ಋತುವಿಲಾಸಿನಿ: ‘ಈ ಪುಟಾಣಿ ಹಕ್ಕಿಕಣ್ಣಿನ ಹಸಿವೆಯಷ್ಟು ಪ್ರೀತಿಸ್ತೀನಿ ನಿನ್ನ’ ಅಂತಿದ್ದನವ
Love : ಅವನ ನಿಷ್ಠೆ ತಪ್ಪಿರಲಾರದು ಎನಿಸುತ್ತಿದೆ. ಅವನು ವಂಚಿಸಲಾರ. ನನ್ನ ಸ್ಥಾನದಲ್ಲಿ ಅವನೆಂದೂ ಇನ್ನೊಂದು ಹೆಣ್ಣು ನಿಲ್ಲಿಸಲಾರ. ಈ ಜೀವದ ತುಂಬಾ ಪ್ರೇಮ ತುಂಬಿ ಕಳಿಸಿದವ ಮೇಲಿರುವಾಗ...
ಋತುವಿಲಾಸಿನಿ | Rutuvilaasini: ಉಹು.. ಹಾಗಿಲ್ಲ. ಬಿಡುವು ಸಿಕ್ಕಿದೊಡನೇ ಹಸಿದ ಹಸುಗೂಸಿನಂತೆ ಹಂಬಲಿಸಿ ಕರೆ ಮಾಡುತ್ತಿದ್ದವ ಅವ. ಈಗ ಕಾಲಕ್ಕೇ ಬಿಡುವು ಸಿಕ್ಕಿ, ಬಿಡುವು ಕಳೆದು, ಕಾಲ ಕೂಡಿ, ಅಲ್ಲಿಂದ ಹೊರಟು, ಇಲ್ಲಿ ಇಳಿದು ಅವನ ಡೆಸ್ಟಿನಿ ತಲುಪಿ ಒಳಹೋಗಲಿಕ್ಕೆ ಎರಡು ನಿಮಿಷವಿದೆ ಎನ್ನುವಾಗ ಕರೆ ಹಚ್ಚಿ ಅವಸರ ನಟಿಸುತ್ತಾನೆ. ಅವನ ಈ ದ್ವಂದ್ವಕ್ಕೆ ಅಯ್ಯೋ ಪಾಪ ಅನಿಸಿದ್ದೂ ಇದೆ. ಈ ಥರದ ತಟವಟಗಳನ್ನು ಗಂಡಿನ ಕ್ರೋಮೊಸೋಮಿನೊಳಗೇ ಬರೆದಿಟ್ಟವ ಯಾರು ತನು? ದೇವರೇ? ಸಾಯಲಿ… ದೇವರಿಗೆ ವಿಪರೀತ ಪುರುಸೊತ್ತು. ಹಸಿವು ಆತಂಕ ನೋವುಗಳೇ ಇರದ ಸ್ವರ್ಗಲೋಕವಾಸಿ ಅವ. ಕೆಲಸವಿಲ್ದೇ ಹೀಗೆ ತಿದ್ದಿ ಕಳಿಸಿದ ಅಂತಿಟ್ಕೊ, ದೇವರನ್ನು ಈ ವಿಷಯಕ್ಕೆ ಕ್ಷಮಿಸಬಹುದೇನೊ. ಆದರೆ ಹೆಣ್ಣಿನ ಜೀವಕ್ಕೆ ಇಷ್ಟು ತಳಮಳವನ್ನೂ ತೀವ್ರತೆಯನ್ನೂ ಕೊರೆದು ಸದಾ ಕೊರಗುತ್ತಿರು ಅಂತ ಅನುಗ್ರಹಿಸಿರುವುದನ್ನು ಕಂಡಾಗಲೆಲ್ಲ ಕ್ಷಮೆಗೆ ಅನರ್ಹ ಅವ ಅನಿಸ್ತದೆ. ಈ ಕ್ಷಣ ನನಗೆ ಪ್ರ್ಯಾಕ್ಟಿಕಲ್ ವ್ಯಕ್ತಿಯಾಗುವಂತೆ ಹರಸು ಅಂತ ಅದೇ ಆ ಸ್ವಾರ್ಥಿ ದೇವರಿಗೆ ಸಾಷ್ಟಾಂಗ ಹಾಕಿದ್ದೇನೆ. ನಂದಿನಿ ಹೆದ್ದುರ್ಗ, ಕವಿ (Nandini Heddurga)
(ಋತು 3, ಭಾಗ 2)
ಕಳಚಿಕೊಂಡ ರೈಲು ಭೋಗಿಗಳಂತಹ ಬದುಕು ಬೇಕು ತನು ನನಗೆ. ನೋಡಲ್ಲಿ … ಆ ನವಿಲುಗಳು ತಮ್ಮ ಮಕ್ಕಳು ಮರಿಗಳೊಂದಿಗೆ ಏನೋ ಕಂಡವರಂತೆ ಭರ್ರನೆ ಮೇಲಿನ ದಿಣ್ಣೆಗೆ ಓಡುತ್ತಿವೆ. ಚಂದ ಕಾಣ್ತದೆ ಈ ದೃಶ್ಯ.
