ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಆದರೆ ಈಗ ಅವನ ಹುಳುಹತ್ತಿದ ಅಸಹಾಯ ಶರೀರವನ್ನು ನೋಡಿ ಸಣ್ಯಾನಿಗೆ ಸಿಟ್ಟಿನ ಜೊತೆಗೆ ಕೆಡಕೂ ಎನಿಸಿತು. ಗೌರಿ ಜೀವಂತವಿರುವವರೆಗೆ ಅವನಿಗೆ ಕನಿಷ್ಠ ಎರಡು ತುತ್ತು ಅನ್ನವಾದರೂ ಸಿಗುತ್ತಿತ್ತು. ರಾತ್ರಿ ಅವನು ತಡವಾಗಿ ಮನೆಗೆ ಬಂದಾಗ ಅವಳು ಬೊಬ್ಬೆಯಿಡುತ್ತ ಊರುಕೇರಿ ಒಂದು ಮಾಡುತ್ತಿದ್ದಳೆನ್ನುವುದು ನಿಜ. ಆದರೆ, ಅವನ ಸಲುವಾಗಿ ಹಾಸಿಗೆಯಾದರೂ ಸಿದ್ಧವಿರುತ್ತಿತ್ತು. ಈಗ ಮಾತ್ರ ಅವನ ಬದುಕು ತೊನ್ನು ಹತ್ತಿದ ನಾಯಿಗಿಂತ ಕಡೆಯಾಗಿತ್ತು. ‘ಸಣ್ಯಾ, ಇವತ್ತು ನಿನ್ನ ಪಾರಿವಾಳ ಇಲ್ಲ ಅಂತ ಕಾಣತದ’ ಅಲ್ಲಿಂದಲೇ ಅವನು ಕೇಳಿದ. ಆಗಲೂ ಸಣ್ಯಾ ಏನೂ ಮಾತಾಡಲಿಲ್ಲ. ಅವನಿಗೆ ಪಾರಿವಾಳಗಳನ್ನು ಹೊರಗೆ ಬಿಡುವುದಿತ್ತು. ಆದರೆ ಇವೊತ್ತಿನ ಮಟ್ಟಿಗಾದರೂ ಅವನಿಗೆ ಈ ಗಾಂಜಾಬಡಕನೊಂದಿಗೆ ಒಂದು ಶಬ್ದ ಕೂಡ ಮಾತಾಡುವ ಮನಸ್ಸಿರಲಿಲ್ಲ. ಅವನ ಮುಖ ತನ್ನೆದುರಿಗಿರುವುದೂ ಅವನಿಗೆ ಬೇಡಾಗಿತ್ತು. ಅವನು ತಪ್ಪಿಯಾದರೂ ಗೌರಿಯ ವಿಷಯವನ್ನು ತೆಗೆದರೆ ಇವತ್ತು ತಾನು ಸಹಿಸಲಾರೆ ಎಂದು ಅವನಿಗೆನಿಸಿತ್ತು. ಅವನ ಮನಸ್ಸು ಇನ್ನೂ ಗೌರಿಯ ಸುತ್ತಲೇ ಸುತ್ತುತ್ತಿದ್ದರೂ ಒಂದು ವಿಷಯದಲ್ಲಿ ಮಾತ್ರ ಅವನಿಗೆ ಸಮಾಧಾನವೆನಿಸಿತ್ತು.
