಆಹ್ಲಾದಭಾವ ಉಂಟುಮಾಡಬಹುದಾ? ಎನ್ನುವುದನ್ನು ನಾವೇ ಹೊರನಿಂತು ನೋಡಿ ನಿರ್ಧರಿಸಬೇಕಾಗುತ್ತದೆ. ಹಾಗಾಗಿ ಈ ನಾಟಕದ ತಯಾರಿಯೇ ನನಗೆ ವಿಶೇಷ ಖುಷಿ ಕೊಟ್ಟಿದೆ. ಇದರಿಂದಾಗಿ ನನ್ನೊಳಗಿನ ಬಹು ಸಾಧ್ಯತೆಗಳನ್ನು ಪ್ರಯೋಗಕ್ಕೆ ಅಳವಡಿಸಲು ಸಾಕಷ್ಟು ಅವಕಾಶ ಸಿಕ್ಕಿದೆ. ’

‘ಒಬ್ಬೊಬ್ಬ ನಿರ್ದೇಶಕರದು ಒಂದೊಂದು ವಿಧಾನ. ನಿರ್ದೇಶಕ ಅಭಿಷೇಕ್ ಮಜುಂದಾರ್ ಅವರದು ಅಧ್ಯಯನ ಮತ್ತು ಸಂಶೋಧನಾಶೀಲ ಮನಸ್ಸು. ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಸಾಧ್ಯತೆಗಳು ಹೊಮ್ಮುತ್ತಿರುವುದನ್ನು ತುಂಬಾ ಕುತೂಹಲದಿಂದ ಗಮನಿಸುತ್ತಾರೆ. ನಮ್ಮ ವಿಚಾರಗಳನ್ನು ಪ್ರಯೋಗಕ್ಕೆ ಒಳಪಡಿಸಲು ಇಲ್ಲಿ ಸಾಕಷ್ಟು ಅವಕಾಶವಿದ್ದಿದ್ದರಿಂದ ನನಗೆ ಈ ಪ್ರಯೋಗ ಬಹಳ ಮಹತ್ವದ್ದು ಎನ್ನಿಸಿದೆ. ಹೀಗಿದ್ದಾಗಲೇ ಕಲಾವಿದರಿಗೆ ಕಲೆಯ ಸಾಧ್ಯತೆಗಳ ಬಗ್ಗೆ ಪ್ರೀತಿ, ನಂಬಿಕೆ ಹೆಚ್ಚುತ್ತಾ ಹೋಗುವುದಲ್ಲವೆ? ನಮ್ಮ ನಮ್ಮ ಬದುಕಿನ ಅನುಭವಗಳ ಸುತ್ತ ನಮ್ಮಲ್ಲಿ ಹುಟ್ಟಿಕೊಂಡ ಪ್ರಶ್ನೆಗಳು, ಸಿಗದ ಉತ್ತರಗಳೇ ಈ ನಾಟಕದ ಕಥಾನಿರೂಪಣೆಗೆ ಸ್ಫೂರ್ತಿ. ಕಲೆ ದುಃಖದ ಮಧ್ಯೆಯೇ ಅರಳುವಂಥದ್ದು. ಒಟ್ಟಾರೆಯಾಗಿ ನನಗಿಲ್ಲಿ ಬರೆವಣಿಗೆಯ ಕೌಶಲ ವೃದ್ಧಿಸಿಕೊಳ್ಳಲು ಈ ನಾಟಕ ವಿಶೇಷವಾಗಿ ಸಹಾಯಮಾಡಿತು.’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
desdemona

ಇವರಿಬ್ಬರೂ ನಮ್ಮೂರಿನ ಯಾವ ಪಾತ್ರಗಳಿಗೆ ಧ್ವನಿಯಾಗಿರಬಹುದು?