ಏನೇನೇನೋ ನಿನ್ನೊಂದಿಗೆ ಹರವಿಕೊಳ್ತಿರುವ ಈ ಹೊತ್ತಿಗೆ ಇದಾವುದೂ ತನಗೆ ಸಂಬಂಧಿಸಿಯೇ ಇಲ್ಲವೆಂಬಂತೆ ಸೂರ್ಯ ಎದುರಿನ ಎರಡು ಹರೆಗಳ ನಡುವಿಂದ ಮೇಲೇಳುತ್ತಲೇ ಇದ್ದಾನೆ.
ನೆಲಕ್ಕೆ ನಾಚಿಕೆ.
ನಿತ್ಯವೂ ತನ್ನ ಒಡಲು ಹೊದ್ದಿರುವ ಎಳೆಗರಿಕೆಯ ಹನಿಗಿಳಿದು ಮುನ್ನಾಟಕ್ಕೆ ಕರೆಯುವ, ಮರದ ತುದಿಚಿಗುರಿಗಿಳಿದು ಕಚಗುಳಿ ಕೊಡುವ ಪೋಲಿ ಇನಿಯ. ಆ ಹೊತ್ತಿಗೆ ಗಟ್ಟಿಮೇಳವೆಂಬಂತೆ ಸುತ್ತಿನ ಕಛೇರಿ ತನ್ನ ತಾರಕ ಸ್ಥಿತಿ ತಲುಪುತ್ತದೆ. ಕೆಂಪು ಕದಪಿನ ಹುಡುಗಿ ನೆನಪಾಗ್ತಾಳೆ ನಂಗೆ. ಈಗಲೂ ನಾನವನನ್ನು ನೆನಪಿಸಿಕೊಳ್ತಿದ್ದೀನಿ. ಈ ಬೆಳಗು ಈ ಸಮಯಕ್ಕೆ ಏನು ನಡೆಸಿದ್ದಾನೆ?
ಅವನ ಸಾಷ್ಟಾಂಗ ಮುಗಿದಿರಬಹುದಾ? ಓದಿಗೆ ಕುಂತನಾ, ಬರೆಯಬೇಕೆಂದಿದ್ದ ಪುಸ್ತಕ ಎಲ್ಲಿಗೆ ಬಂತು? ಹುಚ್ಚು ನನ್ನದು. ನನ್ನ ಕಳೆದುಹೋದ ಕವಿತೆಗಳ ಹುಡುಕದೆ ಹೀಗೆ ಯಾರದೋ ಧ್ಯಾನದಲ್ಲಿ ಮುಳುಗುವುದು ಅಸಹಜ ಅಲ್ವಾ? ಕಣ್ಣು ತುಂಬಿಕೊಳ್ತಿವೆ ಅಂದರೆ ನೀನು ರೇಗ್ತಿಯಾ. ಪಲ್ಲಟವಾಗುವವರ ಸಲುವಾಗಿ ಕಣ್ಣು ತೋಯಬಾರದು ಅಂತ ಮಾತು ಪಡೆದವಳಲ್ಲವೇ?
