
ನವದೆಹಲಿ, ನವೆಂಬರ್ 2: ಭೂತಾನ್‌ನ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯಲ್ಲಿ 108 ಪವಿತ್ರ ಬೌದ್ಧ ಸ್ತೂಪಗಳ ಪ್ರತಿಷ್ಠಾಪನಾ ಸಮಾರಂಭದಲ್ಲಿ 76ನೇ ಕ್ರಮಾಂಕದ ಸ್ತೂಪವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಗಿದೆ. ಇದನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು “ಭಾರತಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೌರವ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೆ ಭೂತಾನ್ ಪ್ರವಾಸದಲ್ಲಿರುವ ಸಚಿವ ಕಿರಣ್ ರಿಜಿಜು ಭಾರತ ಸರ್ಕಾರದ ಪರವಾಗಿ ಈ ಐತಿಹಾಸಿಕ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ್ದರು.
“ಭಾರತ ಮತ್ತು ಭೂತಾನ್ ನಡುವಿನ ಸ್ನೇಹ ಬಾಂಧವ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯುತ್ತಮ ದೂರದರ್ಶಿತ್ವಕ್ಕೆ ಗೌರವಾರ್ಥವಾಗಿ ಅತ್ಯಂತ ಪವಿತ್ರವಾದ 76ನೇ ಬೌದ್ಧ ಸ್ತೂಪವನ್ನು ಮೋದಿ ಅವರಿಗೆ ಸಮರ್ಪಿಸಿರುವುದು ಭಾರತಕ್ಕೆ ಸಿಕ್ಕ ಭಾರಿ ದೊಡ್ಡ ಗೌರವವಾಗಿದೆ. ‘ಲಹಾಬಾಬ್ ದುಚೆನ್’ ಎಂಬ ಶುಭ ಸಂದರ್ಭದಲ್ಲಿ ಭೂತಾನ್‌ನ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯಲ್ಲಿ 108 ಸ್ತೂಪಗಳನ್ನು ಎತ್ತಿ ಪ್ರತಿಷ್ಠಾಪಿಸುವ ಪವಿತ್ರ ಸಮಾರಂಭದಲ್ಲಿ ನಾನು ಭಾಗವಹಿಸಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಸುಳ್ಳು ಹೇಳಿ ನಂಬಿಸಬೇಡಿ, ವಿದೇಶಿ ನೆರವಿನಿಂದಲೇ ನೀವು ಪ್ರಧಾನಿಯಾಗಿದ್ದು’; ಮೋದಿ ಕುರಿತು ರಾಹುಲ್ ಗಾಂಧಿ ಆರೋಪ
“ಭೂತಾನ್ ಮಹಾರಾಜ, ರಾಣಿ ಗ್ಯಾಲ್ಚುಯೆನ್, ಭೂತಾನ್ ಪ್ರಧಾನಿ ದಾಶೋ ತ್ಶೆರಿಂಗ್ ಟೋಬ್ಗೇ ಹಾಗೂ ಭೂತಾನ್ ಜನರ ಸಮ್ಮುಖದಲ್ಲಿ ನಾನು ಗೌರವ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದೆ. ಇದು ಭೂತಾನ್‌ನ ಶ್ರೀಮಂತ ಬೌದ್ಧ ಪರಂಪರೆ ಮತ್ತು ನಮ್ಮೆರಡು ದೇಶಗಳ ನಡುವಿನ ಸುದೀರ್ಘ ಸ್ನೇಹ ಬಾಂಧವ್ಯವನ್ನು ಪ್ರತಿಬಿಂಬಿಸುವ ಅತ್ಯಂತ ಆಳವಾದ ಆಧ್ಯಾತ್ಮಿಕ ಕ್ಷಣವಾಗಿದೆ” ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ.
ಅಸ್ಸಾಂ ಗಡಿಗೆ ಸಮೀಪವಿರುವ ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯಲ್ಲಿನ ‘ಐ’ (ಮೌ) ನದಿ ದಂಡೆಯ 11.7 ಕಿ.ಮೀ ವ್ಯಾಪ್ತಿಯಲ್ಲಿ ಸಾವಿರಾರು ಸ್ವಯಂಸೇವಕರು ಒಂದೇ ದಿನದಲ್ಲಿ ಈ 108 ಬೌದ್ಧ ಸ್ತೂಪಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ಸ್ತೂಪವು 15 ಮೀಟರ್ ಎತ್ತರವಿದ್ದು, ಒಂದರಿಂದ ಮತ್ತೊಂದಕ್ಕೆ 108 ಮೀಟರ್ ಅಂತರವಿದೆ.
ಇದನ್ನೂ ಓದಿ: ಭಾರತದಲ್ಲಿ ಬಡತನಕ್ಕೆ ಬಿತ್ತು ಬ್ರೇಕ್, 49.6 ಕೋಟಿ ಜನರು ಬಡತನದಿಂದ ಹೊರಗೆ: ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಪರ ಧನ್ಯವಾದ:
ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಸಚಿವ ಕಿರಣ್ ರಿಜಿಜು ಅವರು ಭೂತಾನ್ ರಾಜರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಯನ್ನು ವಜ್ರಯಾನ ಬೌದ್ಧಧರ್ಮದ ಪ್ರಮುಖ ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಮತ್ತು ಭೂತಾನ್ ಸಂಸ್ಕೃತಿಯನ್ನು ಜಗತ್ತಿಗೆ ಸಾರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ತಮ್ಮ ಪ್ರವಾಸದ ವೇಳೆ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಭೂತಾನ್ ಪ್ರಧಾನಿ ಜೊತೆ ದ್ವಿಪಕ್ಷೀಯ ಸಭೆ ನಡೆಸಿದ್ದು, ವ್ಯಾಪಾರ, ಅಭಿವೃದ್ಧಿ ಸಹಕಾರ, ಇಂಧನ, ಹೂಡಿಕೆ, ಸಂಪರ್ಕ ಹಾಗೂ ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಭಾರತ-ಭೂತಾನ್ ಬಾಂಧವ್ಯವನ್ನು ಮತ್ತಷ್ಟು ದೃಢಗೊಳಿಸುವ ಕುರಿತು ಚರ್ಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