AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ಸರ್ವನಾಶಕ್ಕೆ ಕಂಕಣ ಕಟ್ಟಿದ್ದೇ ಆದರೆ ಮಾನವ ತನ್ನತಾ ಹೇಗೆ ರಕ್ಷಿಸಿಕೊಳ್ಳಬಲ್ಲ?

Short Story of Palagummi Padmaraju : ಆ ಮೂರನೇ ಕಲಾಸು ಬೋಗೀಲಿ ಬಡವ್ರಿರ‍್ತಾರೆ. ಈ ಸಾಮಿಗಳ್ಗಿಂತ ಅವ್ರಿಗೇ ಜಾಸ್ತಿ ಕರುಣೆ. ನನ್ನ ಕಷ್ಟ ಅವ್ರಿಗೆ ಅರ್ಥವಾಯ್ತದೆ. ಈ ದುಡ್ಡಿರೊ ಸಾಮಿಗಳ್ದು ಕಲ್ಲೆದೆ ಅಂತ ತಿಳ್ಕೊಳ್ದೆ ವೋದ್ನಲ್ಲಪ್ಪ ದೇವ್ರೇ.

Literature: ನೆರೆನಾಡ ನುಡಿಯೊಳಗಾಡಿ; ಸರ್ವನಾಶಕ್ಕೆ ಕಂಕಣ ಕಟ್ಟಿದ್ದೇ ಆದರೆ ಮಾನವ ತನ್ನತಾ ಹೇಗೆ ರಕ್ಷಿಸಿಕೊಳ್ಳಬಲ್ಲ?
ತೆಲುಗು ಕಥೆಗಾರ ಪಾಲಗುಮ್ಮಿ ಪದ್ಮರಾಜು, ಅನುವಾದಕ ರಾಜಣ್ಣ ತಗ್ಗಿ
ಶ್ರೀದೇವಿ ಕಳಸದ
|

Updated on:May 27, 2022 | 5:07 PM

Share

ನೆರೆನಾಡ ನುಡಿಯೊಳಗಾಡ | Nerenaada Nudiyolagaadi : ಗಾಳಿ ಕ್ರಮೇಣ ಭಯಂಕರವಾಗಿ ಬೀಸತೊಡಗಿತು. ದೊಡ್ಡ ದೊಡ್ಡ ಹನಿಗಳು ಧೋ ಎಂದು ರೈಲು ಬೋಗಿಯ ಮೇಲೆ ಬೀಳುತ್ತಿದ್ದವು. ಆ ಮಳೆಯ ಆರ್ಭಟದಲ್ಲಿ ರೈಲು ಚಲಿಸುತ್ತಿರುವ ಸದ್ದು ಕೂಡ ಮರೆಯಾಗಿತ್ತು. ರೈಲು ಚಲಿಸುತ್ತಿದೆ ಎಂಬುದನ್ನು ಅದರ ಕುಲುಕಿನಿಂದ ರಾವ್ ಗ್ರಹಿಸಿದರು. ‘ತುಫಾನಿನಂತೆ ಕಾಣುತ್ತಿದೆಯಲ್ಲ’ ಎಂದ ಯುವಕ ತನ್ನ ಹೆಂಡತಿಗೆ. ಆ ಯುವತಿ ಅದಕ್ಕೆ ಉತ್ತರಿಸದೆ ಒಂದು ರಗ್ಗನ್ನು ಎಳೆದುಕೊಂಡು ಹೊದ್ದುಕೊಂಡಳು. ಆಕೆಯ ಮುಖದಲ್ಲಿ ಯಾವುದೊ ದೊಡ್ಡ ಚಿಂತೆಯೊಂದು ಪ್ರತಿಫಲಿಸುತ್ತಿತ್ತು. ಗಾಳಿ ಮಳೆಯನ್ನು ಕಂಡು ರಾವ್ ಅವರ ಮನಸ್ಸಿನಲ್ಲಿ ನಡುಕ ಪ್ರಾರಂಭವಾಯಿತು. ರೈಲುಬೋಗಿಯ ಬಾಗಿಲು ತೆರೆದುಕೊಂಡಿತು. ಒಂದೇ ಸಲಕ್ಕೆ ಗಾಳಿ ಮತ್ತು ಮಳೆ ಎರಡೂ ತೂರಿಬಂದವು. ಹರಿದು ಹೋದ ಮತ್ತು ಒದ್ದೆಯಾದ ಬಟ್ಟೆ ಧರಿಸಿದ್ದ ಒಬ್ಬಾಕೆ ರೈಲುಬೋಗಿಯೊಳಕ್ಕೆ ಪ್ರವೇಶಿಸಿದಳು. ಒಳಗೆ ಕುಳಿತಿದ್ದವರು ಹೇಳುತ್ತಿದ್ದ ಅಭ್ಯಂತರಗಳನ್ನೂ ಲೆಕ್ಕಿಸದೆ ಬಾಗಿಲು ಮುಚ್ಚಿ ಒಂದು ಮೂಲೆಯಲ್ಲಿ ನೀರನ್ನು ಸುರಿಸುತ್ತ ನಿಂತುಕೊಂಡಳು. ಹಿರಿಯ ವ್ಯಕ್ತಿ ಅತಿಯಾದ ಕೋಪದಿಂದ ‘ಇದು ಗೌರವ ಮರ್ಯಾದೆ ಇರುವವರ ಬೋಗಿ ಅನ್ನೋದು ಗೊತ್ತಿಲ್ವಾ ?’ ಎಂದ.

