Dharwad: ಮಾನವ ಜಾತಿ ತಾನೊಂದೆ ವಲಂ; ನನ್ನಮ್ಮ ಆರನೇ ಬೆರಳಿನಂತೆ ಕತ್ತರಿಸಿ ಎಸೆದರೆ, ಅತ್ತೆ ಬಿಗಿದೇ ಸಂಬಂಧ ಹಿಡಿದರು

|

Updated on: Apr 14, 2022 | 1:48 PM

Live in together : ನಾನು-ಅವನು ಅಲ್ಲಿರತೊಡಗಿದೆವು. ದಿನವೂ ಯೂನಿವರ್ಸಿಟಿ ಓದು, ಮುಂಗಡಸಾಲ. ಈ ಸ್ಥಿತಿಯಲ್ಲಿ ನಮ್ಮನ್ನು ತಾಯಿಕೋಳಿಯ ಹಾಗೆ ಬಾಚಿಕೊಂಡವಳು ಪ್ಯಾರಮಂಜಿಲ್‌ದ ಅಮ್ಮ. ತಪ್ಪು ಮಾಡುತ್ತಿದ್ದೇನೆಯೇ ಎಂಬ ಭಯದಲ್ಲಿ ನೆಲಕಚ್ಚಿ ಬೀಳುತ್ತಿದ್ದ ನನ್ನನ್ನು ಮಮತೆಯಿಂದ ಎದೆಗಾನಿಸಿಕೊಂಡರು.

Dharwad: ಮಾನವ ಜಾತಿ ತಾನೊಂದೆ ವಲಂ; ನನ್ನಮ್ಮ ಆರನೇ ಬೆರಳಿನಂತೆ ಕತ್ತರಿಸಿ ಎಸೆದರೆ, ಅತ್ತೆ ಬಿಗಿದೇ ಸಂಬಂಧ ಹಿಡಿದರು
ಡಾ. ವಿನಯಾ ಒಕ್ಕುಂದ ಮತ್ತು ಮಡಿವಾಳೆಪ್ಪ ಒಕ್ಕುಂದ
Follow us on

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

 

ಧಾರವಾಡದಲ್ಲಿ ವಾಸಿಸುತ್ತಿರುವ ಕನ್ನಡ ಪ್ರಾಧ್ಯಾಪಕಿ, ಲೇಖಕಿ ಡಾ. ವಿನಯಾ ಒಕ್ಕುಂದ ಅವರ ‘ಕೂಡು ಬಾಳಿನ ಒಂದು ಪುಟ’

ಹಿಂಸೆಯ ಉನ್ಮಾದಕ್ಕೆ ವಿಚಾರಗಳು ದಣಿದು ಒರಗಿರುವಾಗ, ಮತ್ತೆ ನಾವೀಗ ಬಾಳಿನ ಅನುಭವ ಸಂಪುಟವನ್ನು ಮರಳಿ ಪ್ರವೇಶಿಸಬೇಕಿದೆ. ನಾವು ಮದುವೆ ಮಾಡಿಕೊಂಡು ಸರಿಯಾಗಿ 30 ವರ್ಷ. ಮದುವೆ ಆಗಬೇಕಿತ್ತು, ಪ್ರೀತಿಯನ್ನು ಬಲು ಉದಾರವಾಗಿ ನೋಡುವುದು ಯಾವ ಕಾಲಕ್ಕೂ ಸಮಾಜಕ್ಕೆ ಕಷ್ಟವೇ. ನಮಗೆ ನೌಕರಿ ಇರಲಿಲ್ಲ. ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೂ ಇರಲಿಲ್ಲ. ಹೇಗಾದರೂ ಬದುಕಬಲ್ಲೆವು ಎಂಬ ಧೈರ್ಯವಿತ್ತು. ಆಗಿನ ಧಾರವಾಡಕ್ಕೆ ರೇಲ್ವೆಗೇಟ್ ಆಚೆಗಿರುವ ಗಣೇಶನಗರ ಬಡಬಗ್ಗರಿರುವ ಎಕ್ಸಟೆನ್‌ಶನ್. ಅಲ್ಲಿ ‘ಪ್ಯಾರಮಂಜಿಲ್’ ಅಂತಒಂದು ಪುಟ್ಟ ಮನೆ. ಆ ಮನೆಯ ಒಂದು ಪಕ್ಕೆಯನ್ನು ಒಕ್ಕುಂದ ಬಾಡಿಗೆಗೆ ಹಿಡಿದಿದ್ದ. ಮದುವೆಯ ನಂತರದ ಬಾಳಿಗೆ ಎಂಬ ಮುಂದಾಲೋಚನೆ ಇತ್ತು. ನಾನು ಹಾಸ್ಟೆಲ್‌ನಲ್ಲಿದ್ದೆ. ಅವನಿಗೆ ಅಮ್ಮಿನಭಾವಿ ಓಡಾಟ ಸಾಕಾಗಿತ್ತು.

