ದೆಹಲಿಯ ಸಿಎನ್‌ಜಿ ಪಂಪ್‌ ಸ್ಟೇಷನ್​​ನಲ್ಲಿ ಟ್ರಕ್‌ಗೆ ಗ್ಯಾಸ್ ತುಂಬಿಸುವಾಗ ಭಾರಿ ಸ್ಫೋಟ; 3 ಜನ ಸಾವು, ಮೂವರಿಗೆ ಗಾಯ

ದೆಹಲಿಯಲ್ಲಿ ಇಂದು ಸಿಎನ್‌ಜಿ (CNG) ಗ್ಯಾಸ್ ಪಂಪ್‌ನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಟಿಕ್ರಿ ಕಲಾನ್ ಮೆಟ್ರೋ ನಿಲ್ದಾಣದ ಬಳಿ ಇರುವ ಸಿಎನ್‌ಜಿ ಪಂಪ್‌ನಲ್ಲಿ ರೀಫಿಲ್ಲಿಂಗ್ ಟ್ರಕ್‌ನಿಂದ ಗ್ಯಾಸ್ ವರ್ಗಾಯಿಸಲಾಗುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಒಬ್ಬರನ್ನು ಬಾಬಾ ಹರಿದಾಸ್ ಕಾಲೋನಿಯ ನಿವಾಸಿ 25 ವರ್ಷದ ಮನೀಶ್ ಎಂದು ಗುರುತಿಸಲಾಗಿದೆ. ಸ್ಫೋಟ ಸಂಭವಿಸಿದಾಗ ಅವರು ಬಸ್‌ಗೆ ಸಿಎನ್‌ಜಿ ತುಂಬಿಸುತ್ತಿದ್ದರು ಎನ್ನಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಫೋಟದ ನಿಖರವಾದ ಕಾರಣ ಇನ್ನಷ್ಟೇ ಪತ್ತೆಯಾಗಬೇಕಿದೆ.

ದೆಹಲಿಯ ಸಿಎನ್‌ಜಿ ಪಂಪ್‌ ಸ್ಟೇಷನ್​​ನಲ್ಲಿ ಟ್ರಕ್‌ಗೆ ಗ್ಯಾಸ್ ತುಂಬಿಸುವಾಗ ಭಾರಿ ಸ್ಫೋಟ; 3 ಜನ ಸಾವು, ಮೂವರಿಗೆ ಗಾಯ
Cng Pump Blast
Image Credit source: TV9

Updated on: Aug 19, 2026 | 7:51 PM

ನವದೆಹಲಿ, ಆಗಸ್ಟ್ 19: ದೆಹಲಿಯ ಟಿಕ್ರಿ ಕಲಾನ್ ಪ್ರದೇಶದಲ್ಲಿರುವ ಸಿಎನ್‌ಜಿ (CNG) ಗ್ಯಾಸ್ ಪಂಪ್‌ನಲ್ಲಿ ಇಂದು ಟ್ರಕ್‌ಗೆ ನೈಸರ್ಗಿಕ ಅನಿಲ (CNG) ತುಂಬಿಸುತ್ತಿದ್ದ ವೇಳೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೂವರ ಸಾವು ಸಂಭವಿಸಿರುವುದನ್ನು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪಂಪ್‌ನಲ್ಲಿ ಗ್ಯಾಸ್ ತುಂಬಿಸುವಾಗ ಈ ಘಟನೆ ನಡೆದಿದೆ. ಸ್ಫೋಟ ಸಂಭವಿಸಿದಾಗ ಗಾಯಗೊಂಡವರು ಪಂಪ್ ಆವರಣದಲ್ಲಿದ್ದರು ಎಂದು ತಿಳಿದುಬಂದಿದೆ.

ದೆಹಲಿ ಅಗ್ನಿಶಾಮಕ ಸೇವೆಗಳ ಪ್ರಕಾರ, ಇಂದು ಮಧ್ಯಾಹ್ನ 3.37ಕ್ಕೆ ಈ ದುರಂತದ ಕುರಿತು ಕರೆ ಬಂದಿತ್ತು. ಟ್ರಕ್ ಬಳಿ ನಿಂತಿದ್ದ ಜನರು ಸ್ಫೋಟದ ತೀವ್ರತೆಗೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೃತರ ಪೈಕಿ ಒಬ್ಬರನ್ನು ಮನೀಶ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಮೃತಪಟ್ಟ ಮೂವರೂ ಸಿಎನ್‌ಜಿ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಎಂದು ವರದಿಯಾಗಿದೆ.

ಸ್ಫೋಟದ ಮಾಹಿತಿ ತಿಳಿಯುತ್ತಿದ್ದಂತೆಯೇ ದೆಹಲಿ ಅಗ್ನಿಶಾಮಕ ದಳದ ಸಿಬ್ಬಂದಿ 6 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿದರು. ಅಗ್ನಿಶಾಮಕ ಸಿಬ್ಬಂದಿ ಸಿಎನ್‌ಜಿ ಸ್ಟೇಷನ್‌ಗೆ ತಲುಪಿ, ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ

ಸ್ಫೋಟಕ್ಕೆ ನಿಖರವಾದ ಕಾರಣವೇನೆಂಬುದು ಇದುವರೆಗೆ ತಿಳಿದುಬಂದಿಲ್ಲ. ಗ್ಯಾಸ್ ತುಂಬಿಸುವ ಸಮಯದಲ್ಲಿ ಟ್ರಕ್‌ನ ಗ್ಯಾಸ್ ಸಿಲಿಂಡರ್ ಸ್ಫೋಟಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

 

ಸಿಎನ್‌ಜಿ ಗ್ಯಾಸ್ ಅನ್ನು ಅತ್ಯಧಿಕ ಒತ್ತಡದಲ್ಲಿ ಶೇಖರಿಸಿಡಲಾಗುತ್ತದೆ. ಹೀಗಾಗಿ ಗ್ಯಾಸ್ ತುಂಬಿಸುವಾಗ ಮತ್ತು ನಿರ್ವಹಿಸುವಾಗ ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ವಾಹನ ಸವಾರರು ಮತ್ತು ಸಿಎನ್‌ಜಿ ಪಂಪ್ ಸಿಬ್ಬಂದಿ ಸದಾ ಜಾಗರೂಕರಾಗಿರಬೇಕು, ನಿಗದಿಪಡಿಸಿದ ಸುರಕ್ಷತಾ ವಿಧಾನಗಳನ್ನು ಅನುಸರಿಸಬೇಕು ಹಾಗೂ ಸಿಲಿಂಡರ್‌ಗಳು ಮತ್ತು ಸಂಬಂಧಿತ ಉಪಕರಣಗಳನ್ನು ಕಾಲಕಾಲಕ್ಕೆ ತಪಾಸಣೆಗೊಳಪಡಿಸಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us