
ಮಥುರಾ, ನವೆಂಬರ್ 28: ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಶುಕ್ರವಾರ ವೃಂದಾವನಕ್ಕೆ ಆಗಮಿಸಿ, ಪವಿತ್ರ ಗೋವರ್ಧನ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಭಕ್ತರು ಹಾಗೂ ಸ್ಥಳೀಯರು ವಿವಿಧ ಕಡೆಗಳಲ್ಲಿ ಅವರಿಗೆ ಆತ್ಮೀಯ ಮತ್ತು ಭವ್ಯ ಸ್ವಾಗತ ನೀಡಿದರು. ಗೋವರ್ಧನ ಪರಿಕ್ರಮ ಆರಂಭಿಸುವ ಮೊದಲು ಅನಂತ್ ಅಂಬಾನಿ ಗಿರಿರಾಜ್ ಜೀ ಮುಖಾರವಿಂದ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ‘ಗಿರಿರಾಜ್ ಧರಣ್’ ಎಂದೂ ಕರೆಯಲ್ಪಡುವ ಗೋವರ್ಧನ ಪರ್ವತದ ಪೂರ್ಣ ಪ್ರದಕ್ಷಿಣೆ ಕೈಗೊಂಡರು. ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ಭಕ್ತರು ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು.
ಪರಿಕ್ರಮ ಮಾರ್ಗದಲ್ಲಿ ಬ್ರಜ್ ಪ್ರದೇಶದ ಶ್ರೀಮಂತ ಸಂಸ್ಕೃತಿ ಮತ್ತು ಭಕ್ತಿಯ ಪರಂಪರೆ ಅನಾವರಣಗೊಂಡಿತು. ಸ್ಥಳೀಯ ಕಲಾವಿದರು ಕೃಷ್ಣಲೀಲೆಯ ವಿವಿಧ ದೃಶ್ಯಗಳನ್ನು ಪ್ರದರ್ಶಿಸಿದರು. ಭಗವಾನ್ ಶ್ರೀಕೃಷ್ಣನ ದಿವ್ಯ ಲೀಲೆಗಳನ್ನು ಬಿಂಬಿಸಿದ ಈ ಪ್ರದರ್ಶನಗಳನ್ನು ಅನಂತ್ ಅಂಬಾನಿ ಆಸಕ್ತಿಯಿಂದ ವೀಕ್ಷಿಸಿದರು.
ಆಧ್ಯಾತ್ಮಿಕ ಅನುಭವದ ಕುರಿತು ಮಾತನಾಡಿದ ಅನಂತ್ ಅಂಬಾನಿ, ‘‘ನಾನು ಗಿರಿರಾಜ್ ಧರಣ್ ಪೂರ್ಣ ಪ್ರದಕ್ಷಿಣೆ ಮಾಡುತ್ತಿದ್ದೇನೆ. ಭಗವಾನ್ ಗಿರಿರಾಜ್ ಧರಣ್ ಅವರ ಪಾದದ ಬಳಿ ಇರುವುದು ಅಪಾರ ಸಂತೋಷ ನೀಡುತ್ತದೆ. ಬ್ರಜ್‌ನ ಜನರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ನಾವೆಲ್ಲರೂ ಗಿರಿರಾಜ್ ಧರಣ್ ಅವರ ಪಾದದ ಬಳಿ ಇದ್ದೇವೆ’’ ಎಂದರು.
‘‘ಇಂದು ನಾನು ಇಲ್ಲಿಗೆ ಬರಲು ನನ್ನ ಅಜ್ಜ-ಅಜ್ಜಿಯರೇ ಕಾರಣ. ಅವರ ಆಶೀರ್ವಾದ, ಪ್ರೀತಿ ಮತ್ತು ಮಾರ್ಗದರ್ಶನ ನನ್ನನ್ನು ಇಲ್ಲಿಗೆ ಕರೆತಂದಿದೆ. ನಾನು ಪೂರ್ಣ ಪ್ರದಕ್ಷಿಣೆ ಮಾಡಲು ಬರುತ್ತೇನೆ ಎಂದು ತಿಳಿಸಿದಾಗ ಅವರು ತುಂಬಾ ಸಂತೋಷಪಟ್ಟಿದ್ದರು. ಅವರ ಪರವಾಗಿಯೂ ಇಲ್ಲಿ ನನ್ನ ಗೌರವವನ್ನು ಸಲ್ಲಿಸುತ್ತಿದ್ದೇನೆ’’ ಎಂದು ಹೇಳಿದರು.
‘‘ಇಲ್ಲಿ ನನಗಾದ ಆಧ್ಯಾತ್ಮಿಕ ಅನುಭವಿಸಿದುದನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ. ಇಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕತೆಯ ವಿಶಿಷ್ಟ ವಾತಾವರಣವಿದೆ. ಎಲ್ಲರ ಕಲ್ಯಾಣಕ್ಕಾಗಿ, ವಿಶೇಷವಾಗಿ ನಮ್ಮ ದೇಶ ಭಾರತವು ಮಹೋನ್ನತ ಕಲ್ಯಾಣವನ್ನು ಕಾಣಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ತಿಳಿಸಿದರು.
ಇದನ್ನೂ ಓದಿ: ತಿರುಪತಿ ದೇವಸ್ಥಾನದಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದ ಅನಂತ್ ಅಂಬಾನಿ
ಈ ಸಂದರ್ಭದಲ್ಲಿಗಿರಿರಾಜ್ ಜೀ ಮುಖಾರವಿಂದ ದೇವಸ್ಥಾನದ ಅರ್ಚಕ ಗಣೇಶ್ ಮಾತನಾಡಿ, ಅನಂತ್ ಅಂಬಾನಿ ಅವರ ಭೇಟಿ ಸಂತಸ ತಂದಿದೆ ಎಂದರು. ಅವರ ಪೋಷಕರು ಹಾಗೂ ಅಜ್ಜ-ಅಜ್ಜಿಯರು ಗಿರಿರಾಜ್ ಜೀ ಅವರೊಂದಿಗೆ ಆಳವಾದ ಅನುಸಂಧಾನ ಹೊಂದಿದ್ದರು. ಅವರು ನಿರಂತರವಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಮತ್ತು ದಾನಗಳನ್ನು ಸಲ್ಲಿಸುತ್ತಿದ್ದರು. ಅವರ ಕುಟುಂಬಕ್ಕೆ ಇನ್ನಷ್ಟು ಕೀರ್ತಿ ಮತ್ತು ಸಮೃದ್ಧಿ ದೊರೆಯಲಿ ಎಂದು ಆಶೀರ್ವದಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