Asaduddin Owaisi: ಸದನದಲ್ಲಿ ಜೈ ಭೀಮ್, ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ಅಸಾದುದ್ದೀನ್ ಓವೈಸಿ; ವಿಡಿಯೋ ವೈರಲ್
ಈಗಾಗಲೇ ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದ್ದು, ಮೊದಲ ಸಂಸತ್ ಅಧಿವೇಶನ ಇಂದಿನಿಂದ ನಡೆಯುತ್ತಿದೆ. 18ನೇ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ಸೋಮವಾರದಿಂದ ನಡೆಯುತ್ತಿದೆ. ಸದನದ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರು ಎಲ್ಲ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ನವದೆಹಲಿ: ಸತತ 3ನೇ ಬಾರಿಗೆ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಕೇಂದ್ರದಲ್ಲಿ ಎನ್ಡಿಎ ಸರ್ಕಾರ (NDA Government) ರಚಿಸಿದೆ. ಈ ವರ್ಷದ ಮೊದಲ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ನೂತನ ಸಂಸದರು ಹೊಸ ಸಂಸತ್ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ನೂತನ ಸಂಸದರಿಗೆ ನಿನ್ನೆಯಿಂದ ಪ್ರಮಾಣವಚನ ಬೋಧಿಸುತ್ತಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲಿಗರಾಗಿದ್ದಾರೆ. ಈ ನಡುವೆ ಅಸಾದುದ್ದೀನ್ ಓವೈಸಿ (Asaduddin Owaisi) ಪ್ರಮಾಣವಚನ ಸ್ವೀಕರಿಸಿರುವ ರೀತಿಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಇದುವರೆಗೆ 350ಕ್ಕೂ ಹೆಚ್ಚು ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರ ನಡುವೆ ಇಂದು (ಮಂಗಳವಾರ) ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಪ್ರಮಾಣ ವಚನ ಸ್ವೀಕಾರದ ವೇಳೆ ಲೋಕಸಭೆಯಲ್ಲಿ ಗದ್ದಲ ಉಂಟಾಯಿತು. ಪ್ರಮಾಣ ವಚನ ಸ್ವೀಕಾರದ ನಂತರ ಓವೈಸಿ ಅವರು ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್ ಘೋಷಣೆಗಳನ್ನು ಕೂಗಿದ್ದು, ಇದಕ್ಕೆ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಕಾಂಡೋಮ್ಗಳನ್ನು ಹೆಚ್ಚು ಬಳಸುವವರೇ ಮುಸ್ಲಿಮರು ಎಂದ ಅಸಾದುದ್ದೀನ್ ಓವೈಸಿ
ಪ್ರಮಾಣವಚನ ಸ್ವೀಕರಿಸಿದ ನಂತರ ಓವೈಸಿ ಜೈ ಭೀಮ್, ಜೈ ತೆಲಂಗಾಣ ಮತ್ತು ಜೈ ಪ್ಯಾಲೆಸ್ತೀನ್ ಘೋಷಣೆಗಳನ್ನು ಕೂಗಿದರು. ಆಗ ಅವರು ಅಲ್ಲಾ-ಓ-ಅಕ್ಬರ್ ಎಂಬ ಘೋಷಣೆಗಳನ್ನೂ ಕೂಗಿದರು. ಹಲವು ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್, ಓವೈಸಿ ಆಕ್ಷೇಪಾರ್ಹವಾಗಿ ಏನಾದರೂ ಹೇಳಿದ್ದರೆ ಅದನ್ನು ಕಲಾಪದ ದಾಖಲೆಯಿಂದ ತೆಗೆದುಹಾಕಲಾಗುವುದು ಎಂದು ಹೇಳಿದ್ದಾರೆ.
Sworn in as member of Lok Sabha for the fifth time. Inshallah I will continue to raise issues of India’s marginalised with sinceritypic.twitter.com/OloVk6D65B
— Asaduddin Owaisi (@asadowaisi) June 25, 2024
ಅಸಾದುದ್ದೀನ್ ಓವೈಸಿ ಅವರು ಹೈದರಾಬಾದ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅವರು ಐದನೇ ಬಾರಿಗೆ ಸಂಸದರಾಗಿದ್ದಾರೆ. ಈ ಸಂದರ್ಭದಲ್ಲಿ, ನಾನು ಭಾರತದ ಅಂಚಿನಲ್ಲಿರುವ ಜನರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಎತ್ತುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಪ್ಯಾಲೆಸ್ತೀನ್ ಪರ ಅವರು ಘೋಷಣೆಗಳನ್ನು ಕೂಗಿದಾಗ ವಿವಾದ ಏರ್ಪಟ್ಟಿತು. ಓವೈಸಿ ಘೋಷಣೆಗೆ ಬಿಜೆಪಿಯ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಸಭಾಧ್ಯಕ್ಷರಾದ ರಾಧಾಮೋಹನ್ ಸಿಂಗ್ ಅದನ್ನು ದಾಖಲೆಯಿಂದ ತೆಗೆದುಹಾಕುವಂತೆ ಸೂಚನೆ ನೀಡಿದರು.
ಇದನ್ನೂ ಓದಿ: ಚೀನಾದೊಂದಿಗೆ ಮೋದಿ ಡಿಸ್ಕೋ ಮಾಡುತ್ತಿದ್ದಾರೆ; ಪ್ರಧಾನಿ ‘ಮುಜ್ರಾ’ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು
ಇಂದು ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ ಪ್ಯಾಲೆಸ್ತೀನ್‌ಗೆ ಬೆಂಬಲವಾಗಿ ಜೈ ಪ್ಯಾಲೆಸ್ತೀನ್ ಘೋಷಣೆಯನ್ನು ಎತ್ತಿದರು. ಹೈದರಾಬಾದ್ ಸಂಸದ ಓವೈಸಿ ಅವರು ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ ನಂತರ ಸಂಸತ್ತಿನಲ್ಲಿ ಮತ್ತು ಹೊರಗೆ ಕೋಲಾಹಲ ಎದ್ದಿದೆ. ಓವೈಸಿಯ ಈ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಲೋಕಸಭೆ ಚುನಾವಣೆಯಲ್ಲಿ ಓವೈಸಿ 6,61,981 ಮತಗಳನ್ನು ಪಡೆದರೆ, ಮಾಧವಿ ಲತಾ 3,23,894 ಮತಗಳನ್ನು ಪಡೆದರು. ಓವೈಸಿ 2004ರಿಂದ ಈ ಸ್ಥಾನವನ್ನು ಗೆಲ್ಲುತ್ತಿದ್ದಾರೆ. ಅವರು 2019ರಲ್ಲಿ ಬಿಜೆಪಿಯ ಜೆ. ಭಗವಂತ ರಾವ್ ಅವರನ್ನು 2.82 ಲಕ್ಷ ಮತಗಳಿಂದ ಸೋಲಿಸಿದ್ದರು. ಹೈದರಾಬಾದ್ ಲೋಕಸಭಾ ಕ್ಷೇತ್ರವು ಸಾಂಪ್ರದಾಯಿಕವಾಗಿ ಎಐಎಂಐಎಂನ ಭದ್ರಕೋಟೆಯಾಗಿದೆ. ಇದು 1984ರಿಂದ ಸಾಕಷ್ಟು ಮುಸ್ಲಿಮರನ್ನು ಹೊಂದಿರುವ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