ಕಥೆ : ಗಾಳಿ ಮಳೆ | ತೆಲುಗು ಮೂಲ : ಪಾಲಗುಮ್ಮಿ ಪದ್ಮರಾಜು | ಕನ್ನಡಕ್ಕೆ : ಟಿ.ಡಿ. ರಾಜಣ್ಣ ತಗ್ಗಿ

(ಭಾಗ 2)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

‘ಅಯ್ಯಾ ಬುದ್ದಿ…! ತಾತ.. ತಾತ.. ಈ ತಿರುಪೆಯೋಳ ಮೇಲೆ ದಯೆ ತರ‍್ಸಿ ಇಲ್ಲಿ ಸೊಲ್ಪ ನಿಂತ್ಕಳಾಕೆ ಜಾಗ ಕೊಡಿ ಸಾಮಿ. ದಯಾಮಯ ಸ್ವಾಮ್ಗೋಳು… ಮಕ್ಳು ಮರಿ ಇರೋ ತಂದೆಯೋರು… ಈ ತಿರುಪೆಯೋಳ್ ಕೈಗೆ ಒಂದೆರಡು ಕಾಸು ಬಿಸಾಕಿ ಸಾಮಿ. ವೊಟ್ಟೆ ಹಸ್ವು ನನ್ನನ್ನು ಸುಟ್ಹಾಕ್ತಾ ಐತೆ ಸಾಮಿ. ಮರ್ಯಾದಸ್ಥ ಸ್ವಾಮ್ಗೋಳು… ದುಡ್ಡಿರೊ ಧಣಿಗಳು… ಎಲ್ರೂ ದೊಡ್ಡ ಪ್ರಭುಗಳೇ… ಈ ಬಡಭಿಕ್ಷುಕಿಯನ್ನು ಹಿಂಗೆ ಹಸಿವ್ನಿಂದ ಸಾಯೋಕೆ ಬಿಡಲ್ಲ ಸ್ವಾಮ್ಗೋಳು…’

ರಾವ್ ಅವರು ಆಕೆಯ ಕಡೆ ನೋಡಿದರು. ಆಕೆಯ ಕಣ್ಣಿನಲ್ಲಿ ತಮಾಷೆಯಂತೆ ಹೊಳೆಯುತ್ತಿದ್ದ ಒಂದು ಕಾಂತಿಯಿತ್ತು. ಆ ಕಾಂತಿಯು ರಾವ್ ಅವರ ಹೃದಯಲ್ಲಿ ವಿರೋಧಭಾವವನ್ನು ಕೆರಳಿಸಿತು. ಆಕೆಯ ವಯಸ್ಸು ಸುಮಾರು ಮೂವತ್ತರ ಆಸುಪಾಸಿನಲ್ಲಿತ್ತು. ಹೊಟ್ಟೆ ತುಂಬ ಉಂಡು ಅಷ್ಟೊಂದು ಕೊಬ್ಬಿಲ್ಲದಿದ್ದರೂ ಹಸಿವಿನಿಂದ ಸಾಯುತ್ತಿರುವಂತೆ ಮಾತ್ರ ಆಕೆ ಕಾಣಿಸುತ್ತಿರಲಿಲ್ಲ. ಆಕೆ ಎಷ್ಟೇ ಅಸಹಾಯಕತೆಯನ್ನು ನಟಿಸಿದರೂ ಆಕೆಯಲ್ಲಿ ಯಾವುದೊ ಒಂದು ಸ್ಥೈರ್ಯವಿತ್ತು. ಭಿಕ್ಷೆ ಕೇಳುವವರ ಬಗ್ಗೆ ರಾವ್ ಅವರಿಗೆ ಅನುಕಂಪವಿಲ್ಲದೆ ಏನಿಲ್ಲ. ಆದರೆ ಭಿಕ್ಷೆ ಕೇಳುವುದು ತಪ್ಪು ಎಂಬುದೇ ಅವರ ಖಚಿತಾಭಿಪ್ರಾಯ. ಆ ಭಿಕ್ಷುಕಿ ಅವರ ಬಳಿಗೆ ಬಂದು ಭಿಕ್ಷೆ ಕೇಳಿದ್ದಕ್ಕೆ ಅವರು ಯಾವ ಮುಲಾಜೂ ಇಲ್ಲದೆ ಜೋರಾಗಿ, ‘ಮುಂದೆ ಹೋಗು’ ಎಂದರು. ಆಕೆ ತನ್ನ ಮುಖವನ್ನು ಅದೊಂದು ರೀತಿ ಮಾಡಿಕೊಂಡು ಇನ್ನೊಂದು ಕಡೆಗೆ ತಿರುಗಿದಳು. ಎದುರಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿಯ ಹತ್ತಿರಕ್ಕೆ ಹೋಗಿ ಬಗ್ಗಿ ಆತನ ಪಾದವನ್ನು ಮುಟ್ಟಿದಳು. ಆತ ತನ್ನ ಕಾಲುಗಳನ್ನು ಹಿಂದಕ್ಕೆಳೆದುಕೊಂಡು ವ್ಯಂಗ್ಯ ನಗೆಯನ್ನು ನಗುತ್ತ,

‘ಹೋಗ್ ಹೋಗ್’ ಎಂದ.

