ಸೋನಿಯಾ ಅಳಿಯ ರಾಬರ್ಟ್ ವಾದ್ರಾಗೆ ಮತ್ತೊಂದು ಸಂಕಷ್ಟ; ಅಕ್ರಮ ಹಣ ವರ್ಗಾವಣೆ ಆರೋಪಿ ಜತೆಗೆ ನಂಟು

ಪ್ರಿಯಾಂಕ ಗಾಂಧಿ ಅವರ ಗಂಡ ರಾಬರ್ಟ್ ವಾದ್ರಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಬರ್ಟ್ ವಾದ್ರಾ ಅವರು ಮಧ್ಯವರ್ತಿ ಸಂಜಯ್ ಭಂಡಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪವಿದ್ದು, ಲಂಡನ್​​ನಲ್ಲಿರುವ ಅವರ ಆಸ್ತಿ ಮತ್ತು ಮನೆಯನ್ನು ಖರೀದಿ ಮಾಡಿದ್ದಾರೆ. ಹಾಗೂ ಅದರಲ್ಲಿಯೇ ಈಗ ವಾಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ಆರೋಪಿಸಿದೆ.

ಸೋನಿಯಾ ಅಳಿಯ ರಾಬರ್ಟ್ ವಾದ್ರಾಗೆ ಮತ್ತೊಂದು ಸಂಕಷ್ಟ; ಅಕ್ರಮ ಹಣ ವರ್ಗಾವಣೆ ಆರೋಪಿ ಜತೆಗೆ ನಂಟು
Follow us
ಅಕ್ಷಯ್​ ಪಲ್ಲಮಜಲು​​
|

Updated on:Dec 27, 2023 | 4:48 PM

ಕಾಂಗ್ರೆಸ್​​​​ನ ಅಧಿನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಅಳಿಯ ಅಂದರೆ ಪ್ರಿಯಾಂಕ ಗಾಂಧಿ (Priyanka Gandhi) ಅವರ ಗಂಡ ರಾಬರ್ಟ್ ವಾದ್ರಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಬರ್ಟ್ ವಾದ್ರಾ (Robert Vadra) ಅವರ ಮಧ್ಯವರ್ತಿ ಸಂಜಯ್ ಭಂಡಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪವಿದ್ದು, ಲಂಡನ್​​ನಲ್ಲಿರುವ ಅವರ ಆಸ್ತಿ ಮತ್ತು ಮನೆಯನ್ನು ರಾಬರ್ಟ್ ವಾದ್ರಾ ಖರೀದಿ ಮಾಡಿದ್ದಾರೆ. ಹಾಗೂ ಅದರಲ್ಲಿಯೇ ಈಗ ವಾಸಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ಆರೋಪಿಸಿದೆ. ಸಂಜಯ್ ಭಂಡಾರಿ ಅವರು ಈ ಆಸ್ತಿ ಮತ್ತು ಮನೆಯನ್ನು ಅಪರಾಧ ಕೃತ್ಯದಿಂದ ಸಂಪಾದಿಸಿದ್ದಾರೆ ಎಂದು ಇಡಿ ಚಾರ್ಜ್ ಶೀಟ್​​ನಲ್ಲಿ ತಿಳಿಸಿದೆ.​​​​ ಸಂಜಯ್ ಭಂಡಾರಿ 2016ರಲ್ಲಿ ಯುಕೆಗೆ ಪಲಾಯನಗೊಂಡಿದರು. ಇಡಿ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ವಿನಂತಿಯ ಮೇರೆಗೆ, 2023 ಜನವರಿಯಲ್ಲಿ ಬ್ರಿಟಿಷ್ ಸರ್ಕಾರ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಭಂಡಾರಿ ವಿರುದ್ಧ ತನಿಖೆ ನಡೆಯುತ್ತಿದೆ. ಇನ್ನು ವಿದೇಶದಲ್ಲಿ ಉದ್ಯಮಿಗಳು ಆಸ್ತಿಯನ್ನು ಹೊಂದಿರುವ ಬಗ್ಗೆ ಎರಡು ಫೆಡರಲ್ ಏಜೆನ್ಸಿಗಳು ಬಹಿರಂಗಪಡಿಸಿದೆ. ಇದೇ ಮೊದಲ ಬಾರಿಗೆ ರಾಬರ್ಟ್ ವಾದ್ರಾ ಅವರ ಹೆಸರನ್ನು ಈ ಏಜೆನ್ಸಿ ಬಹಿರಂಗಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಇ ಮೂಲದ ಎನ್‌ಆರ್‌ಐ ಉದ್ಯಮಿ ಚೆರುವತ್ತೂರ್ ಚಾಕುಟ್ಟಿ ಥಂಪಿ ಮತ್ತು ಯುಕೆ ಪ್ರಜೆ ಸುಮಿತ್ ಚಡ್ಡಾ ವಿರುದ್ಧ ಇಡಿ ಹೊಸ ಚಾರ್ಜ್ ಶೀಟ್ ಸಲ್ಲಿಸಿದೆ.

