AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chirag Paswan: ಸೋಲು ಖಚಿತವಾದಾಗಲೆಲ್ಲಾ ಕಾಂಗ್ರೆಸ್ ದಲಿತರನ್ನು ಮುಂದೆ ತರುತ್ತದೆ; ಚಿರಾಗ್ ಪಾಸ್ವಾನ್ ಆಕ್ರೋಶ

Lok Sabha Speaker Election: ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ದಲಿತರನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಇಲ್ಲ ಎಂಬುದು ಗೊತ್ತಿದ್ದರೂ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದಿದ್ದಾರೆ.

Chirag Paswan: ಸೋಲು ಖಚಿತವಾದಾಗಲೆಲ್ಲಾ ಕಾಂಗ್ರೆಸ್ ದಲಿತರನ್ನು ಮುಂದೆ ತರುತ್ತದೆ; ಚಿರಾಗ್ ಪಾಸ್ವಾನ್ ಆಕ್ರೋಶ
ಚಿರಾಗ್ ಪಾಸ್ವಾನ್ Image Credit source: PTI
ಸುಷ್ಮಾ ಚಕ್ರೆ
|

Updated on: Jun 25, 2024 | 5:24 PM

Share

ನವದೆಹಲಿ: ಲೋಕಸಭೆಯ ಸ್ಪೀಕರ್ ಚುನಾವಣೆಯಲ್ಲಿ (Lok Sabha Speaker Elections) “ದಲಿತ ಕಾರ್ಡ್” ಮುಂದೆ ತಂದಿದ್ದಕ್ಕಾಗಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ (Chirag Paswan) ಇಂದು (ಮಂಗಳವಾರ) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ (Congress) ಬುದ್ಧಿಯೇ ಇಷ್ಟು, ಸ್ಪರ್ಧೆಯಲ್ಲಿ ಸೋಲು ಖಚಿತವಾದಾಗಲೆಲ್ಲಾ ಕಾಂಗ್ರೆಸ್ ದಲಿತರ ವಿಷಯವನ್ನು ಮುಂದೆ ತಂದಿಟ್ಟು ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಎಕ್ಸ್‌ನಲ್ಲಿ ಹಿಂದಿಯಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು 2002ರಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸೋಲುವುದು ಖಚಿತವಾದಾಗ ದಲಿತ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರನ್ನು ಕಣಕ್ಕಿಳಿಸಿದ್ದವು. 2017ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಬೆಂಬಲಿಸಿದಾಗ ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳು ದಲಿತ ಸಮುದಾಯದಿಂದ ಬಂದ ಮತ್ತೊಬ್ಬ ಕಾಂಗ್ರೆಸ್ ನಾಯಕಿ ಮೀರಾ ಕುಮಾರ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿತ್ತು ಎಂದು ಚಿರಾಗ್ ಪಾಸ್ವಾನ್ ಎಕ್ಸ್​ನಲ್ಲಿ ಟೀಕಿಸಿದ್ದಾರೆ.

ಇದನ್ನೂ ಓದಿ: ಹಂಗಾಮಿ ಸ್ಪೀಕರ್ ವಿವಾದ: ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಇಂಡಿಯಾ ಬಣ

“ಈಗ ಲೋಕಸಭೆಯ ಸ್ಪೀಕರ್ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣಕ್ಕೆ ನಿಸ್ಸಂಶಯವಾಗಿ ಸಂಖ್ಯಾಬಲವಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ, ಅದು ಕಾಂಗ್ರೆಸ್​ನ ದಲಿತ ನಾಯಕ ಕೆ. ಸುರೇಶ್ ಅವರನ್ನು ನಾಮನಿರ್ದೇಶನ ಮಾಡಿದೆ. ಹಾಗಾದರೆ, ದಲಿತ ನಾಯಕರು ವಿರೋಧ ಪಕ್ಷದ ಸಾಂಕೇತಿಕ ಅಭ್ಯರ್ಥಿಗಳು ಮಾತ್ರವೇ?” ಎಂದು ಚಿರಾಗ್ ಪಾಸ್ವಾನ್ ಪ್ರಶ್ನಿಸಿದ್ದಾರೆ.

ಚಿರಾಗ್ ಪಾಸ್ವಾನ್ ಕೂಡ ದಲಿತ ಸಮುದಾಯದಿಂದ ಬಂದ ನಾಯಕರಾಗಿದ್ದಾರೆ. ಕೆಳಮನೆಯಲ್ಲಿ ಬಹುಮತ ಹೊಂದಿರುವ ಆಡಳಿತಾರೂಢ ಎನ್‌ಡಿಎಯ ಓಂ ಬಿರ್ಲಾ ವಿರುದ್ಧ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಸುರೇಶ್ ಪ್ರತಿಪಕ್ಷದ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್​ಡಿಎಯಿಂದ ಓಂ ಬಿರ್ಲಾ, ಇಂಡಿಯಾ ಒಕ್ಕೂಟದಿಂದ ಕೆ ಸುರೇಶ್​ ನಾಮಪತ್ರ ಸಲ್ಲಿಕೆ

ಲೋಕಸಭಾ ಸ್ಪೀಕರ್ ಹುದ್ದೆಗೆ ಎನ್​ಡಿಎ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಭ್ಯರ್ಥಿ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್‌ನ ಕೋಡಿಕುನ್ನಿಲ್ ಸುರೇಶ್ ಸ್ಪರ್ಧಿಸಲಿದ್ದಾರೆ. ಲೋಕಸಭೆ ಸ್ಪೀಕರ್ ಚುನಾವಣೆಗೆ ಬುಧವಾರ ಮತದಾನ ನಡೆಯಲಿದೆ. ಬಿರ್ಲಾ ಮತ್ತು ಸುರೇಶ್ ಕ್ರಮವಾಗಿ ಎನ್‌ಡಿಎ ಮತ್ತು ವಿರೋಧ ಪಕ್ಷದ ಮೈತ್ರಿ ಇಂಡಿಯಾ ಬಣದ ಅಭ್ಯರ್ಥಿಗಳಾಗಿ ಇಂದು ನಾಮಪತ್ರ ಸಲ್ಲಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