AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುದ್ವಾರಕ್ಕೆ ನುಗ್ಗಿದ ಶಸ್ತ್ರಸಜ್ಜಿತ ನಿಹಾಂಗ್ ಗುಂಪು: ಭಕ್ತರನ್ನು ಒತ್ತೆಯಾಳಾಗಿರಿಸಿ ಭಯ ಸೃಷ್ಟಿ

ಉತ್ತರಾಖಂಡದ ರುದ್ರಪ್ರಯಾಗದ ನಾಗರಸು ಗುರುದ್ವಾರಕ್ಕೆ ಶಸ್ತ್ರಸಜ್ಜಿತ ನಿಹಾಂಗ್‌ಗಳ ಗುಂಪೊಂದು ನುಗ್ಗಿ, ವೃದ್ಧ ಭಕ್ತರೊಬ್ಬರನ್ನು ಒತ್ತೆಯಾಳಾಗಿರಿಸಿದೆ. ಬಂಧಿತ ಸಹಚರರ ಬಿಡುಗಡೆ ಹಾಗೂ ಗುರುದ್ವಾರದಲ್ಲಿ ವಾಸ್ತವ್ಯಕ್ಕೆ ಕೊಠಡಿಗಳ ನೀಡುವಂತೆ ಒತ್ತಾಯಿಸಿ ಈ ಕೃತ್ಯ ಎಸಗಲಾಗಿದೆ. ಸ್ಥಳದಲ್ಲಿ ಉನ್ನತ ಅಧಿಕಾರಿಗಳು ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಭಕ್ತರ ಸುರಕ್ಷತೆಗಾಗಿ ಪೊಲೀಸರು ಸಂಧಾನ ನಡೆಸುತ್ತಿದ್ದಾರೆ, ಆದರೂ ಆತಂಕ ಮುಂದುವರೆದಿದೆ.

ಗುರುದ್ವಾರಕ್ಕೆ ನುಗ್ಗಿದ ಶಸ್ತ್ರಸಜ್ಜಿತ ನಿಹಾಂಗ್ ಗುಂಪು: ಭಕ್ತರನ್ನು ಒತ್ತೆಯಾಳಾಗಿರಿಸಿ ಭಯ ಸೃಷ್ಟಿ
ನಿಹಾಂಗ್ Image Credit source: NDTV
ನಯನಾ ರಾಜೀವ್
|

Updated on: Jun 22, 2026 | 7:54 AM

Share

ರುದ್ರಪ್ರಯಾಗ, ಜೂನ್ 22: ಉತ್ತರಾಖಂಡದ ಗುರುದ್ವಾರ(Gurudwara)ಕ್ಕೆ ಶಸ್ತ್ರಸಜ್ಜಿತ ಗುಂಪೊಂದು ನುಗ್ಗಿದ್ದಲ್ಲದೆ ಭಕ್ತರನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ನಡೆದಿದೆ. ಈಟಿ, ಕತ್ತಿ, ಕೊಡಲಿಗಳೊಂದಿಗೆ ನುಗ್ಗಿದ ಆರು ಜನರ ಶಸ್ತ್ರಸಜ್ಜಿತ ನಿಹಾಂಗ್ ಸಿಖ್ಖರ ಗುಂಪೊಂದು, ವೃದ್ಧ ಸಿಖ್ ಭಕ್ತರೊಬ್ಬರನ್ನು ಮೂರನೇ ಮಹಡಿಯ ಛಾವಣಿ ಮೇಲೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ.

ಶನಿವಾರ ಸಂಜೆ ಆರಂಭವಾದ ಈ ಘಟನೆಯಿಂದಾಗಿ ಸ್ಥಳದಲ್ಲಿ ಭಾರೀ ಆತಂಕ ಮೂಡಿದ್ದು, ಗರ್ವಾಲ್ ಆಯುಕ್ತರು, ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನಿಹಾರಿಕಾ ತೋಮರ್ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.

