ಸೋನಿಯಾ ಗಾಂಧಿ ಆತ್ಮಕತೆಗೆ ಹೊಸ ಪ್ರಕಾಶನ; ನ. 10ರಂದು ಹಾರ್ಪರ್ ಕಾಲಿನ್ಸ್​​ನಿಂದ ಬಿಲಾಂಗಿಂಗ್ ಪ್ರಕಟ

ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಪುಸ್ತಕವನ್ನು ಪ್ರಕಟಿಸುತ್ತೇನೆ ಎಂದು ಹೇಳಿ ನಂತರ ಹಿಂದೆ ಸರಿದಿತ್ತು. ಇದೀಗ ಪೆಂಗ್ವಿನ್ ಬದಲು ಹಾರ್ಪರ್ ಕಾಲಿನ್ಸ್ ಪ್ರಕಾಶನ ಸಂಸ್ಥೆ ಸೋನಿಯಾ ಗಾಂಧಿ ಅವರ ಆತ್ಮಕತೆಯಾದ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರಕಟಿಸಿ, ವಿತರಿಸಲು ಮುಂದೆ ಬಂದಿದೆ. ನವೆಂಬರ್ 10ರಂದು ಈ ಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಸೋನಿಯಾ ಗಾಂಧಿ ಆತ್ಮಕತೆಗೆ ಹೊಸ ಪ್ರಕಾಶನ; ನ. 10ರಂದು ಹಾರ್ಪರ್ ಕಾಲಿನ್ಸ್​​ನಿಂದ ಬಿಲಾಂಗಿಂಗ್ ಪ್ರಕಟ
ಸೋನಿಯಾ ಗಾಂಧಿ
Image Credit source: TV9

Updated on: Sep 04, 2026 | 3:29 PM

ನವದೆಹಲಿ, ಸೆಪ್ಟೆಂಬರ್ 4: ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸಂಸ್ಥೆಯು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆಯನ್ನು ಪ್ರಕಟಿಸದಿರಲು ನಿರ್ಧರಿಸಿದ ವಿವಾದದ ಬೆನ್ನಲ್ಲೇ, ಈ ಪುಸ್ತಕವನ್ನು ‘ಹಾರ್ಪರ್ ಕಾಲಿನ್ಸ್ ಇಂಡಿಯಾ’ ಸಂಸ್ಥೆಯು ಪ್ರಕಟಿಸಲಿದೆ ಎಂದು ಪ್ರಕಾಶಕರು ಇಂದು ಘೋಷಿಸಿದ್ದಾರೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಎಂಬ ಶೀರ್ಷಿಕೆಯ ಈ ಆತ್ಮಕತೆ ನವೆಂಬರ್ 10ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ಈ ಪುಸ್ತಕವು ಇಟಲಿಯಲ್ಲಿನ ಸೋನಿಯಾ ಗಾಂಧಿಯವರ ಬಾಲ್ಯದಿಂದ ಹಿಡಿದು, ಭಾರತದಲ್ಲಿನ ಅವರ ಜೀವನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹ ಮತ್ತು ಭಾರತೀಯ ರಾಜಕೀಯದ ಕೇಂದ್ರಬಿಂದುವಾಗಿ ಅವರು ಕಳೆದ ದಶಕಗಳ ಪಯಣವನ್ನು ಅನಾವರಣಗೊಳಿಸಲಿದೆ.

ಕಾಂಗ್ರೆಸ್ ನಾಯಕಿಯ ಈ ಕೃತಿಯನ್ನು “ನಮ್ಮ ಕಾಲದ ಅತ್ಯಂತ ನಿರೀಕ್ಷಿತ ರಾಜಕೀಯ ಆತ್ಮಕಥೆಗಳಲ್ಲಿ ಒಂದಾಗಿದೆ” ಎಂದು ಕರೆದಿರುವ ಹಾರ್ಪರ್ ಕಾಲಿನ್ಸ್, ಈ ಪುಸ್ತಕವು “ಭಾರತದ ಪಯಣದ ಅಪರೂಪದ ಒಳನೋಟವನ್ನು ಒದಗಿಸುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ‘ಸೋನಿಯಾ ಗಾಂಧಿ ಆತ್ಮಕತೆಯನ್ನು ನಾವು ಪ್ರಕಟಿಸುವುದಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ

“ಹಾರ್ಪರ್ ಕಾಲಿನ್ಸ್ ಇಂಡಿಯಾ ಸಂಸ್ಥೆಯು ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವನ್ನು ಪ್ರಕಟಿಸಲಿದೆ. ಈ ಆತ್ಮಕಥೆಯು ನವೆಂಬರ್ 10ರಂದು ಭಾರತದಲ್ಲಿ ಪ್ರಕಟವಾಗಲಿದೆ. ನಮ್ಮ ಕಾಲದ ಅತ್ಯಂತ ಕುತೂಹಲಕಾರಿ ರಾಜಕೀಯ ನೆನಪುಗಳ ಕೃತಿಯಾಗಿರುವ ‘ಬಿಲಾಂಗಿಂಗ್’ ಪ್ರೀತಿ, ಕರ್ತವ್ಯ ಮತ್ತು ಆತ್ಮೀಯತೆಯನ್ನೊಳಗೊಂಡ ವೈಯಕ್ತಿಕ ಕತೆಯಾಗಿದ್ದು, ಸೋನಿಯಾ ಗಾಂಧಿಯವರ ಬದುಕಿನ ಅಪರೂಪದ ಒಳನೋಟವನ್ನು ನೀಡುತ್ತದೆ” ಎಂದು ಪ್ರಕಾಶನ ಸಂಸ್ಥೆಯು ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

