AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ

ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ವೆಂಕಯ್ಯ ನಾಯ್ಡು ಅವರ ಬುದ್ಧಿವಂತಿಕೆ ಮತ್ತು ದೇಶದ ಪ್ರಗತಿಯ ಉತ್ಸಾಹವನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ರಾಷ್ಟ್ರೀಯ ಹಿತಾಸಕ್ತಿ ಕುರಿತು ಅಭಿಪ್ರಾಯ ಹಂಚಿಕೊಂಡರು. ತಮ್ಮಿಬ್ಬರ ಭೇಟಿಯ ಬಗ್ಗೆ ಮೋದಿ ಟ್ವೀಟ್ ಮಾಡಿದ್ದಾರೆ. ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ದಶಕಗಳ ಕಾಲ ಅವರೊಂದಿಗಿದ್ದೇನೆ ಎಂದರು.

ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ
ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ
ಸುಷ್ಮಾ ಚಕ್ರೆ
|

Updated on: Jun 25, 2024 | 6:28 PM

Share

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಮಂಗಳವಾರ) ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು (M Venkaiah Naidu) ಅವರನ್ನು ಭೇಟಿ ಮಾಡಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಎಂ. ವೆಂಕಯ್ಯ ನಾಯ್ಡು ಅವರನ್ನು ಇಂದು ಭೇಟಿ ಮಾಡಿದ್ದೇನೆ. ನನಗೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಭಾರತದ ಪ್ರಗತಿಗಾಗಿ ಅವರ ಬುದ್ಧಿವಂತಿಕೆ ಮತ್ತು ಉತ್ಸಾಹದ ಬಗ್ಗೆ ಯಾವಾಗಲೂ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆ” ಎಂದು ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ವೆಂಕಯ್ಯ ನಾಯ್ಡು ಅವರು ಕೂಡ ಎಕ್ಸ್‌ನಲ್ಲಿ ಬರೆದಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ನಿವಾಸದಲ್ಲಿ ನನ್ನನ್ನು ಭೇಟಿ ಮಾಡಿದರು. ಭಾರತದ ಪ್ರಧಾನ ಮಂತ್ರಿಯಾಗಿ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಭಾಯಿ ಅವರಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದೇನೆ. ನಮ್ಮ ಮಾತುಕತೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ” ಎಂದು ತಮ್ಮ ಪೋಸ್ಟ್‌ನಲ್ಲಿ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಂಗಾಮಿ ಸ್ಪೀಕರ್ ವಿವಾದ: ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಇಂಡಿಯಾ ಬಣ

“ಮುಂಬರುವ ವರ್ಷಗಳಲ್ಲಿ ಮೋದಿ ಅವರ ನಾಯಕತ್ವದಲ್ಲಿ ಭಾರತ ವೈಭವದ ಹೊಸ ಎತ್ತರಗಳನ್ನು ಏರುತ್ತಿರುವುದು ನನಗೆ ಖಚಿತವಾಗಿದೆ” ಎಂದು ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬರೆದಿದ್ದಾರೆ.

ವೆಂಕಯ್ಯ ನಾಯ್ಡು ಅವರು ಭಾರತದ 13ನೇ ಉಪರಾಷ್ಟ್ರಪತಿಯಾಗಿ ಆಗಸ್ಟ್ 11, 2017ರಿಂದ ಆಗಸ್ಟ್ 10, 2022ರವರೆಗೆ ಅಧಿಕಾರದಲ್ಲಿದ್ದರು.

ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದ್ದು, ಜುಲೈ 3ರವರೆಗೆ ಮುಂದುವರಿಯಲಿದೆ. ಈ ಅಧಿವೇಶನದಲ್ಲಿಯೇ ಲೋಕಸಭೆ ಸ್ಪೀಕರ್ ಆಯ್ಕೆಯೂ ನಡೆಯಲಿದೆ. ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ಈ ಎಲ್ಲದರ ನಡುವೆ ಮಂಗಳವಾರ (ಜೂನ್ 25) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಬಿಜೆಪಿಯ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು ಅವರ ನಿವಾಸಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಎನ್​ಡಿಎಯಿಂದ ಓಂ ಬಿರ್ಲಾ, ಇಂಡಿಯಾ ಒಕ್ಕೂಟದಿಂದ ಕೆ ಸುರೇಶ್​ ನಾಮಪತ್ರ ಸಲ್ಲಿಕೆ

ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಮಾತುಕತೆ ವಿಫಲವಾದ ನಂತರ ಬಿಜೆಪಿ ಸಂಸದ ಓಂ ಬಿರ್ಲಾ ಮತ್ತು ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಇಂದು ಲೋಕಸಭೆ ಸ್ಪೀಕರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