ಬಸ್ಸಿನ ಕಡೇಮೆಟ್ಟಿಲ ಮೇಲೆ ನಿಂತು ರಸ್ತೆಯಿಡೀ ಹುಡುಗಿಯರನ್ನು ಕಣ್ತುಂಬಿಕೊಳ್ಳುವ ಉಮೇದಿ ತಗ್ಗಿ, ಬಡ ಗೃಹಸ್ಥನ ಜವಾಬ್ದಾರಿ ತುಸುವೇ ಹಣಕಿಕ್ಕುತ್ತಿತ್ತು. ಹೀಗೆ ಖೋಲಿ ಹಿಡಿದ ಆ ದಿನಗಳಲ್ಲಿಯೇ ವಿಶ್ವವಿದ್ಯಾಲಯದ ಪಾವಟೆ ಸ್ಟ್ಯಾಚ್ಯೂ ಎದುರಿನ ಹುಲ್ಲು ಹಾಸಿನ ಮೇಲೆ ನಿಂತು ನಾವಿಬ್ಬರೂ ತೀವ್ರವಾಗಿ ಜಗಳ ಕಾಯುತ್ತಿದ್ದ ಕ್ಷಣದಲ್ಲಿ ನನ್ನ ಬಲಗಾಲ ಹೆಬ್ಬೆರಳಿಗೆ ಏನೋ ಚುಚ್ಚಿದಂತಾಗಿ, ಕಾಲು ಕೊಡವಿದರೆ… ಏನೂ ಕಾಣಲಿಲ್ಲ. ಮಬ್ಬುಗತ್ತಲು. ಮೆದುಳಿಗೆ ಎಲ್ಲೋ ಮೈಲು ದೂರದಿಂದ ವಿಷದ ಬಾಣಚುಚ್ಚಿದರೆ ಹೇಗಿದ್ದೀತೋ ಹಾಗೆ. ಮರುಕ್ಷಣ ನಿದ್ದೆ. ನಿರ್ಮಲ ನಿದ್ದೆ. ಯಾವ ಸಂಕಟವಿಲ್ಲ, ಯಾತನೆಯಿಲ್ಲ. ಸುಶಾಂತ ನಿದ್ದೆಯ ಅಮಲು. ಆಗ ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಆಟೋಗಳಿರಲಿಕ್ಕಿಲ್ಲ. ಇದ್ದರೂ ಕೊಡಲು ಕಾಸಂತೂ ನಮ್ಮ ಬಳಿಯಿರಲಿಲ್ಲ. ಒಕ್ಕುಂದ ನನ್ನ ಅವಸ್ಥೆಗೆ ಹೆದರಿದ. ಜಗಳ ಮರೆತು ಹೋಗಿತ್ತು. ಕೈಹಿಡಿದು ಕರೆದುಕೊಂಡು ಬಂದ. ಆಗ ಶ್ರೀನಗರ ಬಸ್‌ಸ್ಟಾಪಿನ ಆಚೆಯ ಸಣ್ಣಖೋಲಿ ಯೊಂದರಲ್ಲಿ ಡಾ.ಕೌಲಗುಡ್ಡ ಅವರು ಪ್ರಾಕ್ಟೀಸ್ ಪ್ರಾರಂಭಿಸಿದ್ದರು. ಅವರು ವಿಷಯ ಕೇಳಿ ಹೆಬ್ಬೆರಳ ಭಾಗಕೋಯ್ದು ಬಹಳಷ್ಟು ರಕ್ತ ಹರಿಬಿಟ್ಟರು. ಬ್ಯಾಂಡೇಜ್ ಮಾಡಿದರು ಮನೆಗೆ ಹೋಗಿ, ಯಾವಕಾರಣಕ್ಕೂ ಇವರು ರಾತ್ರಿ ಮಲಗಬಾರದು ಎಂದು ಹೇಳಿದರು.

