
ನವದೆಹಲಿ, ಫೆಬ್ರವರಿ 22: AI ಇಂಪ್ಯಾಕ್ಟ್ ಸಮಿಟ್ 2026 ವಿಶ್ವ ನಾಯಕರಿಗೆ ಅನೇಕ ವಿಷಯಗಳನ್ನು ತೋರಿಸಿದೆ. AI ಪಶು ಚಿಕಿತ್ಸೆಯಲ್ಲಿ ಹೇಗೆ ಸಹಾಯ ಮಾಡುತ್ತಿದೆ ಹಾಗೂ ರೈತರು 24×7 AI ಸಹಾಯದಿಂದ ತಮ್ಮ ಹಾಲು ಉತ್ಪಾದನೆ ಮತ್ತು ಪಶುಸಂಗೋಪನೆಯನ್ನು ಹೇಗೆ ಮೇಲ್ವಿಚಾರಣೆ ಮಾಡಬಹುದು ಎಂಬುದನ್ನು ಪ್ರದರ್ಶಿಸಿದೆ. ಭಾರತೀಯ ಉತ್ಪಾದಕರು ಹಾಗೂ ಸ್ಟಾರ್ಟ್‌ಅಪ್ ಸಂಸ್ಥೆಗಳು ‘ಶೂನ್ಯ ದೋಷ’ (Zero-Defect) ಮತ್ತು ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವತ್ತ ಗಮನಹರಿಸಬೇಕು ಜಾಗತಿಕ ಮಟ್ಟದಲ್ಲಿ ಗೌರವಿಸಲ್ಪಡುವ ಮತ್ತು ಬೇಡಿಕೆಯಲ್ಲಿರುವ ವಸ್ತುಗಳು ಹಾಗೂ ಸೇವೆಗಳನ್ನು ಭಾರತ ಉತ್ಪಾದಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 131ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ ಸಂಶೋಧನೆ, ಸೆಮಿಕಂಡಕ್ಟರ್, ಹಸಿರು ಶಕ್ತಿ ಮೊದಲಾದ ಉದಯೋನ್ಮುಖ ತಂತ್ರಜ್ಞಾನಗಳ ಮಹತ್ವವನ್ನು ಅಉಲ್ಲೇಖಿಸಿದರು. ನಮ್ಮ ಯುವಕರು, ನವೋದ್ಯಮಿಗಳು ಹಾಗೂ ಉದ್ಯಮಿಗಳು ಭಾರತವನ್ನು ಜಾಗತಿಕ ಮಾನ್ಯತೆಯ ಹೊಸ ಎತ್ತರಗಳಿಗೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಪ್ರತೀಕವಾಗಬೇಕು; ಪ್ರಧಾನಿ ಮೋದಿ
ಇತ್ತೀಚೆಗೆ ನಿಧನರಾದ ಕೇರಳದ ಆಲಿನ್ ಶೆರಿನ್ ಅಬ್ರಹಾಂ ಎಂಬ ಬಾಲಕಿಯನ್ನು ಸ್ಮರಿಸಿದ ಪ್ರಧಾನಿ, ಆಕೆಯ ಅಂಗದಾನದ ಮೂಲಕ ಇತರರಿಗೆ ಜೀವದಾನ ನೀಡಿದ ಕುಟುಂಬವನ್ನು ಹೊಗಳಿದ್ದಾರೆ. ಆಲಿನ್‌ನಂತಹ ಹಲವರು ತಮ್ಮ ಅಂಗದಾನದ ಮೂಲಕ ಇತರರಿಗೆ ಹೊಸ ಜೀವನ ನೀಡಿದ್ದಾರೆ, ಅಂಗದಾನದ ಕುರಿತು ಜಾಗೃತಿ ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.
ಜಾಗೃತಿ ಅಭಿಯಾನಗಳ ನಡುವೆಯೂ ಡಿಜಿಟಲ್ ವಂಚನೆ ಪ್ರಕರಣಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ಡಿಜಿಟಲ್ ಸಾಕ್ಷರತೆ ಮತ್ತು ಸುರಕ್ಷತೆಯ ಮಹತ್ವವನ್ನು ತಿಳಿಸಿದ್ದಾರೆ. KYC (Know Your Customer) ಪ್ರಕ್ರಿಯೆಯನ್ನು ಉಲ್ಲೇಖಿಸಿ, ಡಿಜಿಟಲ್ ವೇದಿಕೆಗಳನ್ನು ಬಳಸುವಾಗ ಎಚ್ಚರಿಕೆಯಿಂದಿರುವಂತೆ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.
ಫೆಬ್ರವರಿ 24ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಇದೇ ವೇಳೆ ಗೌರವ ನಮನ ಸಲ್ಲಿಸಿದ್ದಾರೆ. ಜನಕಲ್ಯಾಣಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ ನಾಯಕರು ಸದಾ ಜನಮನದಲ್ಲಿ ಜೀವಂತವಾಗಿರುತ್ತಾರೆ. ತಮಿಳುನಾಡಿನ ಜನರು ಇಂದಿಗೂ ಜಯಲಲಿತಾ ಅವರನ್ನು ಅಪಾರವಾಗಿ ಸ್ಮರಿಸುತ್ತಾರೆ ಎಂದ, ಗುಜರಾತ್‌ನಲ್ಲಿ ನಡೆದ ತಮ್ಮ ಪ್ರಮಾಣವಚನ ಸಮಾರಂಭಗಳಲ್ಲಿ ಅವರು ಭಾಗವಹಿಸಿದ್ದನ್ನು ನೆನೆದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.