
ಗೋರಖ್‌ಪುರ, ಅಕ್ಟೋಬರ್ 21: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಇಂದು ಸಂಜೆ ದುರ್ಗಾ ಮೂರ್ತಿ ವಿಸರ್ಜನೆಯ ವೇಳೆ ಟ್ರಾಕ್ಟರ್-ಟ್ರಾಲಿಗೆ ಕಟ್ಟಲಾಗಿದ್ದ ಕಬ್ಬಿಣದ ಕಂಬವು ಮೇಲ್ಭಾಗದಲ್ಲಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಸಂಭವಿಸಿದ ಭೀಕರ ವಿದ್ಯುತ್ ಆಘಾತದಿಂದ ಮೂವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 10 ಜನರಿಗೆ ಸುಟ್ಟ ಗಾಯಗಳಾಗಿವೆ. ಈ ಘಟನೆಯು ಗುಲ್ರಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಅಯೋಧ್ಯ ಪ್ರಸಾದ್ ಚೌಹಾಣ್ ತೋಲಾ ಬಳಿ ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದೆ.
ಭಕ್ತರು ದುರ್ಗಾ ಮೂರ್ತಿಯನ್ನು ವಿಸರ್ಜಿಸಲು ಟ್ರಾಕ್ಟರ್-ಟ್ರಾಲಿಯಲ್ಲಿ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿದ್ಯುತ್ ಆಘಾತಕ್ಕೊಳಗಾದ ಗಾಯಾಳುಗಳನ್ನು ತಕ್ಷಣವೇ ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಅಗತ್ಯ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ: ಕೊಲ್ಕತ್ತಾದ ದುರ್ಗಾ ಪೂಜಾ ಕಾಲ್ತುಳಿತ ದುರಂತದ ತನಿಖೆಗೆ ಎಸ್‌ಐಟಿ ರಚನೆ; 3 ತಿಂಗಳಲ್ಲಿ ವರದಿ ಸಲ್ಲಿಕೆಗೆ ಸೂಚನೆ
ವಿದ್ಯುತ್ ತಂತಿಯಿಂದ ಹರಿದ ಅಪಾರ ಪ್ರಮಾಣದ ಕರೆಂಟ್ ಟ್ರಾಲಿಯಲ್ಲಿದ್ದವರ ಮೇಲೆ ಹರಿದಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 10 ಜನರು ಗಂಭೀರ ಗಾಯಗೊಂಡಿದ್ದಾರೆ. ಹೈ-ಟೆನ್ಷನ್ ವಿದ್ಯುತ್ ತಂತಿಗಳ ಕೆಳಗೆ ಭಕ್ತರನ್ನು ಹೊತ್ತೊಯ್ಯುವ ವಾಹನಗಳು ಹಾದುಹೋಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಮತ್ತು ಅಪಾಯಗಳ ಕುರಿತು ಈ ಘಟನೆಯು ಮತ್ತೊಮ್ಮೆ ಗಂಭೀರ ಎಚ್ಚರಿಕೆಯನ್ನು ನೀಡಿದೆ.
ಗೋರಖ್‌ಪುರ ಘಟನೆಯ ಜೊತೆಗೆ ಉತ್ತರ ಪ್ರದೇಶದ ಫತೇಹ್‌ಪುರದಲ್ಲೂ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಮತ್ತೊಂದು ದುರಂತ ಸಂಭವಿಸಿದೆ. ಚಕ್ ಕಟೋಘನ್ ಗ್ರಾಮದಲ್ಲಿ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ನಂತರ ಕೆರೆಯಲ್ಲಿ ಸ್ನಾನ ಮಾಡಲು ಇಳಿದ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರು ಯುವಕರನ್ನು ರಕ್ಷಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