ನೇರವಾಗಿ ಒಕ್ಕುಂದನ ಬಾಡಿಗೆರೂಮಿಗೆ ಹೋಗಬೇಕಾಯಿತು. ಅಲ್ಲಿ ಅವನ ಗೆಳೆಯರೂ ಒಂದಿಬ್ಬರು ಬಂದರು. ನನಗೆ ಊಟ ಕೊಡುವಂತಿಲ್ಲ. ಆ ರಾತ್ರಿ ಯಾರಿಗೂ ಊಟವಿಲ್ಲ. ನಾನು ಮಲಗುವಂತಿಲ್ಲ. ಅವರಿಗೂ ನಿದ್ದೆಯಿಲ್ಲ. ಒಬ್ಬರಾದ ಮೇಲೊಬ್ಬರು ನನ್ನನ್ನು ಮಾತನಾಡಿಸುವವರು. ನನಗೋ ಸುಖದ ನಿದ್ದೆ. ಹಸಿಮೆಣಸಿನಕಾಯಿ 2-3  ತಿಂದರೂ ನಾಲಿಗೆಗೆ ಖಾರವಿಲ್ಲ. ನೀರು ಬೇಕೆನಿಸಲಿಲ್ಲ. ಕೇಳುವವರ ಮಾತು ಕೇಳುತ್ತಿದೆ. ಉತ್ತರಕೊಡಲು ನಾಲಿಗೆ ಮೇಲೇಳುತ್ತಿಲ್ಲ. ಏಳು ಬೆಟ್ಟದ ಭಾರ ನಾಲಿಗೆಗೆ. ಕಣ್ಣು ಕಾಣುತ್ತಿದೆ ಆದರೆ ಒಂದು ಲೈಟು, ಒಂದು ಮುಖ ಮೂರಾಗಿ ನಾಲ್ಕಾಗಿ, ಹತ್ತಾಗಿ ತೂಗುದೀಪದಂತಾಗಿದೆ. ಮಧ್ಯರಾತ್ರಿ ದಾಟುತ್ತಿದೆ. ಇನ್ನೇನು ನಾನು ಶಾಶ್ವತವಾಗಿ ಮಲಗಬೇಕು… ಮತ್ತೆ ಒಂದು ಆಟೋದಲ್ಲಿ ಸಪ್ತಾಪುರದ ಕೃಷ್ಣ ತಾವರಗೇರಿ ಡಾಕ್ಟರನ್ನು ಎಬ್ಬಿಸಲಾಯಿತು. ಅವರು ನರ್ಸಿಂಗ್ ಹೋಂಗೆ ಕಳಿಸಿದರು. ಅಲ್ಲಿ ಅಪಾಯಕಾರಿ ಕೇಸ್ ಅಂತ ಅಡ್ಮಿಟ್ ಮಾಡಿಕೊಳ್ಳದೆ, ಹೊರಬೆಂಚಿನ ಮೇಲೆ ಮಲಗಿಸಿ ದನಕ್ಕೆ ಹಾಕಬಹುದಾದಷ್ಟು ಔಷಧಿಯ ಇಂಜಕ್ಷನ್ ಚುಚ್ಚಿಚುಚ್ಚಿ… ಅಂತೂ ನಾನು ಸಾಯಲಿಲ್ಲ. ಆದರೆ, ಅಂದಿನಿಂದ ಮತ್ತೆ ನಾನು ಹಾಸ್ಟೆಲ್ಲಿಗೆ ಹೋಗಲಾಗಲಿಲ್ಲ.