‘ಹಂಗನ್ಬೇಡಿ ತಾತೋರೆ… ಆ ಸಾಮಿಯಷ್ಟು ಕಲ್ಲು ಹೃದಯ ನಿಮ್ದಲ್ಲ ಬಿಡಿಸಾಮಿ. ಆ ಸಾಮಿಯರ‍್ಗೆ ಇಷ್ಟು ಮಾತ್ರಾನೂ ಕರುಣೆಯಿಲ್ಲ. ಹಸಿವ್ನಿಂದ ಸತ್ತೋಗ್ತಿರೊ ಭಿಕಾರಿ ಭಿಕ್ಷೆ ಕೇಳುದ್ರೆ ‘ಮುಂದೆ ಹೋಗು’ ಅಂತಾನೆ ಸಾಮಿ…’

ತಾನು ಹೇಳಿದ, ‘ಮುಂದೆ ಹೋಗು’ ಅನ್ನು ಅಣಕದಿಂದ ಅನುಕರಿಸಿದ್ದು ದೊಡ್ಡ ಅಹಂಕಾರಿತನ ಅಂತ ರಾವ್ ಅವರಿಗೆ ಅನ್ನಿಸಿತು. ಆದರೆ ಅವರಿಗೆ ಏನು ಅನ್ನಬೇಕೊ ಅಂತ ತೋಚಲಿಲ್ಲ. ಇಷ್ಟವಿಲ್ಲದಿದ್ದರೂ ಆಕೆಯ ಕಡೆ ನೋಡುತ್ತ ಹಾಗೇ ಕುಳಿತುಕೊಂಡಿದ್ದರು. ಹಿರಿಯ ವ್ಯಕ್ತಿ ಮಾತ್ರ ವಿಚಿತ್ರವಾದ ಅವಸ್ಥೆಯಲ್ಲಿ ಬಿದ್ದ. ಅವಳಿಗೆ ಏನೊ ಒಂದು ಕಾಸು ಕೊಟ್ಟು ಕಳಿಸಿದರೆ ಬೋಗಿಯಲ್ಲಿರುವ ನಾಲ್ಕೂ ಮಂದಿ ಮೇಲ್ನೋಟಕ್ಕೆ ಏನನ್ನೂ ಹೇಳದಿದ್ದರೂ ಸಂತೋಷಿಸುವುದಿಲ್ಲ ಅನ್ನೋದು ಆತನ ಅನುಮಾನ. ಕೊಡದೆ ಹೋದರೆ ಈ ತಿರುಪೆಯವಳು ತನ್ನ ಬಾಯನ್ನು ಹೇಗೆಲ್ಲ ಹರಿಯಬಿಡುತ್ತಾಳೊ ಅನ್ನೋ ಭಯ. ಇದರಲ್ಲಿ ಯಾವುದು ಉತ್ತಮವೊ ಆತನಿಗೆ ತಿಳಿಯಲಿಲ್ಲ. ಕೊನೆಗೆ ಇಲ್ಲದ ಆವೇಶವನ್ನು ತಂದುಕೊಂಡು ಆಕೆಯನ್ನು ಮುಂದಕ್ಕೆ ಹೋಗೆಂದ. ತಿರುಪೆಯವಳು ವ್ಯಥೆಪಡತೊಡಗಿದಳು.

ಇದನ್ನೂ ಓದಿ : Booker Prize 2022: ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

‘ಇದ್ರೊಳಗೆ ದುಡ್ಡಿರೊ ದೊರೆಗಳಿದ್ದಾರಂತ, ನನ್ನಂತ ತಿರುಪೆ ಭಿಕಾರಿಯನ್ನು ಹಸ್ವಿನಿಂದ ಸಾಯಾಕ್ ಬಿಡಲ್ಲ ಅಂತ ಎಷ್ಟೊ ಆಸೆ ಯಿಟ್ಕಂಡು ಈ ಬೋಗಿಯೊಳಕ್ಕೆ ಬಂದ್ನಲ್ಲಪ ದೇವ್ರೇ! ಇವತ್ತಿನ ಕೂಳಿಗಿಷ್ಟು ಕೇಳಿ ಯಿಸ್ಕಳಾಣ ಅಂತನ್ಕಂಡಿದ್ದೆ. ಮೋಸ ಆಗೋಯ್ತಲ್ಲಪ್ಪ ದೇವ್ರೇ. ಆ ಮೂರನೇ ಕಲಾಸು ಬೋಗೀಲಿ ಬಡವ್ರಿರ‍್ತಾರೆ. ಈ ಸಾಮಿಗಳ್ಗಿಂತ ಅವ್ರಿಗೇ ಜಾಸ್ತಿ ಕರುಣೆ. ನನ್ನ ಕಷ್ಟ ಅವ್ರಿಗೆ ಅರ್ಥವಾಯ್ತದೆ. ಈ ದುಡ್ಡಿರೊ ಸಾಮಿಗಳ್ದು ಕಲ್ಲೆದೆ ಅಂತ ತಿಳ್ಕೊಳ್ದೆ ವೋದ್ನಲ್ಲಪ್ಪ ದೇವ್ರೇ. ವೊರಗೆ ನೋಡುದ್ರೆ ಗಾಳಿ ಮಳೆ… ರೈಲು ಬ್ಯಾರೆ ವೋತಾ ಐತೆ. ಇಲ್ಲಿಂದ ಆ ದಯೆ ಇರೋ ಸ್ವಾಮ್ಗಳ ಹತ್ರುಕ್ಕೆ ಹೆಂಗ್ ವೋಗ್ಲಿ… ಇಲ್ಲಿಂದ ಹೆಂಗ್ ವೋಗ್ಲಿ…!’