ಹಾಗೇ ಇಂಗಿಸಿಕೊಳ್ತಿದ್ದೀನಿ ನೋಡು. ನನ್ನ ಮನೆಗೆ ಇಳಿದು ಬರುವ ಈ ಹಾದಿಯೀಗ ಟಾರು ಬಳಿಸಿಕೊಂಡು ಬಳುಕುತ್ತಿದೆ. ಅಲ್ಲೇ ಬಲಪಕ್ಕಕ್ಕೆ ಇರುವ ನಿನ್ನ ನೆಂಟರಿರುವ ಆ ಮನೆಯ ಗಂಡಸಿಗೆ ಜನ್ಮಾಂತರದ ಕೆಮ್ಮು. ಹಗಲು ರಾತ್ರಿಯ ಖಬರಿಲ್ಲದೆ ವಿದ್ರಾವಕವಾಗಿ ಕೆಮ್ಮುತ್ತಲೇ ಇರ್ತಾನೆ. ಒಂದು ಘಳಿಗೆ ಕೆಮ್ಮಿನ ಬಿಡುಗಡೆಗಾಗಿ ನೀರೊಲೆಯ ಬೆಂಕಿಗೆ ಒಡ್ಡಿಕೊಳ್ತಿರುವುದು ಕಾಣ್ತಿದೆ ಇಲ್ಲಿಂದ. ನೀರೊಲೆಯ ಕೊಳವೆಯಿಂದ ಸುರುಳಿಸುರುಳಿಯಾಗಿ ಮೇಲೇರಿದ ಹೊಗೆ ಇಡೀ ವಾತಾವರಣಕ್ಕೆ ಒಂದು ಅನನ್ಯತೆ ನೀಡ್ತಿದೆ. ಏರಿಏರಿ ಮೇಲೆ ಹೋದ ಹೊಗೆ ಐಕ್ಯವಾಗ್ತದೆ ಅಲ್ಲೇ ಎಲ್ಲೋ.
ಮುಕ್ತಿ ಅಂದರೆ ಇದೇ ಅಲ್ಲವಾ?
ಇಲ್ಲಿ ಎಲ್ಲವೂ ಎಷ್ಟು ವಿಶಿಷ್ಟ ಮಾರಾಯ್ತಿ! ನೋಡಲ್ಲಿ.. ಕುಂತು ಮೂರು ನಿಮಿಷವಾಗಿಲ್ಲ. ಗುಬ್ಬಚ್ಚಿ ಪುರ್ರನೆ ಮುಖದ ಮೇಲೇ ಹಾರಿಹೋಗ್ತವೆ. ಯಾಕೆ ಹೀಗನಿಸುತ್ತೊ ಗೊತ್ತಿಲ್ಲ. ಲೋಕದ ಈ ಉರಿಉರಿ ಬೇಗೆ ಕಿಂಚಿತ್ತು ತಣಿದಿದ್ದರೂ ಅದಕ್ಕೆ ಕಾರಣ ಹಕ್ಕಿ ಕಣ್ಣಿನ ಕರುಣೆ ಎಂದು ದೃಢವಾಗಿ ನಂಬಿದವಳು ನಾನು. ಮಾತುಮಾತಿಗೂ ‘ಈ ಪುಟಾಣಿ ಹಕ್ಕಿಕಣ್ಣಿನ ಹಸಿವೆಯಷ್ಟು ಪ್ರೀತಿಸ್ತೀನಿ ನಿನ್ನ’ ಅಂತಿದ್ದ ಕಣೆ ಅವನು.
ಇದನ್ನೂ ಓದಿ : Forest Stories: ಕಾಡೇ ಕಾಡತಾವ ಕಾಡ; ಅಲ್ಲಿ ಹೊಗೆ ಕಾಣಿಸುತ್ತಿದೆ ಎಂದರೆ ಅವರಲ್ಲಿ ಇಲ್ಲವೆಂದರ್ಥ
ಈಶಾನ್ಯ ಮೂಲೆಯ ಬಾಗಿಲಿರುವ ಈ ಮನೆಯ ಹಿಂದಕ್ಕೆ ತುಸು ಎತ್ತರದಲ್ಲಿ ಕಾಫಿ ತೋಟಗಳಿವೆ. ಗೊತ್ತಲ್ವಾ ನಿಂಗೆ? ಅಲ್ಲೊಂದು ಹಣ್ಣಹಣ್ಣು ಅಜ್ಜಯ್ಯನಾದ ಗೋಣಿಮರವಿದೆ. ವರ್ಷವಿಡೀ ಮೈತುಂಬ ಹಣ್ಣು ಮೆತ್ತಿ ನಿಂತಿರುವ ದೇವರಂತಹ ಮರ. ಸಂಜೆ ಆರಕ್ಕೆ ಮುಗಿಲಲ್ಲಿ ನವ್ಯಕಲೆ ಬಿಡಿಸುತ್ತ ಉತ್ತರದಿಂದ ದಕ್ಷಿಣಕ್ಕೆ ಹಾರುವ ಬೆಳ್ಳಕ್ಕಿ ಗುಂಪು ಈ ಮರದಲ್ಲೇ ಕೂರ್ತದೆ ಅನ್ಕೊಂಡಿದ್ದೆ. ಹಾಗಲ್ಲ ನೋಡು. ಆ ಮರದ ಹರೆಹರೆಗೂ ಬಾವಲಿ ಜೋತು ಬೀಳ್ತವೆ ತನು.
