ಜನಸಂಖ್ಯೆ ಕಡಿಮೆಯಾಗಿದ್ದಕ್ಕೆ ಕಳವಳ; 4 ಮಕ್ಕಳನ್ನು ಹೊಂದಿದ ಪಾಲಕರಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದ ಕೇರಳ ಚರ್ಚ್

ಜನಸಂಖ್ಯೆ ಕಡಿಮೆಯಾಗಿದ್ದಕ್ಕೆ ಕಳವಳ; 4 ಮಕ್ಕಳನ್ನು ಹೊಂದಿದ ಪಾಲಕರಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದ ಕೇರಳ ಚರ್ಚ್
ಪ್ರಾತಿನಿಧಿಕ ಚಿತ್ರ

ಪಥನಂತಿಟ್ಟ ಜಿಲ್ಲೆಯಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದೆ. ಇಲ್ಲಿನ ಜನರು ಸಂಸ್ಕೃತಿ-ಶಿಕ್ಷಣದಲ್ಲಿ ಮುಂದಿದ್ದಾರೆ. ಆದರೆ ಇಲ್ಲಿನ ಜನಸಂಖ್ಯೆ ನಿಯಂತ್ರಣ ಚೀನಾಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿದೆ ಎಂದು ಚರ್ಚ್ ಹೇಳಿದೆ.

TV9kannada Web Team

| Edited By: Lakshmi Hegde

Aug 01, 2021 | 6:26 PM

ತಿರುವನಂತಪುರಂ: ಹಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣಕ್ಕೆ ನೂತನ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿವೆ. ಇಬ್ಬರಿಗಿಂತ ಜಾಸ್ತಿ ಮಕ್ಕಳನ್ನು ಹೊಂದಿದ್ದವರು ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಾರೆ ಎಂದು ಅಸ್ಸಾಂ, ಉತ್ತರಪ್ರದೇಶ ರಾಜ್ಯಗಳೂ ಹೇಳಿವೆ. ಹೀಗಿರುವಾಗ ಕೇರಳದ ಕ್ಯಾಥೋಲಿಕ್​ ಚರ್ಚ್​ವೊಂದು ವಿಭಿನ್ನ ಘೋಷಣೆ ಹೊರಡಿಸಿದೆ. ನಾಲ್ಕು ಮತ್ತು ಅದಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದುವ ಪಾಲಕರಿಗೆ ವಿಶೇಷ ಕೊಡುಗೆ ನೀಡಲಾಗುವುದು..ಚರ್ಚ್​ ಕಡೆಯಿಂದ ಕಲ್ಯಾಣ ಯೋಜನೆಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದೆ.

ಹೀಗೆ ಘೋಷಣೆ ಮಾಡಿದ್ದು ಪಥನಂತಿಟ್ಟ ಧರ್ಮಪ್ರಾಂತ್ಯದಲ್ಲಿರುವ ಸಿರೋ-ಮಲಂಕರ ಕ್ಯಾಥೋಲಿಕ್​ ಚರ್ಚ್​. ಯಾರು ನಾಲ್ಕು ಮತ್ತು ಅದಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೋ ಅಥವಾ ಹೊಂದುತ್ತಾರೋ ಅವರಿಗೆ ತಿಂಗಳಿಗೆ 2000 ರೂ.ಆರ್ಥಿಕ ನೆರವು ನೀಡುವ ಜತೆಗೆ ಇನ್ನೂ ಹಲವು ಅನುಕೂಲಗಳನ್ನು ಒದಗಿಸಲಾಗುವುದು ಎಂದು ತಿಳಿಸಿದೆ.