ತಿರುಪೆಯಾಕೆ ಎಲ್ಲ ದೃಷ್ಟಿಯನ್ನು ತನ್ನ ಕಡೆಗೆ ಆಕರ್ಷಿಸಿದಳು. ರಾವ್ ಅವರ ಪಕ್ಕದಲ್ಲಿದ್ದ ಹಿರಿಯಾತ ಪತ್ತೆದಾರಿ ಕಾದಂಬರಿ ಓದುವುದನ್ನು ನಿಲ್ಲಿಸಿ, ಆಕೆಯ ಕಡೆಗೆ ವಿಚಿತ್ರವಾಗಿ ನೋಡಿದ. ‘ಎಂದ ಊರು ನಿಂದು’ ಎಂದು ತಮಿಳ್ಗನ್ನಡದಲ್ಲಿ ಕೇಳಿದ. ‘ನಮ್ಮಂತಹ ತಿರುಪೆಯೋಳ್ಗೆ ಒಂದು ವೂರಾ ? ಒಂದು ಹಳ್ಳಿಯಾ ಸಾಮಿ ? ತಮ್ಮಂತಹ ಪ್ರಭುಗಳಿಗೆ ಯೇಳ್ಕಳಕ್ಕೆ ಅಂತ ಒಂದೂರಾದ್ರೂ ಇರ್ತೇತೆ. ದೊಡ್ಡ ದೊಡ್ಡ ಅರಮನಿಗಳರ‍್ತವೆ. ನಿಮ್ಮ ಮನೆ ಗೇಟು ಮುಂದೆ ಕಾವಲು ಕಾಯೋನಿರ‍್ತಾನೆ. ಅವನು ಭಿಕ್ಷಕರ್ನ ಒಳಕ್ಕೆ ಬಿಡ್ದಂಗೆ ಓಡುಸ್ತಾನೆ. ಸ್ವಾಮ್ಗಳಾ ನಮ್ಮಂತ ಬಿಕಾರಿಗಳ್ಗೆ ವೂರೇನು..?’

‘ನಾಲಿಗೆ ತುಂಬ ಉದ್ದ’ ಎಂದನಾತ ಇಂಗ್ಲಿಷ್‌ನಲ್ಲಿ ರಾವ್ ಅವರ ಕಡೆ ತಿರುಗಿ.

ಹೊರಗೆ ಪೂರಾ ಕತ್ತಲೆಯಾಗಿಬಿಟ್ಟಿತ್ತು. ಕತ್ತಲೆಯಾಗುತ್ತಿದ್ದಂತೆಯೇ ಗಾಳಿ ಮತ್ತಷ್ಟು ತೀವ್ರವಾಗಿ ಬೀಸತೊಡಗಿತ್ತು. ರೈಲು ನೀರು ಹಾವಿನಂತೆ ಸಾಗಿ ಹೋಗುತ್ತಿತ್ತು. ರಾವ್ ಅವರು ಇಳಿಯಬೇಕಾದ ಸ್ಟೇಷನ್ ಹತ್ತಿರವಾಗುತ್ತಿತ್ತು. ಆಸ್ತಿಕ ಸಮಾಜದ ಸದಸ್ಯರು ಯಾರಾದರೂ ಸ್ಟೇಷನ್‌ಗೆ ಬರದೆ ಹೋಗುವುದಿಲ್ಲ ಎಂದು ರಾವ್ ಆಸೆಯಿಂದಿದ್ದರು. ಅವರ ಮನಸ್ಸು ಕಳವಳಕ್ಕೊಳಗಾಗಿತ್ತು. ತಾನೂ ತನ್ನ ಸಾಮಾನುಗಳೂ ರೈಲಿನಿಂದ ಇಳಿಯಬೇಕು. ಅದು ಈಗಿನ ಸಮಸ್ಯೆ. ಸಹ ಪ್ರಯಾಣಿಕರು ಸಹಾಯ ಮಾಡದೆ ಹೋಗುವುದಿಲ್ಲ. ಗಾಳಿಯು ಹೊರಗೆ ಕೋಪದಿಂದಿರುವ ಮಹಾಸಮುದ್ರದಂತೆ ಹೋರೆನ್ನುತ್ತಿತ್ತು. ಮರಗಳು ಮುರಿದು ಬೀಳುತ್ತಿರುವ ಸದ್ದಿನಂತಹವು ಅದೆಷ್ಟೊ ಸೇರಿ ದೊಡ್ಡ ಶಬ್ದ ಕೇಳಿಬರುತ್ತಿತ್ತು. ಕದಲುತ್ತಿರುವ ರೈಲು ಮತ್ತು ಗಾಳಿಗೆ ಕಾರಣೀಭೂತವಾದ ಮಾನವನ ಮೇಧಸ್ಸು ಆ ಗಾಳಿಮಳೆಯಲ್ಲಿ ನಿರುಪಯೋಗದಂತೆಯೂ, ಅತ್ಯಲ್ಪದಂತೆಯೂ ಅನ್ನಿಸುತ್ತಿದ್ದವು. ಬೋಗಿಯಲ್ಲಿ ಸ್ವಲ್ಪ ಸುಖವಾಗಿಯೇ ಇತ್ತು. ಆದರೆ ಅಲ್ಲಿಂದ ಇಳಿದು ಹೋಗಬೇಕು.

