Booker Prize 2022 : ಉತ್ತರಪ್ರದೇಶದ ಮೈನ್ಪುರಿ ಮೂಲದ 64ರ ಗೀತಾಂಜಲಿ ಶ್ರೀ (Geetanjali Shree) ದೆಹಲಿ ನಿವಾಸಿ, ಮೂರು ಕಾದಂಬರಿಗಳು ಮತ್ತು ಹಲವು ಸಣ್ಣಕಥಾ ಸಂಗ್ರಹಗಳ ಲೇಖಕಿ. ಇಂಗ್ಲಿಷ್, ಫ್ರೆಂಚ್, ಜರ್ಮನ್, ಸೆರ್ಬಿಯನ್ ಹಾಗೂ ಕೊರಿಯನ್ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಮತ್ತು ಫೆಲೋಶಿಪ್ಗಳ ಅಂತಿಮ ಪಟ್ಟಿಗಳಿಗೆ ಅವರ ಹೆಸರು ಸೇರಿದ್ದಿದೆ. ಪ್ರಸ್ತುತ ಬೂಕರ್ ಪ್ರಶಸ್ತಿ ಪಡೆದ ‘ಟಾಂಬ್ ಆಫ್ ಸ್ಯಾಂಡ್’ (Tomb of Sand) ಬ್ರಿಟನ್ನಲ್ಲಿ ಪ್ರಕಟವಾಗಿರುವ ಅವರ ಮೊದಲ ಕೃತಿ. ಈ ಕೃತಿಯ ಅನುವಾದಕಿ ಡೇಸಿ ರಾಕ್ವೆಲ್ (Daisy Rockwell) ಅವರು ಅಮೆರಿಕೆಯ ವರ್ಮಾಂಟ್ನಲ್ಲಿ ನೆಲೆಸಿರುವ ಚಿತ್ರಕಲಾವಿದೆ, ಲೇಖಕಿ ಮತ್ತು ಅನುವಾದಕಿ. ಹಿಂದೀ ಮತ್ತು ಉರ್ದು ಭಾಷೆಯ ಅನೇಕ ಉತ್ಕೃಷ್ಟ ಕೃತಿಗಳನ್ನು ಇವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ತನ್ನ ಪತಿಯ ಮರಣದ ನಂತರ ಕಡು ಖಿನ್ನತೆಗೆ ಜಾರಿ ಪುನಾ ಹೊಸ ಬದುಕನ್ನು ಕಟ್ಟಿಕೊಳ್ಳಲು ತಲೆಯೆತ್ತುವ 80ರ ಉತ್ತರಭಾರತದ ಹೆಣ್ಣುಮಗಳ ಕತೆ ಈ ಕಾದಂಬರಿಯ ವಸ್ತು. ಈ ಪ್ರಶಸ್ತಿ ಗೀತಾಂಜಲಿ ಶ್ರೀ ಅವರಿಗೆ ಸಂದ ಸಂದರ್ಭದಲ್ಲಿ ನಮ್ಮ ನಡುವಿನ ಅಂಕಣಕಾರ್ತಿ, ಸ್ತ್ರೀವಾದಿ ಡಾ. ಕೆ. ಎಸ್. ವೈಶಾಲಿ (K.S. Vaishali) ಹರ್ಷದಾಯಕ ವಿಚಾರಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ನಿಮ್ಮ ಓದಿಗೆ.
ಗೀತಾಂಜಲಿ ಶ್ರೀ ಅವರಿಗೆ ಸಂದ ಪ್ರತಿಷ್ಠಿತ ಗೌರವ ಇದು ದೊಡ್ಡ ಭರವಸೆಯ ಸಂಕೇತ. ಇದು ಭಾರತೀಯ ಭಾಷೆಗಳ ಗೆಲುವು. ಪ್ರಸ್ತುತ ದಿನಮಾನಗಳಲ್ಲಿ ಇಂಥ ಗೆಲುವುಗಳು ಹೆಚ್ಚಬೇಕು. ಇಂಗ್ಲಿಷ್ ಅನ್ನು ಮಲ್ಟಿಲಿಂಗ್ವಲ್ ಸ್ಪೇಸ್ನಲ್ಲಿಯಷ್ಟೇ ವ್ಯವಹರಿಸುವುದಕ್ಕೆ ನಾವು ಕಲಿಯಬೇಕು. ಅನುವಾದ ಅನ್ನೋದು ಅನುಸಂಧಾನ. ಸಾಂಸ್ಕೃತಿಕ ನಿಲುವಿನ ಜೊತೆಗೆ ಸಾಗುವಂಥದ್ದು. ನಮ್ಮ ಪ್ರಾಂತೀಯ ಭಾಷೆಯಾಗಲಿ ಮಾತೃಭಾಷೆಯನ್ನಾಗಲಿ ಸುಲಭಕ್ಕೆ ಬಿಟ್ಟುಕೊಡಬಾರದು. ಆಗಲೇ ಇಂಗ್ಲಿಷ್ನ ಪರಕೀಯತೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.