ಪಥನಂತಿಟ್ಟದ ಚರ್ಚ್​ ಘೋಷಿಸಿರುವ ಕಲ್ಯಾಣ ಯೋಜನೆಗಳು ಇಲ್ಲಿವೆ.. 1. ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಹೊಂದುವ ಕುಟುಂಬಕ್ಕೆ ತಿಂಗಳಿಗೆ 2,000 ರೂ. ಆರ್ಥಿಕ ನೆರವು ನೀಡಲಾಗುವುದು. ನಾಲ್ಕನೇ ಮಗುವಿನ ಜನನದ ವೇಳೆ ಏನಾದರೂ ಆರ್ಥಿಕವಾಗಿ ಸಹಾಯ ಬೇಕಾದರೆ, ಮಾಡಲಾಗುವುದು. 2. ಕ್ಯಾಥೋಲಿಕ್​ ಚರ್ಚ್​ನ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಂಥ ಕುಟುಂಬದ ಮಕ್ಕಳಿಗೆ ಮೊದಲ ಆದ್ಯತೆಯಲ್ಲಿ ಶಾಲೆಗೆ ಅಡ್ಮಿಷನ್​ ಅವಕಾಶ ನೀಡಲಾಗುತ್ತದೆ. ಹಾಗೇ, ಚರ್ಚ್​ಗೆ ಸಂಬಂಧಿತ ಸಂಸ್ಥೆಗಳಲ್ಲಿರುವ ಖಾಲಿ ಹುದ್ದೆಗಳಲ್ಲೂ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಮಕ್ಕಳಿರುವ ಮನೆಯ ಸದಸ್ಯರಿಗೇ ಮೊದಲ ಆದ್ಯತೆ ಇರಲಿದೆ.

ಇದರೊಂದಿಗೆ ಇನ್ನೂ ಹಲವು ಯೋಜನೆಗಳನ್ನು ಕ್ಯಾಥೋಲಿಕ್​ ಚರ್ಚ್ ಘೋಷಣೆ ಮಾಡಿದೆ. ಪಥನಂತಿಟ್ಟ ಜಿಲ್ಲೆಯಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದೆ. ಇಲ್ಲಿನ ಜನರು ಸಂಸ್ಕೃತಿ-ಶಿಕ್ಷಣದಲ್ಲಿ ಮುಂದಿದ್ದಾರೆ. ಆದರೆ ಇಲ್ಲಿನ ಜನಸಂಖ್ಯೆ ನಿಯಂತ್ರಣ ಚೀನಾಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿದೆ. ಇಲ್ಲಿ ಶೇ 20ರಷ್ಟು ಮನೆಗಳು ಮುಚ್ಚಿವೆ. ರೈತರ ಹೊಲಗಳೆಲ್ಲ ಅರಣ್ಯಗಳಾಗಿ ಮಾರ್ಪಾಡಾಗಿದ್ದು, ಕಾಡುಪ್ರಾಣಿಗಳ ತಾಣವಾಗಿದೆ. ಬರೀ ಕ್ರಿಶ್ಚಿಯನ್ನರಷ್ಟೇ ಅಲ್ಲ, ಇಲ್ಲಿರುವ ಎಲ್ಲ ಧರ್ಮೀಯರೂ ಜನಸಂಖ್ಯೆ ಹೆಚ್ಚಿಸಲು ಮುಂದಾಗಬೇಕು ಎಂದು ಕ್ಯಾಥೋಲಿಕ್​ ಚರ್ಚ್ ಹೇಳಿಕೊಂಡಿದೆ. ಈ ಚರ್ಚ್ ಕೇವಲ ಕ್ರಿಶ್ಚಿಯನ್ ಕುಟುಂಬಗಳಿಗಷ್ಟೇ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದೆಯೋ..ಯಾವುದೇ ಧರ್ಮದವರೂ ನಾಲ್ಕು-ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದರೆ ಕಲ್ಯಾಣ ಯೋಜನೆಗಳನ್ನು ಪಡೆಯಬಹುದೋ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: South Africa: 2021ರಲ್ಲಿ ಇದುವರೆಗೆ 249 ಖಡ್ಗಮೃಗಗಳು ಹತ್ಯೆಗೀಡಾದ ಆಘಾತಕಾರಿ ಅಂಶ ಬಯಲು!

Follow us on

Related Stories

Most Read Stories

Click on your DTH Provider to Add TV9 Kannada