AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಬರಿಮಲೆಯಲ್ಲಿ ಬಂಗಾರದ ಕಿರೀಟ ನಾಪತ್ತೆ: ಅಸಲಿ ಕಿರೀಟದ ಜಾಗದಲ್ಲಿ ನಕಲಿ ಪತ್ತೆ!

ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಿಂದ ಅಮೂಲ್ಯ ಬಂಗಾರದ ಕಿರೀಟ ನಾಪತ್ತೆಯಾಗಿದ್ದು, ಅದರ ಜಾಗದಲ್ಲಿ ನಕಲಿ ಕಿರೀಟ ಪತ್ತೆಯಾಗಿದೆ ಎಂದು ಕೇರಳದ ಪ್ರಮುಖ ಸುದ್ದಿ ಚಾನೆಲ್ ಮಾತೃಭೂಮಿ ವರದಿಮಾಡಿದೆ. ಕೇರಳ ಹೈಕೋರ್ಟ್ ಆದೇಶದಂತೆ ನಡೆದ ಲೆಕ್ಕಪರಿಶೋಧನೆಯಲ್ಲಿ ಈ ಭಾರಿ ವಂಚನೆ ಬಯಲಾಗಿದೆ. ಅಸಲಿ ಕಿರೀಟ 55 ಪವನ್ ತೂಕವಿದ್ದರೆ, ನಕಲಿ ಕಿರೀಟ ಕೇವಲ 240 ಗ್ರಾಂ ಇದೆ. ಸಿಸಿಟಿವಿ ಇಲ್ಲದ ಭಂಡಾರದಿಂದ ಕಳ್ಳತನವಾಗಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದು ಧಾರ್ಮಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಶಬರಿಮಲೆಯಲ್ಲಿ ಬಂಗಾರದ ಕಿರೀಟ ನಾಪತ್ತೆ: ಅಸಲಿ ಕಿರೀಟದ ಜಾಗದಲ್ಲಿ ನಕಲಿ ಪತ್ತೆ!
ಶಬರಿಮಲೆ ಪಡಿಪೂಜೆImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 24, 2026 | 12:10 PM

Share

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಭಂಡಾರದಿಂದ (Strongroom) ದೇವರಿಗೆ ಅರ್ಪಿಸಲಾಗಿದ್ದ ಅತ್ಯಂತ ಮೌಲ್ಯಯುತ ಬಂಗಾರದ ಕಿರೀಟವೊಂದು ನಾಪತ್ತೆಯಾಗಿದ್ದು, ಧಾರ್ಮಿಕ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಳುವಾದ ಅಸಲಿ ಕಿರೀಟದ ಜಾಗದಲ್ಲಿ ಅಷ್ಟೇ ಗಾತ್ರ ಮತ್ತು ವಿನ್ಯಾಸ ಹೊಂದಿರುವ ನಕಲಿ ಕಿರೀಟವನ್ನು ಇಡಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಶಬರಿಮಲೆಯ ದೇವಸ್ಥಾನದ ಪವಿತ್ರ ಆಭರಣಗಳ (ತಿರುವಾಭರಣಂ) ಪಟ್ಟಿಯನ್ನು ಪರಿಶೀಲಿಸಲು ಕೇರಳ ಹೈಕೋರ್ಟ್ ನಿರ್ದೇಶನದಂತೆ ಆಮಿಕ್ಯೂಸ್ ಕ್ಯೂರಿ ಜಸ್ಟಿಸ್ ಕೆ.ಟಿ. ಶಂಕರನ್ ಅವರ ನೇತೃತ್ವದಲ್ಲಿ ಲೆಕ್ಕಪರಿಶೋಧನೆ (Audit) ನಡೆಸಲಾಗುತ್ತಿತ್ತು. ಈ ಸೆಪ್ಟೆಂಬರ್‌ನಲ್ಲಿ ಸನ್ನಿಧಾನದ ಭಂಡಾರವನ್ನು ತಪಾಸಣೆ ಮಾಡುವಾಗ ಈ ಭಾರಿ ವಂಚನೆ ಬಯಲಾಗಿದೆ. ಅಸಲಿ ಕಿರೀಟವು 55.72 ಪವನ್ (ಸುಮಾರು 445.78 ಗ್ರಾಂ) ತೂಕ ಹೊಂದಿದ್ದರೆ, ಪ್ರಸ್ತುತ ಭಂಡಾರದಲ್ಲಿರುವ ನಕಲಿ ಕಿರೀಟವು ಕೇವಲ 240 ಗ್ರಾಂ ತೂಗುತ್ತಿದೆ. ಅಂದರೆ ಅಸಲಿ ಕಿರೀಟಕ್ಕಿಂತ ಪ್ರಸ್ತುತ ಇರುವ ಕಿರೀಟವು ಸುಮಾರು 206 ಗ್ರಾಂ ಕಮ್ಮಿ ತೂಕ ಹೊಂದಿದೆ. ಕಿರೀಟ ಸವೆದು ತೂಕ ಕಡಿಮೆಯಾಗಿಲ್ಲ ಅಥವಾ ಅಳತೆಯಲ್ಲಿ ತಪ್ಪಾಗಿಲ್ಲ, ಬದಲಿಗೆ ಅಸಲಿ ಕಿರೀಟವನ್ನು ಕದ್ದು ನಕಲಿ ಕಿರೀಟವನ್ನು ತಂದಿಡಲಾಗಿದೆ ಎಂಬುದು ತನಿಖಾಧಿಕಾರಿಗಳ ಬಲವಾದ ಶಂಕೆಯಾಗಿದೆ.