ಕಥೆ : ಚಂದ್ರಾವಳ | ಮರಾಠಿ : ಜಿ. ಎ. ಕುಲಕರ್ಣಿ | ಕನ್ನಡಕ್ಕೆ : ಜಿ. ಎಸ್. ಆಮೂರ | ಸೌಜನ್ಯ : ದೇಶಕಾಲ ತ್ರೈಮಾಸಿಕ ಪತ್ರಿಕೆ
(ಭಾಗ 2)
ಬಹಳ ದಿವಸಗಳಿಂದ ಹೊಡೆದುಕೊಳ್ಳುತ್ತಿದ್ದ ಹುಣ್ಣು ಒಡೆದಂತೆ ಅವನಿಗೆ ಬಿಡುಗಡೆ ದೊರಕಿದಂತಾಗಿತ್ತು. ಇನ್ನು ಮುಂದೆ ದಿನಾಲು ಅಪಮಾನದ ನೋವಿಲ್ಲ, ಎಲ್ಲ ಮುಗಿಯಿತು ಎಂದುಕೊಂಡ. ಕಣ್ಣಲ್ಲಿ ಒಮ್ಮೆಲೆ ನೀರು ಬರಿಸುವಂಥವರು ಈಗ ಯಾರೂ ಉಳಿದಿರಲಿಲ್ಲ. ಈಗಲೂ ಅನೇಕ ಸಲ ನಾಗಿಣಿಯಂತೆ ಭಾಸವಾಗುವ ಬಿರಾದಾರ ಪಾಟೀಲನ ಚಂದ್ರಾವಳಿಯ ನೆನಪಾಗುತ್ತಿತ್ತು. ಆದರೆ ಅದು ಒಂದು ಉಗ್ರ ವಾಸನೆಯುಳ್ಳ ಹೂವಿನತ್ತ ದೂರದಿಂದ ನೋಡಿದಂತೆ. ಗೌರಿಯ ನಂತರ ಮಾತ್ರ ಎಲ್ಲವೂ ಸ್ವಚ್ಛವಾಗಿತ್ತು, ಎಲ್ಲಾ ಈಗ ಏನು ಮಾಡುವುದು ಎನ್ನುವ ವಿಚಾರದಲ್ಲಿದ್ದಾಗ ಮಗ್ಗುಲಿನ ಓಣಿಯಿಂದ ಸಡಿಲಾದ ಬೂಟುಗಳಿಂದ ಫಟಾಕ್, ಫಟಾಕ್ ಶಬ್ದ ಮಾಡುತ್ತ, ಇಪ್ಪತ್ತಾಲ್ಕು ಬೆರಳಿನ ಬಾಳು ಅಲ್ಲಿಗೆ ಬಂದ. ಉದ್ದ ಕಫನಿಯಂತಿದ್ದ ತನ್ನ ಕೋಟಿನ ತುದಿಗಳನ್ನು ಮೇಲೆತ್ತಿ, ಕಟ್ಟೆಯ ಮೇಲೆ ಕುಳಿತುಕೊಂಡು ಬೀಡಿಗಾಗಿ ಸಣ್ಯಾನೆದುರು ಕೈ ಚಾಚಿದ.
ಸಣ್ಯಾ ಅವನತ್ತ ಒಂದು ಬೀಡಿ ಒಗೆದು ಕಬೂತರಖಾನೆಯ ಬಾಗಿಲು ತೆರೆದ. ಖಾನೆ ತೆರೆಯುವುದೊಂದೆ ತಡೆ ಹುಚ್ಚೆದ್ದ ಹಾಗೆ ಬಹಳಷ್ಟು ಪಾರಿವಾಳಗಳು ಆ ಇಕ್ಕಟ್ಟಿನ ಜಾಗದಿಂದ ಹೊರಬಿದ್ದು ಎಲ್ಲ ದಿಕ್ಕುಗಳಲ್ಲಿ ಹಾರತೊಡಗಿದವು. ಎದುರಿಗಿನ ಧೂಳಿಯಲ್ಲಿ ಅವು ಕಾಳುಗಳನ್ನು ಹೆಕ್ಕಲಾರಂಭಿಸಿದಾಗ ಅವುಗಳ ಕಾಲ್ಬೆರಳುಗಳ ಆಕೃತಿಗಳ ಜಾಲದಂಥ ತೂತುಗಳು ಅಲ್ಲಿ ಕಾಣಿಸಿಕೊಂಡವು. ಕಮಾನಿನಂಥ ಉಬ್ಬಿದ ಎದೆಯ ಮೇಲೆ ಕೆಂಪು ಹೊಳಪುಳ್ಳ ಸಬ್ಜೀ ಜಾತಿಯ ಒಂದು ಗಂಡು ಪಾರಿವಾಳ ಸಮೀಪಕ್ಕೆ ಬರಬಹುದಾದ ಯಾವುದೇ ಹೆಣ್ಣು ಪಾರಿವಾಳಕ್ಕಾಗಿ ಪುಚ್ಛ ಹರಡಿಕೊಂಡು ತಿರುಗಹತ್ತಿತು. ಆದರೆ ಮಾಣಿಕದಂಥ ಕೆಂಪು ಕಣ್ಣಿನ ಒಂದು ಜಂಗಲೀ ಪಾರಿವಾಳ ಚೂರಿಯಂಥ ತನ್ನ ಚುಂಚಿನಿಂದ ಅದನ್ನು ಕುಕ್ಕಿದಾಗ ಅದು ಹೆಣ್ಣು ಪಾರಿವಾಳದ ವಿಚಾರ ಬಿಟ್ಟು ಶಾಂತವಾಗಿ ಕಾಳು ಹೆಕ್ಕತೊಡಗಿತು. ನಾಲ್ಕಾರು ಪಾರಿವಾಳಗಳು ಖಾನೆಯಲ್ಲಿಯೇ ಉಳಿದುಕೊಂಡಿದ್ದವು. ಕೂತು ತಿಂದು ಸೊಕ್ಕಿದ ಲಕ್ಯಾ ಜಾತಿಯ ಒಂದು ಗಂಡು ಪಾರಿವಾಳ ತುಂಬಿಕೊಂಡು ಲಠ್ಠ ಹುಳದಂತೆ ಕಾಣುತ್ತಿತ್ತು. ಪುಚ್ಛ ಕತ್ತರಿಸಿದ ಅದರ ಕಪ್ಪು ಮೈ ಶೆಗಣಿಯ ಉಂಡಿಯ ಆಕಾರ ತಳೆದಿತ್ತು. ಚೆನ್ನಾಗಿ ಬೈದು ಸಣ್ಯಾ ಅವುಗಳನ್ನು ಹೊರಗೆ ಬೀಸಾಡಿದ. ಗಂಡು ಪಾರಿವಾಳ ಜೋರಾಗಿ ಬಿದ್ದ ಸಪ್ಪಳ ಕೇಳಿಸಿತು. ತನ್ನ ಗರಿ ಬಿಚ್ಚಿಕೊಂಡು ಅದು ಸುರಕ್ಷಿತವಾದ ಗಟಾರದಲ್ಲಿಳಿಯಿತು. ಹೆಣ್ಣು ಪಾರಿವಾಳ ಮಾತ್ರ ಗುಡಿಯ ಮೇಲೇರಿ ಕುಳಿತುಬಿಟ್ಟಿತು. ‘ಇನ್ನ ಸಾಯಲಿಕ್ಕೆ ಅದು ಸಂಜಿಗೇನ ಇಳೀತದ, ಸಾಲೀ’ ಎಂದು ಸಣ್ಯಾ ದೊಡ್ಡ ದನಿಯಲ್ಲಿ ಹೇಳಿದ.
ಮತ್ತೆ ಅವನು ಇನ್ನೊಮ್ಮೆ ಆ ಗುಂಪಿನ ಕಡೆಗೆ ನೋಡಿದ. ಅವೆಲ್ಲ ತಿಂದು ತಿಂದು ಉಬ್ಬಿದ್ದವು, ದಷ್ಟ ಪುಷ್ಟ ಮುದುಕ ಪೂಜಾರಿಯಂತೆ. ಆದರೆ ಅಲ್ಲಿಯ ಒಂದು ಟೋಪೇಡ್ ಜಾತಿಯ ಹೆಣ್ಣು ಪಾರಿವಾಳದತ್ತ ಅವನ ದೃಷ್ಟಿ ಹೋದಾಗ ಅವನ ಮುಖ ಅಭಿಮಾನದಿಂದ ಅರಳಿತು. ಎರಡು ದಿನ ಮೊದಲು ಅವನು ಆ ಪಾರಿವಾಳವನ್ನು ಒಂದೇ ಗಂಟೆ ಹಾರಬಿಟ್ಟಿದ್ದ. ಆದರೆ ಈಗ ಅದರ ಗರಿಗಳನ್ನು ಕಟ್ಟಲಾಗಿತ್ತು. ಅವನು ಅದನ್ನು ಮೆಲ್ಲಗೆ ಎತ್ತಿಕೊಂಡ ಹಾಗೂ ರೇಷಿಮೆ ದಾರದಷ್ಟು ಮೃದುವಾದ ಅದರ ಕುತ್ತಿಗೆಯ ಮೇಲೆ ಕೈಯಾಡಿಸಿದ. ಅದು ಸುಮ್ಮನೆ ಚುಂಚಿನಿಂದ ಅವನನ್ನು ತಿಕ್ಕಿತು. ಸಣ್ಯಾ ಅದನ್ನು ಮೆತ್ತಗೆ ಭೂಮಿಯ ಮೇಲೆ ಬಿಟ್ಟ. ಅದು ಗರಿಗಳನ್ನು ಫಡಫಡ ಜಾಡಿಸುತ್ತ ಕೆಳಗೆ ಬಂದಿತು. ಆ ಇಡೀ ಗುಂಪಿನಲ್ಲಿ ಈ ಜಾತಿವಂತ ಪಾರಿವಾಳ ಮೂಗಿನಲ್ಲಿಯ ಹರಳಿನಂತೆ ಕಾಣುತ್ತಿತ್ತು.