ಇದನ್ನೂ ಓದಿ : Booker Prize 2022: ‘ಇದು ಭಾರತೀಯ ಭಾಷೆಯ ಗೆಲುವು’ ಕೆ. ಎಸ್. ವೈಶಾಲಿ

ಭಿಕ್ಷುಕಿ ಬೋಗಿಯಲ್ಲಿದ್ದ ಯುವ ದಂಪತಿಗಳ ಎದುರಲ್ಲಿ, ಅವರಿಬ್ಬರ ನಡುವೆ ಸ್ವಲ್ಪ ಹೊತ್ತು ನಿಂತು, ಮತ್ತೆ ತಿರಿಯುವುದಕ್ಕೆ ಪ್ರಾರಂಭಿಸಿದಳು.

‘ಅರೆರೆ! ಚಿಕ್ಕಮ್ಮಾವ್ರೂ ಕುಂತವ್ರಿಲ್ಲ. ಓಹ್… ಚಿಕ್ಕ ಅಯ್ಯಾವ್ರು ಕೂಡ ಅವ್ರಲ್ಲ… ಇನ್ನೇನು ಬಿಡು! ನೋಡ್ಲಿಲ್ಲ… ನಾನೊಬ್ಳು ಹುಚ್ಚುಮುಂಡೆ ! ಅಮ್ಮಾವ್ರೆ ಚಿಕ್ಕಯ್ಯಾವ್ರಿಗೆ ಯೇಳಿ ಒಂದು ಕಾಸು ಕೊಡ್ಸು ತಾಯಿ. ಯಾಕವ್ವ ಮಾರಿ ಆಕಡೀ ತಿರುಗುಸ್ಕೊಂತಿರಿ? ಚಿಕ್ಕಮ್ಮಾವ್ರಿಗೂ ಚಿಕ್ಕಯ್ಯಾವ್ರಿಗೂ ಯೇನಾದ್ರೂ ಮನಸ್ತಾಪ ಆಗೈತೈನು? ಚಿಕ್ಕಯ್ಯಾವ್ರು ಯಾವಾಗ್ಲೂವೆ ಸಿಗ್ರೇಟು ಸೇದ್ತಾರೆ. ಚಿಕ್ಕಮ್ಮಾವ್ರೆ ನೀವು ಸೇದಕ್ಕೆ ಬಿಡ್ಕೂಡ್ದು. ಅರೆರೆ! ಅಮ್ಮಾವ್ರಿಗೆ ನಗು ಬತ್ತಾಯ್ತೆ. ಯುವತಿ ಕಿರುನಗೆಯನ್ನು ನಿಗ್ರಹಿಸಿಕೊಳ್ಳಲಾರದೆ ಹೋದಳು. ಯುವಕ ಹೊಟ್ಟೆ ಹುಣ್ಣಾಗುವಂತೆ ನಕ್ಕು ಹೇಳಿದ, ‘ನೀನೂ ನಮ್ಜೊತೇನೆ ಬರಬಾರದಾ? ಕೆಲಸ ಕಾರ್ಯ ಮಾಡ್ಕೊಂಡು ಇರೀವಂತೆ. ಊಟ ಬಟ್ಟೆ ಕೊಡ್ತೀವಿ.’ ‘ಏನೊ ಒಂದು ಕೊಟ್ಟು ಕಳಿಸ್ಬರ‍್ದಾ?’ ಎಂದಳು ಯುವತಿ ಗಂಡನಿಗೆ.

‘ನಂಗೊತ್ತು. ಚಿಕ್ಕಮ್ಮಾವ್ರ ಮನಸ್ಸು ಬೆಣ್ಣೆಯಂತದ್ದು. ತಾತಯ್ಯ ಕೂಡ ನನಗೀಗ ಒಂದು ಆಣೆಗಿಂತ್ಲೂ ಕಡಿಮೆ ಕೊಡೊಲ್ಲ. ಹುಚ್ಚುಮುಂಡೆ ಆದ ನಾನು ಈ ಅಯ್ಯಾವ್ರಿಗೆ ಕೋಪ ಬರೋತರ ಮಾತಾಡ್ಕೂಡ್ದು. ತಾತಯ್ಯನಂತ ಒಳ್ಳೇರು ಎಲ್ಲೂ ಇಲ್ಲ. ತಾತಯ್ಯ ಕೂಡ ತುಂಬ ಕರುಣೆ ಇರೋ ದೊರೆಗಳು…’