ಇಂದಿನ ಪರಿಭಾಷೆಯಲ್ಲಿ ‘ಲಿವಿಂಗ್ ಟುಗೆದರ್’ ಅಂತೀವಲ್ಲ, ಹಾಗೆ ನಾನು-ಅವನು ಅಲ್ಲಿರತೊಡಗಿದೆವು. ದಿನವೂ ಯೂನಿವರ್ಸಿಟಿ ಓದು… ಎಂದೋ ಬರುವ ಸ್ಕಾಲರ್‌ಶಿಪ್, ಮುಂಗಡದ ಸಾಲ. ಹೀಗೆ ಈ ಸ್ಥಿತಿಯಲ್ಲಿ ಸಂಪ್ರದಾಯದ ಹುದುಲಾದ ಧಾರವಾಡದ ನೆಲದಲ್ಲಿ ನಮ್ಮನ್ನು ತಾಯಿಕೋಳಿಯ ಹಾಗೆ ಬಾಚಿಕೊಂಡವಳು ಪ್ಯಾರಮಂಜಿಲ್‌ದ ಅಮ್ಮ. ಆ ತಾಯಿಗೆ ಇಬ್ಬರು ಗಂಡುಮಕ್ಕಳು. ದನ-ಕರ ಸಾಕಿಕೊಂಡು ಹಾಲು ಮಾರುತ್ತಿದ್ದರು. ಮಕ್ಕಳು ಬಹಳ ಕಲಿತವರಲ್ಲ. ಆಗಿನ್ನೂ ಮಕ್ಕಳ ಮದುವೆಯಾಗಿರಲಿಲ್ಲ. ನಮ್ಮ ವಿಷಯ ತಿಳಿದು ನಮ್ಮನ್ನವರು ಅವಮಾನಿಸಲಿಲ್ಲ. ತಪ್ಪು ಮಾಡುತ್ತಿದ್ದೇನೆಯೇ ಎಂಬ ಭಯದಲ್ಲಿ ನೆಲಕಚ್ಚಿ ಬೀಳುತ್ತಿದ್ದ ನನ್ನನ್ನು ಮಮತೆಯಿಂದ ಎದೆಗಾನಿಸಿಕೊಂಡರು. “ಯಾವಾಗ ನೋಡಿದ್ರೂ ಕಣ್ಣಾಗ ನೀರಿಟ್ಟಗೋಬ್ಯಾಡ. ನೌಕ್ರಿ ಹ್ಯಾಂಗರಾ ಆದೀತು. ಜರಾ ಜಲ್ದಿ ಅಕ್ಕಿಕಾಳ ಹಾಕಿಸಕೊಂಡ ಬಿಡ್ರಿ” ಅಂತಿದ್ದ ತಾಯಿ ಜೀವ.

ಅಡಿಗೆ ಮಾಡಲು ಬರದ, ಕೊಂಡು ತಿನ್ನಲು ದುಡ್ಡೂ ಇಲ್ಲದ ಅದೆಷ್ಟೋ ರಾತ್ರಿಗಳಲ್ಲಿ ‘ಇನ್ಯಾ ತಗಾ ಬಾ ಇಲ್ಲಿ’ ಅಂತ ಹಿಂದಿನ ಬಾಗಿಲಲ್ಲಿ ಕರ‍್ದು ಒಂದೆರಡು ರೊಟ್ಟಿ-ಪಲ್ಲೆ ಹಚ್ಚಿ ಕೊಡುತ್ತಿದ್ದರು. ‘ನಾವು ಉಂಡೇವಿ’ ಅಂತ ಸುಳ್ಳು ಹೇಳಿದರೆ, ಭಾಂಡೇ ಅವಾಜ ಇಲ್ಲ, ಏನ್‌ಉಂಡೀರೀ…’ ಎಂಬ ಆ ಅದಮ್ಯ ಮಮತೆ. ರಾತ್ರಿ ಬರೋದು ತಡ ಆದರೆ, ಮನೆ ಜಗಲಿ ಮ್ಯಾಲೆ ಕಾಯುತ್ತ ಕುಂತು, ‘ಈಗ ಬಂದ್ರ್ಯಾ, ಇಕಾ ಕುಡ್ದು ಮಕ್ಕೊ’ ಅಂತ ಒಂದು ಲೋಟ ಕಾಸಿದ ಹಾಲು ಕೊಡುತ್ತಿದ್ದರು. ಅವರ ಮಮತೆಯ ನೆನಪು, ನನ್ನ ವೈವಾಹಿಕ ಬದುಕಿನ ನೆನಪಿನೊಂದಿಗೆ ಬಿಡಿಸಲಾಗದಂತೆ ಬಿಗಿದುಕೊಂಡಿದೆ.