ಪಂಜಾಬ್‌ನ ಮೊಹಾಲಿಯಿಂದ ಬಂದ ನಿಹಾಂಗ್ ಗುಂಪು, ತಮ್ಮ ಪ್ರತಿಭಟನಾಕಾರರಿಗಾಗಿ ಗುರುದ್ವಾರದಲ್ಲಿ ತಂಗಲು 50-60 ಕೊಠಡಿಗಳನ್ನು ನೀಡುವಂತೆ ಮ್ಯಾನೇಜ್‌ಮೆಂಟ್‌ಗೆ ಒತ್ತಾಯಿಸಿದೆ. ಆದರೆ, ಗುರುದ್ವಾರದ ವ್ಯವಸ್ಥಾಪಕ ಬಿಯಾಂತ್ ಸಿಂಗ್ ಅವರು ಅಷ್ಟು ಕೊಠಡಿಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದಾಗ ನಿಹಾಂಗ್‌ಗಳು ಹಿಂಸಾಚಾರಕ್ಕೆ ಇಳಿದಿದ್ದಾರೆ.

ಮತ್ತಷ್ಟು ಓದಿ: ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ಪರಸ್ಪರ ದಾಳಿ, 11 ಮಂದಿಗೆ ಗಾಯ

ಜೂನ್ 16 ರಂದು ಚಮೋಲಿಯ ಕರ್ಣಪ್ರಯಾಗ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ವಿಚಾರವಾಗಿ ಸ್ಥಳೀಯರು ಮತ್ತು ನಿಹಾಂಗ್ ಯಾತ್ರಿಕರ ನಡುವೆ ಭೀಕರ ತಲವಾರ್ ದಾಳಿ ನಡೆದಿತ್ತು. ನಾಲ್ವರು ಸ್ಥಳೀಯರು ಗಾಯಗೊಂಡಿದ್ದ ಈ ಘಟನೆಯಲ್ಲಿ ಪೊಲೀಸರು ಪಂಜಾಬ್‌ನ ನಾಲ್ವರು ನಿಹಾಂಗ್‌ಗಳನ್ನು ಬಂಧಿಸಿದ್ದರು. ಈಗ ಈ ನಾಲ್ವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಈ ಒತ್ತೆಯಾಳು ಸಂಚು ರೂಪಿಸಲಾಗಿದೆ.

ಪ್ರಸ್ತುತ ಗುರುದ್ವಾರದ ಪರಿಸ್ಥಿತಿ ಹೇಗಿದೆ? ಆರು ಜನ ನಿಹಾಂಗ್‌ಗಳು ಟೆರೇಸ್‌ಗೆ ಹೋಗುವ ಮೂರನೇ ಮಹಡಿಯ ಪ್ರವೇಶದ್ವಾರಕ್ಕೆ ಒಳಗಿನಿಂದ ಬೀಗ ಹಾಕಿಕೊಂಡು ಇಡೀ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಅಥವಾ ಕಾರ್ಯಾಚರಣೆ ನಡೆಸದಂತೆ ನಿಹಾಂಗ್‌ಗಳು ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ವೃದ್ಧ ಭಕ್ತನನ್ನು ಜೊತೆಯಲ್ಲೇ ಇಟ್ಟುಕೊಂಡು ಛಾವಣಿ ಮೇಲಿಂದ ಘೋಷಣೆಗಳನ್ನು ಕೂಗಿದ್ದಾರೆ.

ಬದರಿನಾಥ ಹೆದ್ದಾರಿಯಲ್ಲಿರುವ ಈ ನಾಗರಸು ಗುರುದ್ವಾರವು ಹೇಮಕುಂಡ್ ಸಾಹಿಬ್‌ಗೆ ಹೋಗಿ ಬರುವ ಸಿಖ್ ಯಾತ್ರಿಕರಿಗೆ ಆಶ್ರಯ ನೀಡುವ ಪ್ರಮುಖ ಕೇಂದ್ರವಾಗಿದೆ. ಸದ್ಯ ಪೊಲೀಸರು ನಿಹಾಂಗ್‌ಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದು, ಒತ್ತೆಯಾಳನ್ನು ಬಿಡುಗಡೆ ಮಾಡಿದರೆ ಅವರನ್ನು ಪಂಜಾಬ್‌ಗೆ ಸುರಕ್ಷಿತವಾಗಿ ಹಿಂತಿರುಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ವಿಷಯ ಇನ್ನೂ ಬಗೆಹರಿದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us