ರಾವ್ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಆಕೆಗೆ ಏನೊ ಒಂದಿಷ್ಟು ಕೊಟ್ಟರು. ಆಕೆಯ ಮಾತುಗಳನ್ನು ಕೇಳುತ್ತಿದ್ದರೆ ಎಲ್ಲರಿಗೂ ತಮಾಷೆಯಂತಿದ್ದವು. ಆದರೆ ರಾವ್ ಅವರ ಮನಸ್ಸು ಮಾತ್ರ ಬೇರೆ ವಿಷಯಗಳಲ್ಲಿ ಮಗ್ನವಾಗಿತ್ತು. ಆತ ಗಾಳಿಮಳೆಯ ಬಗ್ಗೆ ಮತ್ತು ತಾನು ರೈಲಿನಿಂದ ಇಳಿಯುವುದರ ಬಗ್ಗೆ ಆಲೋಚಿಸುತ್ತಿದ್ದರು. ರೈಲು ನಿಂತದ್ದು ರಾವ್ ಅವರಿಗೆ ಒಂದು ಮುಹೂರ್ತದ ರೀತಿ ತಿಳಿಯಲಿಲ್ಲ. ಸರಿಯಾಗಿ ಅದೇ ಸಮಯಕ್ಕೆ ಗಾಳಿಮಳೆ ಮತ್ತಷ್ಟು ತೀವ್ರವಾಯಿತು. ಅವರು ಒಂದು ಕೈಯಲ್ಲಿ ಕೊಡೆಯನ್ನು ಹಿಡಿದುಕೊಂಡು ಎದ್ದರು. ಬಾಗಿಲು ತೆರೆದ ಕೂಡಲೇ ಗಾಳಿ ಅವರನ್ನು ಬಲವಾಗಿ ಹಿಂದಕ್ಕೆ ತಳ್ಳಿಹಾಕಿತು. ಅವರು ಆಯತಪ್ಪಿ ತೂರಾಡಿದರು. ಭಿಕ್ಷುಕಿ  ಅವರ ಸಾಮಾನುಗಳನ್ನು ಇಳಿಸಿ ಕೊಡುತ್ತೇನೆ ಎಂದಳು. ರಾವ್ ಅವರಿಗೆ ಆ ಸಂದರ್ಭದಲ್ಲಿ ಒಳ್ಳೆಯದು ಕೆಟ್ಟದ್ದನ್ನು ಆಲೋಚಿಸುವುದಕ್ಕೆ ಸಮಯವಿರಲಿಲ್ಲ. ಆಕೆಯ ಸಹಾಯವನ್ನು ಅಂಗೀಕರಿಸದೆ ವಿಧಿಯಿರಲಿಲ್ಲ. ಆದರೆ ಯಾವುದೊ ಅಸ್ಪಷ್ಟ ನಿಯಮಗಳನ್ನು ಉಲ್ಲಂಘಿಸಿದಂತೆ ಆತನ ಮನಸ್ಸಿನಲ್ಲಿ ಸ್ವಲ್ಪ ಬಾಧೆ ಉಂಟಾಯಿತು. ಆದರೆ ಅವರು ರೈಲನ್ನು ಇಳಿದು ಸ್ಟೇಷನ್ ಒಳಕ್ಕೆ ಓಡಿ ಹೋದರು. ತಿರುಪೆಯವಳು ಅವರ ಸಾಮಾನುಗಳ ಭಾರದಿಂದ ತೂರಾಡುತ್ತ ಅವರ ಹಿಂದೆಯೇ ಬಂದಳು. ಸಾಮಾನುಗಳನ್ನು ವೆಯಿಟಿಂಗ್ ರೂಮ್‌ನಲ್ಲಿ ಇಟ್ಟಳು. ಸ್ಟೇಷನ್‌ನಲ್ಲಿ ಎಲ್ಲಿಯೂ ಒಂದು ದೀಪವೂ ಇರಲಿಲ್ಲ. ರಾವ್ ಅವರು ಸ್ವಲ್ಪ ದುಡ್ಡನ್ನು ತೆಗೆದು ಆಕೆಗೆ ಕೊಡ ಹೋದರು. ಆಕೆ ಬೇಡವೆನ್ನಲಿಲ್ಲ. ಆದರೆ ಕೇಳಿಸದಂತೆ ಏನನ್ನೊ ಗೊಣಗಿಕೊಂಡು ಟಕ್ಕನೆ ಅಲ್ಲಿಂದ ಮರೆಯಾಗಿ ಹೋದಳು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’