ತೃತೀಯ ಜಗತ್ತು ಮತ್ತು ವಸಾಹತೋತ್ತರ ಹಿನ್ನೆಲೆಯಲ್ಲಿ ನೋಡುವುದಾದರೆ ಇದು ಅತ್ಯಂತ ಖುಷಿಯ ಮೈಲಿಗಲ್ಲು. ಮಾತೃಭಾಷೆಯನ್ನು ನೇಪಥ್ಯಕ್ಕೆ ಸರಿಸಿ, ನಮ್ಮನ್ನು ಆಳಿದವರ ಭಾಷೆಗೆ ಪ್ರಾಬಲ್ಯಕ್ಕೆ ಒಳಗಾಗುತ್ತ ತೀಕ್ಷ್ಣ ಭಾಷಾರಾಜಕಾರಣದ ಪರಿಣಾಮವನ್ನು ಅನುಭವಿಸಿದ್ದು ನಾವು ಭಾರತೀಯರು ಮತ್ತು ಆಫ್ರಿಕನ್ನರು. ಈ ಸಂದರ್ಭದಲ್ಲಿ ಈ ಹಿಂದೆ ನಡೆದ ಆಫ್ರಿಕದ ಬರಹಗಾರರ ಸಮ್ಮೇಳನ ನೆನಪಿಗೆ ಬರುತ್ತಿದೆ. ಆಫ್ರಿಕದ ಸ್ಥಳೀಯ ಭಾಷೆಗಳಾದ ಯೊರೂಬಾ, ಸ್ವಾಹಿಲಿಯಂಥ ಭಾಷೆಗಳನ್ನೆಲ್ಲ ನೇಪಥ್ಯಕ್ಕೆ ಸರಿಸಿ ಇಂಗ್ಲಿಷ್ನಲ್ಲಿ ಬರೆಯುವ ಆಫ್ರಿಕನ್ ಲೇಖಕರನ್ನು ಸೇರಿಸಿ ಮಾಡಿದ ಸಮ್ಮೇಳನವಾಗಿತ್ತು. ಹೀಗಿದ್ದಾಗ ಆಫ್ರಿಕನ್ ಸಾಹಿತ್ಯದ ರೂಪುರೇಷೆ ನಿರ್ಧರಿಸೋದಕ್ಕೆ ಸಾಧ್ಯವೆ? ಇಂಥ ಸಂವೇದನಾರಹಿತ, ಯಜಮಾನ್ಯ ಸಂಸ್ಕೃತಿಯಿಂದ ಬೆಳವಣಿಗೆಗಳಿಂದ ಸಾಂಸ್ಕೃತಿಕ ವಲಯ ಕುಸಿಯುತ್ತಿದೆ. ಆದರೆ, ನಮ್ಮ ಸಂಸ್ಕೃತಿಯ ಪ್ರತಿನಿಧೀಕರಣ ಭಾಷಾ ಮಾಧ್ಯಮದಿಂದಲೇ ಆಗುವಂಥದ್ದು.
ಇದನ್ನೂ ಓದಿ : Booker Prize 2022: ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ
ಈ ಹಿನ್ನೆಲೆಯಲ್ಲಿ, ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದು ನೋಡುವಂಥ ಆಶಾವಾದದ ಸಂಕೇತದಂತೆ, ಭರವಸೆಯಂತೆ ಈ ಸಂದರ್ಭ ಕಾಣುತ್ತಿದೆ. ಭಾಷಾವಲಯದಲ್ಲಿರುವ ಯಜಮಾನಿಕೆ, ಪ್ರಭುತ್ವ, ಭಾಷಾ ತಾರತಮ್ಯವನ್ನು ಪ್ರಶ್ನಿಸುವಂಥ ವಾತಾವರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವಲಯದಲ್ಲಿ ಅತ್ಯಂತ ಪ್ರಜ್ಞಾವಂತಿಕೆ ಮತ್ತು ಸಂವೇದನಾಶೀಲತೆಯಿಂದ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ. ಬೇರೆ ಭಾಷೆಯಲ್ಲಿಯೂ ಮಹತ್ವದ ಕೃತಿಗಳು ಬರುತ್ತಿವೆ. ಪ್ರತಿಭಾವಂತ ಲೇಖಕ-ಲೇಖಕಿಯರಿದ್ಧಾರೆ ಎನ್ನುವ ಸಂಗತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಇಂಥ ವೇದಿಕೆ ಗುರುತಿಸಿರುವುದು ಮಹತ್ವದ ಸಾಧನೆ. ಆದರೆ ಇದು ಭಾರತೀಯ ಭಾಷೆಯ ಗೆಲುವು ಎಂಬ ದೃಷ್ಟಿಯಲ್ಲಿ ಇದನ್ನು ನೋಡಲು ಇಚ್ಛಿಸುತ್ತೇನೆ.
