ಮೊದಲ ಬಾರಿ ಪ್ರಧಾನಿ ಮೋದಿಯ ಕಾರ್ಯಕ್ರಮಕ್ಕೆ ಆನ್​​ಲೈನ್ ಬುಕಿಂಗ್; ಒಂದೇ ಗಂಟೆಯಲ್ಲಿ ಎಲ್ಲ ಸೀಟ್ ಭರ್ತಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ (ಮಂಗಳವಾರ) ಗುಜರಾತ್ ಪ್ರವಾಸ ಕೈಗೊಳ್ಳಲಿದ್ದು, ವಡೋದರಾದಲ್ಲಿ 35,000 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಡೋದರಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ವಡೋದರಾ ಮಹಾನಗರ ಪಾಲಿಕೆಯು 'ಬುಕ್‌ಮೈಶೋ' ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಿತ್ತು. ಅಚ್ಚರಿಯ ರೀತಿಯಲ್ಲಿ ನೋಂದಣಿ ಆರಂಭವಾದ ಒಂದೇ ಗಂಟೆಯಲ್ಲಿ ಎಲ್ಲಾ ಆಸನಗಳು ಭರ್ತಿಯಾಗಿದೆ. ಸಭೆಗೆ ಆಗಮಿಸುವ ಸಾರ್ವಜನಿಕರು ಕ್ಯೂಆರ್ ಕೋಡ್ ಹೊಂದಿರುವ 'ಎಂ-ಟಿಕೆಟ್' ಮೂಲಕ ಪ್ರವೇಶ ಪಡೆಯಲಿದ್ದು, ಸಂಪೂರ್ಣ ಜನಸಂದಣಿ ನಿರ್ವಹಣೆಯನ್ನು ಡಿಜಿಟಲ್ ಮಯಗೊಳಿಸಲಾಗಿದೆ.

ಮೊದಲ ಬಾರಿ ಪ್ರಧಾನಿ ಮೋದಿಯ ಕಾರ್ಯಕ್ರಮಕ್ಕೆ ಆನ್​​ಲೈನ್ ಬುಕಿಂಗ್; ಒಂದೇ ಗಂಟೆಯಲ್ಲಿ ಎಲ್ಲ ಸೀಟ್ ಭರ್ತಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Image Credit source: PTI

Updated on: Sep 07, 2026 | 4:05 PM

ವಡೋದರಾ, ಸೆಪ್ಟೆಂಬರ್ 7: ನಾಳೆ (ಸೆಪ್ಟೆಂಬರ್ 8) ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ನಡೆಯಲಿದೆ. ವಡೋದರಾದಲ್ಲಿ ನಾಳೆ 35 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶದಲ್ಲೇ ಮೊದಲ ಬಾರಿಗೆ ಡಿಜಿಟಲ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹೊಸ ಪ್ರಯೋಗಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ಬಂದಿದ್ದು, ಬುಕಿಂಗ್​ ಓಪನ್ ಆದ ಒಂದೇ ಗಂಟೆಯಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿವೆ! ಇದು ಪ್ರಧಾನಿ ಮೋದಿಯವರ ಬಗೆಗಿನ ಜನರ ಕ್ರೇಜ್ ಹೇಗಿದೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಡೋದರಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ದೇಶದಲ್ಲೇ ಮೊದಲ ಬಾರಿಗೆ ವಿನೂತನ ಪ್ರಯೋಗವೊಂದನ್ನು ಮಾಡಲಾಗಿದೆ. ‘ಬುಕ್‌ ಮೈ ಶೋ’ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಸಾರ್ವಜನಿಕರಿಗೆ ಉಚಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವಡೋದರಾ ಮಹಾನಗರ ಪಾಲಿಕೆ (ವಿಎಂಸಿ) ಈ ನೋಂದಣಿ ಪ್ರಕ್ರಿಯೆಯನ್ನು ನಿರ್ವಹಿಸಿದೆ. ಇದಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ನೋಂದಣಿ ಆರಂಭವಾದ ಒಂದೇ ಗಂಟೆಯಲ್ಲಿ ಕಾರ್ಯಕ್ರಮದ ಎಲ್ಲಾ ಸೀಟುಗಳು ಬುಕ್ ಆಗಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನೂ ಸುಮಾರು 42,000ಕ್ಕೂ ಹೆಚ್ಚು ಜನರು ವೇಯ್ಟಿಂಗ್ ಲಿಸ್ಟ್​​ನಲ್ಲಿದ್ದಾರೆ.