ಸ್ತಬ್ಧರಾಗಿ ರಾವ್ ಅವರು ಮತ್ತೆ ಕೊಣೆಯೊಳಕ್ಕೆ ಹೋಗಿ ಕುಳಿತುಕೊಂಡರು. ಗುಂಯ್ ಎನ್ನುತ್ತಿದ್ದ ಆ ಗಾಳಿಯಲ್ಲಿ ಕಾಲುಗಳು ಹಿಡಿತ ತಪ್ಪಿ ಹೋಗುತ್ತಿದ್ದವು. ಬಟ್ಟೆಗಳೆಲ್ಲ ಒದ್ದೆಯಾಗಿದ್ದವು. ಪೆಟ್ಟಿಗೆಯನ್ನು ತೆರೆದು ಕೈಯಿಂದ ಅತ್ತಿತ್ತ ತಡಕಿದರು. ಬ್ಯಾಟರಿ ಕೈಗೆ ತಗುಲಿತು. ಹಿಡಿಸಲಾರದಷ್ಟು ಆನಂದ ಉಂಟಾಯಿತು. ರಾವ್ ಅವರಿಗೆ ಪೆಟ್ಟಿಗೆಯಲ್ಲಿ ಒಂದು ಬ್ಯಾಟರಿ ಇದೆಯೆಂಬ ವಿಷಯ ನೆನಪಿರಲಿಲ್ಲ. ಒದ್ದೆ ಬಟ್ಟೆಯನ್ನು ಬಿಚ್ಚಿ ಒಣ ಬಟ್ಟೆಯನ್ನು ಉಟ್ಟುಕೊಂಡರು. ಉಲ್ಲನ್ ಸ್ವೆಟರ್ ತೊಟ್ಟುಕೊಂಡರು. ಮಪ್ಲರ್ ತೆಗೆದು ಕಿವಿಯವರೆಗೂ ಬರುವಂತೆ ತಲೆಗೆ ಸುತ್ತಿಕೊಂಡರು. ಪೆಟ್ಟಿಗೆಯ ಬೀಗ ಹಾಕುವುದನ್ನು ಕೂಡ ಮರೆತು ಹೋಗಿ ಕುರ್ಚಿಯಲ್ಲಿ ಕುಳಿತುಕೊಂಡರು. ತನ್ನ ಸ್ಥಿತಿಯ ಬಗ್ಗೆ ಆಲೋಚಿಸುವುದು ಕೂಡ ಅವರಿಗೆ ಇಷ್ಟವಿರಲಿಲ್ಲ. ಅಷ್ಟರಲ್ಲಿ ರೈಲಿನ ದೀಪಗಳು ಕದಲಿದವು. ಸ್ಟೇಷನ್‌ನಲ್ಲಿ ಯಾರೊ ಒಬ್ಬರು ಇದ್ದೇ ಇರಬೇಕು ಎಂದು ನಿಶ್ಚಯಿಸಿಕೊಂಡು ಹೊರಗೆ ಬಂದರು. ಯಾರೊ ಒಂದಿಬ್ಬರು ಪ್ಲಾಟ್‌ಫಾರಂ ದಾಟಿ ಹೋಗುವುದಕ್ಕೆ ಪ್ರಯತ್ನಿಸುತ್ತಿದ್ದರು. ರಾವ್ ಅವರು ದನಿಯೇರಿಸಿ ಜೋರಾಗಿ ಕೂಗಿದರು. ಇಬ್ಬರೂ ನಿಂತರು. ಒಬ್ಬ ಸ್ಟೇಷನ್ ಮಾಸ್ಟರ್ ಅಂತಲೂ, ಮತ್ತೊಬ್ಬ ಕೂಲಿ ಕೆಲಸದವನೆಂದು ರಾವ್ ಅವರು ಗುರುತಿಸಿದರು.

‘ನಾನು ಊರೊಳಕ್ಕೆ ಹೋಗ್ಬೇಕು’ ಎಂದರು ರಾವ್ ಅವರು ಆತುರದಿಂದ. ‘ತುಂಬ ಕಷ್ಟ. ರಸ್ತೆ ಮೇಲೆ ಹೆಜ್ಜೆ ಹೆಜ್ಜೆಗೂ ಮರಗಳು ಮುರಿದು ಬಿದ್ದಿವೆ. ಟೆಲಿಫೋನ್ ವೈರ್‌ಗಳೂ ಕೂಡ ಹರಿದು ತುಂಡಾಗಿ ಬಿದ್ದಿವೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುದ್ದಿ ಕಳಿಸುವುದೂ ಕೂಡ ಅಸಂಭವ. ಈ ರಾತ್ರಿಗೆ ಮುಂದಿನ ಸ್ಟೇಷನ್‌ನಲ್ಲಿ ರೈಲು ನಿಂತುಬಿಡುತ್ತದೆ. ಗಾಳಿಮಳೆ ತುಂಬ ತೀವ್ರವಾಗಿ ಇರುತ್ತದೆಂದೂ, 36 ಗಂಟೆಗಳವರೆಗೂ ಕಡಿಮೆಯಾಗುವುದಿಲ್ಲವೆಂದು ನಮಗೆ ಸುದ್ದಿ ಬಂದಿದೆ.’

‘ಆದರೆ ಸ್ಟೇಷನ್‌ನಲ್ಲಿ ಬೇರೆ ಯಾರೂ ಇಲ್ವಲ್ಲ’ ‘ನಾನೇನು ಮಾಡೋಕ್ಕಾಗುತ್ತೆ ? ಹೇಗೊ ನೀವು ಸ್ಟೇಷನ್‌ನಲ್ಲಿಯೇ ಕಳೀಬೇಕು’