ಡಾ. ವಿಕ್ರಮ ವಿಸಾಜಿ ಅನುವಾದಿಸಿದ ಕವಿತೆ : Dharwad: ಮಾನವ ಜಾತಿ ತಾನೊಂದೆ ವಲಂ; ಕರುಣೆಯನ್ನು ನಾಶಗೊಳಿಸುವುದು, ಶೃಂಗಾರವನ್ನು ಇಲ್ಲವಾಗಿಸುವುದು

ಅಂತೂ, ಎರಡೂ ಮನೆಗಳಲ್ಲಿ ಒಪ್ಪಿಸಿ, ಮದುವೆ ಶಾಸ್ತ್ರ ಅಂತ ರಜಿಸ್ಟರ್ ಆಫೀಸಿನಲ್ಲಿ ಹಾರ ಬದಲಿಸಿಕೊಂಡು ನನ್ನ ಮನೆ ಅಂತ ಮರಳಿ ಹೊಕ್ಕಿದ್ದು ಆ ಪ್ಯಾರಮಂಜಿಲ್‌ದ ಪಕ್ಕೆಗೇ. ಆಝಾದಪಾರ್ಕ್ ಉಪವನ ಹೋಟೆಲಿನ ಊಟದ ಸರಳಾತಿಸರಳ ಮದುವೆಗೆ ಆ ಅಮ್ಮ ಸುತ್ತಲ ಮನೆಮಂದಿಯನ್ನೂ ಹೊರಡಿಸಿಕೊಂಡು ಬಂದು ಅದೆಷ್ಟು ಸಂಭ್ರಮ ಪಟ್ಟರು. ನನಗೀಗ ಸರಿಯಾಗಿ ಅರ್ಥವಾಗುತ್ತಿದೆ. ಮದುವೆಯೂ ಆಗದೆ ಹುಡುಗನೊಟ್ಟಿಗಿರುವ ಹುಡುಗಿಯೊಬ್ಬಳ ಬಗ್ಗೆ ಲೋಕಕ್ಕಿರುವ ಕೆಡುಕು ಕುತೂಹಲಗಳನ್ನು ತಣಿಸಲು ಅವರು ಅದೆಷ್ಟು ಪಡಿಪಾಟಲು ಪಟ್ಟಿದ್ದರು. ಅವರ ಗಂಡುಮಕ್ಕಳ ನೆದರು ಇತ್ತ ಹಾಯದ ಹಾಗೆಯೂ!