 

ಪೆಂಗ್ವಿನ್ ಇಂಡಿಯಾ ಸಂಸ್ಥೆಯು ಈ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸಲು ಮತ್ತು ಬಿಡುಗಡೆ ಮಾಡಲು ನಿರಾಕರಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಪುಸ್ತಕದ ಕೆಲವು ಭಾಗಗಳಲ್ಲಿ ನಿರ್ದಿಷ್ಟ ಸಂಪಾದಕೀಯ ಬದಲಾವಣೆಗಳು ಮತ್ತು ವಿಷಯಗಳನ್ನು ತೆಗೆದುಹಾಕುವಂತೆ ಪ್ರಕಾಶಕರು ಕೋರಿದ್ದರು. ಆದರೆ ಸೋನಿಯಾ ಗಾಂಧಿ ಅದಕ್ಕೆ ಒಪ್ಪಲಿಲ್ಲ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ‘ಸೋನಿಯಾ ಗಾಂಧಿ ಆತ್ಮಕತೆ ಪ್ರಕಟಿಸದಂತೆ ಬಾಹ್ಯ ಒತ್ತಡವಿರಲಿಲ್ಲ’; ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ

ಪೆಂಗ್ವಿನ್ ಇಂಡಿಯಾದ ಹೇಳಿಕೆ ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಭಾರತ-ಚೀನಾ ಸಂಬಂಧಗಳಿಗೆ ಸಂಬಂಧಿಸಿದ ಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಒತ್ತಾಯಿಸಿತ್ತು ಹಾಗೂ ಸರ್ಕಾರದ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.

ಪೆಂಗ್ವಿನ್ ಇಂಡಿಯಾ ಸ್ಪಷ್ಟನೆ:

ಆದರೆ, ತಮ್ಮ ನಿರ್ಧಾರದ ಹಿಂದೆ ಯಾವುದೇ ಬಾಹ್ಯ ಒತ್ತಡವಿಲ್ಲ ಎಂದು ಪೆಂಗ್ವಿನ್ ಇಂಡಿಯಾ ಸ್ಪಷ್ಟಪಡಿಸಿದೆ. ಚರ್ಚೆಯ ಸಮಯದಲ್ಲಿ ಒಂದು ನಿರ್ದಿಷ್ಟ ವಿಷಯದ ಕುರಿತು ಒಮ್ಮತ ನಿರ್ಧಾರ ಮೂಡಲಿಲ್ಲ ಎಂದು ಸಂಸ್ಥೆ ಒಪ್ಪಿಕೊಂಡಿದೆ. “ಪುಸ್ತಕದ ವಿಷಯವು ಗೌಪ್ಯವಾಗಿರುವುದರಿಂದ, ಯಾವುದೇ ರೀತಿಯ ಬಾಹ್ಯ ಒತ್ತಡ ಇರಲಿಲ್ಲ” ಎಂದು ಪೆಂಗ್ವಿನ್ ಇಂಡಿಯಾ ತಿಳಿಸಿದೆ.

ಅಮೆರಿಕದ ಪ್ರಕಾಶನ ದೈತ್ಯ ಹಾಗೂ ಪೆಂಗ್ವಿನ್ ರಾಂಡಮ್ ಹೌಸ್‌ನ ಸಂಸ್ಥೆಯಾದ ‘ಆಲ್ಫ್ರೆಡ್ ಎ ನಾಫ್’ ಈ ಪುಸ್ತಕವು ನವೆಂಬರ್ 10ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದಾಗಿನಿಂದಲೂ ಭಾರತದಲ್ಲಿ ಈ ಪುಸ್ತಕದ ಬಿಡುಗಡೆ ಭಾರಿ ಕುತೂಹಲ ಮೂಡಿಸಿತ್ತು. 79 ವರ್ಷದ ಸೋನಿಯಾ ಗಾಂಧಿ ‘ಬಿಲಾಂಗಿಂಗ್’ ಪುಸ್ತಕದಲ್ಲಿ, 1984ರಲ್ಲಿ ತಮ್ಮ ಅತ್ತೆಯಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದಾಗ ಮತ್ತು ಅವರ ನಂತರ ಪ್ರಧಾನಿಯಾದ ರಾಜೀವ್ ಗಾಂಧಿ ಅವರು 7 ವರ್ಷಗಳ ನಂತರ ಕೊಲೆಯಾದಾಗ ತಮ್ಮ ಜೀವನ ಯಾವ ರೀತಿ ಬದಲಾಯಿತು ಎಂಬ ಘಟನೆಗಳ ಬಗ್ಗೆ ಬರೆದಿದ್ದಾರೆ. ಸೋನಿಯಾ ಗಾಂಧಿ ಕಾಲಕ್ರಮೇಣ ರಾಜಕೀಯಕ್ಕೆ ಪ್ರವೇಶಿಸಿ ಕಾಂಗ್ರೆಸ್ ಪಕ್ಷದ ಸುದೀರ್ಘ ಅವಧಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಹಾಗೂ ಪ್ರಧಾನಿಯಾಗುವ ಅವಕಾಶವನ್ನು ನಿರಾಕರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:27 pm, Fri, 4 September 26

Loading...
Unable to load recommendations.
Follow Us