ಸ್ಟೇಷನ್ ಮಾಸ್ಟರ್ ಹೊರಟು ಹೋದರು. ರಾವ್ ಅವರು ವೆಯಿಟಿಂಗ್ ರೂಂನೊಳಕ್ಕೆ ಹೋಗಿ, ವಾಲು ಕುರ್ಚಿಯಲ್ಲಿ ಕುಸಿದು ಕುಳಿತರು. ಬಾಗಿಲನ್ನು ಮುಚ್ಚಿದರೆ ಗಾಳಿಮಳೆ ಒಳಕ್ಕೆ ಬರುವುದಿಲ್ಲ ಅಂತಲೂ ಅವರಿಗೆ ತೋಚಲಿಲ್ಲ. ಎರಡು ಕಿಟಕಿಗಳು ಮುರಿದು ಹೋಗಿದ್ದವು. ಕೆಲವು ಹೆಂಚುಗಳು ಹಾರಿ ಹೋಗಿದ್ದವು. ಯಾವುವೊ ಕ್ರೂರಶಕ್ತಿಗಳು ವಿಜೃಂಭಿಸಿ ಮಾನವನು ನಿರ್ಮಿಸಿದವನ್ನೂ ಮತ್ತು ದೇವರು ಸೃಷ್ಟಿಸಿದವನ್ನೂ ಭೂಮಿಯ ಮೇಲೆ ಇಲ್ಲದಂತೆ ಮಾಡುವುದಕ್ಕೆ ತೊಡಗಿದೆಯೇನೊ ಎಂದು ಅನ್ನಿಸುತ್ತಿತ್ತು. ಈ ಗಲಿಬಿಲಿಯಲ್ಲಿ ಮನೋಸ್ಥೈರ್ಯವನ್ನು ತಂದುಕೊಡುವ ವೇದಾಂತವಾವುದೂ ರಾವ್ ಅವರಿಗೆ ತೋಚಲಿಲ್ಲ. ಶಿಸ್ತು, ನಿಯಮಗಳು, ಮೌಲ್ಯಗಳೆಲ್ಲವೂ ಕೂಡ ಮಾನವಾತೀತವಾದ ಕೆಲವು ಶಕ್ತಿಗಳು ವಿಜೃಂಭಿಸಿದಾಗ ಅರ್ಥರಹಿತವಾಗಿ ಹೋಗುತ್ತವೆಂದು ಅವರಿಗೆ ಜೀವನದಲ್ಲಿ ಮೊದಲಬಾರಿಗೆ ಅನುಭವಕ್ಕೆ ಬಂದಿತು. ಪ್ರಕೃತಿ ಕೆರಳಿ, ಸರ್ವನಾಶಕ್ಕೆ ಕಂಕಣ ಕಟ್ಟಿದ್ದೇ ಆದರೆ ಮಾನವನು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬಲ್ಲ?

ಎಂದೂ ಅರಿಯದ ಭೀತಿಯೊಂದು ರಾವ್ ಅವರ ಮನಸ್ಸನ್ನು ಆವರಿಸಿತು. ಈ ಬಾಧೆಯು ದುರ್ಭರವಾಗಿಯೂ ಇತ್ತು. ಸುತ್ತಮುತ್ತ ಎಲ್ಲಿಯೂ ಮಾನವರ ಸುಳಿವು ಕಾಣಿಸಲಿಲ್ಲ. ಸ್ಟೇಷನ್ ಭೀತಿಯುಂಟುಮಾಡುವಂತಿದ್ದು, ಗಾಳಿಮಳೆಯು ತನ್ನ ಉಗ್ರ ರೂಪವನ್ನು ಪ್ರದರ್ಶಿಸಿತು. ಅವರ ಮನಸ್ಸು ಒಂದು ಕೆಟ್ಟ ಕನಸಿನಲ್ಲಿ ಸಿಕ್ಕಿಕೊಂಡಂತೆ ಕಕ್ಕಾಬಿಕ್ಕಿಯಾಗಿತ್ತು. ಆ ಕೋಣೆಯಲ್ಲಿ ಇನ್ನೊಂದು ವಸ್ತುವಾವುದೊ ಇದ್ದಂತೆ ರಾವ್ ಅವರಿಗೆ ಕಾಣಿಸಿತು. ತೆರೆದ ಬಾಗಿಲಿನಿಂದ ಒಳಕ್ಕೆ ಏನೊ ಪ್ರವೇಶಿಸುತ್ತಿರುವಂತೆ ಕಾಣಿಸಿತು. ಕೈಯಲ್ಲಿನ ಬ್ಯಾಟರಿ ದೀಪ ಹೊತ್ತಿಸಿ ಆ ಕಡೆಗೆ ನೋಡಿದರು ರಾವ್. ಭಿಕ್ಷುಕಿ ಗಡಗಡ ನಡುಗುತ್ತ ನೀರು ಸುರಿಸುತ್ತ ಒಂದು ಮೂಲೆಯಲ್ಲಿ ನಿಂತಿದ್ದಳು. ಆಕೆಯ ಒದ್ದೆ ಕೂದಲು ಮುಖದ ಮೇಲೆ ಅಂಟಿಕೊಂಡಿದ್ದವು. ಅದರಿಂದ ನೀರು ಸುರಿಯುತ್ತಿತ್ತು.

(ಭಾಗ 3 : ಕ್ಲಿಕ್ ಮಾಡಿ)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಎಲ್ಲ ಭಾಗಗಳನ್ನೂ ಓದಲು : https://tv9kannada.com/tag/nerenaada-nudiyolagaadi

Published On - 3:35 pm, Fri, 27 May 22