ಅದು ಪಾಟಿಕಲ್ಲಿನ ಮೂರು ಖೋಲಿಯ ಮನೆ. ನಮ್ಮ ಮದುವೆಯ ದಿನ, ಹಿರಿಯರು-ಸ್ನೇಹಿತರು ಎಲ್ಲ ಬೀಳ್ಕೊಂಡರು. ಒಕ್ಕುಂದನ ತಂದೆ-ತಾಯಿ, ಅಕ್ಕ-ಅಕ್ಕನ ಮಕ್ಕಳು ಹೀಗೊಂದಿಷ್ಟು ಜನ ಪ್ಯಾರಮಂಜಿಲ್‌ಗೇ ಬಂದರು. ಅವರು ಅಲ್ಲೇ ಉಳಿಯಬಹುದು ಎಂದು ನನಗೆ ಗೊತ್ತಿರಲಿಲ್ಲ. ಮದುವೆಯ ರಾತ್ರಿಯಿಡೀ ಬೆಳಗಿನವರೆಗೆ ಏನೇನೋ ಮಾತನಾಡಿಕೊಳ್ಳುವ, ಓದಿಕೊಳ್ಳುವ ಕನಸು ಕಾಣುವ, ಪುಟ್ಟಪುಟ್ಟ ಕನಸುಗಳು ನನ್ನೆದೆಯಲ್ಲಿ. ಆದರೆ, ಒಕ್ಕುಂದನ ಮನೆಯವರಿಗೆ ನಾನೊಂದು ಝೂದಲ್ಲಿರುವ ಪ್ರಾಣಿ ಅನ್ನಿಸಿರಬಹುದು. ಮೊದಲೇ ಪ್ರೇಮವಿವಾಹವೆಂಬ ಸಿಟ್ಟು. ಪರಿಸ್ಥಿತಿಗೆ ಹೊಂದಿಕೊಳ್ಳಲೇಬೇಕಾದ ಅವರ ಅನಿವಾರ್ಯತೆ. (ಅನಿವಾರ್ಯತೆಯ ಹೊಂದಾಣಿಕೆ ಅದೆಷ್ಟು ಚಿತ್ರಹಿಂಸೆಯದೆಂಬುದನ್ನು ಬದುಕಿಡೀ ಕಂಡೆ) ಆ ರಾತ್ರಿಯಾವ ಕೋಣೆಗೂ ಬಾಗಿಲುಗಳಿಲ್ಲದ, ರೇಲ್ವೆ ಡಬ್ಬಿಯಂತಿದ್ದ ಮನೆಯಲ್ಲಿ ಮಲಗಿದ್ದ ಮಕ್ಕಳು ಮರಿಗಳಾದಿಯಾಗಿ ಎಲ್ಲರೂ (ನನ್ನ ಮಾವ ಒಬ್ಬರನ್ನು ಬಿಟ್ಟು) ರಾತ್ರಿಯಿಡೀ ನೀರುಕುಡಿಯಲೆಂದು, ಬಚ್ಚಲಿಗೆಂದು ಎದ್ದಿದ್ದೇ ಎದ್ದಿದ್ದು ಅವರ ವರ್ತನೆಯಲ್ಲಿ, ನನ್ನ ಬಗ್ಗೆ ನಮ್ಮದಾಂಪತ್ಯದ ಬಗ್ಗೆ ತೀಕ್ಷ್ಮವಾದ ವ್ಯಂಗ್ಯವಿತ್ತು. ಅದು ನನ್ನನ್ನು ಅಲ್ಲಾಡಿಸಿಬಿಟ್ಟಿತ್ತು.

ಒಕ್ಕುಂದ ಅಂದೂ ಮುಗ್ಧವಾಗಿ ನಿದ್ದೆ ಹೋಗಿದ್ದ. ತನ್ನನ್ನು ಮಾತ್ರ ನಂಬಿ ಬಂದವಳು ‘ಮಲಗಿದಳೇ?’ ಎಂಬ ಯೋಚನೆಯೂ ಅವನಿಗೆ ಇರಲಿಲ್ಲ. ಸುಮಾರು ರಾತ್ರಿಯ ನಾಲ್ಕನೆಯಜಾವ. ಮನೆ ಶಾಂತವಾಗಿತ್ತು. ನನಗೆ ದುಃಖತಡೆಯಲಾಗಲಿಲ್ಲ. ಹಿತ್ತಿಲ ಬಾಗಿಲ ಮೇಲೆ ಕೂತು ದುಃಖ ದುಃಖಿಸಿ ಅತ್ತೆ. ಮನಸ್ಸುತಣಿಯುವವರೆಗೂ ಅತ್ತೆ. ನನ್ನ ನಾಳೆಗಳು ಅದೆಷ್ಟು ಬಿರುಸಿನದ್ದೆಂದು ತಿಳಿದುಹೋಗಿತ್ತು.

