‘ಅಹಂಕಾರವೇ ವಿನಾಶಕ್ಕೆ ದಾರಿ’; ಉದಯನಿಧಿ ಬಿಡುಗಡೆ ಬಳಿಕ ಸಿಎಂ ವಿಜಯ್ ಸರ್ಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಉದಯನಿಧಿ ಸ್ಟಾಲಿನ್ ಬಿಡುಗಡೆಯಾದ ಬೆನ್ನಲ್ಲೇ ಡಿಎಂಕೆ ಪಕ್ಷವು ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ವಿರುದ್ಧ ಡಿಎಂಕೆ ಅಧ್ಯಕ್ಷ ಹಾಗೂ ಉದಯನಿಧಿ ಅವರ ತಂದೆ ಎಂ.ಕೆ. ಸ್ಟಾಲಿನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ದ್ವಂದ್ವಾರ್ಥದ ಮಾತುಗಳನ್ನಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್, ಸುಮಾರು 4 ಗಂಟೆಗಳ ಪೋಲಿಸ್ ಕಸ್ಟಡಿಯ ನಂತರ ಬಿಡುಗಡೆಯಾಗಿದ್ದಾರೆ.

‘ಅಹಂಕಾರವೇ ವಿನಾಶಕ್ಕೆ ದಾರಿ’; ಉದಯನಿಧಿ ಬಿಡುಗಡೆ ಬಳಿಕ ಸಿಎಂ ವಿಜಯ್ ಸರ್ಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ
Stalin
Image Credit source: PTI

Updated on: Aug 04, 2026 | 6:57 PM

ಚೆನ್ನೈ, ಆಗಸ್ಟ್ 4: ನಟಿ ತ್ರಿಶಾ ಕುರಿತ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ಬಂಧಿಸಿ, ವಿಚಾರಣೆ ನಂತರ ಬಿಡುಗಡೆ ಮಾಡಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, “ಅಹಂಕಾರವೇ ವಿನಾಶಕ್ಕೆ ದಾರಿ. ನಿರಂತರ ಅಹಂಕಾರವು ವಿನಾಶವನ್ನು ಮತ್ತಷ್ಟು ಚುರುಕುಗೊಳಿಸುತ್ತದೆ!” ಎಂದು ಬರೆದುಕೊಂಡಿದ್ದಾರೆ.

“ಕಾವೇರಿ ವಿವಾದದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಈ ಬಂಧನವನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಹೈಕೋರ್ಟ್‌ನ ಆದೇಶವು ಬಿಜೆಪಿ ಸರ್ಕಾರದ ಫ್ಯಾಸಿಸ್ಟ್ ಮನೋಭಾವಕ್ಕೆ ಬಿದ್ದ ದೊಡ್ಡ ಹೊಡೆತ” ಎಂದು ಸ್ಟಾಲಿನ್ ಬಣ್ಣಿಸಿದ್ದಾರೆ.

ಇದನ್ನೂ ಓದಿ: ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; ಬಂಧನಕ್ಕೊಳಗಾದ ಕೆಲವೇ ಗಂಟೆಯಲ್ಲಿ ಉದಯನಿಧಿ ಸ್ಟಾಲಿನ್ ಬಿಡುಗಡೆ

“ಅಧಿಕಾರ ವಹಿಸಿಕೊಂಡ ಕ್ಷಣದಿಂದಲೂ ನೀಡಿದ ಭರವಸೆಗಳನ್ನು ಈಡೇರಿಸಲು ಶ್ರಮಿಸುವ ಬದಲು, ಬರೀ ರೀಲ್ಸ್ ಕ್ರಿಯೇಟರ್‌ನಂತೆ ಓಡಾಡುತ್ತಿರುವ ಮುಖ್ಯಮಂತ್ರಿ ವಿಜಯ್ ಈಗಲಾದರೂ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ಅಧಿಕಾರಕ್ಕೆ ಬಂದಾಗಿನಿಂದ ತಮ್ಮನ್ನು, ತಮ್ಮ ಸಚಿವರನ್ನು ಅಥವಾ ಸರ್ಕಾರವನ್ನು ವಿಮರ್ಶಿಸುವವರನ್ನು ಬಂಧಿಸುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಟ್ವೀಟ್ ಅಥವಾ ವೀಡಿಯೊ ಹೇಳಿಕೆ ನೀಡುವುದೇ ತಡ ಅವರನ್ನು ಬಂಧಿಸಲಾಗುತ್ತಿದೆ. ಶಾಸಕರಾದ ಅನಿತಾ ರಾಧಾಕೃಷ್ಣನ್ ಮತ್ತು ಮಾರ್ಕಂಡೇಯನ್ ಅವರನ್ನೂ ಇದೇ ರೀತಿ ಟಾರ್ಗೆಟ್ ಮಾಡಲಾಗಿದೆ” ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