ಯಾವ ಅಂಕಿ ಸಂಖ್ಯೆ ಅಂಟಿದ ಗಡಿಯಾರದ ಗೋಜಿಲ್ಲದೆ ಸರಿಯಾಗಿ ಆರೂಹತ್ತಕ್ಕೆ ಆ ಮರದಿಂದ ಬಿಡಿಸಿಕೊಂಡು ಮತ್ತೆ ಸರೀ ಉತ್ತರಕ್ಕೆ ಹಾರುತ್ತವೆ. ಪ್ರತಿ ಬೆಳಗೂ ಪೃಥ್ವಿಯ ಈ ವೈಚಿತ್ರ್ಯ ಬೆರಗು ಮೂಡಿಸುತ್ತದೆ ನನಗೆ. ಜಗತ್ತಿನ ಸರ್ವಜೀವಿಗಳೂ ಯಾವುದೋ ಅದೃಶ್ಯ ಪ್ರೇಮದ ಸರಪಳಿಯಿಂದ ಬಂಧಿಸಲ್ಪಟ್ಟಿವೆ. ಅವನು ನದೀತೀರಕ್ಕೆ ಹೋದೆ ಅಂತ, ಕಡಲ ತಡಿಯಲ್ಲಿದ್ದೀನಿ ಅಂತ ಸಂದೇಶ ಕಳಿಸ್ತಿದ್ದಾನೆ. ಅವನ ಕಣ್ಣಿನ ಮೂಲಕ ನನ್ನೆದೆಯಲ್ಲಿ ಒಮ್ಮೆಗೆ ಇಲ್ಲಿ ಕಡಲು ಮೊರೆಯುತ್ತಿದೆ. ನದಿಯ ಜುಳುಜುಳು ನೆತ್ತರ ನಾಳಗಳಲ್ಲಿ ಹರಿಯುತ್ತಿದೆ.
ಅವನ ನಿಷ್ಠೆ ತಪ್ಪಿರಲಾರದು ಎನಿಸುತ್ತಿದೆ. ಅವನು ವಂಚಿಸಲಾರ. ನನ್ನ ಸ್ಥಾನದಲ್ಲಿ ಅವನೆಂದೂ ಇನ್ನೊಂದು ಹೆಣ್ಣು ನಿಲ್ಲಿಸಲಾರ. ಈ ಜೀವದ ತುಂಬಾ ಪ್ರೇಮ ತುಂಬಿ ಕಳಿಸಿದವ ಮೇಲಿರುವಾಗ …ನಾನು ದ್ರೋಹಕ್ಕೊಳಗಾಗುವುದಿಲ್ಲ ಅಂತೆಲ್ಲ ತರ್ಕ ಮಾಡ್ತಿದೆ ಮನಸ್ಸು.
ಈ ಒಳಕೋಣೆಯೊಳಗೆ ಕುಳಿತು ಮುಗಿಯದ ಒಂಟಿ ಇರುಳುಗಳ ನೀಳ ಸಾಂಗತ್ಯದಲ್ಲಿ ಅವನ ಪ್ರೇಮ ಆತುಕೊಂಡಿದ್ದೇನೆ ಬದುಕಲಿಕ್ಕೆ. ತೆರೆದ ಬಾಗಿಲಿನ ಹೊರತಾಗಿಯೂ ಹೊಸಿಲಾಚೆ ಬರಲಾಗದ ಬಾಳು ಇದು.
ಸುಳಿವ ಗಾಳಿಯ ಕೂಡೇ ಅಮಲಿನಂಥ ನೋವೊಂದು ಪ್ರೇಮದಷ್ಟೇ ತೀವ್ರವಾದ ಅಲೌಕಿಕದೆಡೆಗೆ ನಿತ್ಯವೂ ನನ್ನ ಇಷ್ಟಿಷ್ಟೆ ಒಯ್ಯುತ್ತಿದೆ ತನು.
ಖುಷಿಯೆನಿಸುತ್ತದೆ.
(ಮುಗಿಯಿತು)
(ಮುಂದಿನ ಋತು : 29.3.2022)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಎರಡೂ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/rutuvilaasini
ಇದನ್ನೂ ಓದಿ : ಶರಣು ಮಣ್ಣಿಗೆ : ಮತ್ತೊಂದು ಕೆರೆ ಕಟ್ಟಿಸುವ ಕನಸಿನಲ್ಲಿ ನಂದಿನಿ
Published On - 9:54 am, Tue, 15 March 22