ಚಿದಂಬರ ನರೇಂದ್ರ ಅವರ ಬರಹವನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ನಮ್ಮೆಲ್ಲರ ಗುಪ್ತ ಒಪ್ಪಿಗೆಯಿಲ್ಲದೇ ಯಾರೂ ಅಪರಾಧ ಮಾಡುವುದು ಸಾಧ್ಯವಿಲ್ಲ’

ಆದರೆ, ಮುಂಜಾನೆ ನಾನು ಕಣ್ಬಿಡುವ ಹೊತ್ತಿನಲ್ಲಿ ನನ್ನೆದುರು ಎಣ್ಣೆಯ ಬಟ್ಟಲು ಹಿಡಿದು ‘ಅಮ್ಮ’ ನಿಂತಿದ್ದರು. ನಮ್ಮ ಅತ್ತೆಯ ಬಳಿ ಮಾತಾಡಿದ್ದರೆಂದು ಕಾಣುತ್ತದೆ. ಹಂಡೆ ನೀರು ಕಾಸಿದ್ದರು. ಬೇಡವೆಂದರೂ ಕೇಳದೇ ಆ ಪುಟ್ಟ ಬಚ್ಚಲ ಕಲ್ಲಿನ ಮೇಲೆ ಕೂಡಿಸಿ, ಎಣ್ಣೆತಿಕ್ಕಿ ನೀರು ಹಾಕಿದರು. ತಮ್ಮ ಮನೆಯಿಂದ ಎರಡು ಮಣೆತಂದಿದ್ದರು. ನಮ್ಮಿಬ್ಬರನ್ನೂ ಕೂಡಿಸಿ ಆರತಿ ಮಾಡಿ, ಶ್ಯಾವಿಗೆ ತುಪ್ಪ ತಿನ್ನಿಸಿದರು. ನನ್ನಅತ್ತೆ, ಅತ್ತಿಗೆಯರು ಮೂಕ ಪ್ರೇಕ್ಷಕರಾಗಿದ್ದರು ಅಷ್ಟೇ. ಶ್ಯಾವಿಗೆಯನ್ನು ಬಸಿದು ಉಣ್ಣಬಹುದು ಅಂತ ನಾನು ಮೊದಲು ಉಂಡಿದ್ದು ಅಂದೇ. ಮಾತಿಗೊಮ್ಮೆ, “ನಮ್ಮ ಮಂದ್ಯಾಗ ಹಿಂಗ ಮಾಡ್ತಾರಬೇ. ಏನೂ ತೆಪ್ಪ ತಿಳ್ಕಾಬ್ಯಾಡ್ರಿ” ಅಂತ ‘ಅಮ್ಮ’ ಮತ್ತೆ ಮತ್ತೆ ನನ್ನ ಅತ್ತೆಗೆ ಹೇಳುತ್ತಿದ್ದರು. ‘ಅದ್ರಾಗ ಏನಯ್ಯತ್ರಿ, ನಾವೂ ಹಿಂಗಽ ಮಾಡೂದ ಇತ್ರಿ. ನಮ್ಮೂರಾಗಾದ್ರ ಮಾಡಬೋದಿತ್ತು’ ಎಂದು ಅತ್ತೆ ಹೇಳುತ್ತಿದ್ದರು. ಈಗಲೂ ನನಗೆ ನನ್ನ ಮೊದಲ ರಾತ್ರಿಯ ಸೊಬಗು ನೆನಪಾದಾಗಲೆಲ್ಲ, ಅಗಲ ಮೂಗುತಿಯ, ಗುಂಡುತಾಳಿಯ, ಹಣೆಯಲ್ಲಿ ಕುಂಕುಮವಿಲ್ಲದ, ತಲೆಮೇಲೆ ಸೆರಗು ಸರಿಸದೆ ಮನೆ ಕೊಟ್ಟಿಗೆ ಹ್ವಾರೆ ಮಾಡುತ್ತಿದ್ದ ಆ ‘ಅಮ್ಮ’ ನೆನಪಾಗುತ್ತಾರೆ.

ಅವರ ಧರ್ಮ ಬೇರೆ ಅಂತ ಆಗಲ್ಲ, ಈಗಲೂ ಅನ್ನಿಸುವುದಿಲ್ಲ. ನನ್ನ ತಾಯಿ ನನ್ನನ್ನು ಆರನೇ ಬೆರಳಿನಂತೆ ಕತ್ತರಿಸಿ ಎಸೆದಿದ್ದಳು. ಅತ್ತೆ, ಬೇಡವಾದ ಸಂಬಂಧದ ಎಳೆಯನ್ನು ಬರಿದೇ ಬಿಗಿದು ಹಿಡಿದರು. ನಲುಗಿದ ಜೀವವನ್ನಾಧರಿಸಿದ್ದು ಈ ಅಮ್ಮನೇ. ಅವರ ಕಾಳಜಿ-ಕಕ್ಕುಲಾತಿಗಳು, ಬದುಕಿನ ಬಗ್ಗೆ ನಿರಾಶಳಾಗದ ಹಾಗೆ ನನ್ನ ಸಂಭಾಳಿಸಿದ್ದು.ಆ ಮನೆಯಲ್ಲಿದ್ದದ್ದು ಒಟ್ಟೂ 6-7 ತಿಂಗಳು ಅಷ್ಟೇ. ರೋಣ, ಸವಣೂರು, ಲಕ್ಷ್ಮೇಶ್ವರ, ನರಗುಂದ ಸುತ್ತಿ ಬದುಕು ಮತ್ತೆ ಧಾರವಾಡಕ್ಕೆ ತಂದು ನಿಲ್ಲಿಸಿದಾಗ, ಮನೆ-ಮಕ್ಕಳು-ಕಾಲೇಜಿನ ತಿರುಗಣಿಯಲ್ಲೂ ಎದ್ದು, ಅವರನ್ನು ನೋಡಲು ಹೋಗಿದ್ದೆ. ವಯಸ್ಸು ಬಲು ಮಾಗಿದೆ.‘ ಅಯ್ಯ ಇನ್ಯಾ ಏನವಾ, ಬಾ ಬಾ’ ಅಂತಅದೇ ಮಮತೆ. ಈಗ ಅಜ್ಜ ಇಲ್ಲ. ಮನೆ ಎರಡಾಗಿದೆ. ಆದರೂ ಸಂಬಂಧ ಚೆನ್ನಾಗಿದೆ. ಸಾಕಲ್ಲ… ಅಂದರು. ಯಾವುದೋ ಅಪರಿಚಿತ ಹುಡುಗಿಯೊಬ್ಬಳನ್ನು ಅಕಾರಣವಾಗಿ ಪ್ರೀತಿಸಿದ ಆ ಅಂತಃಕರಣದ ಜೀವ ಆ ಮನೆಯ ಜನರು ತೋರಿದ ಮಮತೆ ಹೇಗೆ ಮರೆಯಲಿ? ಅವರು ಈಗ ಹಿಟ್ಟಿನ ಗಿರಣಿ ಇಟ್ಟಿದ್ದಾರೆ. ಹಾಲಿನ ವ್ಯಾಪಾರ ಮಾಡ್ತಾರೆ. ಮುಸ್ಲಿಮರು ಎಂಬ ಕಾರಣಕ್ಕೆ ಅವರ ವ್ಯಾಪಾರ ವಹಿವಾಟುಗಳನ್ನು ನಿಷೇಧಗೊಳಿಸಿದರೆ… ಉಂಟಾಗಬಹುದಾದ ಮಾನಸಿಕ ಆಘಾತ ನೆನೆದರೇ ಭಯವಾಗುತ್ತದೆ. ಈಗ ಹೋದರೂ ಅಮ್ಮ ಹಾಗೇ ಕರೆದಾರುತಾನೇ? ಕತ್ತರಿಸಿ ಬಿದ್ದಕಲ್ಲಂಗಡಿಯ ಚೂರುಗಳು ಜೀವ ಜೀವಾಳದಲಿ ಬೆಸೆದ ಬಾಂಧವ್ಯವನ್ನು ಕತ್ತರಿಸದಿರಲಿ ದೇವರೇ. ಖುದಾ ಹಾಫೀಝ್.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಬಹುತ್ವದ ನಾಡಿನಲ್ಲಿ ಬಂಧುತ್ವದ ಬರಗಾಲ!

 

Published On - 12:58 pm, Thu, 14 April 22