ಜನವರಿ 2020ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಥಂಪಿ ಅವರನ್ನು ಬಂಧಿಸಲಾಯಿತು. ಇವರನ್ನು ಇಡಿ ರಾಬರ್ಟ್ ವಾದ್ರಾ ಅವರ ಸಹಚರ ಎಂದು ಆರೋಪಿಸಿತ್ತು. ಸದ್ಯಕ್ಕೆ ಥಂಪಿ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಸಂಜಯ್ ಭಂಡಾರಿ ಅವರು ಲಂಡನ್‌ನ ನಂ 12 ಬ್ರಿಯಾನ್‌ಸ್ಟನ್ ಸ್ಕ್ವೇರ್ ಮತ್ತು 6 ಗ್ರೋಸ್ವೆನರ್ ಹಿಲ್ ಕೋರ್ಟ್​​ನಲ್ಲಿ ವಿದೇಶಿ ಆದಾಯ ಮತ್ತು ಆಸ್ತಿಗಳನ್ನು ಹೊಂದಿದ್ದಾರೆ.

ಥಂಪಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ, ಆದರೆ ಇವರು ರಾಬರ್ಟ್ ವಾದ್ರಾ ಆಪ್ತ ಸಹವರ್ತಿ ಎಂದು ಇಡಿ ಹೇಳಿದೆ. ರಾಬರ್ಟ್ ವಾದ್ರಾ ಅವರು ಲಂಡನ್‌ನ 12 ಬ್ರಿಯಾನ್‌ಸ್ಟನ್ ಸ್ಕ್ವೇರ್‌ನಲ್ಲಿರುವ ಆಸ್ತಿಯನ್ನು ಸುಮಿತ್ ಚಡ್ಡಾ ಮೂಲಕ ಖರೀದಿಸಿದ್ದು, ಅದರಲ್ಲಿಯೇ ವಾಸವಾಗಿದ್ದಾರೆ. ಇದರ ಜತೆಗೆ ರಾಬರ್ಟ್ ವಾದ್ರಾ ಮತ್ತು ಸಿಸಿ ಥಂಪಿ ಫರಿದಾಬಾದ್‌ನಲ್ಲಿ (ದೆಹಲಿ ಬಳಿ) ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಿದ್ದಾರೆ. ಜತೆಗೆ ಹಣದ ವಹಿವಾಟುಗಳನ್ನು ನಡೆಸಿದ್ದಾರೆ ಎಂದು ಇಡಿ ಹೇಳಿದೆ.

ಇದನ್ನೂ ಓದಿ: ಅಮೇಠಿಯಿಂದಲೇ ರಾಹುಲ್ ಗಾಂಧಿ ಸ್ಪರ್ಧೆ, ಪ್ರಿಯಾಂಕಾ ಎಲ್ಲಿ ಬಯಸುತ್ತಾರೋ ಅಲ್ಲಿ ಕಣಕ್ಕಿಳಿಯಬಹುದು: ಯುಪಿ ಕಾಂಗ್ರೆಸ್ ಮುಖ್ಯಸ್ಥ

ಈ ಹಿಂದೆ ಇಡಿ ರಾಬರ್ಟ್ ವಾದ್ರಾ ಅವರನ್ನು ಈ ಬಗ್ಗೆ ಪ್ರಶ್ನಿಸಿತ್ತು. ಆದರೆ ಇದನ್ನು ರಾಬರ್ಟ್ ವಾದ್ರಾ ಅವರು ವಿರೋಧಿಸಿದರು. ಇನ್ನು ಈ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನವೆಂಬರ್ 22 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಸಲ್ಲಿಸಲಾದ ಪೂರಕ ಪ್ರಾಸಿಕ್ಯೂಷನ್ ದೂರನ್ನು ದೆಹಲಿ ನ್ಯಾಯಾಲಯವು ಡಿಸೆಂಬರ್ 22ರಂದು ಪರಿಗಣಿಸಿದೆ ಎಂದು ಇಡಿ ಹೇಳಿದೆ.

ದೆಹಲಿ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸಲ್ಲಿಸಿದ ಚಾರ್ಜ್ ಶೀಟ್​​ನ್ನು ಪರಿಗಣಿಸಿ, ನಂತರ ನ್ಯಾಯಾಲಯವು ಥಂಪಿ ಮತ್ತು ಚಡ್ಡಾ ಅವರಿಗೆ ಸಮನ್ಸ್ ಜಾರಿ ಮಾಡುವಂತೆ ಇಡಿಗೆ ಸೂಚಿಸಿದ್ದಾರೆ. ಆದರೆ ಇಡಿ ಸಮನ್ಸ್​​​ ಜಾರಿ ಮಾಡಿದರೂ ಇದುವರೆಗೂ ತನಿಖೆಗೆ ಹಾಜರಾಗದ ಚಡ್ಡಾ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಕೂಡ ಹೊರಡಿಸಿದೆ. ಇನ್ನು ಸುಮಿತ್ ಚಡ್ಡಾ ಅವರು ಸಂಜಯ್ ಭಂಡಾರಿ ಅವರ ಮಗಳಾದ ಪೂಜಾ ಚಡ್ಡಾ ಅವರನ್ನು ವಿವಾಹವಾಗಿದ್ದಾರೆ ಎಂದು ಹೇಳಲಾಗಿದೆ.

2015ರ ಕಪ್ಪುಹಣ ವಿರೋಧಿ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಸಲ್ಲಿಸಲಾದ ಆದಾಯ ತೆರಿಗೆ ಇಲಾಖೆ ಚಾರ್ಜ್ ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 2017 ರಲ್ಲಿ ಭಂಡಾರಿ ಮತ್ತು ಇತರರ ವಿರುದ್ಧ ಇಡಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವರ್ಷ ಜನವರಿ 29 ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:47 pm, Wed, 27 December 23