
ನವದೆಹಲಿ, ನವೆಂಬರ್ 4: ಭಾರತೀಯ ಸಶಸ್ತ್ರ ಪಡೆಗಳಲ್ಲಿ ಜಾರಿಯಲ್ಲಿರುವ ‘ಅಗ್ನಿಪಥ್‘ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯ ಅತ್ಯಂತ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. 4 ವರ್ಷಗಳ ಸೇವಾ ಅವಧಿ ಪೂರ್ಣಗೊಳಿಸಿ ಹೊರಬರಬೇಕಾಗಿದ್ದ ಶೇ. 75ರಷ್ಟು ಅಗ್ನಿವೀರರಿಗೆ ಹೆಚ್ಚುವರಿ 2 ವರ್ಷಗಳ ಸೇವಾ ಅವಧಿ ವಿಸ್ತರಣೆ ನೀಡುವುದಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಎನ್.ಎಸ್. ರಾಜ ಸುಬ್ರಮಣ್ಯಂ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.
2022ರ ಜೂನ್ 14 ರಂದು ಆರಂಭವಾದ ಅಗ್ನಿಪಥ್ ಯೋಜನೆಯ ಮೊದಲ ಬ್ಯಾಚ್ ಅಗ್ನಿವೀರರು ತಮ್ಮ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಈ ನಿರ್ಧಾರದಿಂದಾಗಿ ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಅಗ್ನಿವೀರ ಯುವಕರಿಗೆ ಭಾರಿ ಲಾಭವಾಗಲಿದ್ದು, ದೇಶದ ರಕ್ಷಣಾ ಪಡೆಗಳಿಗೆ ಅನುಭವಸ್ಥ ಯುವ ಸೈನಿಕರ ಸೇವೆ ಮುಂದುವರಿಯಲಿದೆ.
ಖಾಯಂ ಸೇರ್ಪಡೆ ಹಾಗೂ 2 ವರ್ಷಗಳ ವಿಸ್ತರಣೆ:
ಪ್ರಸ್ತುತ ಇರುವ ನಿಯಮಾವಳಿಯಂತೆ, ಅರ್ಹತೆಯ ಆಧಾರದ ಮೇಲೆ ಗರಿಷ್ಠ ಶೇ. 25ರಷ್ಟು ಅಗ್ನಿವೀರರನ್ನು ಸಶಸ್ತ್ರ ಪಡೆಗಳ ಕಾಯಂ ಸೇವೆಗೆ ನಿಯೋಜಿಸಿಕೊಳ್ಳಲಾಗುತ್ತದೆ. ಇನ್ನುಳಿದ ಶೇ. 75ರಷ್ಟು ಅಗ್ನಿವೀರರು 4 ವರ್ಷಗಳ ಸೇವೆ ಮುಗಿಸಿ ಹೊರಹೋಗಬೇಕಿತ್ತು. ಆದರೆ, ಹೊಸ ಆದೇಶದ ಪ್ರಕಾರ ಈ ಶೇ. 75ರಷ್ಟು ಅಗ್ನಿವೀರರಿಗೆ ಹೆಚ್ಚುವರಿಯಾಗಿ 2 ವರ್ಷ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ.
ಇದನ್ನೂ ಓದಿ: Indian Navy Agniveer: ಭಾರತೀಯ ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿ; ದೇಶಸೇವೆಗೆ ಸುವರ್ಣವಕಾಶ
2 ವರ್ಷಗಳ ಹೆಚ್ಚುವರಿ ಅವಧಿ ಪೂರ್ಣಗೊಂಡ ನಂತರ, ಸಶಸ್ತ್ರ ಪಡೆಗಳಲ್ಲಿ ಮುಂದುವರಿಯಲು ಇಚ್ಛಿಸುವ ಎಲ್ಲಾ ಅರ್ಹ ಅಗ್ನಿವೀರರನ್ನು ನಿಗದಿತ ವಸ್ತುನಿಷ್ಠ ಆಯ್ಕೆ ಮಾನದಂಡಗಳ ಆಧಾರದ ಮೇಲೆ ಸಶಸ್ತ್ರ ಪಡೆಗಳ ಖಾಯಂ ಹುದ್ದೆಗಳಿಗೆ ಸೇರಿಸಿಕೊಳ್ಳಲು ಪರಿಗಣಿಸಲಾಗುವುದು.
ಮೊದಲ ಬ್ಯಾಚ್ನ ಅಗ್ನಿವೀರರು ನವೆಂಬರ್ 21ರಂದು ತಮ್ಮ 4 ವರ್ಷಗಳ ಅವಧಿ ಪೂರ್ಣಗೊಳಿಸಿ ನಿರ್ಗಮಿಸಬೇಕಿತ್ತು. ಭಾರತೀಯ ನೌಕಾಪಡೆಯ ಮೊದಲ ಬ್ಯಾಚ್ನಲ್ಲಿ ಸುಮಾರು 2,100 ಅಗ್ನಿವೀರರು ಸೇರ್ಪಡೆಗೊಂಡಿದ್ದು, ಅವರಲ್ಲಿ ಸುಮಾರು 550 ಜನರನ್ನು (ಶೇ. 25) ಕಾಯಂ ಸೇವೆಗೆ ಉಳಿಸಿಕೊಳ್ಳಲಾಗಿದೆ. ಉಳಿದ ಸಿಬ್ಬಂದಿ ಬಿಡುಗಡೆಯಾಗಬೇಕಿತ್ತು; ಆದರೆ ಈಗ ಹೊಸ ಯೋಜನೆಯಿಂದಾಗಿ ಅವರೆಲ್ಲರಿಗೂ 2 ವರ್ಷಗಳ ಹೆಚ್ಚುವರಿ ಸೇವಾ ಅವಕಾಶ ಲಭ್ಯವಾಗಲಿದೆ.