ಈ ಪ್ರಸ್ತುತಿಯ ಸಂಗೀತಕ್ಕೆ ಸಹಾಯ ಮಾಡಿದ ಅನುಭವ ವಿಶೇಷವಾಗಿತ್ತು ಎನ್ನುವ ಪ್ರವೀಣ ಡಿ. ರಾವ್, ‘ಪ್ರತಿಯೊಂದು ನಾಟಕವೂ ಹೊಸ ಸವಾಲೇ. ಆದರೆ ಪ್ರತೀ ಸಲವೂ ವಿಭಿನ್ನವಾಗಿರಬೇಕು ಎಂದು ಯೋಚಿಸುವಾಗ ಅದನ್ನು ಜನರಿಗೆ ಹೇಗೆ ಮುಟ್ಟಿಸುವುದು ಎನ್ನುವುದು ಹೆಚ್ಚು ಸವಾಲು. ಬಿಂದುಮಾಲಿನಿ ಮತ್ತು ಎಂ.ಡಿ. ಪಲ್ಲವಿ ನುರಿತ ಕಲಾವಿದರು. ಬೇರೆಬೇರೆ ದೇಶಗಳ ಸಂಚರಿಸಿ ಅನೇಕ ಸಂಸ್ಕೃತಿಗಳನ್ನು ಅರಿತುಕೊಂಡವರು. ಇಲ್ಲಿ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ಅವತಾರವನ್ನು ತಾಳಿ ಇವರಿಬ್ಬರೂ ವೇದಿಕೆಯ ಮೇಲೆ ಬರುವುದನ್ನು ನೋಡುವುದೇ ಆಸಕ್ತಿಕರವಾಗಿದೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಸ್ಥಳೀಯತೆಯನ್ನು ಭಾಷಾವೈವಿಧ್ಯದೊಂದಿಗೆ ಮಾರ್ಮಿಕವಾಗಿ ಈ ಕಲಾತಂಡ ಅಳವಡಿಸಿಕೊಂಡಿದೆ. ಮುಕ್ತಮನಸಿನ ಪ್ರೇಕ್ಷಕರಿಗೆ ಈ ನಾಟಕ ಹೇಳಿ ಮಾಡಿಸಿರುವಂಥದ್ದು. ಈ ಕಲಾವಿದರಿಬ್ಬರ ಮನಸ್ಸನಲ್ಲಿ ಬಹಳ ಸ್ಪಷ್ಟಚಿತ್ರಣ ಇದ್ದಿದ್ದರಿಂದ ನನಗೆ ಸಂಗೀತಕ್ಕೆ ಸಹಕರಿಸಲು ಅನುಕೂಲವಾಯಿತು’ ಎನ್ನುತ್ತಾರೆ.
*
ನಿರ್ದೇಶನ ಮತ್ತು ದೃಶ್ಯಶಾಸ್ತ್ರ : ಅಭಿಷೇಕ ಮಜುಂದಾರ್
ಮೂಲ ಪಠ್ಯ : ಶೇಕ್ಸ್​ಪಿಯರ್​ನ ಒಥೆಲ್ಲೋ, ತಿಶಾನಿ ದೋಶಿಯ ‘ಗರ್ಲ್ಸ್​ ಆರ್ ಕಮಿಂಗ್​ ಔಟ್ ಆಫ್​ ದಿ ವುಡ್ಸ್​’
ಅನುವಾದ : ಎಂ. ಡಿ. ಪಲ್ಲವಿ, ಬಿಂದುಮಾಲಿನಿ, ನಿಖಿಲ್ ಭಾರದ್ವಾಜ್
ಧ್ವನಿ ವಿನ್ಯಾಸ : ನಿಖಿಲ್ ನಾಗರಾಜ್
ಬೆಳಕು ವಿನ್ಯಾಸ್ : ನಿರಂಜನ್ ಗೋಖಲೆ
ಪ್ರಸಾಧನ : ರಾಮಕೃಷ್ಣ ಎನ್​.ಕೆ.
ನಿರ್ಮಂಆಣ : ವೀಣಾ ಅಪ್ಪಯ್ಯ
ಕಲಾವಿನ್ಯಾಸ : ಶ್ರೀಧರ ಮೂರ್ತಿ
ವಸ್ತ್ರ ವಿನ್ಯಾಸ : ಅರುಂಧತಿ ನಾಗ್, ಅಭಿಷೇಕ್ ಮಜುಂದಾರ್
ಸಂಗೀತ ಸಹಕಾರ : ಪ್ರವೀಣ್ ರಾವ್
ಪ್ರಸ್ತುತಿ : ನಳಂದಾ ಆರ್ಟ್​ ಸ್ಟುಡಿಯೋ.
ಸಹಕಾರ : ರಂಗಶಂಕರ
ಸ್ಥಳ : ರಂಗಶಂಕರ, ಜೆ.ಪಿ. ನಗರ ಬೆಂಗಳೂರು.  ದಿನಾಂಕ : ಏಪ್ರಿಲ್ 10 ಮತ್ತು 11. ಸಮಯ : ಮಧ್ಯಾಹ್ನ 3.30 ಮತ್ತು ಸಂಜೆ 7.30
ಟಿಕೆಟ್​ : bookmyshow.com