
ನವದೆಹಲಿ, ಸೆಪ್ಟೆಂಬರ್ 3: ಆಮ್ ಆದ್ಮಿ ಪಾರ್ಟಿಯ ಹಿರಿಯ ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್‌ಗೆ ದೆಹಲಿ ಜಲ ಮಂಡಳಿ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ಇಂದು ಜಾಮೀನು ಮಂಜೂರು ಮಾಡಿದೆ. ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ 2 ಲಕ್ಷ ರೂ. ಬಾಂಡ್ ಹಾಗೂ ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಸತ್ಯೇಂದರ್ ಜೈನ್‌ಗೆ ಜಾಮೀನು ನೀಡಿದೆ. ವಿಶೇಷ ನ್ಯಾಯಾಧೀಶ ದಿಗ್ವಿಜಯ್ ಸಿಂಗ್ ಈ ಆದೇಶ ನೀಡಿದ್ದಾರೆ.
ಏನಿದು ಪ್ರಕರಣ?:
ಸತ್ಯೇಂದರ್ ಜೈನ್ ಸಚಿವರಾಗಿದ್ದ ಸಮಯದಲ್ಲಿ ದೆಹಲಿ ಜಲ ಮಂಡಳಿಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ವಿದ್ಯುತ್ ಮತ್ತು ಯಾಂತ್ರಿಕ ಉಪಕರಣಗಳ ಪೂರೈಕೆಗೆ ಸಂಬಂಧಿಸಿದಂತೆ ಅಕ್ರಮವಾಗಿ ಟೆಂಡರ್ ನೀಡಿ, ಅಕ್ರಮ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. ದೆಹಲಿ ಜಲ ಮಂಡಳಿಯ ಒಳಚರಂಡಿ ಸಂಸ್ಕರಣಾ ಘಟಕ ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಆಗಸ್ಟ್ 18ರಂದು ಸತ್ಯೇಂದರ್ ಜೈನ್ ಅವರನ್ನು ಬಂಧಿಸಿತ್ತು.
ಇದನ್ನೂ ಓದಿ: ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಎನಿಸಿಕೊಂಡಿದ್ದ ರಾಘವ್ ಚಡ್ಡಾ ರೆಬೆಲ್ ಆಗಿದ್ದು ಹೇಗೆ?
ಕೋರ್ಟ್ ವಿಧಿಸಿದ ಪ್ರಮುಖ ಷರತ್ತುಗಳು:
– ಸತ್ಯೇಂದರ್ ಜೈನ್ ತಮ್ಮ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು.
– ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ.
– ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಬಾರದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