‘ಚಂದ್ರಾವಳೀ ಅಂದರ ವಜ್ರ ಅದಾಳ ವಜ್ರ’ ಮೊಣಕಾಲಿನ ಮೇಲೆ ಕುಳಿತು ಶಾಂತವಾಗಿ ಬೀಡಿ ಸೇದುತ್ತಿದ್ದ ಇಪ್ಪತ್ನಾಲ್ಕು ಬೆರಳಿನ ಬಾಳೂನಿಗೆ ಸಣ್ಯಾ ಹೇಳಿದ. ಝರಕೀ ಎಳೆಯುತ್ತಲೇ ಬಾಳೂ ಮುಖ ಅಲ್ಲಾಡಿಸಿದ. ‘ಇವಳು ಎಲ್ಲಿಂದ, ಹ್ಯಾಂಗ ಬಂದಳು ದೇವರಿಗೇ ಗೊತ್ತು ಬಾಳೂ…’
ಈಗಲೂ ಕೂಡ ಸಣ್ಯಾನಿಗೆ ಇದು ಆಶ್ಚರ್ಯದ ವಿಷಯವಾಗಿತ್ತು. ನಾಣ್ಯವೊಂದು ಮೇಲಿನಿಂದ ಸುರಿದು ಧೂಳಿಯಲ್ಲಿ ಬಿದ್ದಂತೆ ಒಂದು, ಒಂದೂವರೆ ತಿಂಗಳ ಹಿಂದೆ ಆ ಹೆಣ್ಣು ಪಾರಿವಾಳ ಉರಿಯುತ್ತಿರುವ ಬಿಸಿಲಿನಲ್ಲಿ ಅವನೆದುರಿಗೆ ಇಳಿದಿತ್ತು. ಸಣ್ಯಾನ ನಿದ್ದೆಗಣ್ಣಿನ ಮಸುಕಿನಲ್ಲಿ ಅದು ಹರಿದ ದಿಂಬಿನಿಂದ ಹೊರಬಂದ ಅರಳೆಯ ಉಂಡಿಯಂತೆ ಕಂಡಿತ್ತು. ಎಲ್ಲ ಪಾರಿವಾಳಗಳನ್ನು ಗುಡಿಯ ಮೇಲೆ ಕಳಿಸಿ ಒಂದರ್ಧ ಗಂಟೆ ಹಾಯಾಗಿ ಅಡ್ಡಾದರಾಯಿತು ಎಂದು ಅವನಿಗನಿಸಿತ್ತು. ಧೂಳು ಜಾಡಿಸಲು ಅವನು ತನ್ನ ರುಮಾಲನ್ನು ಕೂಡ ಎತ್ತಿದ್ದ. ಆದರೆ ಅವನ ಕೈ ಮಧ್ಯದಲ್ಲಿಯೇ ನಿಂತುಬಿಟ್ಟಿತ್ತು ಮತ್ತು ನಿದ್ದೆ ಕಣ್ಣಿನಿಂದ ಜಾರಿಹೋಗಿತ್ತು. ಮುಷ್ಟಿ ಮುಷ್ಟಿ ಬೂದಿಯನ್ನು ತೆಗೆದು ಚೆಲ್ಲುವಾಗ ಕೈಗೆ ಕೆಂಡ ತಾಗಿದಂತೆ ಬೇರೆ ಬೇರೆ ಜಾತಿಯ ಅವನ ಪಾರಿವಾಳಗಳ ಬದಿಯಲ್ಲಿ ಈ ಹೊಸ ಹೆಣ್ಣು ರೆಕ್ಕೆಗಳನ್ನು ಅಲುಗಾಡಿಸುತ್ತ ಚುಂಚು ತೆರೆದು ಮುಚ್ಚಿ ಮಾಡುತ್ತಿತ್ತು. ಆ ರಣಗುಟ್ಟುವ ಬಿಸಿಲಿನಲ್ಲಿ ತೊಳೆದಿಟ್ಟಂತೆ ಅದು ಕಾಣುತ್ತಿತ್ತು. ಸಣ್ಯಾ ಒಂದು ಮುಷ್ಟಿ ಜೋಳ ಕೈಯಲ್ಲಿ ತೆಗೆದುಕೊಂಡು ಬೆರಳುಗಳಿಂದ ಅದನ್ನು ಕೆಳಗೆ ಸುರುವತೊಡಗಿದ. ಪಕಪಕ ತುಟಿ ಅಲ್ಲಾಡಿಸುತ್ತ ಒಂದು ಸಿಳ್ಳು ಹಾಕಿ ‘ಆ„ವ್, ಆ„ವ್’ ಎಂದು ಕರೆದ.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಕಾಫ್ಕಾ ಕಥೆ ‘ಹಳೆಯ ಹಸ್ತಪ್ರತಿ’ ಅನುವಾದಿಸಿದ್ದಾರೆ ಎಚ್ಎಸ್ ರಾಘವೇಂದ್ರ ರಾವ್
ಸ್ವಂತದ ಅವನ ಆಸೆಬುರುಕ ಪಾರಿವಾಳಗಳು ಕಾಳಿನ ಮೇಲೆ ನುಗ್ಗಿದವು. ಆದರೆ ಆ ಹೊಸ ಪಾರಿವಾಳ ಸ್ವಲ್ಪ ಕೂಡ ಅಲುಗಾಡಲಿಲ್ಲ. ಮೆಲ್ಲಗೆ ವರ್ತುಳಾಕಾರದಲ್ಲಿ ಸಣ್ಯಾ ಅದರತ್ತ ಸರಿಯತೊಡಗಿದ. ಆದರೆ ಇದರ ಸುಳುವು ಹತ್ತಿದ ಕೂಡಲೇ ಆ ಪಾರಿವಾಳ ಕಪ್ಪು ಕಿಡಿಯಂತೆ ಮೇಲೆ ಹಾರಿ ರಾವಸಾಹೇಬ್ ದೇಶಪಾಂಡೆಯವರ ಎತ್ತರ ಮನೆಯ ಮೇಲೆ ಹೋಗಿ ಕುಳಿತುಕೊಂಡಿತು. ಸಣ್ಯಾ ಮತ್ತಷ್ಟು ಜೋಳ ತೂರಿದ. ಆದರೆ ಊಂ, ಹೂಂ! ಇತ್ತ ಇಪ್ಪತ್ನಾಲ್ಕು ಬೆರಳಿನ ಬಾಳೂನ ತಳಮಳ ಶುರುವಾಗಿತ್ತು. ಅವನು ಎದ್ದು ನಡುವೆ ಬಂದು ನೀರು ಸುರಿದಂತೆ ಎದುರಿಗೆ ಜೋಳ ಸುರಿದ. ಅವನ ಕೈ ನಡುಗುತ್ತಿತ್ತು. ದನಿ ಕಪ್ಪೆಯ ದನಿಯಂತೆ ಫರಫರ ಎನ್ನುತ್ತಿತ್ತು. ಮೇಲೆ ನೋಡುತ್ತ ಸಣ್ಯಾನ ದನಿಗಿಂತ ಜೋರಾದ ದನಿಯಲ್ಲಿ ‘ಆ„ವ್-ಆ„ವ್’ ಎಂದು ಕೂಗಿದ.