ಇದನ್ನೂ ಓದಿ: ’ವೈಚಾರಿಕ ನಕ್ಸಲಿಸಂ ಎಂಬ ಹೋಮಿಯೋಪತಿ ಮಾತ್ರೆ ನೀಡಿದ್ದೆ’; ಪ್ರಧಾನಿ ಮೋದಿ ವಾಗ್ದಾಳಿ

ಸಂಪೂರ್ಣ ಡಿಜಿಟಲ್ ಪ್ರವೇಶ ವ್ಯವಸ್ಥೆ:

ಈ ಕಾರ್ಯಕ್ರಮವು ತಂತ್ರಜ್ಞಾನ ಆಧಾರಿತ ಡಿಜಿಟಲ್ ಪ್ರವೇಶ ವ್ಯವಸ್ಥೆಯನ್ನು ಹೊಂದಿರಲಿದೆ. ನೋಂದಾಯಿತ ಸಾರ್ವಜನಿಕರು ತಮ್ಮ ಬುಕ್‌ಮೈಶೋ ಖಾತೆಯಲ್ಲಿ ಕ್ಯೂಆರ್ ಕೋಡ್ ಹೊಂದಿರುವ ‘ಎಂ-ಟಿಕೆಟ್’ ಪಡೆಯಲಿದ್ದಾರೆ. ಪ್ರವೇಶ ದ್ವಾರದಲ್ಲಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪರಿಶೀಲಿಸಲಾಗುತ್ತದೆ. ನಂತರವೇ ಜನರನ್ನು ಒಳಗೆ ಬಿಡಲಾಗುತ್ತದೆ. ಭಾರತದ ಮಟ್ಟಿಗೆ ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಈ ಪ್ರಯೋಗ ಮೊದನೆಯದ್ದಾಗಿದೆ.

ಸರಕು ಸಾಗಣೆ ಕಾರಿಡಾರ್ (WDFC) ಸಮರ್ಪಣೆ:

20,700 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ‘ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್’ನ 326 ಕಿ.ಮೀ ಉದ್ದದ 3 ಪ್ರಮುಖ ವಿಭಾಗಗಳನ್ನು (ನ್ಯೂ ಸನಂದ್-ನ್ಯೂ ಮಕರಪುರ, ನ್ಯೂ ಉಂಬರ್‌ಗಾವ್-ನ್ಯೂ ಸಫಾಲೆ, ಮತ್ತು ನ್ಯೂ ಸಫಾಲೆ-ನ್ಯೂ ಜೆಎನ್‌ಪಿಟಿ) ಪ್ರಧಾನಿ ಮೋದಿ ನಾಳೆ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ನೇರವಾಗಿ ಜವಾಹರಲಾಲ್ ನೆಹರೂ ಪೋರ್ಟ್ ಟ್ರಸ್ಟ್ (JNPT) ಸಂಪರ್ಕ ಕಲ್ಪಿಸುವುದರಿಂದ ರಫ್ತು-ಆಮದು ಸರಕು ಸಾಗಣೆ ವೇಗಗೊಳ್ಳಲಿದ್ದು, ಮುಂಬೈ ರೈಲ್ವೆ ಜಾಲದ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಹೊಸ ರೈಲು ಸೇವೆಗಳಿಗೆ ಚಾಲನೆ:

ವಿವಿಧ ಭಾಗಗಳಿಂದ ನೂತನ ಸರಕು ರೈಲು ಸೇವೆಗಳು ಹಾಗೂ ತಾಂಡಾ ರೋಡ್ ಮತ್ತು ವಡೋದರಾ (ಪ್ರತಾಪ್‌ನಗರ) ನಡುವೆ ಹೊಸ ಪ್ರಯಾಣಿಕರ ರೈಲು ಸೇವೆಗೆ ನಾಳೆ ಚಾಲನೆ ಸಿಗಲಿದೆ. ಜೊತೆಗೆ ಬುಡಕಟ್ಟು ಪ್ರದೇಶವಾದ ಅಲಿರಾಜ್‌ಪುರವನ್ನು ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಜೋಡಿಸುವ ‘ಜೋಬಟ್-ತಾಂಡಾ ರೋಡ್’ ನೂತನ ರೈಲು ಮಾರ್ಗವನ್ನು ಸಮರ್ಪಿಸಲಾಗುತ್ತದೆ.

ಇದನ್ನೂ ಓದಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ; ರೈಲಿನೊಳಗೆ ಮಕ್ಕಳ ಜೊತೆ ಸಂವಾದ

ರೈಲ್ವೇ ಮತ್ತು ಹೆದ್ದಾರಿ ಯೋಜನೆಗಳು:

9,700 ಕೋಟಿಗೂ ಹೆಚ್ಚು ವೆಚ್ಚದ 3 ರೈಲ್ವೇ ಯೋಜನೆಗಳು ಹಾಗೂ 1,780 ಕೋಟಿ ವೆಚ್ಚದ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ನಾಳೆ ಶಂಕುಸ್ಥಾಪನೆ ನೆರವೇರಲಿದೆ. ವಡೋದರಾ ನಗರಾಭಿವೃದ್ಧಿ ಪ್ರಾಧಿಕಾರದ ರಿಂಗ್ ರೋಡ್ ಹಂತ-2, ಕಡಾನಾ ಆಣೆಕಟ್ಟಿನಲ್ಲಿ 110 ಮೆಗಾವ್ಯಾಟ್ ತೇಲುವ ಸೌರ ಯೋಜನೆ ಹಾಗೂ ಮಹಾನಗರ ಪಾಲಿಕೆಯ ಹೊಸ ಕಚೇರಿ ನಿರ್ಮಾಣ ಸೇರಿದಂತೆ 2,600 ಕೋಟಿ ವೆಚ್ಚದ ರಾಜ್ಯ ಸರ್ಕಾರದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us