ಕಾವೇರಿ ನದಿಯ ಮೇಲಿನ ತಮಿಳುನಾಡಿನ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಮತ್ತು ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯುವಲ್ಲಿ ಬಿಜೆಪಿ ಸರ್ಕಾರ ತೋರುತ್ತಿರುವ ಉದಾಸೀನ ಹಾಗೂ ಅಹಂಕಾರದ ನಿಲುವನ್ನು ಖಂಡಿಸಿ ತಂಜಾವೂರಿನಲ್ಲಿ ಡಿಎಂಕೆ ನೇತೃತ್ವದ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು, ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು ಎಂದಿದ್ದಾರೆ.

ಇದನ್ನೂ ಓದಿ: Udhayanidhi Stalin detained: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆ!

ಉದಯನಿಧಿ ಭಾಷಣದ ಸಮರ್ಥನೆ:

ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಉದಯನಿಧಿ ಕಾವೇರಿ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು ಮತ್ತು ರೈತರ ಕಳವಳಗಳನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನು ಪ್ರಶ್ನಿಸಿದ್ದರು. ಅವರು ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಕಾವೇರಿ ನೀರನ್ನು ತರುವಲ್ಲಿ, ಮೇಕೆದಾಟು ಯೋಜನೆಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಸಿನಿಮಾಗೆ ಸಂಬಂಧಿಸಿದ ವಿಷಯಗಳ ಮೇಲೆ ಗಮನ ಹರಿಸುತ್ತಾ ರೈತರ ಸಂಕಷ್ಟವನ್ನು ನಿರ್ಲಕ್ಷಿಸಿದೆ ಎಂದು ಉದಯನಿಧಿ ಆರೋಪಿಸಿದ್ದರು. ಈ ಆರೋಪಕ್ಕೆ ಉತ್ತರಿಸಲಾಗದ ಸರ್ಕಾರ, ಉದಯನಿಧಿ ಅವರನ್ನು ಬಂಧಿಸುವ ಮೂಲಕ ವಿಷಯವನ್ನು ಬೇರೆಡೆ ತಿರುಗಿಸಲು ಯತ್ನಿಸಿದೆ ಎಂದು ಆರೋಪಿಸಿದ್ದಾರೆ.

ಉದಯನಿಧಿ ಅವರನ್ನು ಕೇವಲ ವಿಚಾರಣೆ ಮಾಡುವುದು ಮಾತ್ರ ಸರ್ಕಾರದ ಉದ್ದೇಶವಾಗಿದ್ದರೆ ಅವರನ್ನು ತಂಜಾವೂರಿಗೆ ಕರೆದೊಯ್ದಿದ್ದು ಏಕೆ? ಕಸ್ಟಡಿಗೆ ಪಡೆಯುವ ಉದ್ದೇಶವಿಲ್ಲದಿದ್ದ ಮೇಲೆ ಅವರ ವಿರುದ್ಧ ಹಲವು ಕಠಿಣ ಸೆಕ್ಷನ್‌ಗಳನ್ನು ಏಕೆ ಹೇರಲಾಯಿತು? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ಅಧಿಕಾರಕ್ಕೆ ಬಂದಾಗಿನಿಂದ ಮುಖ್ಯಮಂತ್ರಿ ವಿಜಯ್ ತಮ್ಮನ್ನು, ತಮ್ಮ ಸಚಿವರನ್ನು ಅಥವಾ ಸರ್ಕಾರವನ್ನು ವಿಮರ್ಶಿಸುವವರನ್ನು ಪದೇ ಪದೇ ಬಂಧಿಸಲು ಆದೇಶಿಸುತ್ತಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಉದಯನಿಧಿ ತಮ್ಮ ಭಾಷಣದಲ್ಲಿ ಯಾವುದೇ ಅಶ್ಲೀಲ ಮಾತುಗಳನ್ನು ಆಡಿಲ್ಲ ಅಥವಾ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಒಂದು ವೇಳೆ ಅವರು ಎಂದಾದರೂ ಅನುಚಿತವಾಗಿ ಮಾತನಾಡಿದ್ದರೆ ತಕ್ಷಣವೇ ಕ್ಷಮೆಯಾಚಿಸುತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗೇ, ತಮಿಳುನಾಡಿನಾದ್ಯಂತ ಪ್ರತಿಭಟನೆಯ ವೇಳೆ ಬಂಧನಕ್ಕೊಳಗಾಗಿರುವ ಡಿಎಂಕೆ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಸ್ಟಾಲಿನ್ ಆಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us