ಈ ಬಂಗಾರದ ಕಿರೀಟದ ಇತಿಹಾಸವೇನು?

ಈ ಬಂಗಾರದ ಕಿರೀಟವನ್ನು ಆಗಸ್ಟ್ 17, 2012 ರಂದು (ಚಿಂಗಂ ಮಾಸದ ಪೂಜೆಯ ಸಂದರ್ಭದಲ್ಲಿ) ಅಯ್ಯಪ್ಪ ಸ್ವಾಮಿಗೆ ಅರ್ಪಿಸಲಾಗಿತ್ತು. ತಮಿಳುನಾಡಿನ ಚಾರ್ಟರ್ಡ್ ಅಕೌಂಟೆಂಟ್‌ಗಳ ಗುಂಪೊಂದು ಈ ಅಪರೂಪದ ಕಿರೀಟವನ್ನು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿತ್ತು. ದೇವಸ್ಥಾನದ ಆಡಳಿತ ಮಂಡಳಿಯಾದ ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಕಾಣಿಕೆ ನೀಡಿದ ಭಕ್ತರಿಗೆ ಅಧಿಕೃತ ರಸೀದಿಯನ್ನೂ ನೀಡಿತ್ತು. ಸಾಮಾನ್ಯ ನಿಯಮಗಳ ಪ್ರಕಾರ, ದೇವಸ್ಥಾನಕ್ಕೆ ಬರುವ ಮೌಲ್ಯಯುತ ಕಾಣಿಕೆಗಳನ್ನು ಮೊದಲು ಸನ್ನಿಧಾನದ ಭಂಡಾರದಲ್ಲಿ ಇರಿಸಲಾಗುತ್ತದೆ, ನಂತರ ಅವುಗಳನ್ನು ಹೆಚ್ಚಿನ ಭದ್ರತೆ ಇರುವ ‘ಕೇಂದ್ರೀಯ ಭಂಡಾರಕ್ಕೆ’ (Central Vault) ವರ್ಗಾಯಿಸಬೇಕು. ಆದರೆ, ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಈ ಕಿರೀಟವನ್ನು ಎಂದಿಗೂ ಭಂಡಾರಕ್ಕೆ ವರ್ಗಾಯಿಸಲೇ ಇಲ್ಲ, ಬದಲಿಗೆ ಸನ್ನಿಧಾನದಲ್ಲೇ ಇರಿಸಲಾಗಿತ್ತು. ಈ ಗಂಭೀರ ಲೋಪವು ಈಗ ತನಿಖೆಯ ಮುಖ್ಯ ವಸ್ತುವಾಗಿದೆ.