ಸಣ್ಯಾ ಸಿಟ್ಟಿನಿಂದ ಅವನತ್ತ ನೋಡಿದ ಮತ್ತು ಸಿಡಿಮಿಡಿಗೊಳ್ಳುತ್ತಲೇ ಅವನನ್ನು ಕಟ್ಟೆಗೆ ನೂಕಿದ. ‘ಅಲ್ಲಿ ಕೂತುಕೋ ನೀನು, ಚಪ್ಪಲಿಯಿಂದ ಹೊಡಿಸಿಕೊಂಡವನಂತೆ ಮೋರೆ ಮಾಡಿಕೊಂಡು. ಯೇ„ವ್ ಯೇ„ವ್ ಅಂತ! ಸತ್ತ ಕೋಳಿ ಹಿಡಿಯಾಕಾಣಿಲ್ಲ ಮತ್ತ ಅಂತಾನ ಯೇ„ವ್ ಯೇ„ವ್!’ ಇಪ್ಪತ್ನಾಲ್ಕು ಬೆರಳಿನವ ಜೋಳ ಕೆಳಗೆ ಚೆಲ್ಲಿ ಮೈ ಹೊರಳಿಸಿಕೊಂಡು ಅಲ್ಲಿಯೇ ನಿಂತ. ಸಣ್ಯಾ ನೀರಿನ ತಂಬಿಗೆಯನ್ನು ತೆಗೆದುಕೊಂಡು ಕೆಳಗಿದ್ದ ಡಬರಿಯಲ್ಲಿ ಸಾವಕಾಶವಾಗಿ ನೀರು ಸುರುವುತ್ತ ಹೋದ. ನೀರಿನ ಸಪ್ಪಳವಾಗುತ್ತಿದ್ದಂತೆ ಆ ಪಾರಿವಾಳ ಚಪ್ಪರದ ಮೇಲೆ ಬಂದು ಕುಳಿತಿತು. ಅಲ್ಲಿಂದ ವಿದ್ಯುತ್ ಕಂಬಕ್ಕೆ ಹಾರಿ, ಅಂಜುತ್ತ ಅಂಜುತ್ತ ಡಬರಿಯತ್ತ ಸರಿಯಿತು. ಅದರ ಕಣ್ಣಲ್ಲಿ ಇನ್ನೂ ಹೆದರಿಕೆಯಿತ್ತು. ಸಣ್ಯಾ ಸ್ವಲ್ಪ ಬಾಗಿದಾಗ ಅದು ಐದಾರು ಫೂಟು ಮೇಲೆ ಹಾರಿತು. ಆಗ ಸಣ್ಯಾ ಎಡಗೈಯಿಂದ ನೀರು ಸುರಿಯುತ್ತ ಹೋದ. ತಂಪು ನೀರಿನ ಮೋಹವನ್ನು ಆಗ ಆ ಪಾರಿವಾಳದಿಂದ ತಡೆಯಲಾಗಲಿಲ್ಲ. ಅದರ ರೆಕ್ಕೆಗಳ ಬಡಿದಾಟ ಹೆಚ್ಚಿತು. ಕೊನೆಗೆ ಅದು ತನ್ನ ಕಾಲುಗಳ ಮೇಲೆ ನಿಂತುಕೊಂಡು ಆಬೋಲಿಯ ಮೊಗ್ಗಿನಂತಿದ್ದ ತನ್ನ ಚುಂಚನ್ನು ನೀರಲ್ಲಿಟ್ಟಿತು. ಆಗ ಸಣ್ಯಾ ಅದನ್ನು ಹಿಡಿಯಹೋದ. ರೇಷಿಮೆಯಂಥ ಅದರ ಕಪ್ಪು ರೆಕ್ಕೆಗಳು ಬಿಚ್ಚಿಕೊಂಡವು. ಆದರೆ ಸಣ್ಯಾ ತನ್ನ ಬೆರಳುಗಳಿಂದ ಅದನ್ನು ಹಿಡಿದೇಬಿಟ್ಟ. ಪಾರಿವಾಳ ಕೈಗೆ ಬಂದಾಗ ಸಣ್ಯಾ ಜಿಗಿದುಬಿಟ್ಟ. ಇಪ್ಪತ್ನಾಲ್ಕು ಬೆರಳಿನ ಬಾಳೂನಿಗೂ ಅತಿಶಯ ಆನಂದವಾಯಿತು.
