ಅಯೋಧ್ಯೆಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ‘ಸೂತ್ರ’ ಪತ್ತೆ: ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಖಾನ್ ಪೊಲೀಸರ ವಶಕ್ಕೆ
ಅಯೋಧ್ಯೆಯ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಕೆಯ ಕೈಬರಹದ ಟಿಪ್ಪಣಿ ಪತ್ತೆಯಾಗಿದ್ದು, ಪ್ರಥಮ ವರ್ಷದ ವಿದ್ಯಾರ್ಥಿ ಸರ್ಫರಾಜ್ ಖಾನ್‌ನನ್ನು ಬಂಧಿಸಲಾಗಿದೆ. ಅಮೋನಿಯಂ ಕಾರ್ಬೋನೇಟ್, ನೈಟ್ರಿಕ್ ಆಮ್ಲದಂತಹ ರಾಸಾಯನಿಕಗಳ ವಿವರಗಳಿದ್ದವು. ಯುಪಿ ಎಟಿಎಸ್ ಮತ್ತು ಎಸ್‌ಟಿಎಫ್ ಭಯೋತ್ಪಾದನಾ ಸಂಚಿನ ಕುರಿತು ತನಿಖೆ ನಡೆಸುತ್ತಿದ್ದು, ಕಾಲೇಜು ಭದ್ರತೆ ಬಿಗಿಗೊಳಿಸಲಾಗಿದೆ. ಹಿಂದಿನ ಭಯೋತ್ಪಾದಕ ಜಾಲದ ಲಿಂಕ್‌ಗಳ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ.

ಅಯೋಧ್ಯೆ, ಆಗಸ್ಟ್ 02: : ಉತ್ತರ ಪ್ರದೇಶದ ಅಯೋಧ್ಯೆ(Ayodhya)ಯಲ್ಲಿರುವ ರಾಜರ್ಷಿ ದಶರಥ್ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಬಾಂಬ್ ತಯಾರಿಸುವ ವಿವರಗಳಿದ್ದ ಕೈಬರಹದ ಟಿಪ್ಪಣಿ ಸಿಕ್ಕ ಬೆನ್ನಲ್ಲೇ, ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಯನ್ನು ಬಲರಾಂಪುರ ಮೂಲದ ಸರ್ಫರಾಜ್ ಖಾನ್ ಎಂದು ಗುರುತಿಸಲಾಗಿದೆ. ಈತ ಕಾಲೇಜಿನ 2025 ರ ಎಕ್ಸ್-ರೇ ಟೆಕ್ನಾಲಜಿ ಬ್ಯಾಚ್‌ನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಎಕ್ಸ್-ರೇ ಕೊಠಡಿಗೆ ಕರ್ತವ್ಯಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಕಾಗದದ ಟಿಪ್ಪಣಿಯೊಂದು ಸಿಕ್ಕಿದೆ. ಶುಕ್ರವಾರ ರಾತ್ರಿ ಇದೇ ಕೊಠಡಿಯಲ್ಲಿ ಸರ್ಫರಾಜ್ ಇದ್ದ ಎನ್ನಲಾಗಿದೆ.