ನಕಲಿ ಕಿರೀಟ ಬದಲಾಯಿಸಿದ್ದು ಹೇಗೆ?

ಸನ್ನಿಧಾನದ ಭಂಡಾರದಲ್ಲಿ (Strongroom) ಸಿಸಿಟಿವಿ ಕ್ಯಾಮೆರಾಗಳ ಕಣ್ಣಾವಲು ಇಲ್ಲದಿರುವುದು ಕಳ್ಳರಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಇದರೊಂದಿಗೆ, ಶಬರಿಮಲೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳು ಕೇವಲ 1 ವರ್ಷದ ಅವಧಿಗೆ ಬದಲಾಗುತ್ತಿರುತ್ತಾರೆ. ಇದರಿಂದಾಗಿ ಯಾವ ಅಧಿಕಾರಿಯ ಅವಧಿಯಲ್ಲಿ ಮತ್ತು ಯಾರ ವಶದಲ್ಲಿದ್ದಾಗ ಈ ಕಿರೀಟ ಕಳುವಾಗಿದೆ ಎಂಬುದನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳಿಗೆ ಭಾರಿ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ಮನೆಯಲ್ಲಿ ಬೆಳ್ಳಿಯ ಗಣೇಶ ಮೂರ್ತಿ ಇಡುವುದು ಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ದೇವಸ್ವಂ ಮಂಡಳಿ (TDB) ಅಧ್ಯಕ್ಷರ ಪ್ರತಿಕ್ರಿಯೆ ಏನು?

ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್, ಕಿರೀಟ ನಾಪತ್ತೆಯಾಗಿರುವ ವಿಚಾರ ತಮಗೆ ಮಾಧ್ಯಮಗಳ ಮೂಲಕಷ್ಟೇ ತಿಳಿದಿದ್ದು, ಸಂಪೂರ್ಣ ವಿವರವನ್ನು ಪಡೆಯುತ್ತಿದ್ದೇನೆ ಎಂದು ತಿಳಿಸಿದರು. ಕಿರೀಟ ನಿಜವಾಗಿಯೂ ನಾಪತ್ತೆಯಾಗಿದ್ದರೆ ಅದು ಅತ್ಯಂತ ಗಂಭೀರ ವಿಚಾರವಾಗಿದ್ದು, ದೇವಸ್ಥಾನದ ಮುಖ್ಯ ಅರ್ಚಕರು (ತಂತ್ರಿ) ನಿತ್ಯ ಪೂಜೆಗೆ ಬೇಕೆಂದು ಸೂಚಿಸದ ಹೊರತು, ಕಿರೀಟವು ಸನ್ನಿಧಾನದಲ್ಲಿ ಅಥವಾ ಆರಣ್ಮುಲ ಭಂಡಾರದಲ್ಲಿ ಮಾತ್ರ ಇರಬೇಕು ಎಂದು ಹೇಳಿದರು.

ಹೈಕೋರ್ಟ್ ಮೇಲ್ವಿಚಾರಣೆ, ವಿಶೇಷ ಕಮಿಷನರ್ ಹಾಗೂ ವಿಜಿಲೆನ್ಸ್ ವಿಭಾಗಗಳಿದ್ದರೂ ಸಹ ದೇವಸ್ಥಾನದಲ್ಲಿ ಪದೇ ಪದೇ ಇಂತಹ ಲೋಪಗಳು ಸಂಭವಿಸುತ್ತಿರುವುದು ಕಳವಳಕಾರಿ ವಿಷಯ ಎಂದ ಅವರು, ಕಿರೀಟವನ್ನು ಯಾರು ಮತ್ತು ಹೇಗೆ ಕದ್ದಿದ್ದಾರೆ ಎಂಬುದನ್ನು ಅಧಿಕೃತ ತನಿಖೆಯಿಂದ ಮಾತ್ರ ಪತ್ತೆಹಚ್ಚಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More