‘ನಾ ಹೇಳಲಿಲ್ಲೇನು ನಿನಗೆ ಸಣ್ಯಾ, ಅದಕ್ಕೆ ಜೋಳ ಬ್ಯಾಡಾ ನೀರು ಬೇಕು ಅಂತ?’ ಎಂದು ಅವನು ಸಮಾಧಾನದಿಂದಲೇ ಹೇಳಿದ. ಅವಸರದಿಂದ ಅವನು ಒಂದು ದಾರ ತಂದು ಪಾರಿವಾಳದ ರೆಕ್ಕೆಗಳನ್ನು ಕಟ್ಟಿಹಾಕಿದ. ಸಣ್ಯಾ ಅದನ್ನು ತನ್ನ ಒರಟು ಕೈಯಲ್ಲಿ ತೆಗೆದುಕೊಂಡಾಗ ಅದು ಅಲ್ಲಿ ಮುಚ್ಚಿಹೋಯಿತು. ಅದರ ಎದೆ ಶುಭ್ರವಾಗಿತ್ತು. ರೆಕ್ಕೆಗಳು ಕಪ್ಪು ರೇಷಿಮೆ ಬಣ್ಣದವಾಗಿದ್ದವು. ಅದರ ಪುಚ್ಛ ಹಸ್ತಿದಂತದಂಥ ಬಿಳೀ ಗರಿಗಳಿಂದ ಕೂಡಿದ್ದಿತು. ಕಣ್ಣುಗಳಂತೂ ಕರೀ ಮುತ್ತುಗಳಂತೆ ಹೊಳೆಯುತ್ತಿದ್ದವು. ಸಣ್ಯಾ ತನ್ನ ಬೆರಳು ಚಾಚಿದಾಗ ಅದು ತನ್ನ ಗುಲಾಬೀ ನಾಜೂಕು ಚುಂಚಿನಿಂದ ಪ್ರಹಾರ ಮಾಡಿತು. ಆದರೆ ಆ ಪ್ರಹಾರದಲ್ಲಿ ಕೂಡ ಅದರ ಬೂದರಳೆಯಂಥ ಶರೀರದ ಕೋಮಲತೆಯಿದ್ದಿತು. ಯಾರೋ ಪ್ರೀತಿಯ ಹಟದಲ್ಲಿ ಮಾಡಿದಂತಿತ್ತದು. ಅದರ ಬಲಗಾಲಲ್ಲಿ ಗೆಜ್ಜೆಗಳಿದ್ದ ಉಂಗುರ ಇತ್ತು. ಇಪ್ಪತ್ನಾಲ್ಕು ಬೆರಳಿನವ ಆನಂದದಿಂದ ಕುಣಿದಾಡಿದ. ತನ್ನ ಕೈಯಲ್ಲಿದ್ದ ಬೆಳ್ಳಿಯ ಉಂಗುರವನ್ನು ಬಿಚ್ಚಿ ಅದರ ಕಾಲಿಗೆ ಹಾಕಿದ. ಅದನ್ನು ನೆಲದ ಮೇಲೆ ಇಡುತ್ತಲೇ ಸಬ್ಜೀ ಜಾತಿಯ ಗಂಡು ಪಾರಿವಾಳ ಅದರ ಸುತ್ತಲೂ ತಿರುಗಹತ್ತಿತ್ತು. ‘ಅರೇ! ಇದು ಹೆಣ್ಣು. ಚಂದ್ರಾವಳಿ ಈಗ ನಿಜವಾಗಿ ಅಲಂಕೃತಳಾದಳು.’ ಒಂದು ಕಣ್ಣು ಮುಚ್ಚುತ್ತ ಇಪ್ಪತ್ನಾಲ್ಕು ಬೆರಳಿನವ ಹೇಳಿದ ‘ಇವಳು ಇಲ್ಲಿ ಸರಿದಾಡಿದಾಗ ಗೆಜ್ಜೆ ಬಾರಸ್ತಾವ ಮತ್ತ ಗುಡಿಯೆದರು ಚಂದ್ರಾವಳಿ ಮತ್ತೊಮ್ಮೆ ಕುಣೀತಾಳ.’
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 10:22 am, Fri, 11 March 22