18,000ಕ್ಕೂ ಹೆಚ್ಚು ಅಗ್ನಿವೀರರಿಗೆ ಪ್ರಯೋಜನ:
ನೌಕಾಪಡೆಯ ಜೊತೆಗೆ, ಭಾರತೀಯ ಭೂಸೇನೆ ಹಾಗೂ ವಾಯುಪಡೆಯ ಮೊದಲ ಬ್ಯಾಚ್ ಅಗ್ನಿವೀರರ 4 ವರ್ಷಗಳ ಸೇವಾ ಅವಧಿ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳಬೇಕಿತ್ತು. ಒಟ್ಟಾರೆಯಾಗಿ ಮೂರೂ ಪಡೆಗಳ 18,000 ಕ್ಕೂ ಹೆಚ್ಚು ಅಗ್ನಿವೀರರು ವರ್ಷಾಂತ್ಯಕ್ಕೆ ನಿವೃತ್ತರಾಗಬೇಕಿತ್ತು, ಆದರೆ ಸರ್ಕಾರದ ಈ ಘೋಷಣೆಯಿಂದಾಗಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ: ಅಗ್ನಿಪಥ್ ಯೋಜನೆ ಕುರಿತು ರಾಹುಲ್ ಗಾಂಧಿ ಸುಳ್ಳು ಹೇಳಿ ಜನರ ದಾರಿತಪ್ಪಿಸುತ್ತಿದ್ದಾರೆ: ಅಮಿತ್ ಶಾ
ಏನಿದು ಅಗ್ನಿಪಥ್ ಯೋಜನೆ?:
ಕೇಂದ್ರ ಸರ್ಕಾರವು 2022ರಲ್ಲಿ ಆರಂಭಿಸಿದ ‘ಅಗ್ನಿಪಥ್’ ಯೋಜನೆಯು ಭಾರತೀಯ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗೆ ಯುವಕರನ್ನು ಸೇರಿಸಿಕೊಳ್ಳುವ ಹೊಸ ವ್ಯವಸ್ಥೆಯಾಗಿದೆ. ನೌಕಾಪಡೆಯಲ್ಲಿ 10ನೇ ಮತ್ತು 12ನೇ ತರಗತಿ ತೇರ್ಗಡೆಯಾದ ಅಭ್ಯರ್ಥಿಗಳನ್ನು ಅಗ್ನಿವೀರರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಒಡಿಶಾದ INS ಚಿಲ್ಕಾದಲ್ಲಿ ಮೂಲಭೂತ ತರಬೇತಿ ನೀಡಿದ ನಂತರ, ದೇಶದ ವಿವಿಧ ತರಬೇತಿ ಶಾಲೆಗಳಲ್ಲಿ ವೃತ್ತಿಪರ ಕೋರ್ಸ್ಗಳನ್ನು ಪೂರ್ಣಗೊಳಿಸಿ, ಸಮುದ್ರ ಪ್ರವಾಸದ ಅನುಭವ ಹಾಗೂ ಯುದ್ಧನೌಕೆಗಳು, ವಾಯು ಸ್ಕ್ವಾಡ್ರನ್ಗಳು ಮತ್ತು ತೀರದ ಸಂಸ್ಥೆಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.
ಅಗ್ನಿವೀರರಿಗೆ ಮೊದಲ ವರ್ಷ ತಿಂಗಳಿಗೆ 30,000 ರೂ. ನಿಗದಿತ ಪ್ಯಾಕೇಜ್ ಸಿಗಲಿದ್ದು, 4ನೇ ವರ್ಷಕ್ಕೆ ಇದು 40,000 ರೂ.ಗೆ ಏರಿಕೆಯಾಗುತ್ತದೆ. ಇದರಲ್ಲಿ ಶೇ. 70ರಷ್ಟು ಹಣವನ್ನು ಮಾಸಿಕ ವೇತನವಾಗಿ ನೀಡಿ, ಬಾಕಿ ಶೇ. 30ರಷ್ಟು ಹಣವನ್ನು ‘ಅಗ್ನಿವೀರ್ ಕಾರ್ಪಸ್ ಫಂಡ್’ಗೆ ಜಮೆ ಮಾಡಲಾಗುತ್ತದೆ. ಇಷ್ಟೇ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರವೂ ಕಾರ್ಪಸ್ ಫಂಡ್ಗೆ ನೀಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Wed, 4 November 26