ಈ ಕೈಬರಹದ ದಾಖಲೆಯಲ್ಲಿ ಬಾಂಬ್ ತಯಾರಿಸಲು ಬೇಕಾದ ಅಮೋನಿಯಂ ಕಾರ್ಬೋನೇಟ್, ನೈಟ್ರಿಕ್ ಆಮ್ಲ, ಕೆಂಪು ರಂಜಕ, ಕೆಂಪು ಸಲ್ಫೈಡ್ ಹಾಗೂ ಗೇಜ್ ವೈರ್‌ನಂತಹ ರಾಸಾಯನಿಕಗಳ ವಿವರಗಳಿದ್ದವು. ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕ (CMS) ಡಾ. ಅರವಿಂದ್ ಸಿಂಗ್ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಸರ್ಫರಾಜ್ ಜೊತೆ ಕರ್ತವ್ಯದಲ್ಲಿದ್ದ ಇನ್ನಿಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ತೀವ್ರಗೊಂಡ ಭದ್ರತೆ ಮತ್ತು ತನಿಖೆ ಟಿಪ್ಪಣಿ ಬರೆದಿರುವುದರ ಹಿಂದೆ ಯಾವುದೇ ಕ್ರಿಮಿನಲ್ ಅಥವಾ ಭಯೋತ್ಪಾದನಾ ಸಂಚು ಇದೆಯೇ ಎಂಬ ಬಗ್ಗೆ ಪೊಲೀಸರು ಹಾಗೂ ಉತ್ತರ ಪ್ರದೇಶ ಎಟಿಎಸ್ (UP-ATS) ಪಡೆಗಳು ತನಿಖೆ ನಡೆಸುತ್ತಿವೆ. ಘಟನೆ ಬೆನ್ನಲ್ಲೇ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ಕ್ಯಾಂಪಸ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಎಕ್ಸ್-ರೇ, ಲ್ಯಾಬ್ ಹಾಗೂ ಹಾಸ್ಟೆಲ್ ಕೊಠಡಿಗಳಲ್ಲಿ ತಪಾಸಣೆ ನಡೆಸಿದೆ.
ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ಮಹಾವಂಚನೆ ಬಯಲು:ಕಾಣಿಕೆ ಕಳ್ಳತನ ಮಾತ್ರವಲ್ಲ, ನಕಲಿ ರಶೀದಿ ನೀಡಿ ಭಕ್ತರಿಗೆ ಕೋಟಿ ಕೋಟಿ ನಾಮ
2025ರ ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟಗೊಂಡು 15 ಜನರು ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಹರಿಯಾಣದ ‘ಅಲ್ ಫಲಾಹ್ ವಿಶ್ವವಿದ್ಯಾಲಯ’ದ ಸಿಬ್ಬಂದಿ ಭಾಗಿಯಾಗಿದ್ದ ‘ಜೈಶ್-ಎ-ಮೊಹಮ್ಮದ್’ ಜಾಲ ಬೆಳಕಿಗೆ ಬಂದಿತ್ತು. ಇದೀಗ ಅಯೋಧ್ಯೆಯಂತಹ ಸೂಕ್ಷ್ಮ ಪ್ರದೇಶದ ವೈದ್ಯಕೀಯ ಕಾಲೇಜಿನಲ್ಲೇ ಇಂತಹ ಟಿಪ್ಪಣಿ ಪತ್ತೆಯಾಗಿರುವುದು ತನಿಖಾ ಸಂಸ್ಥೆಗಳಲ್ಲಿ ಆತಂಕ ಮೂಡಿಸಿದೆ.
ಬಂಧಿತ ವಿದ್ಯಾರ್ಥಿ ಸರ್ಫರಾಜ್ ಖಾನ್‌ಗೆ ಯಾವುದೇ ಉಗ್ರ ಸಂಘಟನೆಗಳ ಜೊತೆ ಸಂಪರ್ಕವಿದೆಯೇ ಅಥವಾ ಪ್ರಚೋದನಾಕಾರಿ ಜಾಲಕ್ಕೆ ಬಿದ್ದಿದ್ದಾನೆಯೇ ಎಂಬ ಕೋನದಲ್ಲಿ ಎಸ್‌ಟಿಎಫ್ (STF) ಮತ್ತು ವಿಧಿವಿಜ್ಞಾನ ತಂಡಗಳು ತನಿಖೆ ಚುರುಕುಗೊಳಿಸಿವೆ. ಘಟನೆಯ ನಂತರ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸ್-ರೇ, ಲ್ಯಾಬ್ ಹಾಗೂ ಹಾಸ್ಟೆಲ್ ಕೊಠಡಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