*
ಭಾರತೀಯ ಭಾಷಾ ಸಾಹಿತ್ಯಕ್ಕೇ ಮೂಡಿರುವ ಹೊಚ್ಚ ಹೊಸ ಗರಿ
ಗೀತಾಂಜಲಿ ಶ್ರೀ ಅವರ ಅನುವಾದಿತ ಹಿಂದಿ ಕೃತಿಗೆ ಸಂದಿರುವ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಭಾರತೀಯ ಭಾಷಾ ಸಾಹಿತ್ಯಕ್ಕೇ ಮೂಡಿರುವ ಹೊಚ್ಚ ಹೊಸ ಗರಿ. ಶತಶತಮಾನಗಳಿಂದ ಅತ್ಯಂತ ಶ್ರೀಮಂತವಾಗಿಯೂ ಸಮೃದ್ಧವಾಗಿಯೂ ಬೆಳೆ ಯುತ್ತಾ ಬಂದಿರುವ ಬಹುಭಾಷಿಕ ಭಾರತೀಯ ಸಾಹಿತ್ಯಸಿರಿಗೆ ಸಂದಿರುವ ಮನ್ನಣೆ ಇದು. ಹೆಚ್ಚಿನ ಪ್ರಸಾರವಿಲ್ಲದೆ ಪ್ರಚಾರವಿಲ್ಲದೆ ತಮ್ಮಷ್ಟಕ್ಕೆ ಗುಪ್ತಗಾಮಿನಿಯಾಗಿ ಹರಿದು ಬರುತ್ತಿರುವ ನಮ್ಮ ಸಾಹಿತ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ, celebrate ಮಾಡುವ ಇಂತಹ ಇಂಗ್ಲಿಷ್ ಅನುವಾದದ ಪ್ರಯತ್ನ ಸಾಂಸ್ಕ್ರತಿಕವಾಗಿ ಅತ್ಯಂತ ಮಹತ್ವವಾದ್ದು. ಅದರಲ್ಲೂ, ಈ ಸಲದ ಪ್ರಶಸ್ತಿ ಇಬ್ಬರು ಮಹಿಳೆಯರಿಗೆ ದೊರಕಿರುವುದು ಹೆಮ್ಮೆಯ ವಿಷಯ. ಅನುವಾದಕರ ಪರಿಶ್ರಮ ಪರಿಣತಿಯನ್ನು ಗುರುತಿಸಿ, ಅವರಿಗೂ ಸಮವಾದ ಮನ್ನಣೆ ನೀಡುತ್ತಿರುವುದು, ಇದುವರೆಗೂ ತೆರೆಯ ಮರೆಯಲ್ಲೇ ಇರುತ್ತಿದ್ದ ಅನು ವಾದಕ ಬಳಗಕ್ಕೆ ಸಂದ ಗೌರವ. ಈಚಿನ ವರ್ಷಗಳಲ್ಲಿ ಪರಿಚಯವಾದ ಸ್ನೇಹಮಯಿ ಗೀತಾಂಜಲಿಯವರಿಗೆ, 2018 ನಲ್ಲಿ ವಿಸ್ಕಾನ್ಸಿನ್ ನಲ್ಲಿ ಭೇಟಿಯಾಗಿದ್ದ ಅಮೆರಿಕ ಮೂಲದ ಡೈಸಿ ರಾಕ್ವೆಲ್ ಅವರಿಗೆ ಇಂತಹ ಅಪರೂಪದ ಅವಕಾಶ ಸಿಕ್ಕಿದ್ದು ವೈಯಕ್ತಿಕವಾಗಿಯೂ ನನಗೆ ಸಂತೋಷ ಕೊಟ್ಟಿದೆ. ಈಗಾಗಲೇ ಇಂಗ್ಲೀಷ್ ಮೂಲಕ ಜಗತ್ತನ್ನು ತಲುಪಿರುವ, ತಲುಪುತ್ತಿರುವ ಸತ್ವಯುತ ಕನ್ನಡ ಸಾಹಿತ್ಯ ಲೋಕಕ್ಕೂ ಇಂತಹ ಅಂತಾರಾಷ್ಟ್ರೀಯ ಮನ್ನಣೆ ಮಾನ್ಯತೆ ದೊರೆಯಲಿ ಎಂದು ಹಾರೈಸುತ್ತೇನೆ.
ಡಾ. ವನಮಾಲಾ ವಿಶ್ವನಾಥ, ಅನುವಾದಕಿ. ಲೇಖಕಿ
Published On - 12:48 pm, Fri, 27 May 22